ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | SSLC ಪರೀಕ್ಷೆಗೆ ಸಿದ್ಧತೆ: ಶಿಕ್ಷಕರ ಕೊರತೆ ಆತಂಕ

ವರ್ಗಾವಣೆ ಪೂರ್ಣ, 42 ಶಿಕ್ಷಕರು ಹೊರ ಜಿಲ್ಲೆಗೆ, ಇನ್ನೂ ಬೇಕಿದೆ 66 ಮಂದಿ ಬೋಧಕರು
Published 17 ಆಗಸ್ಟ್ 2023, 6:48 IST
Last Updated 17 ಆಗಸ್ಟ್ 2023, 6:48 IST
ಅಕ್ಷರ ಗಾತ್ರ

ಚಾಮರಾಜನಗರ: ಈ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ಗುರಿಯನ್ನು ಹೊಂದಿರುವ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆ ಉಂಟಾಗಿದ್ದು, ಪರೀಕ್ಷಾ ಸಿದ್ಧತೆಗೆ ಹಿನ್ನಡೆಯಾಗಿದೆ. 

ಶಾಲಾ ಮತ್ತು ಶಿಕ್ಷಣ ಇಲಾಖೆಯು ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಒಪ್ಪಿಗೆ ನೀಡದೇ ಇದ್ದರೆ, ಈ ಬಾರಿ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸುವುದು ತೀವ್ರ ಕಷ್ಟವಾಗಲಿದೆ. ಇದು ಫಲಿತಾಂಶದ ಮೇಲೆ ಪರಿಣಾಮವನ್ನೂ ಬೀರಲಿದೆ ಎಂಬ ಆತಂಕವನ್ನು ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 

ಇತ್ತೀಚೆಗಷ್ಟೇ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಮುಗಿದಿದ್ದು, ಜಿಲ್ಲೆಯ ವಿವಿಧ ಪ್ರೌಢಶಾಲೆಗಳಲ್ಲಿದ್ದ 42 ಮಂದಿ ವಿಷಯವಾರು ಶಿಕ್ಷಕರು ಹೊರ ಜಿಲ್ಲೆಗೆ ವರ್ಗವಾಗಿದ್ದಾರೆ. ಹೊರ ಜಿಲ್ಲೆಗಳಿಂದ 13 ಮಂದಿ ಮಾತ್ರ ಜಿಲ್ಲೆಗೆ ಬಂದಿದ್ದಾರೆ. ಇದರಿಂದಾಗಿ ವರ್ಗಾವಣೆ ಪ್ರಕ್ರಿಯೆ ನಂತರ ಶಿಕ್ಷಕರ ಕೊರತೆ ಇನ್ನಷ್ಟು ಹೆಚ್ಚಾಗಿದೆ.

66 ಶಿಕ್ಷಕರು ಬೇಕು: ಜಿಲ್ಲೆಯಲ್ಲಿರುವ 86 ಸರ್ಕಾರಿ ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಬಿಟ್ಟು, ವಿಷಯವಾರು ಶಿಕ್ಷಕರ 611 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 449 ಮಂದಿ ಮಾತ್ರ ಕಾಯಂ ಶಿಕ್ಷಕರಿದ್ದಾರೆ. 162 ವಿಷಯವಾರು ಶಿಕ್ಷಕರ ಕೊರತೆ ಇದೆ. 96 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಇನ್ನೂ 66 ಶಿಕ್ಷಕರ ಅಗತ್ಯವಿದೆ.  

ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ಇಲಾಖೆಯ ಅಧಿಕಾರಿಗಳು 114 ಮಂದಿ ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡಲು ಪ್ರಸ್ತಾವ ಕಳುಹಿಸಿದ್ದರು. ಇಲಾಖೆ 96 ಮಂದಿಯ ನೇಮಕಾತಿಗೆ ಅನುಮತಿ ನೀಡಿತ್ತು. ಅಷ್ಟು ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಬೋಧನೆಯಲ್ಲಿ ತೊಡಗಿದ್ದಾರೆ. 

ವರ್ಗಾವಣೆ ನಂತರ ಶಿಕ್ಷಕರ ಸಂಖ್ಯೆ ಇನ್ನಷ್ಟು ಕಡಿಮೆಯಾಗಿರುವುದರಿಂದ ಇರುವ ಶಿಕ್ಷಕರನ್ನೇ ಬಳಸಿಕೊಂಡು ಬೋಧನೆಗೆ ತೊಂದರೆಯಾಗದಂತೆ ಮಾಡಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. 

‘ಶಾಲೆಗಳಲ್ಲಿ ಕಡಿಮೆ ಮಕ್ಕಳಿದ್ದು, ಹೆಚ್ಚು ಶಿಕ್ಷಕರಿದ್ದರೆ, ಆ ಶಾಲೆಯ ಶಿಕ್ಷಕರನ್ನು ಅಗತ್ಯವಿರುವ ಶಾಲೆಗಳಿಗೆ ಹೆಚ್ಚುವರಿಯಾಗಿ ನಿಯೋಜಿಸಬೇಕು ಎಂದು ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಲಾಗಿದೆ. ಶೀಘ್ರದಲ್ಲಿ ಈ ಕೆಲಸ ಆಗಲಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ರಾಮಚಂದ್ರ ರಾಜೇ ಅರಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮಚಂದ್ರ ರಾಜೇ ಅರಸ್‌
ರಾಮಚಂದ್ರ ರಾಜೇ ಅರಸ್‌
ನಮಗೆ ಇನ್ನೂ ವಿಷಯವಾರು 66 ಶಿಕ್ಷಕರ ಅವಶ್ಯಕತೆ ಇದ್ದು ಅತಿಥಿ ಶಿಕ್ಷಕರ ನೇಮಕ ಸಂಬಂಧ ಪ್ರಸ್ತಾವ ಕಳುಹಿಸಲಾಗಿದೆ
ರಾಮಚಂದ್ರ ರಾಜೇ ಅರಸ್‌ ಡಿಡಿಪಿಐ
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ
ಶಿಕ್ಷಕರ ಕೊರತೆಯ ನಡುವೆಯೇ ಮುಂದಿನ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇಲಾಖೆ ಸಿದ್ಧತೆ ಆರಂಭಿಸಿದೆ.  ಶಿಕ್ಷಕರಿಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸುವುದು ಹೇಗೆ ಎಂದು ತಿಳಿಸಿಕೊಡಲಾಗುತ್ತಿದೆ. ‘ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ಸರ್ಕಾರ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಿದೆ. ಈಗಿನ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಬದಲಾವಣೆ ಇರಲಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ ಜಿಲ್ಲೆಯ ಫಲಿತಾಂಶ ಉತ್ತಮವಾಗಿತ್ತು. ಈ ಬಾರಿ ಇನ್ನಷ್ಟು ಉತ್ತಮ ಸಾಧನೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಸಿದ್ಧತೆ ಆರಂಭಿಸಲಾಗಿದೆ’ ಎಂದು ಡಿಡಿಪಿಐ ರಾಮಚಂದ್ರ ರಾಜೇ ಅರಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT