ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಪ್ರಶ್ನೆ ಕೇಳಿ, 3 ತೀರ್ಮಾನ ಮಾಡಿ: ಶ್ರೀಧರ್‌

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರೈತ ಮುಖಂಡರ ವಾಗ್ದಾಳಿ
Published 17 ಏಪ್ರಿಲ್ 2024, 15:30 IST
Last Updated 17 ಏಪ್ರಿಲ್ 2024, 15:30 IST
ಅಕ್ಷರ ಗಾತ್ರ

ಚಾಮರಾಜನಗರ: 'ಮತ ಕೇಳಿಕೊಂಡು ಮನೆಗೆ ಬರುವ ಬಿಜೆಪಿಯವರಿಗೆ ರೈತರು ಮೂರು ಪ್ರಶ್ನೆಗಳನ್ನು ಕೇಳಬೇಕು. ಅದರೊಂದಿಗೆ ಮೂರು ತೀರ್ಮಾನಗಳನ್ನು ತೆಗೆದುಕೊಳ್ಳಬೇಕು" ಎಂದು ಸಾಮಾಜಿಕ ಕಾರ್ಯಕರ್ತ, ಜನಶಕ್ತಿ ಸಂಘಟನೆಯ ನೂರ್‌ ಶ್ರೀಧರ್‌ ಬುಧವಾರ ಹೇಳಿದರು.

ತಾಲ್ಲೂಕಿನ ಹೊಂಡರಬಾಳುವಿನ ಅಮೃತಭೂಮಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೈತ್ರಿಕೂಟ ಸೋಲಿಸಿ, ರೈತ ಸಮುದಾಯವನ್ನು ಉಳಿಸಿ ಅಭಿಯಾನದ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘10 ವರ್ಷಗಳಲ್ಲಿ ರೈತರ ಸಾಲ ಮನ್ನಾ ಯಾಕೆ ಮಾಡಿಲ್ಲ?, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಯಾಕೆ ನೀಡಿಲ್ಲ ಮತ್ತು ಬರಗಾಲ ಪೀಡಿತ ರಾಜ್ಯಕ್ಕೆ ಕೇಂದ್ರ ಸರ್ಕಾರ ಯಾಕೆ ಬರ ಪರಿಹಾರ ನೀಡಿಲ್ಲ ಎಂಬ ಮೂರು ಪ್ರಶ್ನೆಗಳನ್ನು ಮತಯಾಚನೆಗೆ ಬರುವ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಪ್ರತಿಯೊಬ್ಬರೂ ಕೇಳಬೇಕು’ ಎಂದರು.

‘ಅದೇ ರೀತಿ, ಈ ಚುನಾವಣೆಯಲ್ಲಿ ರೈತ ವಿರೋಧಿ, ರೈತರ ಕೊಲೆ ಮಾಡಿದ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ, ರೈತದ್ವೇಷಿ ಬಿಜೆಪಿಯೊಂದಿಗೆ ಕೈಜೋಡಿಸಿದ ರೈತ ವಿರೋಧಿ ಜೆಡಿಎಸ್‌ಗೂ ತಕ್ಕ ಪಾಠ ಕಲಿಸುತ್ತೇವೆ. ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವ ಮತ್ತು ಕನಿಷ್ಠ ಬೆಂಬಲ ಬೆಲೆ ನೀಡುವ ಘೋಷಣೆಯನ್ನು ಸರ್ಕಾರ ಬಂದ ನಂತರ ಜಾರಿಗೆ ತರದಿದ್ದರೆ, ಕಾಂಗ್ರೆಸ್‌ ಹಾಗೂ ಮಿತ್ರ ಪಕ್ಷಗಳಿಗೂ ಇದೇ ಗತಿಯಾಗುತ್ತದೆ ಎಂಬ ಎಚ್ಚರಿಕೆ ನೀಡುತ್ತೇವೆ ಎಂಬ ಮೂರು ತೀರ್ಮಾನಗಳನ್ನು ಕೈಗೊಳ್ಳಬೇಕು’ ಎಂದು ಶ್ರೀಧರ್‌ ಹೇಳಿದರು.

ಒಗ್ಗಟ್ಟಾಗಿ ಹೋರಾಡೋಣ: ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪಂಜಾಬ್‌ನ ಕ್ರಾಂತಿಕಾರಿ ಕಿಸಾನ್‌ ಯೂನಿಯನ್ನಿನ ಅವತಾರ್‌ ಸಿಂಗ್‌ ಮೆಹ್ಮಾ ಮಾತನಾಡಿ, ‘ಬಿಜೆಪಿಯು ಜನರನ್ನು ಧಾರ್ಮಿಕ ಭಾವನೆಯನ್ನು ಮುಂದಿಟ್ಟುಕೊಂಡು ಕೆರಳಿಸುತ್ತಿದೆ. ಸಿಖ್ಖರು ಪ್ರತಿಭಟನೆ ನಡೆಸಿದರೆ ಖಾಲಿಸ್ತಾನಿ ಬೆಂಬಲಿಗರ ಹೋರಾಟ ಎಂದು ಬಿಂಬಿಸುತ್ತದೆ. ಮುಸ್ಲಿಮರು ಪ್ರತಿಭಟನೆ ನಡೆಸಿದರೆ ಜಿಹಾದಿ ಬಣ್ಣ ಕಟ್ಟುತ್ತದೆ. ಆದಿವಾಸಿಗಳು ಬೀದಿಗಳಿದರೆ ನಕ್ಸಲರು ಎಂದು ಕಥೆ ಕಟ್ಟುತ್ತದೆ. ರೈತರಿಗೆ ಅನ್ಯಾಯ ಮಾಡುತ್ತಾ ಬಂದ ಕೇಂದ್ರ ಸರ್ಕಾರ ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲ ಕಲ್ಪಿಸುತ್ತಿದೆ’ ಎಂದು ದೂರಿದರು.

‘ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟ ಕೇಂದ್ರ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. ರೈತ ಚಳವಳಿ ದೊಡ್ಡ ಶಕ್ತಿಯಾಗಿ ಮಾರ್ಪಟ್ಟಿದೆ. ಎಲ್ಲ ಸಂಘಟನೆಗಳೂ ಒಟ್ಟಾಗಿ ಹೋರಾಟ ಮಾಡಿದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತುಹಾಕಬಹುದು. ಸಂವಿಧಾನ, ರೈತ ವಿರೋಧಿ, ಕಾರ್ಪೊರೇಟ್‌ಗಳ ಪರವಾಗಿರುವ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರದಿಂದ ಕೆಳಗಿಳಿಸಬೇಕು. ನಮ್ಮ ಈ ನಿಲುವು ಬಿಜೆಪಿಗೆ ಮಾತ್ರ ಸಂಬಂಧಿಸಿದ್ದಲ್ಲ. ರೈತರ ಕಷ್ಟಗಳಿಗೆ, ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ, ರೈತ ವಿರೋಧಿಯಾಗಿ ನಡೆದುಕೊಳ್ಳುವ ಎಲ್ಲ ಸರ್ಕಾರಗಳನ್ನೂ ಕಿತ್ತು ಹಾಕಬೇಕು’ ಎಂದರು.

ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೀರಸಂಗಯ್ಯ ಮಾತನಾಡಿ, ‘ಬಿಜೆಪಿ ವಿರುದ್ಧ ಮತ ಹಾಕಲು ಕರೆ ನೀಡಿರುವುದರಿಂದ, ನಮಗೆ ಕಾಂಗ್ರೆಸ್‌ ದುಡ್ಡು ಕೊಟ್ಟಿರಬಹುದು ಎಂದು ಜನರು ಮಾತನಾಡಿಕೊಳ್ಳಬಹುದು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಅಂತಹವರಿಗೆ ನೀವು, ‘ರೈತ ವಿರೋಧಿಯಾಗಿ ನಡೆದುಕೊಂಡಿರುವ ಬಿಜೆಪಿ ಮೈತ್ರಿಕೂಟದ ವಿರುದ್ಧವಷ್ಟೇ ನಮ್ಮ ಹೋರಾಟ’ ಎಂದು ಸ್ಪಷ್ಟವಾಗಿ ಹೇಳಬೇಕು’ ಎಂದರು.

ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ, ರಾಜ್ಯ ಉಪಾಧ್ಯಕ್ಷ ಮಹೇಶ್‌ ಪ್ರಭು ಮಾತನಾಡಿದರು. ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ, ಜಿಲ್ಲಾ ಅಧ್ಯಕ್ಷ ಶಾಂತಮಲ್ಲಪ್ಪ, ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎಸ್‌.ಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಾರಮ್ಮ, ಎದ್ದೇಳು ಕಾರ್ನಾಟಕದ ಪುಟ್ಟಮ್ಮ ಪಾಲ್ಗೊಂಡಿದ್ದರು.

ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರೈತ ಸಂಘದ ಪದಾಧಿಕಾರಿಗಳು ಸದಸ್ಯರು
ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರೈತ ಸಂಘದ ಪದಾಧಿಕಾರಿಗಳು ಸದಸ್ಯರು

ಕಾಂಗ್ರೆಸ್‌ ಸರಿ ಎಂದಲ್ಲ:ನಾಗೇಂದ್ರ

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ‘ಈ ಚುನಾವಣೆಯು ರೈತರನ್ನು ದುಡಿಯುವವರನ್ನು ಸಂವಿಧಾನವನ್ನು ಉಳಿಸುವಂತಹ ಪ್ರಮುಖ ಚುನಾವಣೆ. ರೈತರಿಗೆ ಯಾವುದೇ ಸರ್ಕಾರವನ್ನು ಕಿತ್ತೊಗೆಯುವ ಶಕ್ತಿ ಇದೆ. 1982ರಲ್ಲಿ ಗುಂಡೂರಾವ್‌ ಸರ್ಕಾರ ಗೋಲಿಬಾರ್‌ ನಡೆಸಿ ರೈತರನ್ನು ಹತ್ಯೆ ಮಾಡಿದಾಗ ಕಾಂಗ್ರೆಸ್‌ ಸರ್ಕಾರ ಮತ್ತು ಗುಂಡೂರಾವ್‌ ಸರ್ಕಾರದ ವಿರುದ್ಧ ಮತಹಾಕುವಂತೆ ನಮ್ಮ ನಾಯಕರು ಕರೆ ನೀಡಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಗುಂಡೂರಾವ್‌ ಸೋತಿದ್ದರು. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ರೈತ ವಿರೋಧಿ ಬಿಜೆಪಿ ಸರ್ಕಾರವನ್ನು ಸೋಲಿಸಬೇಕೆಂದು ನಾವು ಕರೆಕೊಟ್ಟಿದ್ದೆವು. ಬಿಜೆಪಿ ಸೋತಿತ್ತು. ಅದೇ ರೀತಿ 10 ವರ್ಷಗಳಿಂದ ಮಾಡಬಾರದ್ದನ್ನೆಲ್ಲಾ ಮಾಡುತ್ತಾ ಬಂದಿರುವ ರೈತ ವಿರೋಧಿ ಮೋದಿ ಸರ್ಕಾರವನ್ನು ಸೋಲಿಸಬೇಕಾಗಿದೆ’ ಎಂದರು. ‘ಮೋದಿ ಅವರು ರೈತರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದರು. 700ಕ್ಕೂ ಹೆಚ್ಚು ರೈತರು ಮೃತಪಟ್ಟರೂ ಒಂದು ಮಾತನಾಡಲಿಲ್ಲ. ಆಂದೋಲನ ಜೀವಿ ಎಂದು ಅವಮಾನಿಸಿದರು. ರೈತರಿಗೆ ಅನುಕೂಲವಾಗುವಂತಹ ಕಾನೂನು ಯೋಜನೆಗಳನ್ನು ತಾರದೆ ರೈತ ಕುಲವನ್ನು ನಾಶ ಮಾಡುವ ಕಾಯ್ದೆಗಳನ್ನು ರೂಪಿಸಿದರು. ಯಾರಾದರೂ ರೈತ ಬಿಜೆಪಿಗೆ ಮತ ಹಾಕುತ್ತಾನೆ ಎಂದರೆ ಅದು ಆತನೇ ಸ್ವತಃ ಮೈಗೆ ಬೆಂಕಿ ಹಚ್ಚಿಕೊಂಡಂತೆ’ ಎಂದರು. ‘ಬಿಜೆಪಿ ಮೈತ್ರಿಕೂಟ ಸೋಲಿಸುವುದು ನಮ್ಮ ಗುರಿ. ಅಂದ ಮಾತ್ರಕ್ಕೆ ಕಾಂಗ್ರೆಸ್‌ ಸರಿ ಎಂದು ನಾವು ಯಾರೂ ಹೇಳುತ್ತಿಲ್ಲ. ಕಾಂಗ್ರೆಸ್‌ ಈ ಹಿಂದೆ ಮಾಡಿದ ತಪ್ಪಿನಿಂದ ಈಗ ಈ ಪರಿಸ್ಥಿತಿ ಇದೆ. ಒಂದು ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮೈತ್ರಿಕೂಟ ಗೆದ್ದು ರೈತರಿಗೆ ಸ್ಪಂದಿಸದಿದ್ದರೆ ಅದರ ವಿರುದ್ಧವೂ ಹೋರಾಟ ಮಾಡುತ್ತೇವೆ. ರೈತರೇ ರಾಜಕೀಯ ಶಕ್ತಿಯಾಗಿ ಬೆಳೆಯಬೇಕಾದ ಅಗತ್ಯವಿದೆ’ ಎಂದು ನಾಗೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT