ಶನಿವಾರ, ಜೂನ್ 25, 2022
24 °C
ಸಿದ್ಧಮಲ್ಲೇಶ್ವರ ವಿರಕ್ತ ಮಠದಲ್ಲಿ ಅನುಭವ ಮಂಟಪ, ಬಸವಣ್ಣನ ‍ಪ್ರತಿಮೆ ಲೋಕಾರ್ಪಣೆ

ಮಠಗಳಿಂದ ನಾಡಿನ ಕಲ್ಯಾಣ: ಸುತ್ತೂರು ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಇವತ್ತು ಕರ್ನಾಟಕದಲ್ಲಿ ಅಕ್ಷರಸ್ಥರ ಸಂಖ್ಯೆ ಗರಿಷ್ಠ ಮಟ್ಟದಲ್ಲಿದ್ದರೆ ಅದಕ್ಕೆ ಮಠಗಳು ಕಾರಣ ಎಂದು ಸುತ್ತೂರು ಮಠದ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ ಅವರು ಭಾನುವಾರ ಪ್ರತಿಪಾದಿಸಿದರು.

ನಗರದ ವಿರಕ್ತ ಮಠದಲ್ಲಿ ಬಸವರಾಜಸ್ವಾಮಿ ಅನುಭವ ಮಂಟಪ ಹಾಗೂ ಬಸವೇಶ್ವರರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಮಠಗಳು ನಾಡಿನ ಕಲ್ಯಾಣಕ್ಕಾಗಿ ಅಪಾರವಾಗಿ ಶ್ರಮಿಸಿವೆ. ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ, ವಸತಿ ವ್ಯವಸ್ಥೆ ಕಲ್ಪಿಸುವಲ್ಲಿ ಮಠಗಳು ಮುಂಚೂಣಿಯಲ್ಲಿ ನಿಂತಿವೆ’ ಎಂದರು. 

‘ಸ್ವಾತಂ‌ತ್ರ್ಯ ಹೋರಾಟದ ಸಂದರ್ಭದಲ್ಲಿ ಮಠಗಳು ಚಳವಳಿಗಾರರಿಗೆ ವಸತಿ ವ್ಯವಸ್ಥೆ ಕಲ್ಪಿಸಿ ರಕ್ಷಣೆ ಕೊಟ್ಟು ಹೋರಾಟಕ್ಕೆ ಬೆಂಬಲ ನೀಡಿದ್ದವು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಲು, ಜನರ ಕಲ್ಯಾಣಕ್ಕಾಗಿ, ದೇಶವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಮಠಗಳು ಜನರಿಗೆ ತಿಳಿಹೇಳುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ’ ಎಂದು ಹೇಳಿದರು. 

ಭಕ್ತರ ಸಹಕಾರದಿಂದ ಅನುಭವ ಮಂಟಪ ನಿರ್ಮಿಸಿರುವುದನ್ನು ಶ್ಲಾಘಿಸಿದ ಅವರು, ‘ಚಾಮರಾಜನಗರವು ವಿಶೇಷ ಭಕ್ತಿ ಪರಂಪರೆ ಹೊಂದಿರುವ ಜಿಲ್ಲೆ. ಜನರು ಯಾವುದೇ ಮಠ ಮಾನ್ಯಗಳ ಕಾರ್ಯಗಳಿಗೆ ಉದಾರ ಕೊಡುಗೆ ನೀಡುತ್ತಾ ಬಂದಿದ್ದಾರೆ. ಮಠ ಬೆಳೆದರೆ ಸಮಾಜದ ಶ್ರೇಯೋಭಿವೃದ್ಧಿ ಸಾಧ್ಯ ಎಂಬ ಅಭಿಪ್ರಾಯವನ್ನು ಜನರು ಹೊಂದಿದ್ದಾರೆ’ ಎಂದರು. 

ಬಸವತತ್ವ ಪಾಲಿಸಿ: ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗಸ್ವಾಮೀಜಿ ಅವರು ಮಾತನಾಡಿ, ‘ಚಾಮರಾಜನಗರ ಜಿಲ್ಲೆಗೆ ಇತಿಹಾಸ, ಪರಂಪರೆ ಇದೆ. ಧಾರ್ಮಿಕ ಪರಂಪರೆಯಲ್ಲಿ ಬಸವಣ್ಣನವರ ನಂತರ ಜಗತ್ತಿಗೆ ಧರ್ಮವನ್ನು ಕೊಟ್ಟಂತಹ ಸಿದ್ಧಲಿಂಗೇಶ್ವರರನ್ನು  (ಯಡಿಯೂರು) ಕೊಟ್ಟಿರುವಂತಹ ಜಿಲ್ಲೆ ಇದು. ಮುಪ್ಪಿನ ಷಡಕ್ಷರಿ, ಷಡಕ್ಷರ ದೇವ ಮೊದಲಾದವರು ಜನಿಸಿದ ಪವಿತ್ರ ಮಣ್ಣು ಇದು. ಇಲ್ಲಿಗೆ ಮತ್ತಷ್ಟು ಶಕ್ತಿ ತುಂಬಿದವರು ವಿರಕ್ತ ಮಠ ಸ್ಥಾಪಿಸಿದ ಬಸವರಾಜ ಸ್ವಾಮೀಜಿಯವರು’ ಎಂದರು. 

‘ಬಸವಣ್ಣ ಅವರು ಒಂದು ಜಾತಿ, ಧರ್ಮ, ವರ್ಗಕ್ಕೆ ಸೀಮಿತರಾದವರಲ್ಲ. ಅವರು ಜಗತ್ತಿಗೆ ಸೇರಿದವರು. ಅದಕ್ಕಾಗಿ ಅವರನ್ನು ವಿಶ್ವಗುರು ಎಂದು ಕರೆಯಲಾಗುತ್ತದೆ. ಮನುಷ್ಯರಾಗಿ ನಾವು ಬದುಕಬೇಕಾದರೆ ಬಸವಣ್ಣನವರ ಎಲ್ಲ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ತಮ್ಮ ವಚನಗಳಲ್ಲಿರುವ ತತ್ವವನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಂಡು ತೋರಿಸಿದವರು. ಬಸವಣ್ಣನವರ ಜಯಂತ್ಯುತ್ಸವ ಉತ್ಸವಕ್ಕೆ ಸೀಮಿತವಾಗದೆ, ಉತ್ಸಾಹ ತುಂಬಬೇಕು. ಅವರ ತತ್ವಗಳನ್ನು ಆಚರಿಸಲು ನಾವು ಪ್ರಯತ್ನಿಸಬೇಕು’ ಎಂದು ಕರೆ ನೀಡಿದರು. 

ವಿರಕ್ತ ಮಠದ ಅಧ್ಯಕ್ಷ  ಚನ್ನಬಸವಸ್ವಾಮೀಜಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ‘28 ವರ್ಷಗಳ ಹಿಂದೆ ಭೂಮಿ ಪೂಜೆಯಾಗಿದ್ದ ಅನುಭವ ಮಂಟಪ ಉದ್ಘಾಟನೆ ಈಗ ನಡೆಯುತ್ತಿದೆ. ಭಕ್ತರ ಸಹಕಾರದಿಂದ ಇದು ನಡೆದಿದೆ. ಬಸವೇಶ್ವರ ಪ್ರತಿಮೆಯನ್ನೂ ಅನಾವರಣಗೊಳಿಸಲಾಗಿದೆ. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ ಭಕ್ತ ವೃಂದಕ್ಕೆ ಅಭಾರಿಯಾಗಿದ್ದೇವೆ’ ಎಂದರು.

ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ಕನಕಪುರ ಮಠಧ ಮುಮ್ಮಡಿ ನಿರ್ವಾಣಸ್ವಾಮೀಜಿ, ದೇವನೂರು ಮಠದ ಮಹಾಂತಸ್ವಾಮೀಜಿ, ಮೈಸೂರಿನ ಕುಂದೂರು ಮಠಧ ಶರತ್‌ಚಂದ್ರಸ್ವಾಮೀಜಿ, ಸೋಮಳ್ಳಿ ಮಠದ ಸಿದ್ದಮಲ್ಲಪ್ಪಸ್ವಾಮೀಜಿ, ಮಹದೇಶ್ವರ ಬೆಟ್ಟದ ಮಠದ ಗುರುಸ್ವಾಮೀಜಿ, ಹರವೆ ವಿರಕ್ತ ಮಠದ ಸರ್ಪಭೂಷಣಸ್ವಾಮೀಜಿ, ಬೆಟ್ಟದಪುರ ಮಠದ ಶ್ರೀ ಚನ್ನಬಸವದೇಶಿಕೇಂದ್ರಸ್ವಾಮೀಜಿ ಮಾತನಾಡಿದರು. 

ಪಡಗೂರು ಮಠದ ಶಿವಲಿಂಗೇಂದ್ರ ಸ್ವಾಮೀಜಿ, ಹಲವಾರು ಮಠದ ಷಡಕ್ಷರಿದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿ ಇದ್ದರು. 

ಭಾರಿ ಜನಸ್ತೋಮ: ಮಠದಲ್ಲಿ ನಡೆದ ಎರಡನೇ ದಿನದ ಕಾರ್ಯಕ್ರಮದಲ್ಲೂ ಭಾರಿ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡ ದಾಸೋಹ ಸಂಜೆ 4 ಗಂಟೆಯಾದರೂ ಮುಕ್ತಾಯವಾಗಿರಲಿಲ್ಲ. 

‘ದಾಸೋಹ, ಶಿಕ್ಷಣ ಕಲ್ಪನೆ ಸಾಕಾರ’

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಭಾನುವಾರ ಮಧ್ಯಾಹ್ನ ಮೇಲೆ ಮಠಕ್ಕೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಅನಾವರಣಗೊಂಡ ಬಸವಣ್ಣ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. 

ನಂತರ ಮಾತನಾಡಿದ ಅವರು, ‘12ನೇ ಶತಮಾನದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ದಾಸೋಹ, ಶಿಕ್ಷಣ ಹಾಗೂ ಸಹಬಾಳ್ವೆ ಕಲ್ಪನೆಯನ್ನು ವೀರಶೈವ ಲಿಂಗಾಯತ ಮಠಗಳು ಸಾಕಾರಗೊಳಿಸುವ ಮೂಲಕ ಭಕ್ತಿ ಮಾರ್ಗದಲ್ಲಿ ನಡೆಯುತ್ತಿವೆ’ ಎಂದರು. 

‘ಸಿದ್ದಮಲ್ಲೇಶ್ವರ ಮಠವು ದಾಸೋಹ, ಶಿಕ್ಷಣ ಹಾಗೂ ಬಡ ಮಕ್ಕಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿ ಜಿಲ್ಲಾ ಕೇಂದ್ರದಲ್ಲಿ ಬಸವಣ್ಣ ಅವರ ತತ್ವ ಅದರ್ಶಗಳನ್ನು ಪ್ರಚುರ ಪಡಿಸುವ, ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಇಂಥ ಮಠಗಳನ್ನು ಭಕ್ತರು ಪ್ರೋತ್ಸಾಹಿಸುತ್ತಿದ್ದಾರೆ ಎಂಬುದಕ್ಕೆ ಇಂದು ನಡೆಯುತ್ತಿರುವ ಕಾರ್ಯಕ್ರಮವೇ ಸಾಕ್ಷಿ’ ಎಂದು ಬಣ್ಣಿಸಿದರು. 

ಮಠದ ಚನ್ನಬಸವಸ್ವಾಮೀಜಿ, ಮರಿಯಾಲದ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ಶಾಸಕ ಸಿ.ಎಸ್. ನಿರಂಜನಕುಮಾರ್, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ, ಮುಖಂಡರಾದ ಅಮ್ಮನಪುರ ಮಲ್ಲೇಶ್, ಕೆ. ವೀರಭದ್ರಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ಹೊಸೂರು ನಟೇಶ್, ಕೊತ್ತಲವಾಡಿ ಕುಮಾರ್, ನಟರಾಜು, ಮನೋಜ್ ಪಟೇಲ್, ಕಾಳನಹುಂಡಿ ಗುರುಸ್ವಾಮಿ ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು