ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿ: ಪಕ್ಷಿ ಸಮೀಕ್ಷೆ ಮುಕ್ತಾಯ, 274 ಪಕ್ಷಿಗಳ ಗುರುತು

ಬಿಆರ್‌ಟಿಗೂ ಮೈಸೂರು ಅರಮನೆಗೆ ಅವಿನಾಭಾವ ಸಂಬಂಧ: ಯದುವೀರ್‌
Last Updated 29 ಜನವರಿ 2023, 14:34 IST
ಅಕ್ಷರ ಗಾತ್ರ

ಚಾಮರಾಜನಗರ: ‘ಬಿಳಿಗಿರಿರಂಗನಬೆಟ್ಟ, ಇಲ್ಲಿನ ಅರಣ್ಯಕ್ಕೂ ಮೈಸೂರು ಅರಮನೆಗೆ ಅವಿನಾಭಾವ ಸಂಬಂಧವಿದೆ’ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಭಾನುವಾರ ಅಭಿಪ್ರಾಯಪಟ್ಟರು.

‌ಅರಣ್ಯ ಇಲಾಖೆಯು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಪಕ್ಷಿ ಸಮೀಕ್ಷೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೀವ ವೈವಿಧ್ಯತೆಯಲ್ಲಿ ಅಮೆಜಾನ್‌ ಅರಣ್ಯ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವುದು ನಮ್ಮ ಪಶ್ಚಿಮ ಘಟ್ಟ. ಬಿಆರ್‌ಟಿ ಅರಣ್ಯವು ಪಶ್ಚಿಮ ಘಟ್ಟದ ವಿಸ್ತರಿತ ಪ್ರದೇಶ. ನಮ್ಮ ವಂಶಸ್ಥರು ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ, ಬೂದಿಪಡಗ ಸೇರಿದಂತೆ ಅರಣ್ಯದ ಇತರೆ ಕಡೆಗಳಿಗೆ ಬರುವ ಪದ್ಧತಿ ಇತ್ತು. ಆ ಪದ್ಧತಿ ಈಗಲೂ ಮುಂದುವರಿದಿದೆ’ ಎಂದರು.

‘ಎರಡು ವರ್ಷಗಳ ಹಿಂದೆ ಕೊಯಮತ್ತೂರಿನಿಂದ ಬರುವಾಗ ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಲಂಟಾನ ಕಳೆಗಿಡಗಳು ಕಂಡು ಬಂದಿದ್ದವು. ಈಗ ಅವೆಲ್ಲವನ್ನೂ ತೆರವುಗೊಳಿಸಲಾಗಿದೆ. ಇದು ನಿಜಕ್ಕೂ ಶ್ಲಾಘನೀಯ ಕೆಲಸ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಪಕ್ಷಿ ಸಮೀಕ್ಷೆ ನಡೆಸುವುದು ಒಳ್ಳೆಯ ಕೆಲಸ. ಮೂರು ದಿನಗಳ ಹಿಂದೆ ಈ ಕಾಡಿನಲ್ಲಿ ದಿ ಗ್ರೇಟ್‌ ಇಂಡಿಯನ್‌ ಹಾರ್ನ್‌ಬಿಲ್‌ ಕಂಡು ಬಂದಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದು ಸಂತಸದ ವಿಚಾರ’ ಎಂದರು.

ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಜಿ.ಮಲ್ಲೇಶಪ್ಪ ಮಾತನಾಡಿ, ‘1939ರಲ್ಲಿ ಹಕ್ಕಿಗಳ ತಜ್ಞ ಸಲೀಂ ಅಲಿ ಅವರು ಬಿಆರ್‌ಟಿ ಅರಣ್ಯದಲ್ಲಿ ಸಮೀಕ್ಷೆ ನಡೆಸಿ 139 ಪಕ್ಷಿಗಳನ್ನು ಗುರುತಿಸಿದ್ದರು. 2012ರಲ್ಲಿ ಹಕ್ಕಿ ಸಮೀಕ್ಷೆ ನಡೆದಿತ್ತು. 2021ರಲ್ಲಿ ಹಕ್ಕಿ ಹಬ್ಬವನ್ನೂ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಹಕ್ಕಿ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು’ ಎಂದರು.

‘ಈ ಬಾರಿ ನಡೆದ ಸಮೀಕ್ಷೆಯಲ್ಲಿ 50 ಮಂದಿ ಸ್ವಯಂ ಸೇವಕರು, ತೆಲಂಗಾಣದ ಅರಣ್ಯ ಕಾಲೇಜು ಹಾಗೂ ನಮ್ಮ ಪೊನ್ನಂಪೇಟೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 25 ತಂಡಗಳಲ್ಲಿ ವಿವಿಧ ಮಾರ್ಗಗಗಳಲ್ಲಿ ತೆರಳಿ ಪಕ್ಷಿಗಳನ್ನು ಗುರುತಿಸಿದ್ದಾರೆ. ಮೊದಲ ದಿನ ಕಚ್ಚಾ ರಸ್ತೆ, ಮುಖ್ಯ ರಸ್ತೆಗಳಲ್ಲಿ ಹಾಗೂ ನಂತರ ಜಲ ಮೂಲದ ಬಳಿ ತೆರಳಿ ಪಕ್ಷಿಗಳನ್ನು ಗುರುತಿಸುವ ಕೆಲಸ ಮಾಡಿದ್ದಾರೆ’ ಎಂದರು.

ಅರಣ್ಯ ಇಲಾಖೆಯ ಕಾರ್ಯ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್‌ಕುಮಾರ್‌ ಮಾತನಾಡಿದರು.

ಎಸಿಎಫ್‌ಗಳಾದ ಮಹದೇವಯ್ಯ, ಸುರೇಶ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಸಮೀಕ್ಷೆಯಲ್ಲಿ ಪಾಲ್ಗೊಂಡ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು.

274 ಪಕ್ಷಿಗಳ ವಿವರ ದಾಖಲು

ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕಿ ದೀಪ್ ಜೆ.ಕಾಂಟ್ರಾಕ್ಟರ್ ಮಾತನಾಡಿ, ‘2012ರಲ್ಲಿ ನಮ್ಮಲ್ಲಿ ವೈಜ್ಞಾನಿಕ ಪಕ್ಷಿ ಸಮೀಕ್ಷೆ ನಡೆದಿತ್ತು. 11 ವರ್ಷಗಳ ಬಳಿಕ ಇಕೊ ವಾಲ್ಯುಂಟಿಯರ್ಸ್‌ ಗ್ರೂಪ್‌ ಆಫ್‌ ಇಂಡಿಯಾದ ಸಹಕಾರದೊಂದಿಗೆ ಈ ಸಮೀಕ್ಷೆ ನಡೆಸಲಾಗಿದೆ. 2012 ರಲ್ಲಿ 272 ಪಕ್ಷಿಗಳು ಕಂಡುಬಂದಿದ್ದವು. ಈ ಬಾರಿ ಸ್ವಯಂ ಸೇವಕರು 274 ಪಕ್ಷಿಗಳನ್ನು ಗುರುತಿಸಿದ್ದಾರೆ’ ಎಂದರು. ‌

‘ದಿ ಗ್ರೇಟ್‌ ಇಂಡಿಯನ್‌ ಹಾರ್ನ್‌ಬಿಲ್‌ ಕಾಣಿಸಿಕೊಂಡಿದೆ. ಈ ಹಿಂದೆ ಇಲ್ಲಿ ಕಂಡು ಬಂದಿರುವ ಬಗ್ಗೆ ಛಾಯಾಚಿತ್ರ ಸಹಿತ ದಾಖಲೆಗಳಿಲ್ಲ. ಇದು ಸಾಮಾನ್ಯವಾಗಿ ರಾಜ್ಯದ ಪಶ್ಚಿಮ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಾರಿ ನಮಗೆ ಚಿತ್ರ ಸಮೇತ ಸಿಕ್ಕಿದೆ. ಇದಲ್ಲದೆ ಬಹಳ ಅಪರೂಪದ ಕಪ್ಪು ಹದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ. ಪಟ್ಟೆ ತಲೆ ಹೆಬ್ಬಾತು ಕೂಡ ಕಂಡು ಬಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT