ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೆಮಡುವಿನ ಕೆರೆ ಭರ್ತಿ: ಸಚಿವ ಕೆ.ವೆಂಕಟೇಶ್‌ ಬಾಗಿನ

Published 17 ಜನವರಿ 2024, 5:16 IST
Last Updated 17 ಜನವರಿ 2024, 5:16 IST
ಅಕ್ಷರ ಗಾತ್ರ

ಚಾಮರಾಜನಗರ: ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆಗೆ ನೀರುತುಂಬಿಸುವ ಯೋಜನೆಯ ಭಾಗವಾಗಿದ್ದ ಅನೆಮಡುವಿನ ಕೆರೆಗೆ ನೀರು ತುಂಬಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಂಗಳವಾರ ಬಾಗಿನ ಅರ್ಪಿಸಿದರು. 

ನಂಜೇದೇವನಪುರ ಸಮೀದಪಲ್ಲಿರುವ ಅನೆಮಡುವಿನ ಕೆರೆಗೆ ಆಲಂಬೂರು ಏತ ನೀರಾವರಿ ಯೋಜನೆಯ ಮೊದಲ ಹಂತದಲ್ಲೇ ನೀರು ತುಂಬಿಸಬೇಕಿತ್ತು. ಆದರೆ, ಪೈಪ್‌ಲೈನ್‌ ಮತ್ತು ಗುರುತ್ವಾಕರ್ಷಣೆಯ ಮೂಲಕ ನೀರು ತುಂಬಿಸುವ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದರಿಂದ ನೀರು ತುಂಬಿಸುವುದು ವಿಳಂಬವಾಗಿತ್ತು.

ಕೊನೆಗೆ ಉಡಿಗಾಲ ಮಾರ್ಗವಾಗಿ ಪೈಪ್ ಲೈನ್ ಹಾಗೂ ಗುರುತ್ವಾಕರ್ಷಣೆ ಮೂಲಕ ₹1.02 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಈಗ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. 

ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ‘ಈ ಕೆರೆಗೆ 10 ವರ್ಷಗಳ ಹಿಂದೆಯೇ ನೀರು ತುಂಬಿಸಬೇಕಾಗಿತ್ತು. ತಾಂತ್ರಿಕ ಕಾರಣ ಹಾಗೂ ಹೋರಾಟಗಾರರು ಆ ಕಡೆಯಿಂದ ಬೇಡ. ಈ ಕಡೆಯಿಂದ ಬೇಕು ಎಂಬ ಹಟ ಮಾಡಿದ್ದರಿಂದ ವಿಳಂಬವಾಯಿತು’ ಎಂದರು. 

‘ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ದಿ. ಎಚ್.ಎಸ್.ಮಹದೇವಪ್ರಸಾದ್ ಹಾಗೂ ಸಂಸದರಾಗಿದ್ದ ದಿ. ಆರ್. ಧ್ರುವನಾರಾಯಣ ಅವರ ಶ್ರಮದ ಫಲವಾಗಿ ಈ ಭಾಗದ 20 ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಯಿತು. 2008ರಲ್ಲಿ ಬಿಜೆಪಿ ಸರ್ಕಾರ ಅನುಮೋದನೆ ನೀಡಿದ್ದು ಬಿಟ್ಟರೆ ಉಳಿದ ಎಲ್ಲ ಕೆಲಸವನ್ನು ನಮ್ಮ ಸರ್ಕಾರ ಮಾಡಿತ್ತು. ಈಗಲೂ ನಮ್ಮ ಸರ್ಕಾರವೇ ಆನೆಮಡುವಿನ ಕೆರೆಗೆ ನೀರು ತುಂಬಿಸಿದೆ’ ಎಂದರು. 

‘ನಮಗೆ ರೈತರು ಮುಖ್ಯ. ರೈತರ ಪರವಾಗಿರುವ ಎಲ್ಲ ಕಾರ್ಯಗಳನ್ನು ಆದ್ಯತೆ ಮೇರೆಗೆ ಮಾಡಲಾಗುತ್ತಿದೆ. ಈ ಭಾಗದ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಬಹಳ ಇತ್ತು. ಕೆರೆ ತುಂಬಿದ್ದರಿಂದ ಅಂತರ್ಜಲ ವೃದ್ದಿಯಾಗಿ ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದರು. 

ನಂಜೇದೇವನಪುರ ದಾಸೋಹ ಮಠಾಧ್ಯಕ್ಷ ರಾಜೇಂದ್ರಸ್ವಾಮೀಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಶೇಖರಪ್ಪ, ಉಪಾಧ್ಯಕ್ಷ ಗುರುಮಲ್ಲಪ್ಪ, ಕಾರ್ಮಿಕ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಉಡಿಗಾಲ ನಂಜಪ್ಪ, ಮುಖಂಡರಾದ ಎನ್.ಎಂ. ಶಿವಸ್ವಾಮಿ, ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಅನಂದ್‌ ಪ್ರಕಾಶ್ ಮೀನಾ, ಸಣ್ಣ ನೀರಾವಾರಿ ಇಲಾಖೆಯ ಎಇಇ ಎಸ್. ನಿರಂಜನ್, ಎಇಇ ಅಭಿಲಾಷ್, ಜೆಇ ಮಂಜುಳಾ, ಬಸವಣ್ಣ, ನಂಜುಂಡಸ್ವಾಮಿ, ಉಡಿಗಾಲ, ನಂಜೇದೇವನಪುರ, ವೀರನಪುರ, ಕುಡುವಿನ ಕಟ್ಟೆಹುಂಡಿ ಹುಂಡಿ, ಶಿವಪುರ,ಕಾಳನಹುಂಡಿ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT