ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಕೊರೊನಾ ಪಿಡುಗು ಮುಕ್ತ ಜಿಲ್ಲೆ: ಎಸ್‌.ಸುರೇಶ್‌ ಕುಮಾರ್‌

ಜಿಲ್ಲಾ ಉಸ್ತುವಾರಿ ಸಚಿವ ಹೇಳಿಕೆ, ಮೂವರಿಗೆ ಹೋಂ ಕ್ವಾರಂಟೈನ್‌
Last Updated 1 ಏಪ್ರಿಲ್ 2020, 14:28 IST
ಅಕ್ಷರ ಗಾತ್ರ

ಕೊಳ್ಳೇಗಾಲ: ‘ಗಡಿ ಜಿಲ್ಲೆಯು ಕೊರೊನಾ ವೈರಸ್‌ ಪಿಡುಗಿನಿಂದ ಮುಕ್ತವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಬುಧವಾರ ಹೇಳಿದರು.

ಕೊಳ್ಳೇಗಾಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾಡಳಿತ, ಶಾಸಕರ ಪರವಾಗಿ ಇಡೀ ಜಿಲ್ಲೆಯ ಜನರಿಗೆ ಧೈರ್ಯ ತುಂಬಲು ನಾನು ಬಯಸುತ್ತೇನೆ. ಜಿಲ್ಲೆ ಈ ಪಿಡುಗಿನಿಂದ ಮುಕ್ತವಾಗಿದೆ. ದೂರುಗಳು ಅಥವಾ ಅನುಮಾನಗಳು ಬಂದ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ಕಳುಹಿಸಿರುವ ಗಂಟಲ ದ್ರವ ಹಾಗೂ ರಕ್ತದ ಮಾದರಿಗಳ ವರದಿಗಳೆಲ್ಲವೂ ನೆಗೆಟಿವ್‌ ಆಗಿದೆ’ ಎಂದರು.

‘ಜಿಲ್ಲೆಯಲ್ಲಿ ಸದ್ಯ 52 ಮಂದಿಯನ್ನು ವಿಶೇಷ ನಿಗಾ ಘಟಕದಲ್ಲಿ ಇರಿಸಿ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಮೂವರನ್ನು ಮನೆಗಳಲ್ಲೇ ಇರಿಸಲಾಗಿದೆ’ ಎಂದರು.

‘ಶಂಕಿತರು ಮತ್ತು ಸೋಂಕಿತರು ಇಬ್ಬರ ಬಗ್ಗೆಯೂ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ನಮ್ಮಲ್ಲಿ ಯಾವುದೇ ಆತಂಕ ಇಲ್ಲ. ಅಂದ ಮಾತ್ರಕ್ಕೆ ನಾವು ಎಚ್ಚರ ತಪ್ಪುವ ಹಾಗಿಲ್ಲ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.

‘ಕೊರೊನಾ ವೈರಸ್‌ ಸೋಂಕು ತಡೆಯಲು ಎಲ್ಲರೂ ಕನಿಷ್ಠ ಕ್ರಮಗಳನ್ನು ಕೈಗೊಳ್ಳಬೇಕು. ಕೈ ತೊಳೆದುಕೊಳ್ಳುವುದು, ಮೂಗು, ಕಣ್ಣುಗಳನ್ನು ಮುಟ್ಟದೇ ಇರುವುದು ಸೇರಿದಂತೆ ವೈಯಕ್ತಿಕ ಸ್ವಚ್ಛತೆಗೆ ಒತ್ತು ನೀಡಬೇಕು’ ಎಂದು ಸಚಿವರು ಹೇಳಿದರು.

‘ಜನರು ಗುಂಪು ಸೇರಬಾರದು. ಆದರೆ, ಪಟ್ಟಣಗಳಲ್ಲಿ ಇದು ಪಾಲನೆಯಾಗುತ್ತಿಲ್ಲ. ಹಳ್ಳಿಗಳಲ್ಲಿ ದಿಗ್ಬಂಧನದ ನಿಯಮಗಳಿಗೆ ಜನರು ಹೆಚ್ಚು ಗಮನ ಕೊಡುತ್ತಿದ್ದಾರೆ. ಹಳ್ಳಿಗಳಲ್ಲಿ ದಿಗ್ಬಂಧನ ಕ್ರಮ ಶೇ 98ರಷ್ಟು ಯಶಸ್ವಿಯಾಗಿದೆ. ಆದರೆ, ಪಟ್ಟಣಗಳಲ್ಲಿ ಜನರು ಇದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇಲ್ಲೂ ನಾಗರಿಕರು ಅದೇ ಪ್ರಮಾಣದಲ್ಲಿ ಬೆಂಬಲ ಕೊಟ್ಟರೆ ಪರಿಸ್ಥಿತಿ ತಿಳಿಯಾಗುತ್ತದೆ. ಎಲ್ಲರೂ ಸಹಕಾರ ಕೊಟ್ಟರೆ ಏಪ್ರಿಲ್‌ 14ಕ್ಕೆ ದಿಗ್ಬಂಧನ ಮುಗಿಯುತ್ತದೆ. ಇಲ್ಲದಿದ್ದರೆ ಮುಂದುವರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೇಳಿದ್ದಾರೆ’ ಎಂದರು.

248 ವಲಸೆ ಕಾರ್ಮಿಕರು: ‘ಜಿಲ್ಲೆಗೆ 248 ಮಂದಿ ವಲಸೆ ಕಾರ್ಮಿಕರು ಬಂದಿದ್ದಾರೆ. ಅವರಿಗೆ ವಸತಿ, ಊಟದ ವ್ಯವಸ್ಥೆ ಕಲ್ಪಿಸುವುದಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ’ ಎಂದು ಹೇಳಿದರು.

‘ಯಳಂದೂರಿನ ತಾಲ್ಲೂಕಿನ ಗೌಡಹಳ್ಳಿಯಲ್ಲಿ ಮಹಾರಾಷ್ಟ್ರದಅಹಮದ್‍ನಗರ ಜಿಲ್ಲೆಯ ರಾಯಗಡ ತಾಲ್ಲೂಕಿನ ಆದಿವಾಸಿ ಕುಟುಂಬಗಳು ಜಾಲಿಮರಗಳಿಂದ ಇದ್ದಿಲು ಮಾಡುವ ಕೆಲಸದಲ್ಲಿ ನಿರತವಾಗಿವೆ. ಗುತ್ತಿಗೆದಾರನೊಬ್ಬ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾನೆ. ಅವರಿಗೆ ಆಹಾರ ಧಾನ್ಯ ಪೂರೈಸಲು ಹಾಗೂ ಅಗತ್ಯಬಿದ್ದರೆ ಆಶ್ರಯ ನೀಡಲು ವ್ಯವಸ್ಥೆ ಮಾಡಲಾಗುವುದು. ಆದರೆ, ಅವರು ಕೆಲಸ ಮಾಡುವ ವಾತಾವರಣ ನೋಡಿದರೆ ಜೀತದ ಕೆಲಸಕ್ಕೆ ಇದ್ದಾರೆನೋ ಎಂಬ ಅನುಮಾನ ಬರುತ್ತದೆ. ಹಾಗಾಗಿ ದಿಗ್ಬಂಧನ ಅವಧಿ ಮುಗಿದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದು ಈ ವಿಚಾರವನ್ನು ತಿಳಿಸುತ್ತೇನೆ. ಆ ತಂಡದಲ್ಲಿ ತುಂಬು ಗರ್ಭಿಣಿಯೊಬ್ಬಳು ಇದ್ದು, ಆಕೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಶಾಸಕರಾದ ಎನ್.ಮಹೇಶ್, ಆರ್.ನರೇಂದ್ರ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಭೋಯರ್ ಹರ್ಷಲ್ ನಾರಾಯಣರಾವ್, ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಇದ್ದರು.

ದೂರುಗಳಿಗೆ ಸ್ಪಂದನೆ

‘ಕೊಳ್ಳೇಗಾಲದ ಆರ್‌ಎಂಸಿ ತರಕಾರಿ ಮಾರುಕಟ್ಟೆ, ಇಂದಿರಾ ಕ್ಯಾಂಟೀನ್‌, ಕೊಳ್ಳೇಗಾಲ ಸಾರ್ವಜನಿಕ ಆಸ್ಪ‍ತ್ರೆ, ಹನೂರಿನ ನಾಲ್‌ರೋಡ್‌ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲಿ ಕೇಳಿ ಬಂದ ದೂರುಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಸುರೇಶ್‌ ಕುಮಾರ್‌ ಹೇಳಿದರು.

ಆರ್‌ಎಂಸಿ ಮಾರುಕಟ್ಟೆಯಲ್ಲಿ ತರಕಾರಿ ದರಗಳ ಪಟ್ಟಿಯನ್ನು ಹಾಕುವಂತೆ ಸೂಚನೆ ನೀಡಲಾಗಿದೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ. ತರಕಾರಿ ಮತ್ತು ಹಣ್ಣುಗಳನ್ನು ಮಾರುಕಟ್ಟೆಗೆ ತರುವಾಗ ತೊಂದರೆಯಾಗುತ್ತಿದೆ ಎಂದು ಕೆಲವು ರೈತರು ದೂರಿದ್ದಾರೆ. ಜಿಲ್ಲೆಯ ಒಳಗೆ ಸಂಚರಿಸಲು ಅಡಚಣೆ ಮಾಡುವುದಿಲ್ಲ ಎಂಬ ಭರವಸೆಯನ್ನು ಪೊಲೀಸ್‌ ವರಿಷ್ಠಾಧಿಕಾರಿ ನೀಡಿದ್ದಾರೆ. ಇಂದಿರಾ ಕ್ಯಾಂಟೀನ್‌ನಲ್ಲಿ ಸರ್ಕಾರದ ಆದೇಶದ ಪ್ರಕಾರ ಆಹಾರ ಸಿದ್ಧಪಡಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT