ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸುರಿದ ಮಳೆ; ನೆಲಕ್ಕೆ ಬಾಗಿದ ಬೆಳೆ

Last Updated 31 ಡಿಸೆಂಬರ್ 2020, 15:12 IST
ಅಕ್ಷರ ಗಾತ್ರ

ಚಾಮರಾಜನಗರ/ಸಂತೇಮರಹಳ್ಳಿ: ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಗುರುವಾರ ಬೆಳಿಗ್ಗೆ ಮಳೆಯಾಗಿದ್ದು, ಅಕಾಲಿಕ ಮಳೆ ರೈತರಲ್ಲಿ ಆತಂಕ ಸೃಷ್ಟಿಸಿದೆ.

ಬೆಳಿಗ್ಗೆ ಸ್ವಲ್ಪ ಹೊತ್ತು ಮಳೆಯಾದ ಬಳಿಕ ಮದ್ಯಾಹ್ನದವರೆಗೂ ಆಗಾಗ ತುಂತುರು ಮಳೆಯಾಯಿತು. ಇದರಿಂದಾಗಿ ಕಟಾವಿನ ಹಂತಕ್ಕೆ ಬಂದಿದ್ದ ಭತ್ತ, ಮುಸುಕಿನ ಜೋಳ ಬೆಳೆಗಳು ನೆಲಕ್ಕೆ ಬಾಗಿದವು. ಬಿಸಿಲು ಕಾದು ತೇವಾಂಶ ಹೋಗುವವರೆಗೂ ಕಟಾವು ಮಾಡಲು ಕಾಯಬೇಕಾಗಿದೆ. ಕನಿಷ್ಠ ಎರಡು ಮೂರು ದಿನಗಳ ಕಾಲ ರೈತರು ಕಟಾವು ಮಾಡಬಾರದು ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಜಿಲ್ಲೆಯ ಎಲ್ಲ ಕಡೆಗಳಲ್ಲೂ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಹಿಂಗಾರು ಮಳೆ ನವೆಂಬರ್‌ ತಿಂಗಳವರೆಗೂ ಬರುತ್ತದೆ.

ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿಯಾದ್ಯಂತ ಕಬಿನಿ ನಾಲೆ ಹಾಗೂ ಪಂಪ್‍ಸೆಟ್ ಸೇರಿದಂತೆ 1,500 ಎಕರೆ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ. ಇದೀಗ ಪ್ರತಿ ಗದ್ದೆಗಳು ಕೊಯ್ಲು ಹಂತಕ್ಕೆ ಬಂದಿವೆ. ಶೇ 10 ರಷ್ಟು ಭತ್ತ ಕೊಯ್ಲು ಮುಗಿದಿದೆ. ಕೊಯ್ಲು ಮುಗಿದ ಗದ್ದೆಯಲ್ಲಿ ಬಿದ್ದಿರುವ ಭತ್ತವನ್ನು ಈಗ ಬಿದ್ದಿರುವ ಮಳೆಗೆ ಶೇಖರಿಸುವುದು ಕಷ್ಟವಾಗಿದೆ. ಭತ್ತ ಬಿತ್ತನೆ ಪ್ರದೇಶ ಕಪ್ಪು ಮಣ್ಣಿನಿಂದ ಕೂಡಿರುವುದರಿಂದ ತೇವಾಂಶ ಹೆಚ್ಚಾಗಿದೆ. ಕೊಯ್ಲು ಮಾಡಲು ಗದ್ದೆಯಲ್ಲಿ ತೇವಾಂಶ ಹೆಚ್ಚಾಗಿದ್ದು, ಕಾಲಿಡಲು ಆಗುತ್ತಿಲ್ಲ.

ಮಳೆಯ ಹೊಡೆತಕ್ಕೆ ಭತ್ತದ ತೆನೆಗಳು ಬಾಗಿವೆ. ತೇವಾಂಶ ಹೆಚ್ಚಾಗಿರುವುದರಿಂದ ಇನ್ನೂ ಒಂದು ವಾರ ಕಾಲ ಕೊಯ್ಲು ಮಾಡಲು ಸಾಧ್ಯವಿಲ್ಲ ಎಂದು ರೈತರು ಹೇಳುತ್ತಾರೆ.

‘ಗುರುವಾರ ಭತ್ತದ ಕೊಯ್ಲು ಆರಂಬಿಸಬೇಕಾಗಿತ್ತು. ಮಳೆ ಆರಂಭವಾಗಿ ಭತ್ತದ ಗೊನೆಗಳು ತೇವಗೊಂಡಿರುವ ಮಣ್ಣಿನ ಮೇಲೆ ಬೀಳುತ್ತಿವೆ. ಮಳೆ ನಿಂತರೆ ಒಣಗಿದ ನಂತರ ಕೊಯ್ಲು ಆರಂಭಿಸಬಹುದು. ಸತತವಾಗಿ ಮಳೆ ಬಿದ್ದರೆ ತುಂಬಾ ನಷ್ಟವಾಗುತ್ತದೆ’ ಎಂದು ರೈತ ನಿಂಗಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಹೇಳುತ್ತಾರೆ.

ಈವಾಗ ಬಿದ್ದಿರುವ ಮಳೆಯಿಂದ ಭತ್ತದ ಫಸಲು ಎಕರೆಗೆ ಕಾಲು ಭಾಗ ನಷ್ಟವಾಗಿದೆ. ಕೃಷಿ ಅಧಿಕಾರಿಗಳು ಆಗಮಿಸಿ ಮಳೆಯಿಂದ ರೈತರಿಗೆ ಆಗಿರುವ ನಷ್ಟ ತುಂಬಿಸಿಕೊಡುವ ವ್ಯವಸ್ಥೆ ಮಾಡಬೇಕು ಎಂದು ಕಮರವಾಡಿ ಮಹದೇವಪ್ಪ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು, ‘ಈ ಮಳೆ ಕೊಯ್ಲಿನ ಹಂತದಲ್ಲಿರುವ ಬೆಳೆಗಳಿಗೆ ಒಳ್ಳೆಯದಲ್ಲ. ಸಾಮಾನ್ಯವಾಗಿ ಈ ಸಮಯದಲ್ಲಿ ಮಳೆ ಬರುವುದಿಲ್ಲ. ಜೋರು ಮಳೆಯಾಗಿಲ್ಲ. ಹಾಗಾಗಿ ಹೆಚ್ಚು ಹಾನಿಯಾಗಿರುವುದಿಲ್ಲ. ಭತ್ತ, ಮುಸುಕಿನ ಜೋಳ ಹಾಗೂ ರಾಗಿಯನ್ನು ಈಗ ಕಟಾವು ಮಾಡುವುದು ಒಳ್ಳೆಯದಲ್ಲ. ಒಂದರಡು ದಿನ ಬಿಸಿಲಿಗೆ ಬಿಟ್ಟು ನಂತರ ಕೊಯ್ಲು ಮಾಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT