ಗುರುವಾರ , ಫೆಬ್ರವರಿ 9, 2023
30 °C
ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನಾ ಮೆರವಣಿಗೆ

ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಗ್ರ್ಯಾಚ್ಯುಟಿ ಪಾವತಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. 

ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಸೇರಿದ ಪ್ರತಿಭಟನಕಾರರು ಅಲ್ಲಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನದವರೆ ಮೆರವಣಿಗೆ ನಡೆಸಿ  ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾಧ್ಯಕ್ಷ ಕೆ.ಸುಜಾತ ಮಾತನಾಡಿ, 1972ರ ಗ್ರ್ಯಾಚ್ಯುಟಿ ಕಾಯ್ದೆ ಪ್ರಕಾರ ಅಂಗನವಾಡಿ ನೌಕರರು ಗ್ರ್ಯಾಚ್ಯುಟಿ ಪಡೆಯಲು ಅರ್ಹರು ಎಂದು ಸುಪ್ರೀಂಕೋರ್ಟ್‌ ಈ ವರ್ಷದ ಏಪ್ರಿಲ್‌ 25ರಂದು ತೀರ್ಪು ನೀಡಿದೆ. ಅದರಂತೆ ನಮಗೆ ಗ್ರ್ಯಾಚ್ಯುಟಿ ನೀಡಬೇಕು’ ಎಂದು ಒತ್ತಾಯಿಸಿದರು. 

‘ಸರ್ಕಾರ ನೀಡಿರುವ ಮೊಬೈಲ್‌ಗೆ ನಾಲ್ಕು ವರ್ಷಗಳಾಗಿದ್ದು, ಕೆಲಸ ಮಾಡಲು ಆಗುತ್ತಿಲ್ಲ. ಹೊಸ ಮೊಬೈಲ್‌ ಒದಗಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರನ್ನಾಗಿ ಪರಿಗಣಿಸಬೇಕು. ಅನ್ನದೊಟ್ಟಿಗೆ ಅಕ್ಷರ ಕೇಂದ್ರವಾಗಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ, ಬಲಿಷ್ಠಪಡಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು. 

‘ನಿವೃತ್ತಿಯಾಗಿರುವ ಅಂಗನವಾಡಿ ನೌಕರರಿಗೂ ಗ್ರ್ಯಾಚ್ಯುಟಿ ನೀಡಬೇಕು. ಅಂಗನವಾಡಿಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮೊಬೈಲ್‌ನಲ್ಲಿ ಮೂರು ಬಾರಿ ಲಿಖಿತ ರೂಪದಲ್ಲಿ ಪ್ರತಿ ನಿತ್ಯ ಎರಡು ಬಾರಿ ಹಾಜರಾತಿ ಪುಸ್ತಕಗಳನ್ನು ಕಾರ್ಯಕರ್ತೆ ಬರೆಯಬೇಕು ಎನ್ನುವುದೇ ಮುಖ್ಯ ಕೆಲಸವಾಗಬಾರದು. ಆದ್ದರಿಂದ ಮೊಬೈಲ್ ಅಥವಾ ಪುಸ್ತಕ ಯಾವುದಾದರೊಂದರಲ್ಲಿ ಬರೆಯುವುದನ್ನು ನಿರ್ಧರಿಸಬೇಕು. 9 ತಿಂಗಳುಗಳಿಂದ ಮೊಟ್ಟೆ ಕೊಟ್ಟಿಲ್ಲ. ತಕ್ಷಣದಲ್ಲಿ ಮೊಟ್ಟೆ ಪೂರೈಸಬೇಕು. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತೇವೆ’ ಎಂದು ಎಚ್ಚರಿಸಿದರು. 

ಸಂಘದ ಪ್ರಧಾನ ಕಾರ್ಯದರ್ಶಿ ನಾಗಮಣಿ, ಖಜಾಂಚಿ ಜೆ.ಭಾಗ್ಯ, ಚಾಮರಾಜನಗರ ತಾಲ್ಲೂಕು ಕಾರ್ಯದರ್ಶಿ ಶಾಹಿದಾಬಾನು, ಖಜಾಂಚಿ ಎನ್.ಎಸ್.ಗುರುಲಿಂಗಯ್ಯ, ಯಳಂದೂರು ತಾಲ್ಲೂಕು ಘಟಕದ ಅಧ್ಯಕ್ಷೆ ಮೀನಾಕ್ಷಿ, ಕಾರ್ಯದರ್ಶಿ ಭಾಗ್ಯ, ಖಜಾಂಚಿ ಕೆಂಪಮ್ಮ, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷೆ ಸುಜಿಯಾ, ಕಾರ್ಯದರ್ಶಿ ಗುರುಮಲ್ಲಮ್ಮ, ಖಜಾಂಚಿ ಸುಮಿತ್ರ, ಸಂತೇಮರಹಳ್ಳಿ ಅಧ್ಯಕ್ಷೆ ಪಾರ್ವತಮ್ಮ, ಕಾರ್ಯದರ್ಶಿ ತುಳಸಮ್ಮ, ಖಜಾಂಚಿ ಜಯಮಾಲ, ಸದಸ್ಯರಾದ ರೇವಮ್ಮ, ಅನುಸೂಯ, ಪುಷ್ಷ, ರಾಜಮ್ಮ, ಸರೋಜ, ಸುನೀತಾರಾಣಿ, ಕಾಂಚನಾ, ಸುಧಾ, ಭಾಗ್ಯಲಕ್ಷ್ಮಿ, ಅನಿತ, ದೇವಮ್ಮ, ಮಂಜಮ್ಮ, ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು