ಬುಧವಾರ, ಅಕ್ಟೋಬರ್ 20, 2021
25 °C
ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಸ್ಥಾಪನೆ

ನೌಕರರ ಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾಡಳಿತದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದಕ್ಕಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಶಿಶುಪಾಲನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. 

ಜಿಲ್ಲಾ ಪಂಚಾಯಿತಿಯು ₹2.50 ಲಕ್ಷ ಅನುದಾನದಲ್ಲಿ ಈ ಕೇಂದ್ರ ಸ್ಥಾಪಿಸಿದೆ. ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಈ ಶಿಶುಪಾಲನಾ ಕೇಂದ್ರವನ್ನು ಭಾನುವಾರ (ಅ.3) ಉದ್ಘಾಟಿಸಬೇಕಾಗಿತ್ತು. ಕೊನೆಕ್ಷಣದಲ್ಲಿ ಅವರ ಭೇಟಿ ರದ್ದಾಗಿರುವುದರಿಂದ ಉದ್ಘಾಟನೆ ಮುಂದೂಡಿಕೆಯಾಗಿದೆ. 

ಈ ಕೇಂದ್ರದ ಸ್ಥಾಪನೆಯಿಂದಾಗಿ ಚಿಕ್ಕ ಮಕ್ಕಳನ್ನು ಹೊಂದಿದ್ದು, ಮನೆಯಲ್ಲಿ ನೋಡಿಕೊಳ್ಳಲು ಜನರು ಇಲ್ಲದಿರುವ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ. ಬೆಳಿಗ್ಗೆ ಕರ್ತವ್ಯಕ್ಕೆ ಬರುವಾಗ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬಂದು ಈ ಕೇಂದ್ರದಲ್ಲಿ ಬಿಡಬಹುದಾಗಿದೆ. ಬಿಡುವಿನ ಸಮಯದಲ್ಲಿ ಶಿಶುಪಾಲನಾ ಕೇಂದ್ರಕ್ಕೆ ತೆರಳಿ ಮಕ್ಕಳ ಜೊತೆ ಸಮಯವನ್ನೂ ಕಳೆಯಬಹುದು. ಮಕ್ಕಳು ಸಣ್ಣವರಾಗಿದ್ದರೆ ತಾಯಂದಿರು ಇಲ್ಲಿ ಎದೆಹಾಲನ್ನೂ ಕುಡಿಸಬಹುದು. 

ಮಹಿಳಾ ನೌಕರರಿಗೆ ಮಕ್ಕಳನ್ನು ನೋಡಿಕೊಳ್ಳಲು ಅನುಕೂಲಕರ ವಾತಾವರಣವನ್ನು ಕೆಲಸ ಮಾಡುವ ಪರಿಸರದಲ್ಲಿ ನಿರ್ಮಿಸಬೇಕು ಎಂಬ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದೆ.

ರಾಜ್ಯ ಸರ್ಕಾರ ಕೂಡ, ಸರ್ಕಾರಿ ಕಚೇರಿಗಳು ಇರುವ ಕಡೆಯಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯಬೇಕು ಎಂದು ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಆದೇಶದ ಅನ್ವಯ ಈ ಕೇಂದ್ರನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದರು. 

‘ಜಿಲ್ಲಾ ಪಂಚಾಯಿತಿಯ ಕಟ್ಟಡ ಅನುದಾನವನ್ನು ಬಳಸಿಕೊಂಡು ₹2.5 ಲಕ್ಷ ವೆಚ್ಚದಲ್ಲಿ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಶಿಶುಪಾಲನಾ ಕೇಂದ್ರವನ್ನು ಸ್ಥಾಪಿಸಲಾಗಿದೆ’ ಎಂದು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಇಬ್ರಾಹಿಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಕೇಂದ್ರದಲ್ಲಿ ಏನೇನಿದೆ?: ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದ ಬಳಿಯಲ್ಲಿರುವ ಕಟ್ಟಡದಲ್ಲಿ ಶಿಶುಪಾಲನಾ ಕೇಂದ್ರವನ್ನು ತೆರೆಯಲಾಗಿದೆ. ಚಿಣ್ಣರನ್ನು ಆಕರ್ಷಿಸುವ ಎಲ್ಲ ವ್ಯವಸ್ಥೆಗಳೂ ಇಲ್ಲಿವೆ. ಆಟಿಕೆಗಳು, ಪುಟ್ಟ ಜಾರು ಬಂಡಿ, ಕುಳಿತುಕೊಳ್ಳಲು ಸಣ್ಣ ಕುರ್ಚಿಗಳು, ಗೋಡೆಗಳಲ್ಲಿ ಆಕರ್ಷಕ ಚಿತ್ರಗಳು, ಅಕ್ಷರ ಮಾಲೆ, ಅಂಕಿಗಳು ಸೇರಿದಂತೆ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಕಲಿಕೆಗೆ ಬೇಕಾದ ಕಲಿಕಾ ಸಾಮಗ್ರಿಗಳನ್ನು ಇಡಲಾಗಿದೆ.  

ಮಕ್ಕಳಿಗೆ ಹಾಲು, ನೀರು, ಇತರೆ ಆಹಾರ ವಸ್ತುಗಳನ್ನು ಬಿಸಿ ಮಾಡಿ ಕೊಡುವುದಕ್ಕೆ ಚಿಕ್ಕದಾದ ಅಡುಗೆ ಕೋಣೆ ಇದೆ.  ಮಕ್ಕಳಿಗೆ ಎದೆ ಹಾಲು ಉಣಿಸುವುದಕ್ಕಾಗಿ ಪ್ರತ್ಯೇಕ ಕೊಠಡಿಯೂ ಇದೆ.  

ಶೀಘ್ರ ಸಿಬ್ಬಂದಿ ನಿಯೋಜನೆ: ಸಿಇಒ

‘ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಶಿಶುಪಾಲನಾ ಕೇಂದ್ರ ಸ್ಥಾಪಿಸಲಾಗಿದೆ. ಮಕ್ಕಳಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬಹುದು. ಜಿಲ್ಲಾಡಳಿತ ಭವನದಲ್ಲಿ ಕೆಲಸ ಮಾಡುವ, ಚಿಕ್ಕ ಮಕ್ಕಳನ್ನು ಹೊಂದಿರುವ ತಾಯಂದಿರಿಗೆ ಇದರಿಂದ ಅನುಕೂಲವಾಗಲಿದೆ. ಕೇಂದ್ರಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನು ಶೀಘ್ರದಲ್ಲಿ ನಿಯೋಜಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌ ನಾರಾಯಣರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು