ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಚಾಮುಲ್‌ನಿಂದ ವಿಮೆ ನೋಂದಣಿ ಅಭಿಯಾನ

Published 22 ಆಗಸ್ಟ್ 2023, 7:09 IST
Last Updated 22 ಆಗಸ್ಟ್ 2023, 7:09 IST
ಅಕ್ಷರ ಗಾತ್ರ

ಚಾಮರಾಜನಗರ: ‘ರೈತರು ತಮ್ಮ ರಾಸುಗಳಿಗೆ ವಿಮೆಯನ್ನು ಮಾಡಿಸಿಕೊಳ್ಳುವ ಮೂಲಕ ಆರ್ಥಿಕ ನಷ್ಟವನ್ನು ತಪ್ಪಿಸಿಕೊಳ್ಳಬೇಕು. ಅಲ್ಲದೇ ಜಿಲ್ಲಾ ಹಾಲು ಒಕ್ಕೂಟ ಹಾಗೂ ಡೇರಿ ನೀಡುವ ಯೋಜನೆಗಳ ಪ್ರಯೋಜವನ್ನು ಪಡೆದುಕೊಳ್ಳಬೇಕು’ ಎಂದು ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ತಿಳಿಸಿದರು.

ನಗರದ ಸಮೀಪದ ಕರಿನಂಜನಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ರಾಸುಗಳಿಗೆ ಚಾಮುಲ್ ಹಾಗೂ ಭಾರತೀಯ ವಿಮಾ ಕಂಪನಿ ಸಹಯೋಗದಲ್ಲಿ ವಿಮೆ ಪಾಲಿಸಿ ನೋಂದಣಿ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿ ವರ್ಷ ಜಿಲ್ಲಾ ಹಾಲು ಒಕ್ಕೂಟದಿಂದ ರಾಸುಗಳ ವಿಮೆ ನೊಂದಾಣಿಗಾಗಿ ಶೇ 50ರಷ್ಟು ಹಣ ಭರಿಸಿ, ರೈತರಿಂದ ಶೇ 50ರಷ್ಟು ಅನುದಾನವನ್ನು ಪಡೆದುಕೊಂಡು ತಪ್ಪದೇ ವಿಮೆ ಪಾಲಿಸಿ ಮಾಡಿಸಿಕೊಡಲಾಗುತ್ತದೆ. ಈ ಅಭಿಯಾನವು ಜಿಲ್ಲೆಯಾದ್ಯಂತ ಎಲ್ಲ ಡೇರಿಗಳಲ್ಲಿ ಆರಂಭವಾಗುತ್ತಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಕರಿನಂಜನಪುರ ಡೇರಿಯಿಂದ ಆರಂಭಿಸಲಾಗಿದೆ’ ಎಂದರು.

‘ಕಳೆದ ವರ್ಷ ರೈತರು ವಿಮೆ ಮಾಡಿಸಿಕೊಂಡಿದ್ದ ರಾಸುಗಳು ಆಕಸ್ಮಿಕವಾಗಿ ಸಾವೀಡಾಗಿದ್ದರೆ ಕನಿಷ್ಠ ₹30 ಸಾವಿರ ಪರಿಹಾರವನ್ನು ವಿಮೆ ಕಂಪನಿ ನೀಡುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನ ಲಾಭವಿದೆ. ಅಲ್ಲದೇ ನೆಮ್ಮದಿಯಿಂದ ರಾಸುಗಳ ವಿಮೆ ಮಾಡಿಸಿ, ಜೀವನ ನಡೆಸಲು ಸಾಧ್ಯವಿದೆ’ ಎಂದರು.

ಮತ್ತೊಬ್ಬನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ‘ಜಿಲ್ಲೆಯಲ್ಲಿರುವ ₹2.25 ಲಕ್ಷ ರಾಸುಗಳಿಗೆ ವಿಮೆ ಕಲ್ಪಿಸಲು ಅಭಿಯಾನ ಆರಂಭಿಸಲಾಗಿದೆ. ಹೊಸದಾಗಿ ಭಾರತೀಯ ವಿಮಾ ಕಂಪನಿಯೊಂದಿಗೆ ಒಕ್ಕೂಟ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ರೈತರು ತಮ್ಮ ಪಾಲಿನ ಹಣವನ್ನು ಪಾವತಿ ಮಾಡಿ, ವಿಮೆ ನೊಂದಣಿ ಮಾಡಿಕೊಳ್ಳಬೇಕು. ಅಲ್ಲದೇ ಹಸುವನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡುವ ಜವಾಬ್ಧಾರಿಯೂ ನಿಮ್ಮದಾಗಿದೆ’ ಎಂದರು.

ಸಂಘದ ಅಧ್ಯಕ್ಷ ಸಿದ್ದವೀರಪ್ಪ, ಕರಿನಂಜನಪುರ ಪಿಎಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಪ್ಪ, ವಿಸ್ತರಣಾಧಿಕಾರಿ ಪಿ.ಎಂ. ಭಾಗ್ಯರಾಜ್, ಸಂಘದ ಉಪಾಧ್ಯಕ್ಷ ಮಹದೇವೇಗೌಡ, ನಿರ್ದೇಶಕರಾದ ಗುರುಸ್ವಾಮಿ, ಪಿ. ಬಸವಣ್ಣ, ಕೆ.ಎಸ್.ಶಶಿಕಿರಣ್, ಕೆ.ಎಂ.ನಾಗಮಲ್ಲಪ್ಪ, ಕೆ.ಪಿ.ನಾಗೇಂದ್ರ, ಮಹದೇವಪ್ಪ, ಕೆ.ಸಿ.ಸೋಮಣ್ಣ, ಕೆ.ಪುಟ್ಟಸ್ವಾಮಿ, ರತ್ಮಮ್ಮ, ಚಂದ್ರಮ್ಮ, ಡೇರಿ ಮುಖ್ಯ ಕಾರ್ಯನಿರ್ವಾಹಕ ವೃಷಭೇಂದ್ರಪ್ಪ, ನೌಕರರಾದ ನಂಜುಂಡ, ಮಹೇಂದ್ರ ಹಾಗೂ ಸದಸ್ಯರು ಇದ್ದರು.

‘ಶೇ 50ರಷ್ಟು ಪಾವತಿಸಿದರೆ ಸಾಕು’

ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಅಮರ್ ಮಾತನಾಡಿ ‘ರೈತರು ಈ ವಿಮೆ ಸೌಲಭ್ಯವನ್ನು ಪಡೆದುಕೊಂಡರೆ ಹೆಚ್ಚಿನ ಲಾಭವಿದೆ. ಪ್ರತಿ ರಾಸುವಿಗೆ ವಿಮೆ ಮಾಡಿಸುವುದರಿಂದ ಅಕಸ್ಮಿಕ ಅವಘಡಗಳು ಸಂಭವಿಸಿದಾಗ ಅನುಕೂಲವಾಗುತ್ತದೆ. ₹30 ಸಾವಿರ ಮೌಲ್ಯದ ಹಸುವಿಗೆ ವಿಮಾ ಕಂತು ₹1388 ಆಗುತ್ತದೆ. ರೈತರು ತಮ್ಮ ಬಾಬ್ತು ₹694 ಪಾವತಿಸಿದರೆ ವಿಮೆ ಸೌಲಭ್ಯ ದೊರೆಯಲಿದೆ. ಆದೇ ರೀತಿ ₹40 ಸಾವಿರಕ್ಕೆ ₹1784 ವಿಮಾ ಕಂತು. ರೈತರು ₹832 ಪಾವತಿಸಬೇಕು. ₹50 ಸಾವಿರಕ್ಕೆ ₹2230 ಕಂತಾಗಿದ್ದು ರೈತರು ಇದರ ಅರ್ಧ ಪಾವತಿ ಮಾಡಬೇಕು. ₹60 ಸಾವಿರ ಮೊತ್ತದ ವಿಮೆಗೆ ₹2676 ಕಂತು ಪಾವತಿಸಬೇಕು. ರೈತರಿಂದ ₹1388 ಪಡೆದುಕೊಳ್ಳಲಾಗುತ್ತಿದೆ’ ಎಂದರು. 

‘ಈ ಬಾರಿ ಹೊಸ ಕಂಪನಿಯಾಗಿರುವುದರಿಂದ ವಿಮೆ ನೋಂದಣಿಗೆ ಹೆಚ್ಚಿನ ಷರತ್ತುಗಳನ್ನು ವಿಧಿಸಲಾಗಿದೆ. ಇದನ್ನು ಸಮರ್ಪಕವಾಗಿ ಪೊರೈಸಿದರೆ ಮಾತ್ರ ವಿಮೆ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿದೆ. ರೈತರಿಗೆ ಒಕ್ಕೂಟ ಹಾಗೂ ರೈತ ಕಲ್ಯಾಣ ಟ್ರಸ್ಟ್ ಶೇ 50ರಷ್ಟು ವಿಮೆ ಕಂತು ಪಾವತಿ ಮಾಡಿ ಒಂದು ವರ್ಷದ ಅವಧಿಗೆ ವಿಮೆ ಮಾಡಿಸಿಕೊಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT