ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗಿರಿರಂಗನಬೆಟ್ಟ ಅರಣ್ಯ ಒತ್ತುವರಿ: ಬಗೆಹರಿಯದ ಪ್ರಕರಣ

ಜಂಟಿ ಸಮೀಕ್ಷೆಗೆ 10 ತಿಂಗಳು; ಅಂತಿಮ ನಿರ್ಧಾರಕ್ಕೆ ಬಾರದ ಜಿಲ್ಲಾಡಳಿತ
Last Updated 20 ಜುಲೈ 2022, 18:35 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ಅರಣ್ಯ ಭೂಮಿ ಒತ್ತುವರಿಯನ್ನು ಅರಣ್ಯ ಹಾಗೂ ಕಂದಾಯ ಇಲಾಖೆಯು ಜಂಟಿ ಸರ್ವೆ ಮೂಲಕ ಗುರುತಿಸಿ 10 ತಿಂಗಳಾದರೂ ಪ್ರಕರಣ ಇತ್ಯರ್ಥವಾಗಿಲ್ಲ.

‘ಒತ್ತುವರಿದಾರರ ಪಟ್ಟಿಯಲ್ಲಿ ಕೆಲವು ಪ್ರಭಾವಿಗಳ ಹೆಸರಿದ್ದು, ಯಥಾಸ್ಥಿತಿ ಮುಂದುವರಿಸಬೇಕೆಂದು ಒತ್ತಡ ಹಾಕುತ್ತಿದ್ದಾರೆ’ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಆರೋಪವನ್ನು ನಿರಾಕರಿಸಿವೆ.

ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಬಿಳಿಗಿರಿರಂಗನಬೆಟ್ಟದಲ್ಲಿ ರಂಗನಾಥಸ್ವಾಮಿ ದೇವಾಲಯವಿದೆ. ಸೋಲಿಗರೂ ವಾಸಿಸುತ್ತಿದ್ದಾರೆ. ಅರಣ್ಯ ಭೂಮಿ ಹೆಚ್ಚಿದ್ದು, ಕಂದಾಯ ಭೂಮಿಯೂ ಸ್ವಲ್ಪ ಪ್ರಮಾಣದಲ್ಲಿದೆ.

‘ಕೆಲವರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂಬ ಆರೋಪವನ್ನು ಆಧರಿಸಿ, ಉಪ ಲೋಕಾಯುಕ್ತರಾಗಿದ್ದ ಸುಭಾಷ್‌ ಬಿ.ಅಡಿ ಅವರು ವಿಸ್ತೃತ ತನಿಖೆ ನಡೆಸಿ, 2018ರಲ್ಲಿ ವರದಿ ನೀಡಿದ್ದರು. ‘ನಿಗದಿಗಿಂತ ಹೆಚ್ಚಿನ ಭೂಮಿ ಒತ್ತುವರಿಯಾಗಿದೆ. ವಾಪಸ್ ಪಡೆಯಬೇಕು’ ಎಂದು ಹೇಳಿದ್ದರು.

2021ರ ಆಗಸ್ಟ್‌ನಲ್ಲಿ ಜಿಲ್ಲಾಡಳಿತವು ಅರಣ್ಯ ಹಾಗೂ ಕಂದಾಯ ಇಲಾಖೆಯ ಮೂಲಕ ಜಂಟಿ ಸರ್ವೆ ನಡೆಸಿತ್ತು. ಬಿಳಿಗಿರಿರಂಗನಬೆಟ್ಟದ ಸರ್ವೆ ನಂಬರ್‌ 1, 2, 3 ಮತ್ತು 4ರಲ್ಲಿಒಟ್ಟು 605.26 ಎಕರೆ ಪ್ರದೇಶದ ಸರ್ವೆ ನಡೆಸಲಾಗಿತ್ತು.

ಸರ್ವೆ ನಂ 4ರಲ್ಲಿ 22,735.06 ಎಕರೆ ಜಮೀನಿದ್ದು, 22,180.06 ಎಕರೆ ಬಿಆರ್‌ಟಿ ಅರಣ್ಯಕ್ಕೆ ಸೇರಿದೆ. 555 ಎಕರೆ ಜಮೀನು ಅರಣ್ಯೇತರ ಭೂಮಿ. ಆ ಪೈಕಿ 430 ಎಕರೆಯನ್ನು 1962ರಲ್ಲಿ ದೇವಸ್ಥಾನದ ಉಪಯೋಗ ಹಾಗೂ ಬೆಟ್ಟದ ಸ್ಥಳೀಯರಿಗೆ ಇನಾಂ ಅಡಿಯಲ್ಲಿ ಮಂಜೂರು ಮಾಡಲಾಗಿದೆ. 125 ಎಕರೆ ಜಮೀನು ಸೋಲಿಗರಿಗೆ ದರಖಾಸ್ತು ಅಡಿಯಲ್ಲಿ ಮಂಜೂರಾಗಿದೆ.

1, 2, 3 ಸರ್ವೆ ನಂಬರ್‌ಗಳಲ್ಲಿ ಸ್ವಲ್ಪ ಹಾಗೂ ಸರ್ವೆ ನಂಬರ್‌ 4ರಲ್ಲಿ ಅತಿ ಹೆಚ್ಚು ಅಂದರೆ, 147.28 ಎಕರೆ ಜಮೀನು ಒತ್ತುವರಿಯಾಗಿರುವುದನ್ನು ಸರ್ವೆ ಪತ್ತೆ ಹಚ್ಚಿತ್ತು. ಖಾಸಗಿ ವ್ಯಕ್ತಿಗಳು ಹಾಗೂ ಸೋಲಿಗರ ಕುಟುಂಬಗಳು ಜಮೀನನ್ನು ಅನುಭವಿಸುತ್ತಿದ್ದು, ಅವರಲ್ಲಿ ಮೂಲ ದಾಖಲೆಗಳಿಲ್ಲ. ಪಹಣಿ ಮಾತ್ರ ಇದೆ. ಅರಣ್ಯಭೂಮಿಯಾಗಿರುವುದರಿಂದ ಎಲ್ಲ ಪಹಣಿಗಳನ್ನು ರದ್ದುಪಡಿಸಬೇಕು ಎಂದು ಅರಣ್ಯ ಇಲಾಖೆ ಕಳೆದ ವರ್ಷದ ಅಕ್ಟೋಬರ್‌ನಲ್ಲೇ ಕಂದಾಯ ಇಲಾಖೆಯನ್ನು ಕೋರಿತ್ತು. ಆದರೂ, ಒತ್ತುವರಿ ಭೂಮಿ ಅರಣ್ಯ ಇಲಾಖೆಗೆ ದೊರಕಿಲ್ಲ.

‘ಸರ್ವೆ ನಂಬರ್‌ 4ರಲ್ಲಿರುವ 25 ಸೋಲಿಗ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಸಲಾಗಿದೆ’ ಎಂದು ಸೋಲಿಗರ ಸಂಘಟನೆಗಳು ಆರೋಪಿಸಿವೆ. ಸೋಲಿಗರು ಬೃಹತ್‌
ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಅರಣ್ಯ ಹಕ್ಕು ಕಾಯ್ದೆಯಲ್ಲಿ ಭೂಮಿ ನೀಡಲು ಪ್ರಯತ್ನ

‘ಕಂದಾಯ ಇಲಾಖೆ ದಾಖಲೆಯ ಪ್ರಕಾರ, ಒತ್ತುವರಿ ಭೂಮಿಯನ್ನು ಯಾರಿಗೂ ಮಂಜೂರು ಮಾಡಿಲ್ಲ. ಹಿಂದೆ ಹೇಗೋ ಆರ್‌ಟಿಸಿ ಮಾಡಿಕೊಂಡಿದ್ದಾರೆ. ಆರ್‌ಟಿಸಿ ಭೂಮಿ ಮಾಲೀಕತ್ವದ ದಾಖಲೆ ಅಲ್ಲ’ ಎಂದು ಹೇಳುತ್ತಾರೆ ಹಿರಿಯ ಅಧಿಕಾರಿಗಳು.

‘ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆ ಅಡಿ ಜಮೀನು, ಹಕ್ಕು ಪತ್ರ ನೀಡಲು ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಪ್ರಯತ್ನ ನಡೆಸುತ್ತಿದೆ. ಆ ಕಾರಣಕ್ಕೆ ವಿಳಂಬವಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ಸೋಲಿಗರಿಗೆ ಸಂಬಂಧಿಸಿದ ಜಮೀನನ್ನು ಮಾತ್ರ ವಿಶೇಷ ಪ್ರಕರಣವೆಂದು ಪರಿಗಣಿಸಿ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅವರಿಗೆ ಜಮೀನು ನೀಡುವುದಕ್ಕೆ ಕ್ರಮ ವಹಿಸಿ, ಉಳಿದ ಒತ್ತುವರಿ ಪ್ರಕರಣಗಳನ್ನು ಬೇಗ ಇತ್ಯರ್ಥ ಮಾಡಬೇಕು’ ಎಂದು ಪರಿಸರವಾದಿಗಳು ಆಗ್ರಹಿಸುತ್ತಿದ್ದಾರೆ.

***

ಜಂಟಿ ಸಮೀಕ್ಷೆ ವರದಿ ಸಂಬಂಧ ಸಭೆಗಳನ್ನು ನಡೆಸಲಾಗಿದೆ. ಅರಣ್ಯ, ಕಂದಾಯ ಇಲಾಖೆಗಳ ನಿಯಮಗಳಡಿ ಕ್ರಮ ಕೈಗೊಳ್ಳಲಾಗುತ್ತಿದೆ

–ಚಾರುಲತಾ ಸೋಮಲ್‌, ಜಿಲ್ಲಾಧಿಕಾರಿ

***

ಈ ವಿಚಾರ ಅಂತಿಮ ಹಂತದಲ್ಲಿದೆ. ಉನ್ನತ ಅಧಿಕಾರಿಗಳಿಗೆ ವಿವರಗಳನ್ನು ನೀಡಬೇಕಾಗಿದ್ದು, ಶೀಘ್ರ ಇತ್ಯರ್ಥವಾಗುವ ವಿಶ್ವಾಸವಿದೆ

–ಡಾ.ಜಿ.ಸಂತೋಷ್‌ಕುಮಾರ್‌, ಡಿಸಿಎಫ್‌, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ

***

ಜಿಲ್ಲಾಡಳಿತವು ಜಮೀನಿನ ಮೂಲ ದಾಖಲೆಗಳನ್ನು ಕೇಳಿದೆ. ನಾವು ಆರ್‌ಟಿಸಿ, ಪಟ್ಟಾ ದಾಖಲೆ, ತೆರಿಗೆ ಪಾವತಿಸಿರುವ ದಾಖಲೆಗಳನ್ನು ನೀಡಿದ್ದೇವೆ

–ಡಾ.ಸಿ.ಮಾದೇಗೌಡ, ಜಿಲ್ಲಾ ಸೋಲಿಗ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT