ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಆಸ್ತಿ ಖರೀದಿಗಾಗಿ ರೈತ ದಂಪತಿ ಇಟ್ಟುಕೊಂಡಿದ್ದ ₹9.5 ಲಕ್ಷ ಕಳವು

ಜಿಲ್ಲಾಡಳಿತ ಭವನದ ಗೇಟಿನ ಎದುರು ಇರುವ ಹೋಟೆಲ್‌ ಬಳಿ ಘಟನೆ
Last Updated 18 ನವೆಂಬರ್ 2021, 15:17 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಜಿಲ್ಲಾಡಳಿತ ಭವನದ ಗೇಟಿನ ಎದುರುಗಡೆ ಗುರುವಾರ ಮಧ್ಯಾಹ್ನ ಕಾರೊಂದರಲ್ಲಿ ರೈತ ದಂಪತಿ ಇಟ್ಟಿದ್ದ ₹9.5 ಲಕ್ಷ ನಗದು ಹಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ತಾಲ್ಲೂಕಿನ ಅಚ್ಚಟಿಪುರ ಗ್ರಾಮದ ರೈತ ನಾಗಪ್ಪ ಹಾಗೂ ಸರೋಜಮ್ಮ ದಂಪತಿ ಹಣವನ್ನು ಕಳೆದುಕೊಂಡವರು. ಜಮೀನು ಖರೀದಿಗಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಬಂದಿದ್ದ ದಂಪತಿ, ಗುರುವಾರ ಮಧ್ಯಾಹ್ನ ರಾಚಯ್ಯ ಜೋಡಿ ರಸ್ತೆಯಲ್ಲಿರುವ ಹೋಟೆಲ್‌ಗೆ ಊಟಕ್ಕೆ ಹೋಗುವಾಗ ಇಂಡಿಕಾ ಕಾರಿನ ಮುಂಭಾಗದ ಡ್ಯಾಶ್‌ ಬೋರ್ಡ್‌ನಲ್ಲಿ ₹9.5 ಲಕ್ಷ ನಗದು ಇದ್ದ ಚೀಲ ಇಟ್ಟಿದ್ದರು.

ಇದನ್ನು ಗಮನಿಸಿದ್ದ ಕಳ್ಳರು ಕಾರಿನ ಎಡ ಭಾಗದ ಮುಂಬಾಗಿನ ಗಾಜನ್ನು ಒಡೆದು, ಹಣದ ಚೀಲವನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ. ನಾಗಪ್ಪ ದಂಪತಿ ಊಟ ಮುಗಿಸಿಕೊಂಡು ಕಾರಿನ ಬಳಿ ಬಂದಾಗ ಕಿಟಕಿ ಗಾಜು ಒಡೆದಿರುವುದು ಗೊತ್ತಾಗಿದೆ. ಕಾರಿನ ಒಳಗಡೆ ಹಣದ ಚೀಲ ಇಲ್ಲದಿರುವುದನ್ನು ಕಂಡು ಹೌಹಾರಿದರು.

ನಾಗಪ್ಪ ಅವರು ಯರಗನಹಳ್ಳಿ ಬೀರಮ್ಮ ಅವರಿಗೆ ಸೇರಿದ ಎರಡು ಎಕರೆ ಜಮೀನು ಖರೀದಿಸಲು ಹೊರಟಿದ್ದರು. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಗುರುವಾರ ನೋಂದಣಿಗೆ ನಿಗದಿಯಾಗಿತ್ತು. ಬಹುತೇಕ ಪ್ರಕ್ರಿಯೆಗಳು ಮುಗಿದ ನಂತರ ಮಧ್ಯಾಹ್ನ ಊಟಕ್ಕಾಗಿ ಅವರು ಕಾರಿನಲ್ಲಿ ಬಂದಿದ್ದರು.

ತಿಂಗಳಲ್ಲಿ ಎರಡನೇ ಪ್ರಕರಣ: ನಗರದಲ್ಲಿ ಜನಸಂದಣಿ ಇರುವ ಸಾರ್ವಜನಿಕ ಪ್ರದೇಶದಲ್ಲಿ ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಎರಡನೇ ಪ್ರಕರಣ ಇದು. ಅಕ್ಟೋಬರ್‌ 19ರಂದು ಶಿಕ್ಷಕರೊಬ್ಬರು ರಾಚಯ್ಯ ಜೋಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನಿಂದ ಹಣ ಪಡೆದು ನಂಜನಗೂಡಿಗೆ ತೆರಳುವುದಕ್ಕಾಗಿ ಭುವನೇಶ್ವರಿ ವೃತ್ತದಲ್ಲಿ ಬಸ್‌ಗೆ ಕಾಯುತ್ತಿದ್ದಾಗ ಕಳ್ಳರು ಅವರ ಗಮನ ಬೇರೆ ಕಡೆಗೆ ಸೆಳೆದು ₹2 ಲಕ್ಷ ಹಣವನ್ನು ದೋಚಿಸಿದ್ದರು. ಈ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ.

ಆ ಪ್ರಕರಣ ಹಸಿಯಾಗಿರುವಾಗಲೇ, ಜನನಿಬಿಡ ಸ್ಥಳದಲ್ಲಿ ಖದೀಮರು ಮತ್ತೆ ₹9.5 ಲಕ್ಷ ನಗದು ದೋಚಿದ್ದಾರೆ.

ನಗರದಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸರು ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದು, ಶೀಘ್ರದಲ್ಲಿ ಕಳ್ಳರನ್ನು ಪತ್ತೆ ಹಚ್ಚಿ ರೈತ ದಂಪತಿಗೆ ಹಣವನ್ನು ವಾಪಸ್‌ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕರಣದ ಬಗ್ಗೆ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್‌ ಅವರು, ‘ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಕಳ್ಳ ಒಬ್ಬನೇ ಅಥವಾ ತಂಡವಾಗಿ ಈ ಕೃತ್ಯ ಎಸಗಿದ್ದಾರೆಯೇ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ತನಿಖೆ ಆರಂಭಿಸಲಾಗಿದ್ದು ಶೀಘ್ರವಾಗಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT