ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದಲ್ಲಿದ್ದರೂ ಬಿಡದ ಕೃಷಿಯ ಸೆಳೆತ

ಮಿಶ್ರಬೆಳೆ ಪದ್ಧತಿಯಲ್ಲಿ ಯಶಸ್ಸು ಕಾಣುತ್ತಿದ್ದಾರೆ ಪ್ರಾಂಶುಪಾಲ ರಾಜೇಶ್‌
Last Updated 12 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಉದ್ಯೋಗದಲ್ಲಿದ್ದರೂ, ಕೃಷಿಯ ಸೆಳೆತ ಇವರನ್ನು ಬಿಟ್ಟಿಲ್ಲ. ಇಷ್ಟದ ಬೋಧನಾ ವೃತ್ತಿಯೊಂದಿಗೆ ವ್ಯವಸಾಯವನ್ನೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ರಾಜೇಶ್‌.

ತಾಲ್ಲೂಕಿನ ಸಿಲ್ಕಲ್‍ಪುರ ಗ್ರಾಮದವರಾದ ರಾಜೇಶ್‌ ಅವರು ವಿವೇಕಾನಂದ ಕೈಗಾರಿಕಾ ತರಬೇತಿ ಕೇಂದ್ರದ (ಐಟಿಐ) ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಿದ್ದರೂ ಕೃಷಿ ಎಂದರೆ ಅವರಿಗೆ ಪ್ರಾಣ. ಕೆಲಸದ ನಂತರ ತಮ್ಮ ಜಮೀನಿನಲ್ಲಿ ಕೃಷಿ ಕಾಯಕವನ್ನು ಅವರು ಮುಂದುವರಿಸುತ್ತಿದ್ದಾರೆ.

ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರುವ ರಾಜೇಶ್‌ ಅವರದ್ದು ಮೂಲತಃ ಕೃಷಿ ಕುಟುಂಬ. ತಾತ, ಮುತ್ತಾತರ ಕಾಲದಿಂದಲೂ ಇವರ ಕುಟುಂಬ ಕೃಷಿಯನ್ನೇ ನಂಬಿ ಜೀವನವನ್ನು ಸಾಗಿಸುತ್ತಾ ಬಂದಿದೆ. ಅದೇ ಕಸುಬನ್ನು ಇವರು ಮುಂದುವರಿಸಿದ್ದಾರೆ.

ಬಾಲ್ಯದಿಂದಲೇ ಕೃಷಿಯ ಜೊತೆಗೆ ವಿದ್ಯಾಭ್ಯಾಸ ಮಾಡಿಕೊಂಡು ಬಂದಿರುವ ರಾಜೇಶ್‌ ಅವರು ತಮ್ಮ 15 ಎಕರೆ ಜಮೀನಿನಲ್ಲಿ ಮಿಶ್ರಬೆಳೆಗೆ ಒತ್ತು ನೀಡುತ್ತಿದ್ದಾರೆ.

ಇವರ ತಂದೆ ಒಂದೇ ಬೆಳೆಯನ್ನು ಬೆಳೆಯುತ್ತಿದ್ದರು. ತಾವು ಭಿನ್ನವಾಗಿರಬೇಕು ಎಂಬ ಉದ್ದೇಶದಿಂದ ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸಲು ಆರಂಭಿಸಿದರು.

ಕಬ್ಬು, ಬಾಳೆ, ಜೋಳ, ಟೊಮೆಟೊ, ಬದನೆಕಾಯಿ, ನುಗ್ಗೇಕಾಯಿ, ಮೆಣಸಿನ ಕಾಯಿ, ಸಪೋಟ, ತೆಂಗು, ಮಾವು, ಪಪ್ಪಾಯಿ, ಕಲ್ಲಂಗಡಿ, ಸೌತೆಕಾಯಿ ಸೇರಿದಂತೆ ತರಕಾರಿ ಹಾಗೂಸೊಪ್ಪುಗಳನ್ನು ಬೆಳೆಯುತ್ತಾರೆ. ಬಾಳೆ ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

ಆರ್ಥಿಕ ನಷ್ಟವಿಲ್ಲ: ‘ಈವರೆಗೂ ಮಿಶ್ರ ಬೆಳೆಯಲ್ಲಿ ನನಗೆ ನಷ್ಟವಾಗಿಲ್ಲ. ಈ ಪದ್ದತಿಯಲ್ಲಿ ಒಂದು ಬೆಳೆಯಲ್ಲಿ ನಷ್ಟವಾದರೆ, ಇನ್ನೊಂದು ಬೆಳೆ ಅದನ್ನು ಸರಿದೂಗಿಸುತ್ತದೆ’ ಎಂದು ಹೇಳುತ್ತಾರೆ ರಾಜೇಶ್‌.

15 ಎಕರೆ ಜಮೀನಿನಲ್ಲಿ 6 ಕೊಳವೆ ಬಾವಿಗಳಿವೆ. ಎಲ್ಲಾ ಬೆಳೆಗಳಿಗೆ ಕೊಳವೆ ಬಾವಿಗಳ ನೀರನ್ನೇ ಅವಲಂಬಿಸಿದ್ದಾರೆ. ಅಗತ್ಯವಿರುವ ಕಡೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.

‘ಈ ಭಾಗದಲ್ಲಿ ಕಬಿನಿ ನಾಲೆ ನೀರು ಹರಿಯುತ್ತದೆ. ಹಾಗಾಗಿ ರೈತರಿಗೆ ಅನುಕೂಲವಾಗುತ್ತಿದೆ.ಕೃಷಿ ಜಮೀನುಗಳ ಕೊಳವೆ ಬಾವಿಗಳಲ್ಲಿ ನೀರು ಸದಾ ಇರುತ್ತದೆ. ಇದನ್ನು ಎಲ್ಲ ರೈತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT