ಶುಕ್ರವಾರ, ಸೆಪ್ಟೆಂಬರ್ 30, 2022
20 °C
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಯೋಜನಾ ನಿರ್ದೇಶಕಿ, ಡಿಸಿಎಫ್‌ ದೀಪ್‌ ಜೆ. ಕಾಂಟ್ರ್ಯಾಕ್ಟರ್‌ ಮಾತು

ಆದಿವಾಸಿಗಳ ಸಹಕಾರ ಪಡೆದು ಅರಣ್ಯ ಸಂರಕ್ಷಣೆ: ದೀಪ್‌ ಜೆ. ಕಾಂಟ್ರ್ಯಾಕ್ಟರ್‌

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಸೋಲಿಗರು ಹಾಗೂ ಇತರ ಗಿರಿಜನರನ್ನು ಕಾಡಿನಿಂದ ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಅವರು ಮೂಲತಃ ಅರಣ್ಯ ನಿವಾಸಿಗಳು. ಅವರಿಂದಾಗಿಯೇ ಅರಣ್ಯ ಉಳಿದಿದೆ. ಅವರ ಸಹಕಾರದಿಂದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶವನ್ನು ಸಂರಕ್ಷಿಸುವ ಕೆಲಸ ಮಾಡುವೆ...’

ನಾಲ್ಕು ದಿನಗಳ ಹಿಂದೆಯಷ್ಟೇ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಯೋಜನಾ ನಿರ್ದೇಶಕಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ಅವರ ಸ್ಪಷ್ಟ ಮಾತುಗಳಿವು. 

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಚುಕ್ಕಾಣಿ ಹಿಡಿದಿರುವ ಭಾರತೀಯ ಅರಣ್ಯ ಸೇವೆಯ ಮೊದಲ ಮಹಿಳಾ ಅಧಿಕಾರಿ ಅವರು. ಹುಲಿ ಸಂರಕ್ಷಿತ ಪ್ರದೇಶವೊಂದರ ಮುಖ್ಯಸ್ಥೆಯಾಗಿರುವ ರಾಜ್ಯದ ಎರಡನೇ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಯೂ ದೀಪ್‌ ಅವರಿಗಿದೆ.

ಹೊಸ ಹುದ್ದೆ ನಿರ್ವಹಣೆಯ ಸವಾಲು ಹಾಗೂ ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಅವರು ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು. 

‘ಬಿಆರ್‌ಟಿ ಅರಣ್ಯ ನನಗೆ ಹೊಸದೇನಲ್ಲ. ಮೈಸೂರಿನಲ್ಲಿ ಕಾರ್ಯ ಯೋಜನೆ ವಿಭಾಗದ ಡಿಸಿಎಫ್‌ ಆಗಿದ್ದಾಗ ಹಲವು ಬಾರಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಸಂರಕ್ಷಿತ ಪ್ರದೇಶದ ವ್ಯಾಪ್ತಿ ಚಿಕ್ಕದಾಗಿದ್ದರೂ, ಇಲ್ಲಿರುವಂತಹ ಸುಂದರ ಭೌಗೋಳಿಕ ಚಿತ್ರಣ ಬೇರೆಲ್ಲೂ ಇಲ್ಲ. ವಾಸ್ತವವಾಗಿ ಹೇಳಬೇಕೆಂದರೆ ಬಂಡೀಪುರ ಹಾಗೂ ನಾಗರಹೊಳೆಗಿಂತಲೂ ಸುಂದರವಾದ ವೈವಿಧ್ಯವಾದ ಅರಣ್ಯ ಇಲ್ಲಿದೆ. ಆದಿವಾಸಿಗಳ ಸಂಖ್ಯೆಯೂ ಹೆಚ್ಚಿದೆ’ ಎಂದರು. 

‘ಅರಣ್ಯ ವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಆರ್ಥಿಕವಾಗಿ ಸಬಲರಾಗಿ ಮಾಡಿ ಮುಖ್ಯವಾಹಿನಿಗೆ ತರುವ ಪ್ರಯತ್ನ ಈಗಾಗಲೇ ಇಲ್ಲಿ ನಡೆಯುತ್ತಿದೆ. ಬೆಲ್ಲವತ್ತದಲ್ಲಿ ನಿರುದ್ಯೋಗಿ ಸೋಲಿಗರಿಗೆ ಲಂಟಾನ ಗಿಡಗಳಿಂದ ಗೃಹೋಪಯೋಗಿ ಹಾಗೂ ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುವ ತರಬೇತಿ ನೀಡುತ್ತಿರುವುದು ಈ ಪ್ರಯತ್ನದ ಭಾಗ. ಇದಲ್ಲದೇ ಅರಣ್ಯ ಉಪ ಉತ್ಪನ್ನಗಳನ್ನು ಸಂಗ್ರಹಿಸಿ, ಸಂಸ್ಕರಿಸಿ ಮಾರಾಟ ಮಾಡಲೂ ಪ್ರೋತ್ಸಾಹ ನೀಡಲಾಗುತ್ತಿದೆ. ಇಂತಹ ಕೆಲಸಗಳು ಇನ್ನಷ್ಟು ನಡೆಯಬೇಕಾಗಿದೆ. ಆ ನಿಟ್ಟಿನಲ್ಲಿ ನಾನು ಕೆಲಸ ಮುಂದುವರಿಸುವೆ’ ಎಂದು ದೀಪ್‌ ಹೇಳಿದರು. 

ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ: ‘ಬಿಆರ್‌ಟಿ ಕಾಡು ಅತ್ಯಂತ ಸುಂದರ. ಬಂಡೀಪುರ, ನಾಗರಹೊಳೆ ಅರಣ್ಯವನ್ನು ನಾನು ಸುತ್ತಿದ್ದೇನೆ. ಆದರೆ, ಅವೆರಡರಷ್ಟು ಜನಪ್ರಿಯತೆಯನ್ನು ಬಿಆರ್‌ಟಿ ಗಳಿಸಿಲ್ಲ. ಪರಿಸರ ಪ್ರವಾಸೋದ್ಯಮಕ್ಕೆ ಇಲ್ಲಿ ಅವಕಾಶ ಇದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

ಲಂಟಾನ ತೆರವಿಗೆ ಒತ್ತು: ಅರಣ್ಯದಲ್ಲಿರುವ ಲಂಟಾನ ಸಮಸ್ಯೆ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ದೀಪ್‌, ‘ಇದರ ಅರಿವು ನನಗೆ ಇದೆ. ಈಗಾಗಲೇ ಇಲಾಖೆಯು ಎನ್‌ಜಿಒ ಒಂದರ ಜೊತೆ ಒಪ್ಪಂದ ಮಾಡಿಕೊಂಡಿದೆ. ಬಿಳಿಗಿರಿರಂಗನಬೆಟ್ಟದ ಬಳಿ 20 ಹೆಕ್ಟೇರ್‌ಗಳಷ್ಟು ಜಾಗದಲ್ಲಿ ಈ ಕಳೆ ಗಿಡ ತೆರವುಗೊಳಿಸಲಾಗಿದೆ. ನರೇಗಾ ಯೋಜನೆ ಅಡಿಯಲ್ಲಿ ಲಂಟಾನ ತೆರವುಗೊಳಿಸಲು ಒತ್ತು ನೀಡುತ್ತೇನೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಒ ಜೊತೆ ಮಾತನಾಡುವೆ. ಇದರಿಂದಾಗಿ ಸ್ಥಳೀಯರಿಗೆ ಉದ್ಯೋಗವೂ ಸಿಗಲಿದೆ, ಲಂಟಾನ ತೆರವು ಉದ್ದೇಶವೂ ಈಡೇರಲಿದೆ’ ಎಂದರು. 

ಒತ್ತುವರಿ ಪ್ರಕರಣ: ಶೀಘ್ರ ಇತ್ಯರ್ಥ

‘ಬಿಳಿಗಿರಿರಂಗನಬೆಟ್ಟದಲ್ಲಿ ಅರಣ್ಯ ಜಮೀನು ಒತ್ತುವರಿ ಪ್ರಕರಣ ಸಂಬಂಧ ನಡೆದಿರುವ ಜಂಟಿ ಸಮೀಕ್ಷೆ ಬಗ್ಗೆ ತಿಳಿದಿದೆ. ಈ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥ ಪಡಿಸಲಾಗುವುದು’ ಎಂದು ದೀಪ್‌ ಹೇಳಿದರು. 

‘ಸೋಲಿಗರ ಅನುಭವದಲ್ಲಿರುವ ಜಮೀನುಗಳು ಕೂಡ ಒತ್ತುವರಿ ಗುರುತಿಸಿರುವ ಪ್ರದೇಶದಲ್ಲಿದೆ. ಅವರಿಗೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಭೂಮಿ ನೀಡಲು ಕ್ರಮವಹಿಸಲಾಗುವುದು. ಉಳಿದಂತೆ ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಯಾರೇ ಇದ್ದರೂ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು’ ಅವರು ಹೇಳಿದರು. 

ಅಂಟಾರ್ಕ್ಟಿಕಾಗೆ ಭೇಟಿ ನೀಡಿದ ಸಾಹಸಿ 

ದೀಪ್‌ ಅವರು ಈ ವರ್ಷದ ಮಾರ್ಚ್‌ನಲ್ಲಿ ಹಿಮ ಖಂಡ ಅಂಟಾರ್ಕ್ಟಿಕಾಗೆ ಭೇಟಿ ನೀಡಿ ಬಂದಿದ್ದಾರೆ. ಅಲ್ಲಿಗೆ ಭೇಟಿ ನೀಡಿರುವ ಭಾರತೀಯ ಅರಣ್ಯ ಸೇವೆಯ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಅವರದ್ದು. ಈವರೆಗೆ ಇಬ್ಬರು ಪುರುಷ ಅಧಿಕಾರಿಗಳು ಅಲ್ಲಿಗೆ ಹೋಗಿ ಬಂದಿದ್ದಾರೆ. 

2041 ಫೌಂಡೇಷನ್‌ ಎಂಬ ಸಂಸ್ಥೆಯ ಆಶ್ರಯದಲ್ಲಿ ಹವಾಮಾನ ವೈಪರೀತ್ಯದ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿ ದೀಪ್‌ ಅಂಟಾರ್ಕ್ಟಿಕಾಗೆ ತೆರಳಿದ್ದರು. ಇದೇ ತಂಡದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರೂ ಇದ್ದರು.

ಹವಾಮಾನ ಬದಲಾವಣೆಯಿಂದಾಗಿ ಹಿಮ ಖಂಡದ ಮೇಲಾಗುತ್ತಿರುವ ಪರಿಣಾಮವನ್ನು ದೀಪ್‌ ಅವರು ಕಣ್ಣಾರೆ ನೋಡಿಕೊಂಡು ಬಂದಿದ್ದಾರೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ್ದವರಿಗೆ ಭಾರತೀಯ ಅರಣ್ಯ, ವನ್ಯಜೀವಿಗಳ ಬಗ್ಗೆ ತಿಳಿವಳಿಕೆಯನ್ನೂ ನೀಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು