ಸೋಮವಾರ, ಮಾರ್ಚ್ 8, 2021
26 °C
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಭಾಂಗಣದಲ್ಲಿ ಕಾಂಗ್ರೆಸ್‌ ಪತ್ರಿಕಾಗೋಷ್ಠಿ–ಬಿಜೆಪಿ ಆಕ್ರೋಶ

ಮಾಜಿಗಳು ಇತಿಮಿತಿ ಅರಿಯಬೇಕು: ಗುರುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಕೆಪಿಸಿಸಿ ವಕ್ತಾರ ಆರ್‌.ಧ್ರುವನಾರಾಯಣ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಪತ್ರಿಕಾಗೋಷ್ಠಿ ನಡೆಸಿರುವುದರ ವಿರುದ್ಧದ ಟೀಕೆಯನ್ನು ಮುಂದುವರೆಸಿರುವ ಬಿಜೆಪಿ ಜಿಲ್ಲಾ ಘಟಕ, ‘ಜಿಲ್ಲಾ ಪಂಚಾಯಿತಿಗೆ ಸೇರಿದ ಸಭಾಂಗಣವನ್ನು ಕಾಂಗ್ರೆಸ್‌ ಮುಖಂಡರು ದುರ್ಬಳಕೆ ಮಾಡಿಕೊಂಡಿದ್ದಾರೆ. ಮಾಡಿರುವ ತಪ್ಪನ್ನು ಒಪ್ಪಿಕೊಳ್ಳಲಿ’ ಎಂದು ಹೇಳಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸಿ.ಗುರುಸ್ವಾಮಿ ಅವರು, ‘ಜಿಲ್ಲಾ ಪಂಚಾಯಿತಿಗೆ ಸೇರಿದ ಸ್ಥಳದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಅನುಮತಿ ನೀಡಿದವರು ಯಾರು? ಎಂತಹ ಲೋಪ ಇದು? ಮಾಜಿಗಳಾದವರು ತಮ್ಮ ಇತಿ ಮಿತಿಗಳನ್ನು ಅರ್ಥೈಸಿಕೊಳ್ಳಬೇಕು. ನಾನು ಕೂಡ ಮಾಜಿ ಶಾಸಕನೇ, ಅಂದ ಮಾತ್ರಕ್ಕೆ ನನ್ನ ಮಿತಿಗಳನ್ನು ನಾನು ಅರ್ಥ ಮಾಡಿಕೊಳ್ಳಬೇಕು. ಆರ್‌.ಧ್ರುವನಾರಾಯಣ ಅವರು ಎಲ್ಲಿ ದೆಹಲಿಯ ಸಂಸತ್ತಿನಲ್ಲಿ ಶ್ರೀನಿವಾಸ ಪ್ರಸಾದ್‌ ಅವರ ಆಸನದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೋ ಎಂಬ ಯೋಚನೆ ಆಗುತ್ತಿದೆ’ ಎಂದರು. 

‘ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸುವುದಕ್ಕೆ ಅವಕಾಶ ಇಲ್ಲ ಎಂಬುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೂ ಗೊತ್ತಿಲ್ಲವೇ? ನಾವು ಈಗಾಗಲೇ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದೇವೆ. ಅವರು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಉದ್ಯಮಿಗಳ ₹68 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ ಎಂದು ಧ್ರುವನಾರಾಯಣ ಹೇಳಿದ್ದಾರೆ. ರೈಟ್‌ ಆಫ್‌ ಬೇರೆ ಸಾಲ ಮನ್ನಾ ಬೇರೆ. ಸಾಲ ಮನ್ನಾ ಎಂದರೆ ಮನ್ನಾ ಮಾಡಿದ ಸಾಲದ ಹಣವನ್ನು ಸರ್ಕಾರ ಬ್ಯಾಂಕ್‌ಗಳಿಗೆ ನೀಡುತ್ತದೆ. ರೈಟ್‌ ಆಫ್‌ನಲ್ಲಿ ಸಾಲದ ಲೆಕ್ಕವನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ. ಇದರ ವಸೂಲಿಗೆ ಅವಕಾಶ ಇರುತ್ತದೆ. ಆದರೆ, ಕಾಂಗ್ರೆಸ್‌ನವರು ವಿತಂಡವಾದ ಮಾಡುತ್ತಿರುವುದು ದುರಂತ’ ಎಂದರು.

ಮತ್ತೊಬ್ಬ ಮುಖಂಡ ಜಿ.ಎನ್.ನಂಜುಂಡಸ್ವಾಮಿ ಅವರು ಮಾತನಾಡಿ, ‘ಉದ್ಯಮಿಗಳ ಸಾಲ ಮನ್ನಾ ಮಾಡಲಾಗಿದೆ ಎಂಬ ಧ್ರುವನಾರಾಯಣ ಅವರ ಹೇಳಿಕೆಯನ್ನು ನಾನು ಖಂಡಿಸಿದ್ದಕ್ಕೆ, ಮಾಜಿ ಶಾಸಕ ಬಾಲರಾಜ್‌ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ. ಹಿಂದೆ ಶಾಸಕರಾಗಿದ್ದವರು, ಸಂಸದರಾಗಿದ್ದವರಿಗೆ ರೈಟ್‌ ಆಫ್‌ ಹಾಗೂ ಸಾಲ ಮನ್ನಾಕ್ಕೆ ವ್ಯತ್ಯಾಸ ಗೊತ್ತಿಲ್ಲದೆ ಇಂತಹ ಹೇಳಿಕೆ ನೀಡುವುದು ನಾಚಿಕೆಗೇಡು. ಕಾಂಗ್ರೆಸ್‌ ಪಕ್ಷ 132 ವರ್ಷಗಳಿಂದ ಸುಳ್ಳು ಹೇಳುತ್ತಿದೆ. ಮುಖಂಡರೂ ಅದೇ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು. 

‘ಧ್ರುವನಾರಾಯಣ ಅವರು ಚಾಮರಾಜನಗರ ಕಾಂಗ್ರೆಸ್‌ನ ಸರ್ವೋಚ್ಛ ನಾಯಕ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಆದರೆ, ಜಿಲ್ಲೆಯ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಅವರು ಬಡವರಿಗೆ ಸ್ಪಂದಿಸುತ್ತಿರುವುದಕ್ಕೆ ನಮ್ಮ ಬೆಂಬಲ ಇದೆ. ಆದರೆ, ಸುಳ್ಳು ಸುದ್ದಿಗಳನ್ನು ಹರಡಬಾರದು, ದೇಶದ ಹಿತಕ್ಕೆ ವಿರುದ್ಧವಾಗಿ ಅವರು ನಡೆದುಕೊಳ್ಳಬಾರದು’ ಎಂದರು. 

ಬಿಜೆಪಿ ಜಿಲ್ಲಾ ಘಟಕದ ಪ‍್ರಧಾನ ಕಾರ್ಯದರ್ಶಿನಾಗಶ್ರೀ ಹಾಗೂ ನಾಯಕಿ ಪರಿಮಳಾ ನಾಗಪ್ಪ ಇದ್ದರು. 

ಲಾಕ್‌ಡೌನ್: ಬಿಜೆಪಿಯಿಂದ ನೆರವು

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್‌ ಮಾತನಾಡಿ, ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದರು. ಅದರಂತೆ ಜಿಲ್ಲೆಯಾದ್ಯಂತ ಕೆಲಸ ಮಾಡಿದ್ದೇವೆ. ಸಂಘ ಸಂಸ್ಥೆಗಳು, ದಾನಿಗಳು ನಮಗೆ ಸಹಕಾರ ನೀಡಿದ್ದಾರೆ ಎಂದರು. 

‘ಪಿಎಂಕೇರ್ಸ್‌ ನಿಧಿಗೆ ಕಾರ್ಯಕರ್ತರು ಕನಿಷ್ಠ ₹100 ದೇಣಿಗೆ ನೀಡಬೇಕು ಎಂದು ವರಿಷ್ಠರು ಕರೆ ನೀಡಿದ್ದರು. ಅದರಂತೆ ಎಲ್ಲರೂ ಉದಾರವಾಗಿ ದೇಣಿಗೆ ನೀಡಿದ್ದಾರೆ’ ಎಂದರು.

ಪಕ್ಷದ ವತಿಯಿಂದ ನೀಡಲಾದ ನೆರವಿನ ಬಗ್ಗೆ ಮಾಹಿತಿ ನೀಡಿದ ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್, ‘ಮಾರ್ಚ್‌ 31ನೇ ತಾರೀಖಿನಿಂದ ಇದುವರೆಗೆ 40,800 ಸಿದ್ಧಪಡಿಸಿದ ಆಹಾರ ಪೊಟ್ಟಣಗಳನ್ನು ಪೂರೈಸಿದ್ದೇವೆ. ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 83,922 ಮುಖಗವಸುಗಳನ್ನು ವಿತರಿಸಿದ್ದೇವೆ. ಪಿಎಂಕೇರ್ಸ್‌ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 4,459 ಮಂದಿ ಕಾರ್ಯಕರ್ತರು ದೇಣಿಗೆ ನೀಡಿದ್ದು, ₹30 ಲಕ್ಷದಷ್ಟು ಹಣ ಸಂಗ್ರಹಿಸಿದ್ದೇವೆ’ ಎಂದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು