ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ನಲಿಯುತ್ತಾ ಕಲಿಯುವ ಶಾಲೆ

ಚಿಕ್ಕದಾದರೂ ಚೊಕ್ಕವಾಗಿದೆ ಗೊಬ್ಬಳಿಪುರ ಕಿರಿಯ ಪ್ರಾಥಮಿಕ ಶಾಲೆ
Last Updated 6 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಕೊಳ್ಳೇಗಾಲ:2019ನೇ ಸಾಲಿನಲ್ಲಿ ರಾಜ್ಯ ಮಟ್ಟದ ನಲಿಕಲಿ ಪ್ರಶಸ್ತಿಗೆ ಆಯ್ಕೆಯಾಗಿರುವ ತಾಲ್ಲೂಕಿನ ಗೊಬ್ಬಳಿಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಕಾರ್ಯಾಚರಿಸುತ್ತಿದೆ.

1967ರಲ್ಲಿ ಸ್ಥಾಪನೆಗೊಂಡಿದ್ದ ಶಾಲೆ ಅಭಿವೃದ್ಧಿ ಕಂಡದ್ದು ಹಂತ ಹಂತವಾಗಿ. ಆರಂಭದಲ್ಲಿ ಜಗಲಿಯಲ್ಲೇ ಕುಳಿತು ಮಕ್ಕಳು ಕೇಳಬೇಕಾಗಿತ್ತು. ನಂತರ ಗುಡಿಸಲಲ್ಲಿ ತರಗತಿಗಳು ನಡೆದವು. ಹಲವು ವರ್ಷಗಳ ನಂತರವಷ್ಟೇ ಶಾಲೆಗೆ ಕಟ್ಟಡದ ಭಾಗ್ಯ ಸಿಕ್ಕಿತು.

52 ಎರಡು ವರ್ಷಗಳ ಅವಧಿಯಲ್ಲಿ ಸಾವಿರಾರು ಮಂದಿಗೆ ಈ ಶಾಲೆ ಜ್ಞಾನವನ್ನು ಧಾರೆ ಎರೆದಿದೆ. ಹಲವರು ಉನ್ನತ ಸ್ಥಾನಕ್ಕೂ ಏರಿದ್ದಾರೆ.

ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಗೆ ಬೋಧನೆ ಮಾಡಲಾಗಿದ್ದು ಸದ್ಯ 57 ಮಕ್ಕಳು ಇದ್ದಾರೆ. ಉತ್ತಮವಾದ ಆಟದ ಮೈದಾನ, 5 ಕೊಠಡಿಗಳು, ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಅಡುಗೆ ಮನೆ, ಆವರಣದಲ್ಲಿ ಅನೇಕ ಮರಗಿಡಗಳು ಇವೆ. ನಲಿಕಲಿ ಕೊಠಡಿ ಇಲ್ಲಿನ ಪ್ರಮುಖ ಆಕರ್ಷಣೆ. ಇದೇ ಕಾರಣಕ್ಕೇ ರಾಜ್ಯ ಮಟ್ಟದ‍ಪ್ರಶಸ್ತಿಯೂ ಶಾಲೆಯನ್ನು ಅರಸಿಕೊಂಡು ಬಂದಿದೆ.

ಇಲ್ಲಿ ಕಲಿತ ಮಕ್ಕಳು5ನೇ ತರಗತಿ ಮುಗಿದ ನಂತರ ಯಾವ ಖಾಸಗಿ ಶಾಲೆಗಳಿಗೂ ಸೇರುವುದಿಲ್ಲ, ಮೊರಾರ್ಜಿ ದೇಸಾಯಿ ವಸತಿಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಏಕಲವ್ಯ ವಸತಿ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆ ಬರೆದು ಉತ್ತಮ ಅಂಕಗಳಿಸಿ ಅಲ್ಲಿಗೇ ದಾಖಲಾಗುತ್ತಿದ್ದಾರೆ ಎಂದು ಹೇಳುತ್ತಾರೆ ಶಿಕ್ಷಕರು ಮತ್ತು ಗ್ರಾಮಸ್ಥರು.

ನಲಿಕಲಿ ಹೊಸ ಮಾದರಿ: ನಲಿಕಲಿ ಪ್ರಶಸ್ತಿಯಲ್ಲಿ ದೊರೆತ ₹5,000 ಜೊತೆಗೆ ಅಲ್ಲಿನ ಶಿಕ್ಷಕರು ಮತ್ತು ಗ್ರಾಮದವರ ಸಹಕಾರದಿಂದ ವಿನೂತನ ನಲಿಕಲಿ ಕೊಠಡಿಗೆ ಬೇಕಾದ ಸಲಕರಣೆಗಳನ್ನು ಖರೀದಿಸಲಾಗಿದ್ದು, ಮಕ್ಕಳು ಪ್ರತಿನಿತ್ಯ ಅದರಲ್ಲಿಯೇ ಕಲಿಯುತ್ತಿದ್ದಾರೆ. ಕುಳಿತುಕೊಳ್ಳಲು ಉತ್ತಮವಾದ ಮೇಜು, ಬರೆಯಲು ಪುಸ್ತಕ ಸೇರಿದಂತೆ ಬಹಳ ಅಚ್ಚು ಕಟ್ಟಾದ ವಸ್ತುಗಳು ಸಹ ಇದೆ.

ನೆರಳು ಬೊಂಬೆಯಾಟ: ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಮಕ್ಕಳು ತೊಡಗಿಕೊಳ್ಳುತ್ತಾರೆ. ನೆರಳು ಬೊಂಬೆಯಾಟ ಇಲ್ಲಿನ ವಿಶೇಷ.ಮಕ್ಕಳಿಗೆ ಪಾಠವನ್ನು ಕಥೆಯ ರೂಪದಲ್ಲಿ ನೆರಳು ಬೊಂಬೆಯಾಟದ ಮೂಲಕ ಹೇಳಿಕೊಡಲಾಗುತ್ತದೆ. ತೊಗಲು ಬೊಂಬೆಯಾಟದ ಪರಿಕಲ್ಪನೆಯ ಅಡಿಯಲ್ಲಿ ನೆರಳು ಬೊಂಬೆಯಾಟ ಇಲ್ಲಿ ಚಿಗುರೊಡೆದಿದೆ. ಇದೊಂದು ಟಿವಿಯ ಮಾದರಿಯಲ್ಲಿದೆ. ಪಠ್ಯದಲ್ಲಿರುವ ಅಂಶಗಳಿಗೆ ಅನುಸಾರವಾಗಿ ಚಿತ್ರಗಳನ್ನು ಬಿಡಿಸಲಾಗುತ್ತದೆ. ಅದನ್ನು ಚಿತ್ರಗಳ ಮೇಲೆ ಬೆಳಕು ಬಿಟ್ಟು ನೆರಳನ್ನು ಪರದೆಯ ಮೇಲೆ ಮೂಡಿಸಲಾಗುತ್ತದೆ.

‘ಮಕ್ಕಳ ಕೈಯಲ್ಲಿ ಬಣ್ಣದ ಪೇಪರ್‌ಗಳನ್ನು ಕತ್ತರಿಸಿ ವಿಶೇಷ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ ಹಾಗೂ ಮಕ್ಕಳಿಂದ ಬಣ್ಣ ಬಣ್ಣದ ಮುಖವಾಡಗಳನ್ನು ಮಾಡಿಸುತ್ತೇವೆ’ ಎಂದು ನಲಿಕಲಿ ಶಿಕ್ಷಕ ಉಮೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸುಂದರ ಕೈತೋಟ: ಗ್ರಾಮದ ಮಕ್ಕಳೇ ಸ್ವತ ಅವರೇ ಕೈ ತೋಟವನ್ನು ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಸುಮಾರು 15 ಜಾತಿಯ ಮರಗಳು ಮತ್ತು ಹೂವಿನ ಗಿಡಗಳನ್ನು ಹಾಕಿದ್ದಾರೆ.

ನಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬೇಕು ಎಂಬ ಗುರಿ ಿದೆ ಮಕ್ಕಳ ಶೈಕಣಿಕ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ
ಶಾಂತಮೂರ್ತಿ, ಶಿಕ್ಷಕ

ಇಲ್ಲಿ ಓದಿದ ವಿದ್ಯಾರ್ಥಿಗಳು ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನಾವೂ ಉನ್ನತ ಹುದ್ದೆಗಳಿಗೆ ಹೋಗಿ ಶಾಲೆಗೆ ಕೀರ್ತಿ ತರುತ್ತೇವೆ
ಅನುಷಾ, ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT