ಮಂಗಳವಾರ, ಮೇ 17, 2022
29 °C
‌ಬೆಲೆ ಹೆಚ್ಚಳದಿಂದ ಜನಮಾನ್ಯರಿಗೆ ಹೆಚ್ಚಿನ ಹೊರೆ, ರೈತರಿಗೆ ಹೆಚ್ಚಿನ ಕೊಡುಗೆಗಳಿಲ್ಲ–ಜನರ ಮಿಶ್ರ ಪತ್ರಿಕ್ರಿಯೆ

ಕೇಂದ್ರ ಬಜೆಟ್‌: ಸಿಹಿಗಿಂತ ಕಹಿಯೇ ಹೆಚ್ಚು–ಗಡಿ ಜಿಲ್ಲೆಯ ಜನರ ಅಭಿಮತ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸೋಮವಾರ ಮಂಡಿಸಿರುವ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಜೆಟ್‌ನಲ್ಲಿ ಸಿಹಿಗಿಂತ ಕಹಿಯೇ ಹೆಚ್ಚಾಗಿದೆ ಎಂದು ಜನಸಾಮಾನ್ಯರು ಅಭಿಪ್ರಾಯಪಟ್ಟಿದ್ದಾರೆ. 

ಆಡಳಿತಾರೂಢ ಬಿಜೆಪಿಯವರು ಅತ್ಯುತ್ತಮ ಬಜೆಟ್‌ ಎಂದು ಶ್ಲಾಘಿಸಿದ್ದರೆ, ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ಮುಖಂಡರು ನಿರಾಶಾದಾಯಕ ಎಂದು ಟೀಕಿಸಿದ್ದಾರೆ. ರೈತರಿಗೆ ಅನುಕೂಲಕರವಾದ ಯಾವ ಅಂಶಗಳು ಇಲ್ಲ ಎಂದು ರೈತ‌ ಮುಖಂಡರು ಹೇಳಿದ್ದಾರೆ.

ಜನ ಸಾಮಾನ್ಯರು ಬಜೆಟ್‌ನ ಕೆಲವು ಅಂಶಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುವ ಸಂಗತಿಗಳನ್ನು ವಿರೋಧಿಸಿದ್ದಾರೆ. ಉದ್ಯಮ ವಲಯವೂ ಭಿನ್ನ ಪ್ರತಿಕ್ರಿಯೆ ನೀಡಿದೆ. ತೆರಿಗೆಯಲ್ಲಿ ಯಾವುದೇ ವಿನಾಯಿತಿ ನೀಡದಿರುವುದು ತೆರಿಗೆದಾರರ ನಿರಾಸೆಗೆ ಕಾರಣವಾಗಿದೆ.

ಈಗಾಗಲೇ ಗಗನಮುಖಿಯಾಗಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ಕೃಷಿ ಸೆಸ್‌ ವಿಧಿಸಿರುವುದನ್ನು ಸಾಮಾನ್ಯ ಜನರು ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯದವರು ಖಂಡಿಸಿದ್ದಾರೆ. ಎರಡು ಬ್ಯಾಂಕುಗಳ ಖಾಸಗೀಕರಣ, ಎಲ್‌ಐಸಿಯಲ್ಲಿನ ಬಂಡವಾಳ ಹಿಂತೆಗೆತ ಘೋಷಣೆಯೂ ಜನರಿಗೆ ಹಿತವಾಗಿಲ್ಲ. ಕರ್ನಾಟಕಕ್ಕೆ ಹಾಗೂ ಜಿಲ್ಲೆಗೆ ವಿಶೇಷ ಕೊಡುಗೆಗಳಿಲ್ಲ ಎಂಬ ಬೇಸರವೂ ಅವರನ್ನು ಕಾಡಿದೆ. ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ರಸ್ತೆ ಸೇರಿದಂತೆ ಮೂಲಸೌಕರ್ಯಗಳಿಗೆ ಹೆಚ್ಚಿನ ಅನುದಾನ ಘೋಷಿಸಿರುವುದು ಜನರ ಕಣ್ಣು ಕೆಂಪಾಗಿಸಿದೆ. 

ಕೋವಿಡ್‌–19 ಲಸಿಕೆಗಾಗಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಿರುವುದನ್ನು ಜನರು ಸ್ವಾಗತಿಸಿದ್ದಾರೆ. ಮೂಲಸೌಕರ್ಯಗಳಿಗೂ ಹೆಚ್ಚಿನ ಒತ್ತು ನೀಡಿರುವುದು ಅವರ ಮೆಚ್ಚುಗೆಗೆ ಪಾತ್ರವಾಗಿದೆ.

ಕನಿಷ್ಠ ಬೆಂಬಲ ಬೆಲೆಯ ಅಡಿಯಲ್ಲಿ ಗೋಧಿ ಹಾಗೂ ಅಕ್ಕಿ ಖರೀದಿಗೆ ಹೆಚ್ಚು ಹಣ ಮೀಸಲಿಟ್ಟಿರುವುದನ್ನು ರೈತರು ಶ್ಲಾಘಿಸಿದ್ದಾರೆ. ಈ ಘೋಷಣೆ ಸರಿಯಾಗಿ ಅನುಷ್ಠಾನಕ್ಕೆ ಬರಬೇಕು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಎಪಿಎಂಸಿಗಳ ಮೂಲಸೌಕರ್ಯ ವೃದ್ಧಿಗೆ ಕೃಷಿ ಮೂಲಸೌಕರ್ಯ ನಿಧಿ ಘೋಷಿಸಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. 

ಅಗತ್ಯ ವಸ್ತುಗಳ ಬೆಲೆ ಇಳಿಸಿ: ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ವಿಧಿಸಲಾಗಿರುವ ಕೃಷಿ ಸೆಸ್‌ನಿಂದ ಗ್ರಾಹಕರಿಗೆ ಹೊರೆಯಾಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು‌ ಹೇಳಿದ್ದರೂ, ಈಗಾಗಲೇ ₹90ರ ಸನಿಹದಲ್ಲಿರುವ ಇಂಧನ ಬೆಲೆಯನ್ನು ಇಳಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಹುತೇಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಇತರ ಅಗತ್ಯ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದ್ದು, ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಎಂಬುದು ಅವರ ಅಭಿಪ್ರಾಯ.

ಇಂಧನ ಬೆಲೆ ಏರಿಕೆಯಾಗುತ್ತಿದ್ದಂತೆಯೇ, ಸಾಗಣೆ ವೆಚ್ಚ ಹೆಚ್ಚಾಗುತ್ತದೆ. ಇದರಿಂದಾಗಿ ಎಲ್ಲ ವಸ್ತುಗಳ ಬೆಲೆ ಹೆಚ್ಚಿ ಗ್ರಾಹಕರಿಗೆ ಹೊರೆಯಾಗುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿದೆ.

ರೈಲ್ವೆ ಯೋಜನೆಗಳ ಬಗ್ಗೆ ಪೂರ್ಣ ವಿವರ ಇನ್ನೂ ತಿಳಿದಿಲ್ಲ. 2023ರ ಒಳಗಾಗಿ ಎಲ್ಲ ಬ್ರಾಡ್‌ಗೇಜ್‌ ಮಾರ್ಗಗಳನ್ನು ವಿದ್ಯುದ್ದೀಕರಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಹೀಗಾಗಿ ಮೈಸೂರು–ಚಾಮರಾಜನಗರ ರೈಲು ಮಾರ್ಗವು ವಿದ್ಯುದ್ದೀಕರಣ ಆಗಲಿದೆ. ಕೊಳ್ಳೇಗಾಲ ಕನಕ‍ಪುರ ಮಾರ್ಗ ಯೋಜನೆ ಈ ಬಾರಿಯ ಬಜೆಟ್‌ನಲ್ಲಾದರೂ ಪ್ರಸ್ತಾಪ ಆಗಲಿದೆ ಎಂಬ ನಿರೀಕ್ಷೆ ಇತ್ತು. ಯೋಜನೆಯ ಬಗ್ಗೆ ಪ್ರಸ್ತಾಪವಾಗಿದೆಯೇ ಇಲ್ಲವೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.  

ರಾಜಕೀಯ ಮುಖಂಡರು, ರೈತರು, ಜನಸಾಮಾನ್ಯರ ಪ್ರತಿಕ್ರಿಯೆಗಳು

ಜನಪರ ಅಲ್ಲ
ಸಾಮಾನ್ಯ ಜನರ ಮೇಲೆ ತೆರಿಗೆ ಹೊರೆ ಹೊರಿಸಿರುವ ಬಜೆಟ್‌ ನಿರಾಶಾದಾಯಕವಾಗಿದೆ. ಪೆಟ್ರೋಲ್‌, ಡೀಸೆಲ್‌ ಮೇಲೆ ಕೃಷಿ ಸೆಸ್‌ ಹಾಕಿ ಜನರ ಮೇಲೆ ಇನ್ನಷ್ಟು ಹೊರೆ ಹಾಕಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ನೆರೆಯ ಕೇರಳಕ್ಕೆರ ₹65 ಸಾವಿರ ಕೋಟಿ, ತಮಿಳುನಾಡಿಗೆ  ₹1 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದ್ದು, ರಾಜ್ಯಕ್ಕೆ ಏನೂ ಇಲ್ಲ. ರಾಜ್ಯದಲ್ಲಿ ಬಿಜೆಪಿಯ 26 ಸಂಸದರಿದ್ದರೂ ರಾಜ್ಯಕ್ಕೆ ಏನೂ ಕೊಡದೆ, ಪ್ರಾದೇಶಿಕ ಅಸಮತೋಲನ ಮಾಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಸ್ಪಷ್ಟತೆಯೂ ಇಲ್ಲ.
– ಆರ್‌.ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ

**
ಜನಪರ ಬಜೆಟ್
ಇದೊಂದು ಜನಪರವಾದ ಬಜೆಟ್. ರೈತರು ಮತ್ತು ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಕೋವಿಡ್ ಔಷಧಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಯಾವುದೇ ವಲಯಕ್ಕೆ ಹೆಚ್ಚು ಕಡಿಮೆ ಮಾಡದೆ ಎಲ್ಲವನ್ನೂ ಸರಿದೂಗಿಸಿದ್ದಾರೆ. ಸಾಮಾನ್ಯ ಜನರಿಗೆ ಸುಲಭವಾಗಿ ಸಾಲ ಸೌಲಭ್ಯ ನೀಡಲು ಯೋಜನೆ ರೂಪಿಸಿರುವುದು ಅಭಿವೃದ್ಧಿಗೆ ಕನ್ನಡಿ ಹಿಡಿದಂತಿದೆ.
–ಸಿ.ಎಸ್.ನಿರಂಜನ ಕುಮಾರ್, ಗುಂಡ್ಲುಪೇಟೆ ಶಾಸಕ

**
ಅನುಕೂಲಸ್ಥರಿಗೆ ಇನ್ನಷ್ಟು ಅನುಕೂಲ
ಅತ್ಯಂತ ನಿರಾಶಾದಾಯಕ ಬಜೆಟ್‌. ಗ್ರಾಮೀಣ ಜನರಿಗೆ, ರೈತರಿಗೆ ಏನೂ ಲಾಭವಿಲ್ಲ. ಇಂಧನ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರು, ಮಧ್ಯಮ ವರ್ಗದವರಿಗೆ ಇನ್ನಷ್ಟು ಹೊರೆ ನೀಡಿದೆ. ಕೇಂದ್ರ ಸರ್ಕಾರ ಅನುಕೂಲಸ್ಥರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ.
–ಸಿ.ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ

**
ಸಮತೋಲನದ ಬಜೆಟ್‌
ಕೋವಿಡ್‌ ಸಂಕಷ್ಟ ಕಾಲದಲ್ಲಿ ಎಲ್ಲರ ಕೊರತೆಗಳನ್ನು ನೀಗಿಸುವ ಬಜೆಟ್ ಅನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಆರ್ಥಿಕ ಸಂಕಷ್ಟದ ನಡುವೆ ಬಜೆಟ್ ಮಂಡಿಸಿರುವುದು ದೊಡ್ಡ ಸವಾಲಿನ ಕೆಲಸ. ಎಲ್ಲವನ್ನು ಸಮತೋಲನ ಮಾಡಿಕೊಂಡು ಮಂಡಿಸಿರುವ ಬಜೆಟ್  ಉತ್ತಮವಾಗಿದೆ.
–ಎನ್.ಮಹೇಶ್‌, ಕೊಳ್ಳೇಗಾಲ ಶಾಸಕ

**
ನಿರಾಶಾದಾಯಕ
ಇದು ನಿರಾಸದಾಯಕ ಬಜೆಟ್‌. ಮಧ್ಯಮ ವರ್ಗ, ಬಡವರು, ರೈತರಿಗೆ ಯಾವುದೇ ಕೊಡುಗೆಗಳಿಲ್ಲ. ಬಜೆಟ್‌ನಲ್ಲಿ ಘೋಷಿಸಲಾಗಿರುವ ಅಂಶಗಳು ಅಭಿವೃದ್ಧಿಗೆ ಪೂರಕವಾಗಿಲ್ಲ. ಇಂಧನ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕನ್ನು ದುರ್ಬರ ಮಾಡಿದೆ.
–ಪಿ.ಮರಿಸ್ವಾಮಿ, ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ 

**
ರೈತ ಪರ ಉತ್ತಮ ಬಜೆಟ್‌
ಕೃಷಿ, ರೈತಪರ, ಜನರ ಪರವಾಗಿರುವ ಅತ್ಯುತ್ತಮ ಬಜೆಟ್‌. ಕೋವಿಡ್‌–19 ಲಸಿಕೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸಾಮಾನ್ಯ ಜನರ ಕಷ್ಟವನ್ನು ಅರಿತು, ಅದಕ್ಕೆ ಸ್ಪಂದಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. 
–ಆರ್‌.ಸುಂದರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

**
ರಾಜ್ಯಕ್ಕೆ ಏನೂ ಇಲ್ಲ
ಬಜೆಟ್‌ ನಿರಾಸೆ ಮೂಡಿಸಿದೆ. ಅಭಿವೃದ್ಧಿ ಯೋಜನೆಗಳು ಏನೂ ಕಾಣುತ್ತಿಲ್ಲ. ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕೋವಿಡ್‌ನಿಂದ ಸಂಕಷ್ಟಕ್ಕೆ ತುತ್ತಾಗಿರುವ ರಾಜ್ಯ ಹಾಗೂ ಜನರಿಗೆ ಆರ್ಥಿಕವಾಗಿ ನೆರವಾಗುವ ಕಾರ್ಯಕ್ರಮಗಳಿಲ್ಲ. ಜಿಡಿಪಿ ಹೆಚ್ಚಿಸಬೇಕು ಎಂದು ಸರ್ಕಾರ ಸರ್ಕಸ್‌ ಮಾಡಲು ಹೊರಟಿದೆ. ಜಿಡಿಪಿ ಅಂದರೆ ಗ್ಯಾಸ್‌, ಡೀಸೆಲ್‌, ಪೆಟ್ರೋಲ್‌ ಬೆಲೆಯನ್ನು ಹೆಚ್ಚು ಮಾಡುತ್ತಿದೆ.
–ಎನ್‌.ನಾಗಯ್ಯ, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ 

**
ದೊಡ್ಡ ಪ್ರಯೋಜನ ಇಲ್ಲ
ಬಜೆಟ್‌ನಲ್ಲಿ ದೊಡ್ಡ ದೊಡ್ಡ ಘೋಷಣೆಗಳು ಕಾಣಿಸುತ್ತಿವೆ. ಆದರೆ, ಅದಕ್ಕೆ ಹಣ ಸಂಗ್ರಹ, ಅನುಷ್ಠಾನದ ಬಗ್ಗೆ ವಿವರಗಳು ಇಲ್ಲ. ಎಂಎಸ್‌ಎಂಇ ಕ್ಷೇತ್ರಕ್ಕೆ ₹15,700 ಕೋಟಿ ನೀಡುವ ಭರವಸೆ ಇದೆ. ಸಂಪರನ್ಮೂಲ ಹೇಗೆ ಕ್ರೋಡಿಕರಿಸುತ್ತಾರೆ ಎಂದು ತಿಳಿಸಿಲ್ಲ. ಪೆಟ್ರೋಲ್‌, ಡೀಸೆಲ್‌ ಬೆಲೆ ನಿಯಂತ್ರಣಕ್ಕೆ ಕೈ ಹಾಕಿಲ್ಲ. ಅದರ ಮೇಲೆ ಮತ್ತೆ ಕೃಷಿ ಸೆಸ್‌ ಹಾಕಿ ಜನರು ಭಯಗೊಳ್ಳುವಂತೆ ಮಾಡಿದ್ದಾರೆ. ಎಂಎಸ್‌ಎಂ‌ಇ ಉದ್ಯಮ ವಲಯದ ಚೇತರಿಕೆಗಾಗಿ ನಾವು ಹಲವು ಮನವಿಗಳನ್ನು ಮಾಡಿದ್ದೆವು. ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.
–ಜಯಸಿಂಹ, ಸಣ್ಣ ಕೈಗಾರಿಕೆಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ

**
ರೈತರಿಗೆ ನಿರಾಸೆ
ಈ ಬಜೆಟ್‌ನಲ್ಲಿ ರೈತರಿಗೆ ಏನೂ ಇಲ್ಲ. ರೈತರು ನಡೆಸುತ್ತಿರುವ ಹೋರಾಟದ ನಡುವೆಯೂ, ಕೃಷಿಕರಿಗೆ ನೆರವಾಗುವ ದೊಡ್ಡ ಕೊಡುಗೆಗಳಿಲ್ಲ.  ಉತ್ಪನ್ನಗಳ ಸಂಸ್ಕರಣಾ ಘಟಕಗಳು, ಹಾಗೂ ಉತ್ಪನ್ನಗಳ ಮೌಲ್ಯವರ್ಧನೆಗೆ ಬೇಕಾದಂತಹ ಸೌಲಭ್ಯಗಳ ಘೋಷಣೆ ಮಾಡಿಲ್ಲ. ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಖರೀದಿಗೆ ಹೆಚ್ಚು ಹಣ ಮೀಸಲಿಟ್ಟಿರುವುದು ನಿಜ. ಅದರೆ, ಪ್ರತಿ ವರ್ಷ ರೈತರಿಗೆ ಬೇಕಾದ ಸಮಯದಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ನಡೆಯುತ್ತಿಲ್ಲ. ಇದು ರೈತರ ಕಣ್ಣೊರೆಸುವ ತಂತ್ರ. ಬಜೆಟ್‌ನಿಂದ ಜನಸಾಮಾನ್ಯರ ಮೇಲೆ ಇನ್ನಷ್ಟು ಹೊರೆ ಬೀಳಲಿದೆ.
– ಗುರುಪ್ರಸಾದ್‌, ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ

**
ಸಿಹಿ ಕಡಿಮೆ, ಕಹಿ ಜಾಸ್ತಿ
ಬೆಂಗಳೂರು ಮೆಟ್ರೊಗೆ ₹14 ಸಾವಿರ ಕೊಟ್ಟಿದ್ದು ಒಳ್ಳೆಯ ಬೆಳವಣಿಗೆ. ರೈತರಿಗೆ ಹೆಚ್ಚು ಅನುಕೂಲವಾಗುವ ಅಂಶಗಳು ಕಾಣುತ್ತಿಲ್ಲ. ಮೋದಿ ಸರ್ಕಾರ ಆರಂಭದಿಂದಲೂ ರೈತರನ್ನು ಕಡೆಗಣಿಸುತ್ತಲೇ ಬಂದಿದೆ. ಈ ಬಾರಿಯೂ ಅದು ಮುಂದುವರಿದಿದೆ. ರೈತರನ್ನು ತೆರಿಗೆ ವ್ಯಾಪ್ತಿಗೆ ತರುವ ಹುನ್ನಾರ ಕಾಣುತ್ತಿದೆ. ಜಿಲ್ಲೆಗೆ ವಿಶೇಷ ರೈಲು ಯೋಜನೆ ಬಂದ ಹಾಗೆ ಇಲ್ಲ. ನೀರಾವರಿ ಯೋಜನೆಗಳ ಘೋಷಣೆ ಇಲ್ಲ. ಬಜೆಟ್‌ನಲ್ಲಿ ಸಿಹಿಗಿಂತ ಕಹಿಯೇ ಹೆಚ್ಚಿದೆ.
– ಲಕ್ಷ್ಮಿ ನರಸಿಂಹ, ಚಾಮರಾಜನಗರ

**
ಎಲ್‌ಐಸಿ ಖಾಸಗೀಕರಣ ಸರಿಯಲ್ಲ
ಎಲ್‌ಐಸಿನಲ್ಲಿ ಸರ್ಕಾರದ ಪಾಲು ಹೆಚ್ಚಿದ್ದರೆ ಭದ್ರತೆ ಹೆಚ್ಚು. ಈಗ ಸರ್ಕಾರ ಬಂಡಾವಳ ಹಿಂತೆಗೆದುಕೊಳ್ಳಲು ನಿರ್ಧರಿಸಿರುವುದರಿಂದ ಜನರು ಎಲ್‌ಐಸಿಯಲ್ಲಿ ವಿಮೆ ಮಾಡಿಸಲು ಹಿಂಜರಿಯುವ ಪರಿಸ್ಥಿತಿ ಉಂಟಾಗಲಿದೆ. ಜೀವ ವಿಮೆಯು ದೀರ್ಘ ಅವಧಿಯದ್ದಾಗಿರುವುದರಿಂದ ಠೇವಣಿಗೆ ಭದ್ರತೆ ಇರುವುದು ಮುಖ್ಯ. ಹಾಗಾಗಿ, ಸರ್ಕಾರದ ಈ ನಿರ್ಧಾರ ಸರಿಯಲ್ಲ.
– ಡಿ.ಎಸ್‌.ಗಿರೀಶ್‌, ವಿಮಾ ಸಲಹೆಗಾರರು, ಚಾಮರಾಜನಗರ

**
ಅಭಿವೃದ್ಧಿಗೆ ಗಮನಹರಿಸಿಲ್ಲ
ಜನ ಸಾಮಾನ್ಯರಿಗೆ ಅನುಕೂಲವಿಲ್ಲದ ಹಾಗೂ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲದ ಬಜೆಟ್. ರಾಜ್ಯದಿಂದ ಬಿಜೆಪಿಯ 26 ಜನ ಸಂಸದರಿದ್ದರೂ ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸಿಲ್ಲ. ಬೆಲೆಗಳನ್ನು ಹೆಚ್ಚಿಸುತ್ತಾ ಜನ ಸಾಮಾನ್ಯರ ಮೇಲಿನ ಹೊರೆಯನ್ನು ಇನ್ನಷ್ಟು ಜಾಸ್ತಿ ಮಾಡಲಾಗಿದೆ
–ಶಿವನಂಜಪ್ಪ, ರೈತ ಮುಖಂಡ, ಬಸವಟ್ಟಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು