ಶುಕ್ರವಾರ, ಜೂನ್ 25, 2021
29 °C
ಕಾಣದ ಖರೀದಿ ಉತ್ಸಾಹ, ವಿನಾಯಕನ ಪ್ರತಿಮೆ ಖರೀದಿಸುವವರಿಲ್ಲ, ಹೂವುಗಳಿಗೆ ಮಾತ್ರ ಬೇಡಿಕೆ

ಚಾಮರಾಜನಗರ: ಗಣೇಶನ ಹಬ್ಬದ ಮೇಲೆ ಕೋವಿಡ್‌ ಕರಿಛಾಯೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಹಿಂದೂಗಳು ಅದ್ಧೂರಿಯಾಗಿ ಹಾಗೂ ಸಂಭ್ರಮದಿಂದ ಆಚರಿಸುವ ಗಣೇಶನ ಹಬ್ಬದ ಮೇಲೆ ಈ ವರ್ಷ ಕೋವಿಡ್‌–19 ಕರಿಛಾಯೆ ಆವರಿಸಿದೆ.

ಕೊರೊನಾ ವೈರಸ್‌ ಸೋಂಕು ತಡೆಯುವ ಪ್ರಯತ್ನದ ಭಾಗವಾಗಿ, ಸಾರ್ವಜನಿಕವಾಗಿ ಹಾಗೂ ಮನೆಗಳಲ್ಲಿ ಆಚರಿಸಲಾಗುವ ಗಣೇಶೋತ್ಸವಕ್ಕೆ ಸರ್ಕಾರ ಹಲವು ಷರತ್ತುಗಳನ್ನು ಹಾಕಿರುವುದರಿಂದ ಈ ಬಾರಿ ಎಲ್ಲರೂ ಸರಳ ಆಚರಣೆಗೆ ಮುಂದಾಗಿದ್ದಾರೆ.

ಸಾರ್ವಜನಿಕ ಗಣೇಶೋತ್ಸವದಲ್ಲಿ ಹೆಚ್ಚು ಜನರು ಭಾಗವಹಿಸಲು ಅವಕಾಶ ಇಲ್ಲದಿರುವುದರಿಂದ, ಈ ಬಾರಿ ಅದ್ಧೂರಿ ಮೆರವಣಿಗೆಗಳೂ ಇಲ್ಲ. ಪ್ರತಿ ವರ್ಷ ಗಣೇಶನನ್ನು ಪ್ರತಿಷ್ಠಾಪಿಸುವ ಸಂಘ ಸಂಸ್ಥೆಗಳು ಈ ವರ್ಷ ಅತ್ಯಂತ ಸರಳವಾಗಿ ಆಚರಣೆ ಮಾಡಲಿವೆ. ಸಾಂಪ್ರದಾಯಿಕ, ಧಾರ್ಮಿಕ ವಿಧಿವಿಧಾನಗಳಿಗೆ ಮಾತ್ರ ಹಬ್ಬ ಮೀಸಲಾಗಿದೆ. 

ತಯಾರಿಕರಿಗೆ ನಷ್ಟ: ಪ್ರತಿ ವರ್ಷ ಗಣೇಶನ ವಿಗ್ರಹಗಳನ್ನು ತಯಾರಿಸಿ, ಮಾರಾಟ ಮಾಡಿ ಒಂದಷ್ಟು ಆದಾಯ ಗಳಿಸುತ್ತಿದ್ದವರಿಗೆ ಈ ವರ್ಷ ನಷ್ಟ ಉಂಟಾಗಿದೆ. ಜನರು ಮಳಿಗೆಗಳಿಗೆ ಮೂರ್ತಿಗಳ ಖ‌ರೀದಿಗೆ ಬರುತ್ತಿಲ್ಲ. ಮನೆಗಳಲ್ಲಿ ವೈಯಕ್ತಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವವರು ಮಾತ್ರ ಪುಟ್ಟ ಪುಟ್ಟ ವಿಗ್ರಹಗಳನ್ನು ಕೊಂಡುಕೊಳ್ಳುತ್ತಿದ್ದಾರೆ. 

‘ಕೋವಿಡ್‌ನಿಂದಾಗಿ ನಮ್ಮ ವಹಿವಾಟಿಗೆ ಧಕ್ಕೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಶೇ 20ರಷ್ಟು ವ್ಯಾಪಾರ ಆಗಿಲ್ಲ’ ಎಂದು ತಯಾರಿಕರು ಹಾಗೂ ವ್ಯಾಪಾರಿಗಳು ಹೇಳುತ್ತಿದ್ದಾರೆ. 

‘ನಾವು ಐದಾರು ತಿಂಗಳ ಹಿಂದೆಯೇ ವಿಗ್ರಹಗಳ ತಯಾರಿಕೆ ಆರಂಭಿಸುತ್ತೇವೆ. ಈ ವರ್ಷವೂ ಜನವರಿ ಫೆಬ್ರುವರಿಯಲ್ಲೇ ಸಿದ್ಧತೆ ಆರಂಭಿಸಿದ್ದೆವು. ಕೋವಿಡ್‌–19 ಬರುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಮಾರ್ಚ್‌ನಲ್ಲಿ ಸೋಂಕು ಹರಡಲು ಆರಂಭವಾದ ಬಳಿಕವೂ ಗಣೇಶನ ಹಬ್ಬದ ಸಂದರ್ಭದಲ್ಲಿ ನಿಯಂತ್ರಣಕ್ಕೆ ಬರಬಹುದು ಎಂದು ಅಂದುಕೊಂಡಿದ್ದೆವು. ಈಗ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಸರ್ಕಾರವು ಹಬ್ಬದ ಆಚರಣೆಗೆ ಹಲವು ನಿಬಂಧನೆಗಳನ್ನು ಹೇರಿರುವುದರಿಂದ ಜನರು ಮೂರ್ತಿಗಳನ್ನು ಖರೀದಿಸುತ್ತಿಲ್ಲ. ನಾಲ್ಕು ಅಡಿಗಳಿಗಿಂತ ದೊಡ್ಡದಾದ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಅವಕಾಶ ಇಲ್ಲದೇ ಇರುವುದರಿಂದ ದೊಡ್ಡ ವಿಗ್ರಹಗಳಿಗೆ ಬೇಡಿಕೆಯೇ ಇಲ್ಲ’ ಎಂದು ಗಣಪತಿ ಮೂರ್ತಿ ತಯಾರಕ ಅಮಚವಾಡಿಯ ಸಿದ್ದಪ್ಪಾಜಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಹಬ್ಬದ ಮುನ್ನಾದಿನ ನಮಗೆ ವಿಗ್ರಹಗಳನ್ನು ಕಟ್ಟಿ ಕೊಡುವುದಕ್ಕೆ ಆಗುವುದಿಲ್ಲ. ಅಷ್ಟು ಗ್ರಾಹಕರು ಇರುತ್ತಾರೆ, ಬೇಡಿಕೆಯೂ ಹೆಚ್ಚಿರುತ್ತದೆ. ಈ ವರ್ಷ, ವ್ಯಾಪಾರವೇ ಆಗುತ್ತಿಲ್ಲ. ಅಪರೂಪಕ್ಕೆ ಎಂಬಂತೆ ಒಬ್ಬರೋ ಇಬ್ಬರು ಬಂದು ಚಿಕ್ಕದಾದ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ’ ಎಂದು ಗ್ರಾಹಕರ ನಿರೀಕ್ಷೆಯಲ್ಲಿದ್ದ ಶ್ರುತಿ ಅವರು ಹೇಳಿದರು. 

ಏನು ಮಾಡುವುದು ಗೊತ್ತಾಗುತ್ತಿಲ್ಲ: ಪ್ರತಿ ವರ್ಷದಂತೆ ಈ ವರ್ಷವೂ ತುಂಬಾ ಮೂರ್ತಿಗಳನ್ನು ತಯಾರಿಸಿದ್ದೇವೆ. ಇಲ್ಲಿ ನೋಡಿದರೆ ವ್ಯಾಪಾರವೇ ಇಲ್ಲ. ಈ ವರ್ಷ ಪೂರ್ಣ ನಷ್ಟ ಖಚಿತ. ಮಾರಾಟವಾಗದೇ ಇದ್ದರೆ ಮೂರ್ತಿಗಳನ್ನು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಮಣ್ಣಿನ ಮೂರ್ತಿಗಳಾಗಿರುವುದರಿಂದ ಜಾಗರೂಕತೆಯಿಂದ ದಾಸ್ತಾನು ಮಾಡಬೇಕು. ಇಟ್ಟಲ್ಲಿಯೇ ಒಡೆದು ಹೋಗುತ್ತವೆ. ಇಲ್ಲದೇ ಹೋದರೆ, ಬಣ್ಣ ಮಾಸುತ್ತದೆ. ಮುಂದಿನ ವರ್ಷ ಮತ್ತೊಬ್ಬೆ ಬಣ್ಣ ಕೊಡಬೇಕಾಗುತ್ತದೆ’ ಎಂದು ಮೂರ್ತಿ ತಯಾರಿಸಿ, ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿರುವ ಮಹೇಶ್‌ ಅವರು ಹೇಳಿದರು. 

ಖರೀದಿ ಉತ್ಸಾಹ: ಈ ಬಾರಿ ಕೋವಿಡ್‌ ಪರಿಣಾಮದಿಂದ ಜನರಲ್ಲೂ ಹಬ್ಬದ ಖರೀದಿ ಉತ್ಸಾಹ ಹೆಚ್ಚು ಕಂಡು ಬರಲಿಲ್ಲ. ಮಾರುಕಟ್ಟೆಯಲ್ಲಿ ಹೆಚ್ಚು ಜನಜಂಗುಳಿ ಕಾಣಲಿಲ್ಲ. ತರಕಾರಿ, ಹೂವು, ಗ್ರಂಥಿಗೆ ಅಂಗಡಿಗಳಲ್ಲಿ ಸ್ವಲ್ಪ ಜನರಿದ್ದರು. ಬಾಳೆ ಕಂದು, ಮಾವಿನ ಸೊಪ್ಪು ಮಾರಾಟಗಾರರಿಗೂ ಗ್ರಾಹಕರು ಕಡಿಮೆ ಇದ್ದರು. 

ಹೂವಿನ ಬೆಲೆ ಗಗನಕ್ಕೆ

ಹಬ್ಬದ ಮುನ್ನಾದಿನ ಮಾರುಕಟ್ಟೆಯಲ್ಲಿ ಹೂವಿಗೆ ಹೆಚ್ಚು ಬೇಡಿಕೆ ಇದ್ದುದರಿಂದ ಬೆಲೆಯೂ ಗಗನಕ್ಕೆ ಏರಿದೆ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿ ಕನಕಾಂಬರಕ್ಕೆ ₹1,500, ಮಲ್ಲಿಗೆಗೆ ₹600, ಸೇವಂತಿಗೆಗೆ ₹200–₹250, ಸುಂಗಧರಾಜ ಹೂವಿಗೆ ಕೆಜಿಗೆ ₹240–₹280, ಚೆಂಡು ಹೂ ಕೆಜಿಗೆ ₹50 ಇತ್ತು. 

‘ಗೌರಿ ಗಣೇಶ ಹಬ್ಬದ ಸಮಯದಲ್ಲಿ ಹೂವಿಗೆ ಹೆಚ್ಚು ಬೇಡಿಕೆ ಇರುತ್ತದೆ. ಹಾಗಾಗಿ, ಬೆಲೆ ಹೆಚ್ಚಾಗಿದೆ. ಎರಡು ದಿನ ಮಾತ್ರ ಈ ಬೆಲೆ. ನಂತರ ಇಳಿಯುತ್ತದೆ’ ಎಂದು ಬಿಡಿಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ತರಕಾರಿಗಳ ಪೈಕಿ ಬೀನ್ಸ್‌ ತುಟ್ಟಿಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ₹50 ಇದ್ದ ಕೆಜಿ ಬೀನ್ಸ್‌ ಬೆಲೆ ₹80 ಆಗಿದೆ. ಕ್ಯಾರೆಟ್‌ ಬೆಲೆ ₹10ನಷ್ಟು ಜಾಸ್ತಿಯಾಗಿದೆ. ಹಣ್ಣುಗಳ ಪೈಕಿ ಏಲಕ್ಕಿ ಬಾಳೆಗೆ ಕೆಜಿಗೆ ₹50–₹60 ಇತ್ತು. ಹೊರಗಡೆ ಇದಕ್ಕಿಂತಲೂ ಸ್ವಲ್ಪ ಹೆಚ್ಚು ಬೆಲೆ ಇತ್ತು. 

ಗೌರಿ ಪೂಜೆ, ಬಾಗಿನ ಅರ್ಪಣೆ

ಗಣೇಶ ಚತುರ್ಥಿಯ ಮುನ್ನಾದಿನವಾದ ಶುಕ್ರವಾರ ಜಿಲ್ಲೆಯಾದ್ಯಂತ ಮನೆಗಳು, ದೇವಸ್ಥಾನಗಳಲ್ಲಿ ಗೌರಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. 

ಮನೆಗಳಲ್ಲಿ ಮಹಿಳೆಯರು ಗೌರಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ವಿಶೇಷ ಸಿಹಿ ತಿಂಡಿಗಳನ್ನು ಸಿದ್ಧಪಡಿಸಿ ನೈವೇದ್ಯ ಮಾಡಿದರು. ಮನೆಗೆ ಬಂದ ಸುಮಂಗಲಿಯರಿಗೆ ಮೊರದ ಬಾಗಿನವನ್ನೂ ಅರ್ಪಿಸಿದರು. 

ದೇವಾಲಯಗಳಲ್ಲೂ ವಿಶೇಷ ಗೌರಿ ಪೂಜೆ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು