ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಈದ್‌‌ ಸಂಭ್ರಮ ಮರೆಮಾಚಿದ ಕೋವಿಡ್‌

ಬಟ್ಟೆ ಖರೀದಿಗೆ ವಿರಾಮ, ಬಡ ಬಗ್ಗರಿಗೆ ಹೆಚ್ಚಿನ ದಾನ, ಮನೆಯಲ್ಲೇ ಪ್ರಾರ್ಥನೆ
Last Updated 24 ಮೇ 2020, 3:12 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ಮಹಾಮಾರಿ ಈ ಬಾರಿ ಮುಸ್ಲಿಮರ ಈದ್‌ ಉಲ್‌ ಫಿತ್ರ್ ಹಬ್ಬದ ಸಂಭ್ರಮವನ್ನು ಕಸಿದಿದೆ. ಜಗತ್ತಿನಾದ್ಯಂತ ಮುಸ್ಲಿಮರು ಅತ್ಯಂತ ಸಂಭ್ರಮ ಹಾಗೂ ಅದ್ಧೂರಿಯಿಂದ ಆಚರಿಸುವ ಹಬ್ಬದ ಮೇಲೆ ಲಾಕ್‌ಡೌನ್‌ ಕರಿಛಾಯೆ ಆವರಿಸಿದೆ.

ಜಿಲ್ಲೆಯಲ್ಲಿ ಸೋಮವಾರ (ಮೇ 25ರಂದು) ಈದ್‌ ಹಬ್ಬ ನಡೆಯುತ್ತಿದ್ದು, ಅತ್ಯಂತ ಸರಳವಾಗಿ ಮನೆಗಳಲ್ಲೇ ಆಚರಿಸಲು ಸಮುದಾಯವರು ಸಿದ್ಧತೆ ನಡೆಸಿಕೊಂಡಿದ್ದಾರೆ.

ಲಾಕ್‌ಡೌನ್‌ ಇರುವುದರಿಂದ ಮಸೀದಿ ಮತ್ತು ಈದ್ಗಾ ಮೈದಾನಗಳಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ. ಕೈ ಕುಲುಕಿ, ಪರಸ್ಪರ ತಬ್ಬಿ ಶುಭಾಶಯ ವಿನಿಮಯ ಮಾಡಿಕೊಳ್ಳುವಂತಿಲ್ಲ.ನೆಂಟರಿಷ್ಟರು, ಸ್ನೇಹಿತರ ಮನೆಗಳಿಗೂ ಹೋಗಿ ಸಂಭ್ರಮ ಪಡುವಂತಿಲ್ಲ. ಹಾಗಾಗಿ, ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲೇ ಪ್ರಾರ್ಥನೆ ಮಾಡಬೇಕಿದೆ.

ಬಟ್ಟೆ ಖರೀದಿ ಇಲ್ಲ: ಈದ್‌ ಆಚರಣೆಗಾಗಿ ಪ್ರತಿಯೊಬ್ಬ ಮುಸ್ಲಿಮರು ಹೊಸ ಬಟ್ಟೆ ಖರೀದಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಮಹಿಳೆಯರು, ಮಕ್ಕಳು, ಪುರುಷರು.... ಎಲ್ಲರೂ ಭರ್ಜರಿಯಾಗಿ ಬಟ್ಟೆ ಖರೀದಿ ಮಾಡುತ್ತಾರೆ. ಆದರೆ, ಕೋವಿಡ್‌–19ನಿಂದಾಗಿ ಈ ವರ್ಷ ಯಾರೂ ಬಟ್ಟೆಗಳ ಖರೀದಿಗೆ ಹೆಚ್ಚು ಒತ್ತು ನೀಡಿಲ್ಲ. ಅದಕ್ಕೆ ಖರ್ಚು ಮಾಡುವ ಹಣವನ್ನು ಬಡವರಿಗೆ ದಾನ ಮಾಡುವುದು ಅಥವಾ ಆಹಾರ, ಧಾನ್ಯಗಳನ್ನು ನೀಡುವುದಕ್ಕೆ ವ್ಯಯಿಸುತ್ತಿದ್ದಾರೆ.

ಕೋವಿಡ್‌–19 ಸಂಕಷ್ಟದ ಕಾಲದಲ್ಲಿ ಅನಗತ್ಯವಾಗಿ ಬಟ್ಟೆಗಳಿಗೆ ಖರ್ಚು ಮಾಡಬೇಡಿ, ಕಷ್ಟದಲ್ಲಿರುವ ಬಡವರಿಗೆ ದಾನ ಮಾಡುವಂತೆ ಧರ್ಮಗುರುಗಳು ಸೂಚನೆ ನೀಡಿದ್ದಾರೆ. ಅದರಂತೆ ಆರ್ಥಿಕ ಸಬಲಾಗಿರುವವರು ಬಡವರಿಗೆ ಹೆಚ್ಚು ಹೆಚ್ಚು ದಾನ ಮಾಡುತ್ತಿದ್ದಾರೆ.

‘ಇಡೀ ಜಗತ್ತು ಈಗ ಸಂಕಷ್ಟದಲ್ಲಿದೆ. ಬಡವರು ಕಷ್ಟ ಪಡುತ್ತಿದ್ದಾರೆ. ರಂಜಾನ್‌ ಸಂದರ್ಭದಲ್ಲಿ ಬಡವರಿಗೆ ದಾನ ಮಾಡಬೇಕು ಎಂಬುದು ನಿಯಮ. ಒಂದು ಲಕ್ಷ ರೂಪಾಯಿ ಆದಾಯ ಇದ್ದರೆ ಕನಿಷ್ಠ ₹ 2,500 ದಾನ ಮಾಡಬೇಕು. ಬಟ್ಟೆ ಬರೆಗಳಿಗೆ ಅನಗತ್ಯವಾಗಿ ಖರ್ಚು ಮಾಡಬೇಡಿ. ಅದನ್ನು ದಾನಕ್ಕೆ ಬಳಸಿ ಎಂದು ದೇಶದಾದ್ಯಂತ ಧಾರ್ಮಿಕ ಮುಖಂಡರು ಕರೆ ನೀಡಿದ್ದಾರೆ. ಜಿಲ್ಲೆಯಲ್ಲೂ ಸಮುದಾಯದವರು ಅದನ್ನು ಪಾಲನೆ ಮಾಡುತ್ತಿದ್ದಾರೆ. ದಾನ ಮಾಡುವ ಸಂದರ್ಭದಲ್ಲಿ ಜಾತಿ ಧರ್ಮ ನೋಡುತ್ತಿಲ್ಲ. ಎಲ್ಲರಿಗೂ ನೆರವಾಗುತ್ತಿದ್ದಾರೆ’ ಎಂದು ಚಾಮರಾಜನಗರದ ಧರ್ಮಗುರುಗಳಾದ ಜಾಫರ್‌ ಹುಸೇನ್‌ ಖಾಸ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಬ್ಬದ ದಿನ ಮಸೀದಿಗಳಲ್ಲಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ‍್ರಾರ್ಥನೆ ನಡೆಯುವುದಿಲ್ಲ. ಕೋವಿಡ್‌–19 ಕಾರಣಕ್ಕೆ ಪರಸ್ಪರ ಕೈಕುಲುಕಿ, ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುವಂತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಬಹುದು. ಎಲ್ಲರಿಗೂ ಈ ಸೂಚನೆ ನೀಡಲಾಗಿದೆ’ ಎಂದು ಅವರು ಹೇಳಿದರು.

‘ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳುಗಳಿಂದ ಯಾರಿಗೂ ಆದಾಯ ಇಲ್ಲ. ಆದರೆ, ರಂಜಾನ್‌ಗಾಗಿಯೇ ಕೂಡಿಟ್ಟಿರುತ್ತಾರೆ. ಅದನ್ನೇ ಎಲ್ಲರೂ ಬಳಸುತ್ತಿದ್ದಾರೆ. ಈ ವರ್ಷ ಸಮುದಾಯದವರು ನಿಗದಿಗಿಂತಲೂ ಹೆಚ್ಚು ದಾನ ಧರ್ಮ ಮಾಡಿದ್ದಾರೆ’ ಎಂದರು.

ಸಂಭ್ರಮವೇ ಇಲ್ಲ: ‘ರಂಜಾನ್‌, ಈದ್‌ ಉಲ್‌ ಫಿತ್ರ್‌ ಅಂದರೆ ಮಕ್ಕಳಿಗೆ, ಮಹಿಳೆಯರಿಗೆ ಎಲ್ಲರಿಗೂ ಖುಷಿ. ನಮ್ಮ ಧರ್ಮದಲ್ಲಿ ಅತ್ಯಂತ ಸಂಭ್ರಮದಲ್ಲಿ ಆಚರಿಸುವ ಹಬ್ಬ ಇದು. ಆದರೆ, ಈ ವರ್ಷ ಕೋವಿಡ್‌–19 ಲಾಕ್‌ಡೌನ್‌ನಿಂದಾಗಿ ಏನೂ ವಿಶೇಷಗಳಿಲ್ಲ. ಮನೆಯಲ್ಲೇ ಪ್ರಾರ್ಥನೆ, ಧಾರ್ಮಿಕ ಆಚರಣೆಗಳನ್ನು ಮಾತ್ರ ಮಾಡುತ್ತಿದ್ದೇವೆ’ ಎಂದು ನಗರಸಭಾ ಸದಸ್ಯೆ ತೌಸಿಯಾ ಭಾನು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಂಜಾನ್‌ ಸಮಯದಲ್ಲಿ ಬಟ್ಟೆ ಹಾಗೂ ಇನ್ನಿತರ ವಸ್ತುಗಳ ಖರೀದಿ ಭರಾಟೆ ಹೆಚ್ಚಾಗಿರುತ್ತದೆ. ಈ ವರ್ಷ ಅಂತಹದ್ದು ಏನಿಲ್ಲ. ಧರ್ಮಗುರುಗಳ ಸೂಚನೆಯಂತೆ ವಸ್ತ್ರಗಳನ್ನು ಖರೀದಿಸುತ್ತಿಲ್ಲ’ ಎಂದು ಅವರು ಹೇಳಿದರು.

ಅಂಗಡಿಗಳಲ್ಲಿ ವ್ಯಾಪಾರ ಕಡಿಮೆ
ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಕೆ ಮಾಡಿದ ನಂತರ ಬಟ್ಟೆ ಅಂಗಡಿಗಳು ಈಗಷ್ಟೇ ತೆರೆದಿವೆ. ಪೂರ್ಣ ಪ್ರಮಾಣದಲ್ಲಿ ಇನ್ನೂ ವ್ಯಾಪಾರ ಆರಂಭವಾಗಿಲ್ಲ. ಸಾಮಾನ್ಯವಾಗಿ ರಂಜಾನ್‌ ಸಮಯದಲ್ಲಿ ಬಟ್ಟೆಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಈ ಬಾರಿ ಸ್ವಲ್ಪ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

‘ಎಂದಿನ ಬೇಡಿಕೆ ಇಲ್ಲ. ಆದರೆ, ಬಟ್ಟೆಗಳು ಮಾರಾಟವಾಗುತ್ತಿವೆ. ಹೊಸ ದಾಸ್ತಾನು ಬಂದಿಲ್ಲ. ಇರುವ ವಸ್ತ್ರಗಳನ್ನೇ ಮಾರಾಟ ಮಾಡುತ್ತಿದ್ದೇವೆ’ ಎಂದು ಬಟ್ಟೆ ವ್ಯಾಪಾರಿ ಬನ್‌ವೀರ್‌ ಸಿಂಗ್‌ ಹೇಳಿದರು.

’ಲಾಕ್‌ಡೌನ್‌ನ ಮೊದಲ ಅವಧಿಗೆ ಹೋಲಿಸಿದರೆ ವ್ಯಾಪಾರ ತುಂಬಾ ಕಡಿಮೆ. ಮಾರ್ಚ್,‌ ಏಪ್ರಿಲ್‌ನಿಂದ ಹಿಡಿದು ಆಷಾಢ ಮಾಸದವರೆಗೆ ನಮ್ಮ ವಹಿವಾಟು ಹೆಚ್ಚು ಇರುತ್ತದೆ. ಈ ವರ್ಷ ಏನೇನೂ ಇಲ್ಲ. ಮೊದಲ ಸ್ಥಿತಿಗೆ ಬರಲು ಇನ್ನಷ್ಟು ಸಮಯ ಬೇಕು’ ಎಂದು ಹಿರಿಯ ಬಟ್ಟೆ ವ್ಯಾಪಾರಿ ಬಿವಿಎಸ್‌ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಈದ್‌ ಉಲ್‌ ಫಿತ್ರ್‌ ನಾಳೆ
ಜಿಲ್ಲೆಯಲ್ಲಿ ಸೋಮವಾರ ಈದ್‌ ಉಲ್‌ ಫಿತ್ರ್‌ ಆಚರಣೆಗೊಳ್ಳಲಿದೆ. ದಕ್ಷಿಣ ಕನ್ನಡದಲ್ಲಿ ಮುಸ್ಲಿಮರು ಭಾನುವಾರವೇ ಹಬ್ಬ ಆಚರಿಸಲಿದ್ದಾರೆ.

‘ಚಂದ್ರ ದರ್ಶನವಾದ ಮರುದಿನ ಹಬ್ಬ ಆಚರಿಸುವುದು ವಾಡಿಕೆ. ಚಂದ್ರ ಕಾಣದಿದ್ದರೆ 30 ದಿನಗಳ ಉಪ‍ವಾಸ ಆಚರಿಸಿ, 31ನೇ ದಿನ ಈದ್‌ ಆಚರಿಸಲಾಗುತ್ತದೆ. ನಮ್ಮಲ್ಲಿ ಸೋಮವಾರ ಆಚರಿಸುವುದು ಬಹುತೇಕ ಖಚಿತ’ ಎಂದುಜಾಫರ್‌ ಹುಸೇನ್‌ ಖಾಸ್ಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT