ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಕಾಂತರಾಜ ವರದಿ ಸ್ವೀಕಾರಕ್ಕೆ ‘ಮುಖ್ಯಮಂತ್ರಿ’ ಚಂದ್ರು ಆಗ್ರಹ

Published 18 ಡಿಸೆಂಬರ್ 2023, 5:06 IST
Last Updated 18 ಡಿಸೆಂಬರ್ 2023, 5:06 IST
ಅಕ್ಷರ ಗಾತ್ರ

ಚಾಮರಾಜನಗರ: ಕಾಂತರಾಜ ಆಯೋಗ ನೀಡಿರುವ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಸಮೀಕ್ಷಾ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಬೇಕು ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು  ಭಾನುವಾರ ಒತ್ತಾಯಿಸಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸೇರಿದಂತೆ ಇತರೆ ಸೌಲಭ್ಯ ಒದಗಿಸಲು ಕಾಂತರಾಜ ಆಯೋಗ ರಚನೆ ಮಾಡಿ, ಜಾತಿಸಮೀಕ್ಷೆಗೆ ₹180 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಅವರ ಸರ್ಕಾರದಲ್ಲಿ ವರದಿ ಅನುಷ್ಠಾನಕ್ಕೆ ಕ್ರಮವಹಿಸಲಿಲ್ಲ. ನಂತರ ಬಂದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕೂಡ ವರದಿ ಸ್ವೀಕರಿಸಲಿಲ್ಲ’ ಎಂದು ಹೇಳಿದರು. 

‘ನಾವು ಹಿಂದುಳಿದ ವರ್ಗಗಗಳ ಪರ ಎಂದು ತೊಡೆ ತಟ್ಟಿ ಹೇಳುವ ಸಿದ್ದರಾಮಯ್ಯ ಅವರೇ ಈಗ  ಮುಖ್ಯಮಂತ್ರಿಯಾಗಿದ್ದಾರೆ. ಕಾಂತರಾಜ ವರದಿಯನ್ನು ಅವರು ಸ್ವೀಕರಿಸಬೇಕು. ಸದನದಲ್ಲಿ ಮಂಡಿಸಬೇಕು. ಅದರ ಬಗ್ಗೆ ಚರ್ಚೆ ನಡೆಯಬೇಕು’ ಅದು ಬಿಟ್ಟು, ವರದಿ ಅನುಷ್ಠಾನಕ್ಕೆ ಬಲಾಢ್ಯರು ವಿರೋಧ ಮಾಡುತ್ತಿದ್ದಾರೆ ಎಂದು 250 ಸಮುದಾಯಗಳಿಗೆ ಅನ್ಯಾಯ ಮಾಡುವುದು ಸರಿಯೇ’ ಎಂದು ಅವರು ಪ್ರಶ್ನಿಸಿದರು. 

ದೆಹಲಿ ಸರ್ಕಾರದ ನಕಲು: ದೆಹಲಿಯಲ್ಲಿರುವ ಆಮ್‌ ಆದ್ಮಿ ಪಾರ್ಟಿ ಸರ್ಕಾರ ಜಾರಿ ಮಾಡಿದ್ದ ಉಚಿತ ಯೋಜನೆಗಳನ್ನು ನಕಲು ಮಾಡಿ ರಾಜ್ಯದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಆದರೆ, ಈ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಚಂದ್ರು ಟೀಕಿಸಿದರು. 

‘ಇತ್ತೀಚೆಗೆ ಉತ್ತರ ಭಾರತದಲ್ಲಿ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಕರ್ನಾಟಕದ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆದರೆ, ಅವು ಫಲಕೊಟ್ಟಿಲ್ಲ. ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ₹11 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಹಣಕಾಸಿನ ಕೊರತೆಯಿದ್ದರೂ ಗ್ಯಾರಂಟಿ ಯೋಜನೆ ಜಾರಿ ಮಾಡುವ ಅಗತ್ಯವಿತ್ತೇ’ ಎಂದು ಪ್ರಶ್ನಿಸಿದ ಅವರು, ‘ರಂಗಾಯಣ ಸೇರಿದಂತೆ 14 ಅಕಾಡೆಮಿಗಳಿಗೆ ಸರ್ಕಾರ ಇನ್ನೂ ನಿರ್ದೇಶಕರನ್ನು ನೇಮಕ ಮಾಡಿಲ್ಲ’ ಎಂದು ಕಿಡಿ ಕಾರಿದರು.

ಎಎಪಿ ರಾಜ್ಯ ಕಾರ್ಯದರ್ಶಿ ಸೋಸಲೆ ಸಿದ್ದರಾಜು, ಜಿಲ್ಲಾಧ್ಯಕ್ಷ ಹರೀಶ್, ಸಂಘಟನಾ ಕಾರ್ಯದರ್ಶಿ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT