ಸೋಮವಾರ, ಆಗಸ್ಟ್ 15, 2022
20 °C
ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಸಿದ್ಧತೆ, ಕೆಲವು ದಿನ ಕೊಯ್ಲು ಮುಂದೂಡಲು ಅಧಿಕಾರಿಗಳ ಸಲಹೆ

ಚಾಮರಾಜನಗರ: ಮಳೆರಾಯನ ಕಾಟದಿಂದ ಭತ್ತ ಕಟಾವಿಗೆ ತೊಂದರೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಕೊಳ್ಳೇಗಾಲ: ಜಿಲ್ಲೆಯಾದ್ಯಂತ ವಾರದಿಂದೀಚೆಗೆ ಪ್ರತಿ ದಿನ ಜೋರಾಗಿ ಅಲ್ಲದಿದ್ದರೂ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಭತ್ತದ ಕಟಾವಿನ ಕೆಲಸಕ್ಕೆ ತೊಂದರೆಯಾಗಿದೆ. 

ಮುಂಗಾರು ಅವಧಿಯಲ್ಲಿ ಬಿತ್ತನೆ ಮಾಡಿದ ಭತ್ತ ಕಟಾವಿನ ಹಂತಕ್ಕೆ ಬಂದಿದೆ. ಬಹುತೇಕ ರೈತರು ಕೊಯ್ಲಿಗಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ. ತಮಿಳುನಾಡಿನಿಂದಲೂ ಕಟಾವು ಯಂತ್ರಗಳು ಜಿಲ್ಲೆಯತ್ತ ಬಂದಿವೆ.

ಬಿಸಿಲಿನ ವಾತಾವರಣ ಇದ್ದರೆ ಕಟಾವಿಗೆ ಅನುಕೂಲ. ಮಳೆ ಬರುತ್ತಿದ್ದರೆ ತೇವಾಂಶದ ಕಾರಣದಿಂದ ಭತ್ತ ಒಣಗಲು ಹಾಕಲು ಆಗುವುದಿಲ್ಲ. ಶಿಲೀಂಧ್ರಗಳ ಕಾಟದಿಂದಾಗಿ ಭತ್ತ ಹಾಳಾಗುತ್ತದೆ. ಒಂದೆರಡು ದಿನಗಳಲ್ಲಿ ಮಳೆ ನಿಂತು, ಬಿಸಿಲು ಬಂದರೆ ಸರಿ ಇಲ್ಲದಿದ್ದರೆ, ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಆತಂಕದಲ್ಲಿ ರೈತರಿದ್ದಾರೆ. 

ದೊಡ್ಡ ಪ್ರಮಾಣದ ರೈತರಿಗೆ ತೊಂದರೆ ಇಲ್ಲ. ಭತ್ತ ಒಣಗಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಅವರು ಹೊಂದಿರುತ್ತಾರೆ. ಸಣ್ಣ ಹಿಡುವಳಿದಾರರಿಗೆ ಸರಿಯಾದ ಜಾಗ ಇಲ್ಲದಿರುವುದರಿಂದ ಕಷ್ಟವಾಗುತ್ತದೆ. 

ಜಿಲ್ಲೆಯಲ್ಲಿ ಚಾಮರಾಜನಗರ ತಾಲ್ಲೂಕಿನ ಕೆಲವು ಭಾಗ, ಯಳಂದೂರು, ಕೊಳ್ಳೇಗಾಲ ತಾಲ್ಲೂಕು ಹಾಗೂ ಹನೂರು ತಾಲ್ಲೂಕಿನ ಸ್ವಲ್ಪ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ವರ್ಷಕ್ಕೆ ಎರಡು ಅಥವಾ ಮೂರು ಬೆಳೆಯನ್ನು ತೆಗೆಯುತ್ತಾರೆ. 

ಕೃಷಿ ಇಲಾಖೆಯ ಪ್ರಕಾರ, ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ 11,270 ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆಯಾಗಿದೆ. ಈ ಪೈಕಿ ಕೊಳ್ಳೇಗಾಲ ತಾಲ್ಲೂಕಿನಲ್ಲೇ 7,166 ಹೆಕ್ಟೇರ್‌ ಪ್ರದೇಶದಲ್ಲಿ (ಪಾಳ್ಯ ಹೋಬಳಿಯಲ್ಲಿ 2,701 ಹೆಕ್ಟೆರ್ ಮತ್ತು ಕೊಳ್ಳೇಗಾಲ ಕಸಬಾ ಹೋಬಳಿಯಲ್ಲಿ 4,465) ಬೆಳೆಯಲಾಗಿದೆ. ಯಳಂದೂರು ತಾಲ್ಲೂಕಿನಲ್ಲಿ 3,150 ಹೆಕ್ಟೇರ್‌, ಚಾಮರಾಜನಗರದಲ್ಲಿ 915 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. 

ವಾರದಿಂದ ಮಳೆ: ಜಿಲ್ಲೆಯಲ್ಲಿ ವಾರದಿಂದೀಚೆಗೆ ಮಳೆ ಚುರುಕಾಗಿದೆ. ಬುರೆವಿ ಚಂಡಮಾರುತದ ಪ್ರಭಾವದಿಂದ ಶುರುವಾದ ಮಳೆ ಮುಂದುವರಿದಿದೆ. ಧಾರಾಕಾರವಾಗಿ ಸುರಿಯದಿದ್ದರೂ, ಪ್ರತಿ ದಿನ ಸಾಧಾರಣವಾಗಿ ಅಥವಾ ತುಂತುರಾಗಿ ಬರುತ್ತಿದೆ.

ಡಿಸೆಂಬರ್‌ ತಿಂಗಳ ಮೊದಲ ಒಂಬತ್ತು ದಿನಗಳಲ್ಲಿ ಜಿಲ್ಲೆಯಲ್ಲಿ ಮೂರು ಸೆಂ.ಮೀ ಮಳೆಯಾಗಿದೆ. ವಾಡಿಕೆಯಲ್ಲಿ ಇದೇ ಅವಧಿಯಲ್ಲಿ 1.3 ಸೆಂ.ಮೀ ಮಳೆ ಬೀಳುತ್ತದೆ.  

ಬೆಳಿಗ್ಗೆ ಇಬ್ಬನಿ, ಸಂಜೆ ಮಳೆ: ಚಳಿ ಆರಂಭಗೊಂಡ ನಂತರ ಜಿಲ್ಲೆಯಾದ್ಯಂತ ಬೆಳಿಗ್ಗೆ ಇಬ್ಬನಿ ಕಂಡು ಬರುತ್ತಿದೆ. ಕೆಲವು ದಿನಗಳಿಂದ ಸಂಜೆ ಮಳೆಯಾಗುತ್ತಿದೆ. ಹಗಲು ಮೋಡದ ವಾತಾವರಣ ಇರುತ್ತದೆ. ಹೀಗಾಗಿ ರೈತರು ಕಟಾವು ಮಾಡಲು ಹೆದರುತ್ತಿದ್ದಾರೆ. ದಿನಪೂರ್ತಿ ತೇವಾಂಶ ಇರುವುದರಿಂದ ಭತ್ತವನ್ನು ಒಣಗಿಸಲು ತೊಂದರೆಯಾಗುತ್ತದೆ ಎಂಬುದು ಅವರು ನೀಡುವ ಕಾರಣ. ಕೆಲವು ಕಡೆ ಮಳೆಯಿಂದಾಗಿ ಭತ್ತದ ಪೈರುಗಳು ನೆಲಕ್ಕೆ ಬಾಗಿವೆ. 

‘ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಭತ್ತ ಕಟಾವಿಗೆ ಬಂದಿದೆ. ಮಳೆಯಾಗುತ್ತಿರುವುದರಿಂದ ಕಟಾವು ಮಾಡಲು ಆಗುತ್ತಿಲ್ಲ. ಬೆಳೆಗೆ ಹಾನಿಯಾದರೆ, ಸರ್ಕಾರ ಪರಿಹಾರ ನೀಡಬೇಕು’ ಎಂದು ಕೊಳ್ಳೇಗಾಲದ ರೈತ ಅಶೋಕ್‌ ಅವರು ಹೇಳಿದರು. 

‘ಹತ್ತು ದಿನಗಳ ಹಿಂದೆಯೇ ಭತ್ತ ಕಟಾವು ಮಾಡಬೇಕಿತ್ತು. ಯಂತ್ರಗಳು ತಮಿಳುನಾಡಿನಿಂದ ಬಂದಿರಲಿಲ್ಲ. ಈಗ ಬಂದಿವೆ. ಈಗ ಮಳೆಯೂ ಆಗುತ್ತಿದೆ. ಹಾಗಾಗಿ ಕಟಾವು ಮಾಡಲು ಆಗುತ್ತಿಲ್ಲ. ಮಾಡಿದರೆ ಭತ್ತವನ್ನು ಎಲ್ಲಿ ಹಾಕಬೇಕು ಎಂಬುದು ತಿಳಿಯುತ್ತಿಲ್ಲ’ ಎಂದು ಕೊಳ್ಳೇಗಾಲ ತಾಲ್ಲೂಕಿನ ಹಳೇ ಅಣಗಳ್ಳಿ ಗ್ರಾಮದ ನಾಗರಾಜು ಅವರು ಅಳಲು ತೋಡಿಕೊಂಡರು. 

ಕಟಾವು ಮುಂದೂಡಲು ಸಲಹೆ
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು, ‘ಸಾಮಾನ್ಯವಾಗಿ ಈ ಸಮಯದಲ್ಲಿ ಕಡಿಮೆ ಮಳೆಯಾಗುತ್ತದೆ. ಮಳೆ ಬಂದರೂ ಅಪರೂಪ ಎಂಬಂತೆ ಸುರಿಯುತ್ತದೆ. ಈ ವರ್ಷ ಚಂಡ ಮಾರುತದ ಪರಿಣಾಮ ತುಂತುರು ಮಳೆಯಾಗುತ್ತಿದೆ. ಮಳೆ ಬರುತ್ತಿರುವುದರಿಂದ ಹಾಗೂ ಚಳಿಗಾಲವೂ ಆಗಿರುವುದರಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದೆ. ಬಿಸಿಲಿನ ಪ್ರಮಾಣವೂ ಕಡಿಮೆ ಇದ್ದು ಭತ್ತದ ಕಟಾವಿಗೆ ಪೂರಕ ವಾತಾವರಣ ಇಲ್ಲ’ ಎಂದು ಹೇಳಿದರು.

‘ಒಂದು ವೇಳೆ ಕೊಯ್ಲು ಮಾಡಿದ ಭತ್ತವನ್ನು ಒಣಗಿಸಲು ವ್ಯವಸ್ಥೆ ಇಲ್ಲದಿದ್ದರೆ, ತೇವದಿಂದಾಗಿ ಭತ್ತದಲ್ಲಿ ಶಿಲೀಂದ್ರಗಳು ಕಂಡು ಬರುತ್ತವೆ. ಇದರಿಂದ ನಷ್ಟವಾಗುತ್ತದೆ. ಹಾಗಾಗಿ, ರೈತರು ಒಂದೆರಡು ದಿನಗಳ ಕಲಾ ಕಟಾವು ಮುಂದೂಡುವುದು ಒಳ್ಳೆಯದು’ ಎಂದು ಅವರು ಸಲಹೆ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು