ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲೆಯಲ್ಲಿಲ್ಲ ಕ್ಯಾನ್ಸರ್‌ ಚಿಕಿತ್ಸೆ, ಜನರ ಅಲೆದಾಟ

10 ತಿಂಗಳಲ್ಲಿ 154 ಕ್ಯಾನ್ಸರ್‌ ಪ್ರಕರಣ ದೃಢ, ಮಹಿಳೆಯರಲ್ಲೇ ಹೆಚ್ಚು
Last Updated 3 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕ್ಯಾನ್ಸರ್‌ ಪ್ರಕರಣ ಹೆಚ್ಚು ವರದಿಯಾಗುತ್ತಿದ್ದು, ಮಾರಣಾಂತಿಕವಾಗಿರುವ ಈ ಕಾಯಿಲೆ ಪೀಡಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ವ್ಯವಸ್ಥೆ ಜಿಲ್ಲೆಯಲ್ಲಿಲ್ಲ.

ಹಾಗಾಗಿ, ಕ್ಯಾನ್ಸರ್‌ಗೆ ತುತ್ತಾಗಿರುವ ಬಡ ಜನರು ಕೂಡ ಚಿಕಿತ್ಸೆಗಾಗಿ ಮೈಸೂರು, ಬೆಂಗಳೂರಿನಂತಹ ನಗರಗಳನ್ನು ಅವಲಂಬಿಸಬೇಕಿದೆ.

ಇಡೀ ಜಿಲ್ಲೆಯಲ್ಲಿರುವ ದೊಡ್ಡ ಆಸ್ಪತ್ರೆ ಎಂದರೆ ಚಾಮರಾಜನಗರ ವೈದ್ಯ ಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ) ಮಾತ್ರ. ದೊಡ್ಡ ಖಾಸಗಿ ಆಸ್ಪತ್ರೆಗಳೂ ಇಲ್ಲ. ಎಲ್ಲ ಕಾಯಿಲೆಗಳ ಚಿಕಿತ್ಸೆಗೆ ಜಿಲ್ಲೆಯ ಜನರು ಸಿಮ್ಸ್‌ ಆಸ್ಪತ್ರೆ ಅವಲಂಬಿಸಿದ್ದಾರೆ. ಇಲ್ಲಿ ಕ್ಯಾನ್ಸರ್‌ ಚಿಕಿತ್ಸಾ ವಿಭಾಗ ಇಲ್ಲದಿರು ವುದು ಜನ ಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಶಂಕಿತ ಪ್ರಕರಣಗಳಲ್ಲಿ ಬಯಾಪ್ಸಿ ಮಾಡುವ ಸೌಲಭ್ಯ ಮಾತ್ರ ಇದೆ.

ಸಿಮ್ಸ್‌ ಆಸ್ಪತ್ರೆಯಲ್ಲಿ ಕಾನ್ಸರ್‌ ಚಿಕಿತ್ಸಾ ವಿಭಾಗ ಆರಂಭಿಸಬೇಕು ಎಂಬುದು ಜಿಲ್ಲೆಯ ಜನರ ಬೇಡಿಕೆ. ಕ್ಯಾನ್ಸರ್‌ ತಜ್ಞರ ಅಗತ್ಯವೂ ಇದ್ದು, ನೇಮಕಾತಿಗೆ ಕ್ರಮ ವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಸಿಮ್ಸ್‌ ಆಡಳಿತ ಎರಡು ವರ್ಷದ ಹಿಂದೆಯೇ ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಗೆ ಪ್ರಸ್ತಾವ ಕಳುಹಿಸಿದೆ. ಆದರೆ, ಇದುವರೆಗೆ ಯಾವುದೇ ಪ್ರಗತಿ ಯಾಗಿಲ್ಲ.

154 ಪ್ರಕರಣ: ಜಿಲ್ಲೆಯಲ್ಲಿ 2022ರ ಏಪ್ರಿಲ್‌ನಿಂದ ಈ ವರ್ಷದ ಜನವರಿವರೆಗೆ 154 ಕ್ಯಾನ್ಸರ್‌ ಮಂದಿಗೆ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ.

ಇದು ಜಿಲ್ಲಾ ಕಣ್ಗಾವಲು ಘಟಕದ ಬಳಿ ಇರುವ ಅಂಕಿ ಅಂಶ. ಆರೋಗ್ಯ ಇಲಾಖೆಗೆ ಬಂದಿರುವ ಮಾಹಿತಿ ಆಧಾರದಲ್ಲಿರುವ ಸಂಖ್ಯೆ ಇದು. ಖಾಸಗಿಯಾಗಿ ಪರೀಕ್ಷೆ ಮಾಡಿಸಿ ಕೊಂಡವರಲ್ಲಿ ಕ್ಯಾನ್ಸರ್‌ ದೃಢಪಟ್ಟರೆ ಅವರು ಇಲಾಖೆ ಗಮನಕ್ಕೆ ತರುವು ದಿಲ್ಲ. ಹಾಗಾಗಿ, ಇದು ಜಿಲ್ಲೆಯ ನಿಖರ ಮಾಹಿತಿಯಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು.

ಆರೋಗ್ಯ ಇಲಾಖೆಯು ಬಾಯಿ, ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್‌ಗಳ ಬಗ್ಗೆ ಮಾತ್ರ ಹೆಚ್ಚು ಗಮನ ಹರಿಸುತ್ತದೆ. ವರದಿಯಾಗಿರುವ ಪ್ರಕರಣಗಳಲ್ಲಿ ರೋಗಕ್ಕೆ ತುತ್ತಾದವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ. 154 ಕ್ಯಾನ್ಸರ್‌ ಪೀಡಿತರಲ್ಲಿ ಮಹಿಳೆಯರು 106 ಮಂದಿ ಇದ್ದರೆ, ಪುರುಷರು 48 ಮಂದಿ ಇದ್ದಾರೆ.

48 ಮಂದಿ ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೆ, 40 ಮಹಿಳೆಯರು ಸ್ತನ ಕ್ಯಾನ್ಸರ್‌ ಹಾಗೂ 66 ಮಂದಿ ಗರ್ಭಕಂಠ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ.

‘ಆರೋಗ್ಯ ಇಲಾಖೆಯ ಎನ್‌ಪಿಸಿ ಡಿಎಸ್‌ ಯೋಜನೆಯಡಿ 30 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯವಂತ ವ್ಯಕ್ತಿಗಳು ಪ್ರತಿ ಐದು ವರ್ಷಕ್ಕೊಮ್ಮೆ ಕ್ಯಾನ್ಸರ್‌ ತಪಾಸಣೆ ಮಾಡಿಸಿಕೊಳ್ಳಬೇಕು. ಅದ ರಂತೆ ನಾವು ತಪಾಸಣೆ ಮಾಡಲು ಕ್ರಮ ಕೈಗೊಂಡಿದ್ದೇವೆ. ರೋಗ ಲಕ್ಷಣ ಇರು ವವರು ಯಾವಾಗ ಬೇಕಾದರೂ ಪರೀಕ್ಷೆ ಮಾಡಿಸಿಕೊಳ್ಳಬಹುದು’ ಎಂದು ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

1.85 ಲಕ್ಷ ಜನರ ತಪಾಸಣೆ
ಜಿಲ್ಲೆಯಲ್ಲಿ 2022ರ ಏಪ್ರಿಲ್‌ನಿಂದ ಈ ವರ್ಷದ ಜನವರಿವರೆಗೆ 86,587 ಪುರುಷರು, 99,057 ಮಹಿಳೆಯರು ಸೇರಿದಂತೆ 1,85,644 ಮಂದಿಯನ್ನು ಕ್ಯಾನ್ಸರ್‌ ತಪಾಸಣೆಗೆ ಒಳಪಡಿಸಲಾಗಿದೆ.

ರೋಗ ಲಕ್ಷಣ ಹೊಂದಿದ್ದ 17,137 ಮಂದಿಯನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ.

‘ರೋಗ ಲಕ್ಷಣ ಹೊಂದಿರುವವರಿಗೆ ಪರೀಕ್ಷೆ ನಡೆಸುತ್ತೇವೆ. ನಮ್ಮ ಸಿಮ್ಸ್‌ನಲ್ಲಿ ಬಯಾಪ್ಸಿ ಪರೀಕ್ಷೆ ಸೌಲಭ್ಯ ಇದೆ. ಉಳಿದ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸುತ್ತೇವೆ’ ಎಂದು ಡಾ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

*
ಪ್ರಸ್ತಾವ ಕಳುಹಿಸಿದ್ದೇವೆ. ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ ತೆರೆಯುವ ಪ್ರಸ್ತಾವವೂ ಇತ್ತು. ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ
-ಡಾ.ಜಿ.ಎಂ.ಸಂಜೀವ್‌, ಸಿಮ್ಸ್‌ ಡೀನ್‌

––

ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ರೋಗ ಲಕ್ಷಣ ಹೊಂದಿರುವವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಪ್ರೇರೇಪಿಸುತ್ತೇವೆ
-ಡಾ.ನಾಗರಾಜು, ಜಿಲ್ಲಾ ಕಣ್ಗಾವಲು ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT