ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಬಿಲ್‌: ಸೆಸ್ಕ್‌ಗೆ ಲಾಕ್‌ಡೌನ್‌ ಹೊಡೆತ

ಬಿಲ್‌ ಪಾವತಿಸದವರ ವಿದ್ಯುತ್‌ ಸಂಪರ್ಕ ಕಡಿತಕ್ಕೆ ಮುಂದಾದ ಅಧಿಕಾರಿಗಳು
Last Updated 8 ಜುಲೈ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ (ಸೆಸ್ಕ್‌) ಚಾಮರಾಜನಗರ ಉಪವಿಭಾಗಕ್ಕೆ ಭಾರಿ ಹೊಡೆತ ಬಿದ್ದಿದೆ. ಮೂರು ತಿಂಗಳ ಅವಧಿಯಲ್ಲಿ (ಏಪ್ರಿಲ್‌, ಮೇ ಮತ್ತು ಜೂನ್‌) ಶೇ 53ರಷ್ಟು (ಗೃಹ ಬಳಕೆ) ಮಾತ್ರ ವಿದ್ಯುತ್‌ ಬಿಲ್‌ ವಸೂಲಾಗಿದೆ.

ಮೂರು ತಿಂಗಳ ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ತಕ್ಷಣವೇ ಹಣ ಪಾವತಿಸುವಂತೆ ಸೆಸ್ಕ್‌ ಮನವಿ ಮಾಡಿದೆ. ಇಲ್ಲದಿದ್ದರೆ ವಿದ್ಯುತ್‌ ಸಂಪರ್ಕ ಕಡಿತ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಸೆಸ್ಕ್‌ನ ಚಾಮರಾಜನಗರ ಉಪ ವಿಭಾಗಕ್ಕೆ ಚಾಮರಾಜನಗರ, ಗುಂಡ್ಲುಪೇಟೆ ತಾಲ್ಲೂಕು ಬರುತ್ತವೆ. ಎರಡೂ ತಾಲ್ಲೂಕುಗಳಲ್ಲಿ ಗೃಹ ಬಳಕೆಯ ವಿದ್ಯುತ್‌ ಸಂಪರ್ಕ 1.15 ಲಕ್ಷಗಳಿವೆ. ವಾಣಿಜ್ಯ ಉದ್ದೇಶದ ಸಂಪರ್ಕಗಳು 2,900ರಷ್ಟಿವೆ. ಮಧ್ಯಮ ಕೈಗಾರಿಕೆಗಳ ಸಂಪರ್ಕ 1,800 ಇವೆ.

ಮಧ್ಯಮ ಕೈಗಾರಿಕೆಗಳನ್ನು ಬಿಟ್ಟು, ಗೃಹಬಳಕೆ ಹಾಗೂ ವಾಣಿಜ್ಯ ಉದ್ದೇಶದಿಂದ ಸಂಪರ್ಕ ಪಡೆದಿರುವ ಗ್ರಾಹಕರು ಪೂರ್ಣ ಪ್ರಮಾಣದಲ್ಲಿ ಬಿಲ್‌ ಪಾವತಿಸಿಲ್ಲ. ಅದರಲ್ಲೂ, ಗೃಹ ಬಳಕೆಯ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಲ್‌ ಕಟ್ಟಿಲ್ಲ.

ಕೋವಿಡ್‌ ನಿಯಂತ್ರಣಕ್ಕಾಗಿ ಏ.23ರಿಂದ ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿರ್ಬಂಧ ಹೇರಲಾಗಿತ್ತು. ಅದು ಜುಲೈ 5ರವರೆಗೂ ಮುಂದುವರೆದಿತ್ತು. ಗೃಹ ಬಳಕೆದಾರರಿಂದ ಏಪ್ರಿಲ್‌ನಲ್ಲಿ ಶೇ 68ರಷ್ಟು, ಮೇ ನಲ್ಲಿ ಶೇ 24ರಷ್ಟು ಹಾಗೂ ಜೂನ್‌ನಲ್ಲಿ ಶೇ 68 ಮೊತ್ತದ ಬಿಲ್‌ ಪಾವತಿಯಾಗಿದೆ. ವಾಣಿಜ್ಯ ಸಂಪರ್ಕ ಹೊಂದಿರುವ ಗ್ರಾಹಕರಿಂದ ಏಪ್ರಿಲ್‌ನಲ್ಲಿ ಶೇ 77ರಷ್ಟು, ಮೇ ತಿಂಗಳಿನಲ್ಲಿ ಶೇ 50ರಷ್ಟು ಹಾಗೂ ಜೂನ್‌ನಲ್ಲಿ ಶೇ 90ರಷ್ಟು ಬಿಲ್‌ ಸಂಗ್ರಹವಾಗಿದೆ.

‘ನಮ್ಮಲ್ಲಿ ಪ್ರತಿ ತಿಂಗಳು ಶೇ 100ರಷ್ಟು ಬಿಲ್‌ ಸಂಗ್ರಹ ಆಗುತ್ತಿತ್ತು. ಗೃಹ ಬಳಕೆಯ ಗ್ರಾಹಕರಿಂದ ಪ್ರತಿ ತಿಂಗಳು ಸರಾಸರಿ ₹ 2.80 ಕೋಟಿ ಬಿಲ್‌ ಸಂಗ್ರಹವಾಗುತ್ತದೆ. ವಾಣಿಜ್ಯ ಉದ್ದೇಶದ ಸಂಪರ್ಕ ಹೊಂದಿರುವ ಗ್ರಾಹಕರಿಂದ ತಿಂಗಳಿಗೆ ಸರಾಸರಿ ₹ 1.4 ಕೋಟಿ ಹಾಗೂ ಮಧ್ಯಮ ಕೈಗಾರಿಕೆಗಳಿಂದ ₹ 45 ಲಕ್ಷ ಪಾವತಿಯಾಗುತ್ತದೆ. ಲಾಕ್‌ಡೌನ್‌ ಕಾರಣಕ್ಕೆ ಮೂರು ತಿಂಗಳಲ್ಲಿ ಎಲ್ಲ ಗ್ರಾಹಕರು ಬಿಲ್‌ ಪಾವತಿಸಿಲ್ಲ’ ಎಂದು ಸೆಸ್ಕ್‌ ಲೆಕ್ಕಾಧಿಕಾರಿ ಭಾಸ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಏಪ್ರಿಲ್‌ನಲ್ಲಿ ನಮಗೆ ₹ 2.76 ಕೋಟಿ ಬಿಲ್‌ ಬರಬೇಕಿತ್ತು. ಶೇ 68ರಷ್ಟು (₹ 1.87 ಕೋಟಿ) ಮಾತ್ರ ಬಂದಿದೆ. ಮೇ ತಿಂಗಳಲ್ಲಿ ₹ 2.61 ಕೋಟಿ ಬರಬೇಕಿತ್ತು. ಶೇ 24ರಷ್ಟು (₹62.64 ಲಕ್ಷ) ಮಾತ್ರ ಪಾವತಿಯಾಗಿದೆ. ಜೂನ್‌ನಲ್ಲಿ ಕೂಡ ಏಪ್ರಿಲ್‌ನಷ್ಟೇ ಬಿಲ್‌ ಸಂಗ್ರಹವಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಈ ತಿಂಗಳಲ್ಲಿ ಬಿಲ್‌ ಸಂಗ್ರಹ ಮಾಡಲೇಬೇಕಾದ ಪರಿಸ್ಥಿತಿ ಇದೆ. ಈ ತಿಂಗಳ ಬಿಲ್‌ ಜೊತೆಗೆ ಹಿಂದಿನ ಬಾಕಿಯನ್ನು ಕೂಡ ಪಾವತಿಸಲು ಗ್ರಾಹಕರು ಮನಸ್ಸು ಮಾಡಬೇಕು’ ಎಂದು ಭಾಸ್ಕರ್‌ ಹೇಳಿದರು.

ಕೊಳ್ಳೇಗಾಲದಲ್ಲೂ ಇದೇ ಸ್ಥಿತಿ

ಸೆಸ್ಕ್‌ನ ಕೊಳ್ಳೇಗಾಲ ಉಪವಿಭಾಗದಲ್ಲೂ ಇದೇ ಪರಿಸ್ಥಿತಿಯಿದೆ. ಕೊಳ್ಳೇಗಾಲ, ಹನೂರು, ಯಳಂದೂರು ತಾಲ್ಲೂಕುಗಳು ಈ ಉಪ ವಿಭಾಗದಲ್ಲಿ ಬರುತ್ತವೆ. ಚಾಮರಾಜನಗರ ಉಪವಿಭಾಗಕ್ಕಿಂತ ಹೆಚ್ಚು ವಿದ್ಯುತ್‌ ಸಂಪರ್ಪಗಳಿವೆ. ಬಿಲ್‌ ವಸೂಲಾತಿಯೂ ಇಲ್ಲಿಗಿಂತ ಹೆಚ್ಚಾಗಿದೆ.

ಉಪ ವಿಭಾಗ ವ್ಯಾಪ್ತಿಯಲ್ಲಿ ಗೃಹ ಬಳಕೆಯ 1.23 ಲಕ್ಷ ಸಂಪರ್ಕಗಳು, ವಾಣಿಜ್ಯ ಉದ್ದೇಶದ 10,462 ಹಾಗೂ 2,479 ಕೈಗಾರಿಕಾ ಸಂಪರ್ಕಗಳಿವೆ.

ಮೂರು ಬಗೆಯ ಸಂಪರ್ಕಗಳಿಂದ ಪ್ರತಿ ತಿಂಗಳು ಸರಾಸರಿ ₹ 4.50 ಕೋಟಿ ಬಿಲ್‌ ಸಂಗ್ರಹವಾಗಬೇಕು. ಲಾಕ್‌ಡೌನ್‌ ಅವಧಿಯ ಮೂರು ತಿಂಗಳಲ್ಲಿ (ಏಪ್ರಿಲ್‌, ಮೇ ಮತ್ತು ಜೂನ್‌) ಕ್ರಮವಾಗಿ ₹ 3.37 ಕೋಟಿ, ₹ 2.13 ಕೋಟಿ, ₹ 3.96 ಕೋಟಿ ಬಿಲ್‌ ವಸೂಲಾತಿ ಆಗಿದೆ. ಸರಾಸರಿ ಶೇಕಡವಾರು ಲೆಕ್ಕಚಾರದಲ್ಲಿ ಶೇ 69.9ರಷ್ಟು ಬಿಲ್‌ ಸಂಗ್ರಹವಾಗಿದೆ.

‘ವಿದ್ಯುತ್‌ ಸಂಪರ್ಕ ಕಡಿತ ಅನಿವಾರ್ಯ’

ಬಿಲ್‌ ಪಾವತಿ ಮಾಡದ ಗ್ರಾಹಕರ ವಿದ್ಯುತ್‌ ಸಂಪರ್ಕವನ್ನು ಕಡಿತ ಮಾಡುವ ಕೆಲಸನ್ನು ಸೆಸ್ಕ್‌ ಆರಂಭಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸೆಸ್ಕ್‌ ಚಾಮರಾಜನಗರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಪೂರ್ಣ ಚಂದ್ರ ತೇಜಸ್ವಿ ಅವರು, ‘ಲಾಕ್‌ಡೌನ್‌ನಲ್ಲಿ ಎಲ್ಲರೂ ತೊಂದರೆ ಅನುಭವಿಸಿದ್ದಾರೆ. ಈ ಕಾರಣಕ್ಕಾಗಿಯೇ ಆ ಅವಧಿಯಲ್ಲಿ ಬಿಲ್‌ ಪಾವತಿ ಮಾಡದಿದ್ದರೂ, ಸಂಪರ್ಕ ಕಡಿತ ಮಾಡಿಲ್ಲ. ಈಗ ಲಾಕ್‌ಡೌನ್‌ ನಿಯಮ ಸಡಿಲಿಕೆಯಾಗಿದ್ದು ಗ್ರಾಹಕರು ಬಿಲ್‌ ಪಾವತಿ ಮಾಡಬೇಕು’ ಎಂದರು.

ಗ್ರಾಹಕರು ಪಾವತಿಸುವ ಬಿಲ್‌ ಆಧರಿಸಿಯೇ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದೊಂದು ಸಾಮಾಜಿಕ ವ್ಯವಸ್ಥೆ. ಒಂದು ಕಡೆಯಲ್ಲಿ ಸಮಸ್ಯೆಯಾದರೂ ಇಡೀ ವ್ಯವಸ್ಥೆ ಕುಸಿಯುತ್ತದೆ. ಗ್ರಾಹಕರಿಗೆ ನಿರಂತರವಾಗಿ ಸೇವೆ ನೀಡಲು ಅವರು ಬಿಲ್‌ ಪಾವತಿಸುವುದು ಅತ್ಯಗತ್ಯ. ಇಲ್ಲದಿದ್ದರೆ ನಾವು ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದು ಅನಿವಾರ್ಯವಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT