ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರಷ್ಟಾಚಾರದಲ್ಲಿ ಮುಳುಗಿದ ಕಾಂಗ್ರೆಸ್‌; ಬಿಜೆಪಿ ಆರೋಪ

ಶ್ರೀಚಾಮರಾಜೇಶ್ವರ ದೇವಸ್ಥಾನದ ಉದ್ಯಾನ ಮುಂಭಾಗದಲ್ಲಿ ಧರಣಿ
Published 11 ಡಿಸೆಂಬರ್ 2023, 16:06 IST
Last Updated 11 ಡಿಸೆಂಬರ್ 2023, 16:06 IST
ಅಕ್ಷರ ಗಾತ್ರ

ಚಾಮರಾಜನಗರ: ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಧರಣಿ ನಡೆಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಉದ್ಯಾನದ ಮುಂಭಾಗದಲ್ಲಿ ಧರಣಿ ಕುಳಿತ ಪ್ರತಿಭಟನಕಾರರು, ಕಾಂಗ್ರೆಸ್ ಮುಖಂಡರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ‘ಜಾರ್ಖಂಡ್ ರಾಜ್ಯದ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಅವರು ಆದಾಯ ತೆರಿಗೆ ಇಲಾಖೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯ ಎಲ್ಲ ಅಧಿಕಾರಿಗಳೇ ನಿಂತು ಹಣ ಲೆಕ್ಕ ಹಾಕುವ ಪರಿಸ್ಥಿತಿ ಬಂದಿದೆ. 70 ಅಧಿಕಾರಿಗಳು 40 ನೋಟು ಎಣಿಕೆ ಯಂತ್ರಗಳ ಮೂಲಕ ನಗದು ಹಣ ಎಣಿಕೆ ಮಾಡುತ್ತಿದ್ದಾರೆ. ಸುಮಾರು ₹350 ಕೋಟಿ ಪತ್ತೆಯಾಗಿದೆ. ಇನ್ನೂ 70 ಬಾಕ್ಸ್‌ಗಳಲ್ಲಿ ಹಣ ಇದೆ ಎಂದು ಹೇಳಲಾಗುತ್ತಿದೆ’ ಎಂದರು.

‘ನೋಟು ರದ್ದತಿ, ಕಪ್ಪು ಹಣದ ಬಗ್ಗೆ 2022ರಲ್ಲಿ ಧೀರಜ್‌ ಸಾಹು ಅವರು ಟ್ವೀಟ್‌ ಮಾಡಿದ್ದರು. ದೇಶದಲ್ಲಿ ಕಪ್ಪು ಹಣ ನಿರ್ಮೂಲನೆಯಾಗಿಲ್ಲ ಎಂಬುದು ನೋವು ತರುತ್ತದೆ. ಜನ ಹೇಗೆ ಕಪ್ಪು ಹಣ ಸಂಗ್ರಹಿಸುತ್ತಾರೆ ಎಂಬುದೇ ಅರ್ಥ ಆಗುವುದಿಲ್ಲ ಎಂದು ಅವರು ಹೇಳಿದ್ದರು. ಈಗ ಅವರ ಬಳಿಯೇ ಕಪ್ಪು ಹಣ ಸಿಕ್ಕಿದೆ’ ಎಂದು ಹೇಳಿದರು.

‘ಇದು ಧೀರಜ್ ಸಾಹು ವಿಚಾರ ಮಾತ್ರವಲ್ಲ. ಕಾಂಗ್ರೆಸ್ ಪಕ್ಷದ ರಾಜಕೀಯ ಸಂಸ್ಕೃತಿಯಲ್ಲೇ, ಇಂದಿರಾ ಗಾಂಧಿಯಿಂದ ಹಿಡಿದು ಇಲ್ಲಿಯವರೆಗೆ ಕಾಂಗ್ರೆಸ್ ಆಡಳಿತ ಮಾಡಿದ ಪ್ರತಿಯೊಂದು ಸರ್ಕಾರದಲ್ಲೂ ಭ್ರಷ್ಟಾಚಾರ ಕಂಡುಬಂದಿದೆ’ ಎಂದು ಮಹೇಶ್‌ ಕಿಡಿ ಕಾರಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ‘ಕರ್ನಾಟಕದಲ್ಲಿ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸ್‌ನವರು 40 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂದು ಟೀಕೆ ಮಾಡಿದ್ದರು. ಆದರೆ, ಈಗಿನ ಕಾಂಗ್ರೆಸ್‌ ಸರ್ಕಾರ 80 ಪರ್ಸೆಂಟ್‌ ಕಮಿಷನ್‌ ಪಡೆಯುತ್ತಿದೆ. ಎಲ್ಲ ಕಾಮಗಾರಿಗಳಲ್ಲಿ ಕಮಿಷನ್‌ ಕೇಳುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ನ್ಯಾಯಮೂರ್ತಿಗಳಿಗೆ ವರದಿ ನೀಡಿದ್ದಾರೆ. ಸರ್ಕಾರ ಎಷ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬುದನ್ನು ಇದು ತೋರಿಸುತ್ತಿದೆ’ ಎಂದು ದೂರಿದರು. 

ಮಾಜಿ ಶಾಸಕ ಎಸ್.ಬಾಲರಾಜ್, ಜಿಲ್ಲಾ ಘಟಕದ ಪ್ರಧಾನ ಕಾರ್ಯ‌ದರ್ಶಿ ನಾಗಶ್ರೀ ಪ್ರತಾಪ್‌, ಮುಖಂಡರಾದ ಮಂಗಲ ಶಿವಕುಮಾರ್, ನೂರೊಂದುಶೆಟ್ಟಿ, ಅರಕಲವಾಡಿ ನಾಗೇಂದ್ರ, ಬಸವಣ್ಣ ಬಾಲಸುಬ್ರಹ್ಮಣ್ಯಂ, ನಟರಾಜು, ಸುಂದರ್‌, ಸೂರ್ಯಕುಮಾರ್‌, ಶಿವರಾಜು ಭಾಗವಹಿಸಿದ್ದರು.

Highlights - ಕಾಂಗ್ರೆಸ್ ಮುಖಂಡರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ 80 ಪರ್ಸೆಂಟ್‌ ಕಮಿಷನ್‌ ಪಡೆಯುತ್ತಿದೆ ಕಾಂಗ್ರೆಸ್‌ ಸರ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT