ಗುರುವಾರ , ಆಗಸ್ಟ್ 18, 2022
25 °C
ಹೈನೋದ್ಯಮದಲ್ಲಿ ಪೂಜಾರಿ ಮಂಜುನಾಥರ ಪ್ರಯೋಗ; ಬಿಡುವಿನ ವೇಳೆಯಲ್ಲಿ ಚಾಟ್ಸ್‌ ಮಾರಾಟ

ಯಳಂದೂರು: ಹಸು ಸಾಕಣೆಯಿಂದ ಬದುಕು ಹಸನು

ನಾ.ಮಂಜುನಾಥ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಒಕ್ಕಲುತನಕ್ಕೆ ಕೃಷಿ, ಖುಷಿಗೆ ಆಕಳು ಸಾಕಣೆ, ಬಿಡುವಿನ ವೇಳೆಯಲ್ಲಿ ಚಾಟ್ಸ್ ಮಾರಾಟ... ಹೀಗೆ ಸಾಗುತ್ತದೆ ಪೂಜಾರಿ ಮಂಜುನಾಥ ಅವರ ದಿನಚರಿ.

ಸಾಗುವಳಿಯಲ್ಲಿ ಸದಾ ಪ್ರಯೋಗ ಮಾಡುತ್ತಾ, ಹೈನೋದ್ಯಮದಲ್ಲಿ ಹಣ ಹೂಡಿಕೆ ಮಾಡಿ, ಸುಂದರ ಬದುಕನ್ನು ಕಟ್ಟಿಕೊಳ್ಳುವತ್ತ ಇವರು ಹೆಜ್ಜೆ ಇಟ್ಟಿದ್ದಾರೆ.

ತಾಲ್ಲೂಕಿನ ಹೊನ್ನೂರು ಗ್ರಾಮದ ಮಂಜುನಾಥ ಅವರು ಕಲಿತಿದ್ದು 9ನೇ ತರಗತಿ. ನಂತರ ಕೃಷಿ ಭೂಮಿಯ ಒಲವು ಬೆಳೆಸಿಕೊಂಡರು. ಬಾಳೆ, ಹೂತೋಟ ಹಸನು ಮಾಡುತ್ತಲೇ ಹೈನೋದ್ಯಮವನ್ನು ಅಪ್ಪಿಕೊಂಡರು. ಸದಾ ಆದಾಯ ತಂದುಕೊಡುವ ಹಾಲು, ಮನೆ ಖರ್ಚಿಗೆ ಪಾನಿಪುರಿ ವ್ಯಾಪಾರ. ವಾರ್ಷಿಕ ವರಮಾನಕ್ಕೆ ಬಾಳೆ ಬೆಳೆ ನಂಬಿದ್ದಾರೆ.

‘ಏಕ ಬೆಳೆ ನಂಬಿ ಬದುಕು ಹಸನು ಮಾಡಿಕೊಳ್ಳುವುದು ರೈತರಿಗೆ ಸವಾಲು. ಕೃಷಿ ನಂಬಿದವರಿಗೆ ಸಾಲದ ಬಲೆ ಕಟ್ಟುತ್ತದೆ. ಇಂತಹ ಸನ್ನಿವೇಶದಲ್ಲಿ ಬೇಸಾಯಗಾರರು ಪ್ರತಿದಿನ ಬೇಡಿಕೆ ಇರುವ ಹಾಲನ್ನು ನಂಬಿಕೊಳ್ಳಬೇಕು. ಬೆಳೆಗಾರ ಸದಾ ಪ್ರಯೋಗಶೀಲನಾಗಿ ಯೋಚಿಸಬೇಕು. ಖರ್ಚು– ವೆಚ್ಚದ ಬಾಬತ್ತು ತಪ್ಪಿಸುವಲ್ಲಿ ಸದಾ ಕ್ರಿಯಾಶೀಲನಾಗಿ ದುಡಿಯಬೇಕು’ ಎಂದು ಹೇಳುತ್ತಾರೆ ಮಂಜುನಾಥ.

‘ಹೊಸ ತಳಿಯ ಹಸುಗಳಿಂದ ಹೆಚ್ಚಿನ ಹಾಲು ನಿರೀಕ್ಷಿಸಬಹುದು. ಒಮ್ಮೆ ಬಂಡವಾಳ ಹೂಡಿದರೆ ಹತ್ತಾರು ವರ್ಷ ಕುಟುಂಬ ನೆಮ್ಮದಿಯಿಂದ ಇರಬಹುದು. ಇವುಗಳ ಉಪ ಉತ್ಪನ್ನ ಗಂಜಲ, ಗೊಬ್ಬರವನ್ನು ಬಳಸಿ ಭೂ ಫಲವತ್ತತೆ ಹೆಚ್ಚಿಸಬಹುದು. ಇತರರಿಗೂ ಮಾರಾಟ ಮಾಡಬಹುದು. ಹಸುಗಳಿಂದ ಬರುವ ಸೆಗಣಿ ಸಂಗ್ರಹವೂ ಕ್ಷೀರ ನಂಬಿದವರಿಗೆ ಬೋನಸ್ ರೂಪದಲ್ಲಿ ಸಿಗುತ್ತದೆ. ಪ್ರತಿದಿನ ಹಸುಗಳಿಗೆ ಶುದ್ಧವಾದ ಮೇವು ಒದಗಿಸಬೇಕು. ಜಮೀನಿನಲ್ಲಿ ಮೇವಿನ ತಳಿಗಳನ್ನು ಬೆಳೆದುಕೊಳ್ಳಬೇಕು. ಕಬ್ಬಿನ ತೊಂಡೆ, ಬೂಸಾ, ಹಿಂಡಿ, ನೀಡುವ ಮೊದಲು ಅಳತೆ ಪ್ರಮಾಣದ ಬಗ್ಗೆ ತಿಳಿದಿರಬೇಕು. ಹಸುಗಳ ಗರ್ಭಧಾರಣೆಗೆ ಪಶು ಇಲಾಖೆ ಉಚಿತವಾಗಿ ಚುಚ್ಚುಮದ್ದು ನೀಡುತ್ತದೆ’ ಎಂದು ಅವರು ಹೇಳಿದರು.

ತಳಿ ಆಯ್ಕೆಯತ್ತ ಇರಲಿ ಗಮನ
‘ವರ್ಷದ ಹಿಂದೆ ಮಂಡ್ಯದಿಂದ 5 ಎಚ್ಎಫ್ ತಳಿಯ ಹಸುಗಳನ್ನು ಆರಿಸಿ ತಂದಿದ್ದೆ. ಇವುಗಳಿಗೆ ಹೂಡಿಕೆ ಮಾಡಿದ ವೆಚ್ಚ ₹3.5 ಲಕ್ಷ. ಪ್ರತಿದಿನ 70 ಲೀಟರ್ ಹಾಲನ್ನು ಡೈರಿಗೆ ಪೂರೈಸುತ್ತೇವೆ. ವರ್ಷದಲ್ಲಿ ಎರಡು ತಿಂಗಳು ಬಿಟ್ಟು, ಎಲ್ಲ ಸಮಯ ಹಾಲು ಹಿಂಡಬಹುದು. 1 ಲೀಟರ್ ಹಾಲಿನ ದರ ₹25 ಇದ್ದು, ದಿನಕ್ಕೆ ₹1,750 ಸಂದಾಯವಾಗುತ್ತದೆ. ನಿರ್ವಹಣಾ ವೆಚ್ಚ ದಿನಕ್ಕೆ ₹750 ಕಳೆದರೂ, ದಿನಕ್ಕೆ ₹1,000 ಉಳಿಕೆ ನಿರೀಕ್ಷಿಸಬಹುದು’ ಎಂದು ಹೈನುಗಾರಿಕೆಯ ಲೆಕ್ಕಾಚಾರವನ್ನು ಮಂಜುನಾಥ್‌ ಬಿಡಿಸಿಟ್ಟರು. 

ಪ್ರತಿ ದಿನ 1 ಲೀಟರ್ ಹಾಲು ಮನೆ ಮಂದಿಗೆ ಸಾಕು. ಇದರ ವಾರ್ಷಿಕ ಉಳಿತಾಯ ₹25 ಸಾವಿರ. ವರ್ಷಕ್ಕೆ 20 ಟ್ರಾಕ್ಟರ್ ಗೊಬ್ಬರ ಸಂಗ್ರಹಿಸಿ, ಪ್ರತಿ ಟ್ರಾಕ್ಟರ್‌ಗೆ ₹1,500ಕ್ಕೆ ಮಾರಾಟ ಮಾಡಬಹುದು. ಈಗ ಹಸುಗಳು ಎರಡು ಹೆಣ್ಣು ಕರು ಹಾಕಿದ್ದು, ವರ್ಷ ಸಾಕಣೆ ಮಾಡಿ ಪ್ರತಿ ಕರುವನ್ನು ₹75 ಸಾವಿರಕ್ಕೆ ಮಾರಾಟ ಮಾಡಬಹುದು. ಇವೆಲ್ಲ ಹೆಚ್ಚುವರಿಯಾಗಿ ಅನ್ನದಾತರಿಗೆ ಸೇರುವ ಲಾಭಾಂಶದ ಪಾಲು. ಹಾಗಾಗಿ, ಹಸು, ಕರು ಸಾಕುವ ಮೊದಲು ಮಿಶ್ರ ಬೆಳೆಗಾರರು ಯೋಜನೆ ರೂಪಿಸಿ ಮುಂದುವರಿಯುವುದು ಉತ್ತಮ’ ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು