ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಸು ಪುನರುತ್ಥಾನದ ಹಬ್ಬ ಈಸ್ಟರ್‌

ಸುದೀರ್ಘ ವ್ರತದ ಬಳಿಕ ಹಬ್ಬದ ಆಚರಣೆ, ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ
Last Updated 3 ಏಪ್ರಿಲ್ 2021, 14:25 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಜಿಲ್ಲೆಯ ಕ್ರಿಶ್ಚಿಯನ್ನರು ಈಸ್ಟರ್‌ ಹಬ್ಬದ ಆಚರಣೆಗೆ ಸಜ್ಜುಗೊಂಡಿದ್ದಾರೆ. ಏಸುವಿನ ಪುನರುತ್ಥಾನದ ಹಬ್ಬವೇ ಈಸ್ಟರ್. ಕ್ಯಾಥೋಲಿಕ್‌ ಹಾಗೂ ಪ್ರೊಟೆಸ್ಟಂಟ್‌ ಸಮುದಾಯದವರು ಅದ್ಧೂರಿಯಾಗಿ ಆಚರಿಸುತ್ತಾರೆ.

ಕ್ರಿಶ್ಚಿಯನ್ನರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಇದೂ ಒಂದು. ಏಸು ಕ್ರಿಸ್ತ ಶಿಲುಬೆಗೆ ಏರಿದ ಮೂರು ದಿನಗಳ ನಂತರ ಈಸ್ಟರ್‌ ಆಚರಿಸಲಾಗುತ್ತದೆ.ಏಸು ಶಿಲುಬೆಗೆ ಏರಿದ ದಿನ ಶುಭ ಶುಕ್ರವಾರ (ಗುಡ್‌ ಫ್ರೈಡೆ).

40 ದಿನಗಳ ವ್ರತ: ಗುಡ್‌ ಫ್ರೈಡೇಗೂ 40 ದಿನಗಳ ಮೊದಲು ಕ್ರಿಶ್ಚಿಯನ್ನರು ವಿಶೇಷ ವ್ರತವನ್ನು ಆರಂಭಿಸುತ್ತಾರೆ. ಈ ಅವಧಿಯಲ್ಲಿ ಕ್ರಿಶ್ಚಿಯನ್ನರು ಪ್ರಾರ್ಥನೆ, ಉಪವಾಸ ದಾನ ಧರ್ಮದಲ್ಲಿ ತೊಡಗಿಕೊಳ್ಳುತ್ತಾರೆ.ಈ ಅವಧಿಯಲ್ಲಿ ಅವರದ್ದು ತ್ಯಾಗಮಯ ಜೀವನ.

ಬೂದಿ ಬುಧವಾರದ (ಆ್ಯಶ್‌ ವೆಡ್ನೆಸ್‌ಡೇ) ದಿನದಂದು ಈ ವ್ರತಕ್ಕೆ ಚಾಲನೆ ನೀಡಲಾಗುತ್ತದೆ. ಕ್ರಿಶ್ಚಿಯನ್ನರು ಉಪವಾಸದ ಪ್ರಾರ್ಥನೆ ಮಾಡಿ ತಮ್ಮ ಹರಕೆಯನ್ನು ಸಲ್ಲಿಸುತ್ತಾರೆ. ಕೆಲವರು 40 ದಿನದವರೆಗೂ ಬೆಳಗ್ಗೆಯಿಂದ ಸಂಜೆಯವರೆಗೆ ನೀರನ್ನು ಬಿಟ್ಟರೆ ಬೇರೆ ಯಾವ ಆಹಾರ ಪದಾರ್ಥವನ್ನು ಸೇವಿಸುವುದಿಲ್ಲ. ಮಾಂಸ ಸೇವನೆಯನ್ನೂ ತ್ಯಜಿಸುತ್ತಾರೆ. ವ್ರತದ ಅವಧಿಯಲ್ಲಿಪ್ರತಿ ನಿತ್ಯವೂ ಚರ್ಚ್‍ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತದೆ.

‘ಗುಡ್ ಫ್ರೈಡೇ ಹಿಂದಿನ ದಿನದಂದು ಗುರುವಾರ ರಾತ್ರಿ ಚರ್ಚ್‍ನಲ್ಲಿ ಸಭೀಕರಿಗೆ ಕಡೆಯ ರಾತ್ರಿ ಭೋಜನವನ್ನು ಪ್ಯಾಸ್ಟರ್ ನೀಡುತ್ತಾರೆ. ನಂತರ ಶುಕ್ರವಾರ 12 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ಏಸು ಶಿಲುಬೆಯಲ್ಲಿ ತನ್ನ ಪ್ರಾಣವನ್ನು ಬಿಡುವ ಸಮಯದಲ್ಲಿ ಹೇಳಿದ ಏಳು ಮಾತುಗಳನ್ನು ವಿಶೇಷ ಆರಾಧನೆ ಮೂಲಕ ತಿಳಿಸಲಾಗುತ್ತದ. ಉಪವಾಸದ ಪ್ರಾರ್ಥನೆ ಸಲ್ಲಿಸಿದ ಬಳಿಕ ಚರ್ಚ್‍ನಲ್ಲಿ ತಯಾರಿಸಿದ್ದ ಗಂಜಿ, ಚಟ್ನಿ, ವಿವಿಧ ರೀತಿಯ ಹಣ್ಣಿನ ರಸ, ಸೇವಿಸುತ್ತಾರೆ. ಆ ದಿನ ಯಾರು ಸಹ ಮಾಂಸದ ಊಟ ಮಾಡುವುದಿಲ್ಲ’ ಎಂದು ದೈವ ಜ್ಞಾನ ತರಬೇತಿ ಪಡೆಯುತ್ತಿರುವ ಯುವಕ ಜೋಸೆಫ್ ಜಾನ್‍ಸನ್ ಅವರು ಹೇಳಿದರು.

ಏಸು ಶಿಲುಬೆಯಲ್ಲಿ ಪ್ರಾಣ ತ್ಯಾಗ ಮಾಡಿದ ಮೂರನೇ ದಿನ ಎದ್ದು ಪುನರುತ್ಥಾನದ ಹೊಂದಿದ ದಿನವೇ ಈಸ್ಟರ್ ಸಂಡೆ. ಇದನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಚರ್ಚ್‍ನಲ್ಲಿ ಬೆಳಗ್ಗೆಯಿಂದ ವಿಶೇಷ ಗೀತೆಗಳನ್ನು ಹಾಡಿ, ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ನಂತರ ಮನೆಯಲ್ಲಿ ಹಬ್ಬದ ಊಟ ಸವಿಯುತ್ತಾರೆ.

‘ಈಸ್ಟರ್ ಸಂಡೆ ಕ್ರಿಶ್ಚಿಯನ್ನರ ಪುನರುತ್ಥಾನದ ಹಬ್ಬವಾಗಿದೆ. ಈ ಹಬ್ಬಕ್ಕೆ ಚರ್ಚ್‍ನಲ್ಲಿ ವಿಶೇಷ ಗೀತೆಗಳನ್ನು ಹಾಡಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತೇವೆ’ ಎಂದುಬೇತೆಲ್ ಲೂಥರನ್ ಚರ್ಚ್‌ನ ಪ್ಯಾಸ್ಟರ್ ರೆವರೆಂಡ್ ನಂದಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಬ್ಬ ಕ್ರಿಶ್ಚಿಯನ್ನರಿಗೆ ವಿಶೇಷವಾದುದು. ಚರ್ಚ್‍ನಲ್ಲಿ ಎಲ್ಲರಿಗೂ ಮೊಟ್ಟೆ ಮತ್ತು ಬ್ರೆಡ್ ನೀಡುವುದು ಪದ್ಧತಿ. ಮೊಟ್ಟೆ ಹೊಸ ಹುಟ್ಟಿನ ಸಂಕೇತ. ಮೊಟ್ಟೆಯೊಳಗೆ ರಕ್ಷಣೆ ಪಡೆದ ಮರಿ ಅದನ್ನು ಒಡೆದು ಹೇಗೆ ಹೊರ ಬರುತ್ತದೋ, ಅದೇ ರೀತಿ ಏಸು ಸಮಾಧಿಯನ್ನು ಒಡೆದು ಜಗತ್ತಿಗೆ ಬರುತ್ತಾನೆ ಎಂಬ ನಂಬಿಕೆ ಇದೆ’ ಎಂದು ಅವರು ಹಬ್ಬದ ಮಹತ್ವ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT