ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ |ಸ್ವಚ್ಛತೆಗೆ ಆದ್ಯತೆ, ಅಭಿವೃದ್ಧಿಯೇ ಮಂತ್ರ: ನಗರಸಭೆ ಅಧ್ಯಕ್ಷ ಸುರೇಶ್

Published : 12 ಸೆಪ್ಟೆಂಬರ್ 2024, 5:30 IST
Last Updated : 12 ಸೆಪ್ಟೆಂಬರ್ 2024, 5:30 IST
ಫಾಲೋ ಮಾಡಿ
Comments

ಚಾಮರಾಜನಗರ: ನಗರಸಭೆ ನೂತನ ಅಧ್ಯಕ್ಷರಾಗಿ 28ನೇ ವಾರ್ಡ್‌ನ ಸದಸ್ಯ ಸುರೇಶ್‌ ಹಾಗೂ ಉಪಾಧ್ಯಕ್ಷೆಯಾಗಿ 22ನೇ ವಾರ್ಡ್‌ನ ಮಮತಾ ಬಾಲಸುಬ್ರಹ್ಮಣ್ಯ ಬುಧವಾರ ನಗರಸಭೆಯ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಇದೇವೇಳೆ ನೂತನ ಅಧ್ಯಕ್ಷ ಸುರೇಶ್‌ ‘ಪ್ರಜಾವಾಣಿ’ ಜೊತೆ ಚಾಮರಾಜನಗರ ನಗರದ ಅಭಿವೃದ್ಧಿಯ ಮುನ್ನೋಟವನ್ನು ಹಂಚಿಕೊಂಡರು.

‌–ಚಾಮರಾಜನಗರದ ಅಭಿವೃದ್ಧಿಗೆ ಸ್ಪಷ್ಟ ಕಾರ್ಯಸೂಚಿಗಳಿವೆಯೇ ?

ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಅನೈರ್ಮಲ್ಯ, ಒಳಚರಂಡಿ ಅವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯಗಳ ಕೊರತೆ ಇದೆ. ಎಲ್ಲ ಸಮಸ್ಯೆಗಳಿಗೂ ದಿಢೀರ್ ಪರಿಹಾರ ಕಷ್ಟಸಾಧ್ಯ. ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದೊಂದಿಗೆ ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು.

–ಅಧ್ಯಕ್ಷರಾಗಿದ್ದೀರಿ, ನೀವು ಮಾಡುವ ಮೊದಲ ಕೆಲಸ ಯಾವುದು ?

ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು, ಶೀಘ್ರ ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರ ಜೊತೆ ಸಭೆ ನಡೆಸಿ ಎಲ್ಲೆಲ್ಲಿ ಅನೈರ್ಮಲ್ಯ ಇದೆ ಎಂಬ ಮಾಹಿತಿ ಕಲೆಹಾಕಿ, ನಗರಸಭೆ ಸಿಬ್ಬಂದಿಯನ್ನು ಬಳಸಿಕಕೊಂಡು ತ್ಯಾಜ್ಯ ವಿಲೇವಾರಿ ಮಾಡಿಸಲಾಗುವುದು. ಯುಜಿಡಿ ಸಮಸ್ಯೆ ಗಂಭೀರವಾಗಿರುವ ಕಡೆಗಳಲ್ಲಿ ತ್ಯಾಜ್ಯ ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಲಾಗುವುದು.

–ಅಭಿವೃದ್ಧಿಗೆ ಅನುದಾನದ ಕೊರತೆ ಇದೆಯೇ ?

ಹೌದು, ರಾಜ್ಯ ಸರ್ಕಾರದಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಸಮರ್ಪಕ ಅನುದಾನ ಸಿಗುತ್ತಿಲ್ಲ. ಕೇಂದ್ರ ಸರ್ಕಾರದ ವಿವಿದ ಯೋಜನೆಗಳ ಅನುದಾನವನ್ನು ನಗರದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಲಾಗುವುದು. ಈ ಸಂಬಂಧ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ ಅಗತ್ಯ ಅನುದಾನ ಕೋರಿ ಮನವಿ ಸಲ್ಲಿಸಲಾಗುವುದು.

–ನಗರದಲ್ಲಿ ಡಾಂಬಾರ್ ಕಾಣದ ಕಚ್ಛಾ ರಸ್ತೆಗಳಿರುವುದು ಗಮನದಲ್ಲಿದೆಯೇ ?

ಹೌದು, ಹಿಂದೆ ₹ 36 ಕೋಟಿ ವೆಚ್ಚದಲ್ಲಿ ನಗರದಲ್ಲಿ ರಸ್ತೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಆದರೆ, ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಮಧ್ಯೆ ಹಗ್ಗ ಜಗ್ಗಾಟ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ನಗರಸಭೆ ಪೌರಾಯುಕ್ತರಿಂದ ಕಾಮಗಾರಿ ಪ್ರಗತಿಯ ಮಾಹಿತಿ ಪಡೆದು ಸಮಸ್ಯೆ ನಿವಾರಿಸಿ ಮರು ಆರಂಭಿಸಲಾಗುವುದು. ಯಾವ ವಾರ್ಡ್‌ಗಳಲ್ಲಿ ರಸ್ತೆ ಇಲ್ಲ, ಚರಂಡಿ ಇಲ್ಲ ಎಂಬ ಮಾಹಿತಿಯನ್ನು ಸಂಬಂಧಪಟ್ಟ ನಗರಸಭೆ ಸದಸ್ಯರಿಂದ ಪಡೆದು ಅಗತ್ಯ ಅನುದಾನ ಒದಗಿಸಲಾಗುವುದು.

–ಪಕ್ಕದಲ್ಲಿ ಕಾವೇರಿ, ಕಬಿನಿ ಹರಿದಿರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ

ನಗರದಲ್ಲಿ 26 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಭರದಿಂದ ಸಾಗಿದೆ. ನಗರದ ಮೂರು ಕಡೆಗಳಲ್ಲಿ  ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಮುಗಿದು ಕೂಡಲೇ ನಗರಕ್ಕೆ ನಿತ್ಯ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುವುದು.

–ನಗರದ ಒಳಚರಂಡಿ ಸಮಸ್ಯೆಗೆ ಪರಿಹಾರ ನೀಡುವಿರಾ ?

ಹೊಸದಾಗಿ ಒಳಚರಂಡಿ ಕಾಮಗಾರಿ ಮಾಡಲು ನೂರಾರು ಕೋಟಿ ಅಗತ್ಯವಿದೆ. ಸರ್ಕಾರದಿಂದ ಅನುದಾನ ಸಿಗುವವರೆಗೂ ತಾತ್ಕಾಲಿಕವಾಗಿ ಸಮಸ್ಯೆಗಳಿಗೆ ತುರ್ತು ಸ್ಪಂದಿಸಲಾಗುವುದು. ಒಳಚರಂಡಿ ಕಟ್ಟಿಕೊಂಡ ದೂರುಗಳು ಬಂದ ಕೂಡಲೇ ತೆರವುಗೊಳಿಸಲಾಗುವುದು.

–ಇ ಸ್ವತ್ತು ಸಮಸ್ಯೆಗೆ ಪರಿಹಾರ ಸಿಗಲಿದೆಯೇ ?

ನಗರಸಭೆಯಲ್ಲಿ ಸಾರ್ವಜನಿಕರು ಇ ಸ್ವತ್ತು ಪಡೆಯಲು ಪರದಾಡುತ್ತಿರುವುದು ಗಮನಕ್ಕೆ ಬಂದಿದೆ. ಕಾನೂನು ಚೌಕಟ್ಟಿನಲ್ಲಿ  ಇ ಸ್ವತ್ತು ನೀಡಲು ಇ ಸ್ವತ್ತು ಖಾತಾ ಅಭಿಯಾನವನ್ನು ಆಂದೋಲನ ಮಾದರಿಯಲ್ಲಿ ಮಾಡುವ ಉದ್ದೇಶವಿದೆ.

ದಲ್ಲಾಳಿಗಳ ಹಾವಳಿಗೆ ಬ್ರೇಕ್ ಬೀಳಲಿದೆಯೇ ?

ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ಜೊತೆ ಚರ್ಚಿಸಿ ದಲ್ಲಾಳಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಪ್ರಯತ್ನಿಸಲಾಗುವುದು. ಸಾರ್ವಜನಿಕರು ನೇರವಾಗಿ ನಗರಸಭೆಗೆ ಬಂದು ಕೆಲಸ ಮಾಡಿಸಿಕೊಳ್ಳುವ ವ್ಯವಸ್ಥೆ ರೂಪಿಸಲು ಒತ್ತು ನೀಡಲಾಗುವುದು.

ಸುರೇಶ್‌ ನಗರಸಭೆ ಅಧ್ಯಕ್ಷ
ಸುರೇಶ್‌ ನಗರಸಭೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT