ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ ಕಾಳ್ಗಿಚ್ಚು| ಅರಣ್ಯ ಇಲಾಖೆ ತನಿಖಾ ವರದಿ ಸಲ್ಲಿಕೆ–ಅಧಿಕಾರಿಗಳತ್ತ ಬೊಟ್ಟು

ಬೆಂಕಿ ರೇಖೆ ನಿರ್ಮಿಸದಿರುವುದೇ ಪ್ರಮುಖ ಕಾರಣ: ವರದಿ
Last Updated 8 ಸೆಪ್ಟೆಂಬರ್ 2019, 19:46 IST
ಅಕ್ಷರ ಗಾತ್ರ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಿವಿಧ ವಲಯಗಳಲ್ಲಿ ವ್ಯವಸ್ಥಿತವಾಗಿ ಬೆಂಕಿ ರೇಖೆ (ಫೈರ್‌ಲೈನ್‌) ನಿರ್ಮಿಸದಿರುವುದೇ ಕಾಳ್ಗಿಚ್ಚಿಗೆ ಪ್ರಮುಖ ಕಾರಣ ಎಂದು ಅರಣ್ಯ ಇಲಾಖೆಯು ವರದಿ ನೀಡಿದ್ದು, ಅಧಿಕಾರಿಗಳ ಕರ್ತವ್ಯಲೋಪದತ್ತ ಬೊಟ್ಟು ಮಾಡಿದೆ.

ಫೆಬ್ರುವರಿ 21ರಂದು ಕುಂದುಕೆರೆ ವಲಯದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ 4,419.54 ಹೆಕ್ಟೇರ್‌ ಅರಣ್ಯವನ್ನು (11,049 ಎಕರೆ) ಆಹುತಿ ತೆಗೆದುಕೊಂಡಿತ್ತು. ತನಿಖೆಗಾಗಿ ಇಲಾಖೆಯ ಕಾನೂನು ಘಟಕದ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹರಿಕುಮಾರ್‌ ಝಾ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

ಬೆಂಕಿ ರೇಖೆಯೇ ಇಲ್ಲ: ಕಾಳ್ಗಿಚ್ಚಿನಿಂದಾಗಿ ಕುಂದುಕೆರೆ ವಲಯ, ಬಂಡೀಪುರ ವಲಯ, ಗೋಪಾಲಸ್ವಾಮಿ ಬೆಟ್ಟ (ಜಿಎಸ್‌ ಬೆಟ್ಟ) ವಲಯ, ಮದ್ದೂರು ವಲಯಗಳಲ್ಲಿ ತೀವ್ರ ಹಾನಿಯಾಗಿತ್ತು.

‘ರಾಷ್ಟ್ರೀಯ ಹೆದ್ದಾರಿ ಹಾಗೂ ಸಫಾರಿಗೆ ಹೋಗುವ ಮಾರ್ಗಗಳ ಎರಡೂ ಬದಿಗಳಲ್ಲಿ ಮಾತ್ರ ಬೆಂಕಿ ರೇಖೆಯನ್ನು ತುಂಬಾ ಅಗಲವಾಗಿ ಹಾಗೂ ವ್ಯವಸ್ಥಿತವಾಗಿ ಮಾಡಲಾಗಿದೆ. ಉಳಿದ ಕಡೆಗಳಲ್ಲಿ 3ರಿಂದ 4 ಮೀಟರ್‌ ಅಗಲಕ್ಕೆ (ಕನಿಷ್ಠ 10 ಮೀಟರ್‌ ಇರಬೇಕು) ಬೆಂಕಿ ರೇಖೆ ನಿರ್ಮಿಸಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ 3 ಮೀಟರ್‌ಗಿಂತಲೂ ಕಡಿಮೆ ಇದೆ. ಬಂಡೀಪುರ, ಮೊಳೆಯೂರು, ಜಿಎಸ್‌ ಬೆಟ್ಟ ವಲಯಗಳ ಕೆಲವು ಕಡೆ ಬೆಂಕಿರೇಖೆ ಯನ್ನೇ ನಿರ್ಮಿಸಿರಲಿಲ್ಲ. ಬಂಡೀಪುರ ಉಪ ವಿಭಾಗದಲ್ಲಿ ಬೆಂಕಿ ರೇಖೆ ನಿರ್ಮಾಣ ಮಾಡಿದವರಿಗೆ ಹಣ ಪಾವತಿ ಮಾಡದಿರುವುದೂ ಕಂಡು ಬಂದಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಿಡಿಗೇಡಿಗಳ ನಿಯಂತ್ರಣಕ್ಕೆ ವಿಫಲ: ‘ಈ ಕಾಳ್ಗಿಚ್ಚು ಮಾನವ ನಿರ್ಮಿತ. ಕಾಡಂಚಿನ ಪ‍್ರದೇಶದ ಕಿಡಿಗೇಡಿಗಳು ಕೊಟ್ಟ ಬೆಂಕಿಯೇ ಕಾಳ್ಗಿ‌ಚ್ಚಾಗಿರುವ ಸಾಧ್ಯತೆ ಇದೆ. ಕಿಡಿಗೇಡಿಗಳನ್ನು ನಿಯಂತ್ರಿಸಲು, ಮುನ್ನೆಚ್ಚರಿಕೆ ಕೈಗೊಳ್ಳಲು ಸಿಬ್ಬಂದಿ ವಿಫಲರಾಗಿದ್ದಾರೆ. ಇಲಾಖೆಯ ಉನ್ನತ ಅಧಿಕಾರಿಗಳು ಹೊರಡಿಸುವ ಆದೇಶಗಳು ಪಾಲಿಸುವುದರಲ್ಲೂ ಅಧಿಕಾರಿಗಳು ಲೋಪವೆಸಗಿದ್ದಾರೆ’ ಎಂದೂ ವರದಿಯಲ್ಲಿ ಝಾ ಹೇಳಿದ್ದಾರೆ.

ಕಾಳ್ಗಿಚ್ಚಿನ ಸಂದರ್ಭದಲ್ಲಿ ಅಂಬಾಡಿ ಮಾಧವ್ ಅವರು ಬಂಡೀಪುರ ನಿರ್ದೇಶಕರಾಗಿದ್ದರು. ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಸಿಸಿಎಫ್‌) ವರ್ಗವಾಗಿದ್ದರೂ ಹೆಚ್ಚುವರಿಯಾಗಿ ನಿರ್ದೇಶಕರ ಹುದ್ದೆಯಲ್ಲಿ ಮುಂದುವರಿದಿದ್ದರು. ಈಗ ಅವರು ನಿವೃತ್ತರಾಗಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಅಂಬಾಡಿ ಮಾಧವ್‌, ‘2017–18ರಲ್ಲೂ ನಾನೇ ನಿರ್ದೇಶಕನಾಗಿದ್ದೆ. ಆ ವರ್ಷ ಕಾಳ್ಗಿಚ್ಚು ಸಂಭವಿಸಿರಲಿಲ್ಲ. ಈ ಬಾರಿಯೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿತ್ತು. ಬೆಂಕಿ ರೇಖೆಯನ್ನೂ ನಿರ್ಮಿಸಲಾಗಿತ್ತು. ಎಲ್ಲರಿಗೆ ಹಣವನ್ನೂ ಪಾವತಿಸಲಾಗಿದೆ. ಆ ಸಂದರ್ಭದಲ್ಲಿ ಶೇ 50ರಷ್ಟು ಸಿಬ್ಬಂದಿ ಕೊರತೆ ಇತ್ತು. ಅದೇ ಸಮಯದಲ್ಲಿ ಗಡಿಯಂಚಿನ ಪ್ರದೇಶಗಳಲ್ಲಿ ಹುಲಿಗಳು ಕಾಣಿಸಿಕೊಂಡಿದ್ದರಿಂದ ಅವುಗಳ ನಿಯಂತ್ರಣಕ್ಕೂ ಗಮನ ಕೊಡಬೇಕಾಯಿತು’ ಎಂದರು.

ಸಿಬ್ಬಂದಿ ಕೊರತೆಯೂ ಕಾರಣ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಳಹಂತದ ಸಿಬ್ಬಂದಿ ಕೊರತೆ ಇರುವುದನ್ನೂ ವರದಿ ಉಲ್ಲೇಖಿಸಿದೆ.

ಬಂಡೀಪುರಕ್ಕೆ ಆರ್‌ಎಫ್‌ಒ (13), ಡಿಆರ್‌ಎಫ್‌ (30) ಅರಣ್ಯ ರಕ್ಷಕರು (113) ಹಾಗೂ ವೀಕ್ಷಕರು (90) ಸೇರಿದಂತೆ 246 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 140 ಹುದ್ದೆಗಳನ್ನು ಮಾತ್ರ ಭರ್ತಿಮಾಡಲಾಗಿದೆ. ಕಾಳ್ಗಿಚ್ಚಿನ ಸಮಯದಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಕಾರ್ಯಾಚರಣೆಗೆ ಹಿನ್ನಡೆಯಾಗುತ್ತದೆ ಎಂದು ವರದಿ ಹೇಳಿದೆ.

ತಿಂಗಳ ಹಿಂದೆ ಮತ್ತೊಂದು ವರದಿ

ಹರಿಕುಮಾರ್‌ ಝಾ ಅವರ ವರದಿ ಮಾರ್ಚ್‌ನಲ್ಲೇ ಸರ್ಕಾರಕ್ಕೆಸಲ್ಲಿಕೆಯಾಗಿತ್ತು. ಆ ಬಳಿಕ, ಅರಣ್ಯ ಇಲಾಖೆ ಗುಪ್ತಚರ ವಿಭಾಗದಿಂದ ಮತ್ತೊಮ್ಮೆ ತನಿಖೆ ನಡೆಸಿದೆ. ಹಿರಿಯ ಐಎಫ್‌ಎಸ್‌ ಅಧಿಕಾರಿ ಪೂವಯ್ಯ ತಿಂಗಳ ಹಿಂದೆ ವರದಿ ಸಲ್ಲಿಸಿದ್ದಾರೆ.

ಝಾ ಸಲ್ಲಿಸಿರುವ ವರದಿಯಲ್ಲಿರುವ ಅಂಶಗಳನ್ನೇ ಹೊಸ ವರದಿಯು ಪುನರಾವರ್ತಿಸಿದೆ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT