ಗುರುವಾರ , ಜೂಲೈ 9, 2020
28 °C
ಚಾಮರಾಜನಗರ: ಕೋವಿಡ್‌–19 ಮುಕ್ತ ಜಿಲ್ಲೆ, ಜಿಲ್ಲಾಧಿಕಾರಿಗೆ ಕೇಂದ್ರ ಆರೋಗ್ಯ ಸಚಿವ ಕರೆ

ಚಾಮರಾಜನಗರ ಜಿಲ್ಲಾಧಿಕಾರಿಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅಭಿನಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಗಡಿ ಜಿಲ್ಲೆ ಇದುವರೆಗೂ ಕೋವಿಡ್‌–19 ಮುಕ್ತವಾಗಿರುವುದಕ್ಕೆ ಹಾಗೂ ಜಿಲ್ಲಾಡಳಿತ ಕೈಗೊಂಡಿರುವ ನಿಯಂತ್ರಣ ಕ್ರಮಗಳನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಅವರು ಶ್ಲಾಘಿಸಿದ್ದಾರೆ.

ಗುರುವಾರ ಸಂಜೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಅವರು, ‘ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಅಧಿಕಾರಿಗಳ ತಂಡ ಹಾಗೂ ಜಿಲ್ಲೆಯ ಜನತೆಗೆ ಅಭಿನಂದನೆ ತಿಳಿಸಿ’ ಎಂದು ಹೇಳಿದ್ದಾರೆ. ದೆಹಲಿಗೆ ಬಂದಾಗ ತಮ್ಮನ್ನು ಖುದ್ದಾಗಿ ಭೇಟಿ ಮಾಡುವಂತೆಯೂ ಜಿಲ್ಲಾಧಿಕಾರಿಗೆ ಹೇಳಿದ್ದಾರೆ. 

ಅಚ್ಚರಿ, ಹೆಮ್ಮೆ: ಈ ಬಗ್ಗೆ ‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಡಾ.ಎಂ.ಆರ್.ರವಿ ಅವರು, ‘ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಭಾಗವಹಿಸಿದ್ದ  ಕಾರ್ಯಕ್ರಮದಲ್ಲಿದ್ದಾಗ ನವದೆಹಲಿಯಿಂದ ಕರೆ ಬಂತು. ಆರೋಗ್ಯ ಸಚಿವರ ಕಚೇರಿಯಿಂದ ಸಿಬ್ಬಂದಿ ಮಾತನಾಡಿದರು. ಸಚಿವರು ಮಾತನಾಡಬೇಕಂತೆ ಎಂದರು. ನನಗೊಂದು ಕ್ಷಣ ಅಚ್ಚರಿ. ಕರೆಯನ್ನು ನಿರೀಕ್ಷೆ ಮಾಡಿರಲಿಲ್ಲ. ‘ದೇಶದ ಎಲ್ಲ ಜಿಲ್ಲೆಗಳಲ್ಲಿ ಕೋವಿಡ್‌–19 ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಮೇಲೆ ನಿಗಾ ಇಟ್ಟಿದ್ದೇನೆ. ನೀವು ಅತ್ಯುತ್ತಮ ಕೆಲಸ ಮಾಡಿದ್ದೀರಿ’ ಎಂದು ಸಚಿವರು ಮೆಚ್ಚುಗೆ ಸೂಚಿಸಿದರು’ ಎಂದರು. 

‘ನನಗೆ ಆಶ್ಚರ್ಯದ ಜೊತೆಗೆ ಹೆಮ್ಮೆಯೂ ಆಯಿತು. ಕೇಂದ್ರ ಸರ್ಕಾರದ ಸಚಿವರೊಬ್ಬರು, ಅದರಲ್ಲೂ ಆರೋಗ್ಯ ಸಚಿವರೇ ಕರೆ ಮಾಡಿರುವುದು ಸಂತಸದ ವಿಚಾರ. ಈ ಎಲ್ಲ ಅಭಿನಂದನೆ, ಮೆಚ್ಚುಗೆ ಜಿಲ್ಲೆಯ ಜನರಿಗೆ ಅರ್ಪಣೆ. ಇದರಲ್ಲಿ ಎಲ್ಲರ ಪಾತ್ರವೂ ಇದೆ. ಜಿಲ್ಲೆಯನ್ನು ಶಾಶ್ವತವಾಗಿ ಹಸಿರು ವಲಯದಲ್ಲಿ ಮುಂದುವರಿಸಲು ಎಲ್ಲರ ಸಹಕಾರ ಅಗತ್ಯ’ ಎಂದು ಅವರು ಹೇಳಿದರು. 

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಕೂಡ ಕೇಂದ್ರ ಸಚಿವರು ಕರೆ ಮಾಡಿರುವ ವಿಚಾರ ಪ್ರಸ್ತಾಪಿಸಿದರು.

‘ನಮ್ಮ ಜಿಲ್ಲೆ ಕೋವಿಡ್‌–19 ಮುಕ್ತ ಜಿಲ್ಲೆಯಾಗಿರುವ ಕಾರಣ ಕೇಂದ್ರ ಆರೋಗ್ಯ ಸಚಿವರು ದೂರವಾಣಿ ಮೂಲಕ ನಮ್ಮ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲೆಯ ಸಾರ್ವಜನಿಕರಿಗೆ ಶುಭ ಹಾರೈಸಿದ್ದಾರೆ ಮತ್ತು ನಮ್ಮ ಜಿಲ್ಲೆ ಇಡೀ ಭಾರತದ ಗಮನ ಸೆಳೆದಿದೆ. ಇದು ನಮಗೆ ಹೆಮ್ಮೆಯ ಸಂಗತಿ’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು