ಚಾಮರಾಜನಗರ: ಕಾಂಗ್ರೆಸ್‌ನ ‘ಭದ್ರಕೋಟೆ’ ಎಂದೇ ಗುರುತಿಸಿಕೊಂಡಿರುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಗ್ಗಂಟು ಮುಂದುವರಿದಿದೆ. ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬ ವಿಚಾರದಲ್ಲಿ ವರಿಷ್ಠರು ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ನಿರ್ಧಾರ ಪ್ರಕ್ರಿಯೆ ಕೊನೆ ಹಂತದಲ್ಲಿ ಶುಕ್ರವಾರ ಬಹುತೇಕ ಅಂತಿಮವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ, ಏಳೆಂಟು ಚುನಾವಣೆಗಳಿಂದ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ಇಷ್ಟೊಂದು ಪ್ರಯಾಸ ಪಟ್ಟ ಉದಾಹರಣೆ ಇಲ್ಲ.
2009ರಲ್ಲಿ ಧ್ರುವನಾರಾಯಣ ಅವರು ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಬಳಿಕ ನಂತರದ ಎರಡು ಚುನಾವಣೆಗಳಲ್ಲೂ (2014 ಮತ್ತು 2019) ಅವರೇ ಅಭ್ಯರ್ಥಿಯಾಗಿದ್ದರು. ಅವರು ಹಾಲಿ ಸಂಸದರಾಗಿದ್ದರಿಂದ ಟಿಕೆಟ್ ಅವರಿಗೆ ಖಚಿತವಾಗಿತ್ತು.
‘2009ಕ್ಕಿಂತಲೂ ಮೊದಲಿನ ಚುನಾವಣೆಗಳಲ್ಲೂ ಅಭ್ಯರ್ಥಿ ಆಯ್ಕೆಗೆ ನಿರ್ಧಾರ ಕೈಗೊಳ್ಳಲು ವರಿಷ್ಠರು ಇಷ್ಟೊಂದು ಸಮಯ ತೆಗೆದುಕೊಂಡಿರಲಿಲ್ಲ’ ಎಂದು ಹೇಳುತ್ತಾರೆ ಪಕ್ಷದ ಮುಖಂಡರು.
‘ಧ್ರುವನಾರಾಯಣ ಅವರು ಇದ್ದಿದ್ದರೆ, ಈ ಬಾರಿಯೂ ಇಂತಹ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಒಂದು ವೇಳೆ ಅವರು ರಾಜ್ಯ ರಾಜಕಾರಣಕ್ಕೆ ಬಂದಿರುತ್ತಿದ್ದರೂ, ಲೋಕಸಭಾ ಅಭ್ಯರ್ಥಿ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು’ ಎಂದು ಹೇಳುತ್ತಾರೆ ಅವರ ಅಭಿಮಾನಿಗಳು.
ಪ್ರಯಾಸ ಪಟ್ಟಿದ್ದ ಬಿಜೆಪಿ: 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿತ್ತು. ನಾಮಪತ್ರ ಸಲ್ಲಿಕೆ ಆರಂಭವಾಗುವ ದಿನ ಸಮೀಪಿಸುತ್ತಿದ್ದರೂ ಅಭ್ಯರ್ಥಿಯ ಹೆಸರು ಘೋಷಣೆ ಆಗಿರಲಿಲ್ಲ.
ಕೊನೆ ಗಳಿಗೆಯಲ್ಲಿ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಪಕ್ಷ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಕಳೆದ ಬಾರಿ ಬಿಜೆಪಿಯಲ್ಲಿ 12 ಮಂದಿ ಆಕಾಂಕ್ಷಿಗಳು ಇದ್ದರು. ಧ್ರುವನಾರಾಯಣ ವಿರುದ್ಧ ಗೆಲ್ಲಬೇಕಾದರೆ ಪ್ರಭಾವಿ ಅಭ್ಯರ್ಥಿಯೇ ಆಗಬೇಕು ಎಂಬ ಉದ್ದೇಶದಿಂದ ಸ್ಥಳೀಯ ಮುಖಂಡರು ದುಂಬಾಲು ಬಿದ್ದು, ‘ರಾಜಕೀಯದಿಂದ ನಿವೃತ್ತಿಯಾಗುವೆ’ ಎಂದು ಹೇಳಿದ್ದ ಶ್ರೀನಿವಾಸ ಪ್ರಸಾದ್ ಅವರನ್ನು ಸ್ಪರ್ಧಿಸುವಂತೆ ಒಪ್ಪಿಸಿದ್ದರು.
ಈ ಬಾರಿ ಬಿಜೆಪಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಅಭ್ಯರ್ಥಿ ಹೆಸರು ಘೋಷಿಸಿದೆ. ಅಭ್ಯರ್ಥಿಯಾಗಿರುವ ಎಸ್.ಬಾಲರಾಜ್, ಕ್ಷೇತ್ರ ಪ್ರವಾಸ ಆರಂಭಿಸಿ ಪ್ರಚಾರ ಕಾರ್ಯಕ್ಕೂ ಚಾಲನೆ ನೀಡಿದ್ದಾರೆ.
- ಅಭ್ಯರ್ಥಿ ಆಯ್ಕೆ ವಿಳಂಬ ಯಾಕೆ?
ಅಭ್ಯರ್ಥಿ ಆಯ್ಕೆಗಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಮಗ ಸುನೀಲ್ ಬೋಸ್ ಮತ್ತು ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರ ಹೆಸರುಗಳನ್ನು ಎಐಸಿಸಿಗೆ ಕಳುಹಿಸಲಾಗಿದೆ. ಮಹದೇವಪ್ಪ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಇಷ್ಟವಿಲ್ಲ. ಅದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಬದಲಿಗೆ ತಮ್ಮ ಮಗನಿಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದಾರೆ. ‘ಕ್ಷೇತ್ರ ವ್ಯಾಪ್ತಿಯ ಜನರಿಗೆ ಸುನೀಲ್ ಬೋಸ್ ಹೆಚ್ಚು ಪರಿಚಯ ಇಲ್ಲ. ಪಕ್ಷ ನಡೆಸಿರುವ ಆಂತರಿಕ ಸಮೀಕ್ಷೆಯೂ ಅವರ ಪರವಾಗಿ ಸ್ಪಷ್ಟವಾದ ಅಭಿಪ್ರಾಯ ವ್ಯಕ್ತವಾಗಿಲ್ಲ. ಹೀಗಾಗಿ ಚುನಾವಣೆಯಲ್ಲಿ ಗೆಲುವಿಗೆ ಬೇಕಾದಷ್ಟು ಮತಗಳನ್ನು ಸೆಳೆಯಲು ಅವರಿಗೆ ಸಾಧ್ಯವೇ ಎಂಬ ಪ್ರಶ್ನೆ ವರಿಷ್ಠರನ್ನು ಕಾಡುತ್ತಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರಾಗಿರುವ ನಂಜುಂಡಸ್ವಾಮಿ ಅವರ ಬಗ್ಗೆ ರಾಜ್ಯ ನಾಯಕರು ಹೆಚ್ಚು ಒಲವು ತೋರುತ್ತಿಲ್ಲ ಎಂದು ಗೊತ್ತಾಗಿದೆ. ‘ಕ್ಷೇತ್ರ ವ್ಯಾಪ್ತಿಯ ಏಳು ಶಾಸಕರು ಸಿ.ಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ವರಿಷ್ಠರು ಕೂಡ ಮಹದೇವಪ್ಪ ಅವರೇ ಅಭ್ಯರ್ಥಿಯಾಗಬೇಕು ಎಂದು ಹೇಳುತ್ತಿದ್ದಾರೆ. ಆದರೆ ಅವರು ಸ್ಪರ್ಧಿಸಲು ಆಸಕ್ತಿ ತೋರುತ್ತಿಲ್ಲ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.