ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬಿರುಗಾಳಿ ಮಳೆ, 503 ಹೆಕ್ಟೇರ್‌ ಬೆಳೆ ನಾಶ

ತೋಟಗಾರಿಕಾ ಇಲಾಖೆಯಿಂದ ಪ್ರಾಥಮಿಕ ಅಂದಾಜು, 893 ರೈತರಿಗೆ ನಷ್ಟ
Published 5 ಮೇ 2024, 7:15 IST
Last Updated 5 ಮೇ 2024, 7:15 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಶುಕ್ರವಾರ ಸುರಿದ ಬಿರುಗಾಳಿ ಸಹಿತ ಗಾಳಿ ಮಳೆಗೆ 503 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ತೋಟಗಾರಿಕಾ ಬೆಳೆ ನಷ್ಟವಾಗಿದೆ. ಈ ಪೈಕಿ 502.35 ಹೆಕ್ಟೇರ್‌ನಷ್ಟು ಬಾಳೆ ಬೆಳೆಯೇ ನೆಲಕ್ಕಚ್ಚಿದೆ. 

ತೋಟಗಾರಿಕಾ ಇಲಾಖೆಯು ಆಗಿರುವ ಬೆಳೆ ನಷ್ಟದ ಬಗ್ಗೆ ಪ್ರಾಥಮಿಕ ಅಂದಾಜು ಮಾಡಿದ್ದು, 893 ರೈತರು ನಷ್ಟ ಅನುಭವಿಸಿದ್ದಾರೆ. ಬೆಳೆ ನಷ್ಟದ ಸ್ಪಷ್ಟ ಚಿತ್ರಣಕ್ಕಾಗಿ ವಿವರವಾದ ಸಮೀಕ್ಷೆಯನ್ನು ಅಧಿಕಾರಿಗಳು ಆರಂಭಿಸಿದ್ದಾರೆ. 

ಜಿಲ್ಲೆಯ ವಿವಿಧ ಭಾಗಗಳಲ್ಲಿ ಎರಡು ಮೂರು ದಿನಗಳಿಂದ ಗಾಳಿ ಸಹಿತ ಮಳೆಯಾಗುತ್ತಿದೆ. ಆದರೆ, ಶುಕ್ರವಾರದಷ್ಟು ಪ್ರಮಾಣದಲ್ಲಿ ಬಿರುಗಾಳಿ ಬೀಸಿಲ್ಲ. ಬಾಳೆಯೊಂದಿಗೆ 0.60 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ಪಪ್ಪಾಯ ಬೆಳೆಯೂ ಹಾನಿಯಾಗಿದೆ. ನಾಲ್ಕು ತೆಂಗಿನ ಮರಗಳು ಧರೆಗುರುಳಿವೆ. 

ಗುಂಡ್ಲುಪೇಟೆಯಲ್ಲಿ ಹೆಚ್ಚು: ಯಳಂದೂರು ಬಿಟ್ಟು ಜಿಲ್ಲೆಯ ನಾಲ್ಕು ತಾಲ್ಲೂಕಿಗಳಲ್ಲಿ ಬೆಳೆ ಹಾನಿ ಸಂಭವಿಸಿದೆ. ಈ ಪೈಕಿ ಗುಂಡ್ಲುಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಬಾಳೆ ನಷ್ಟವಾಗಿದೆ. 344 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ಬಾಳೆ ಫಸಲು ನಾಶವಾಗಿದ್ದು, ಬಹುತೇಕ ಗಿಡಗಳು ಕಟಾವಿನ ಹಂತಕ್ಕೆ ಬಂದಿದ್ದವು. ಇಲ್ಲಿನ 587 ಬಾಳೆ ಬೆಳೆಗಾರರು ಅನುಭವಿಸಿದ್ದಾರೆ.

‘ಹಂಗಳ ಹೋಬಳಿಯಲ್ಲಿ 134 ಹೆಕ್ಟೇರ್‌, ಗುಂಡ್ಲುಪೇಟೆ ಕಸಬಾ ಹೋಬಳಿಯಲ್ಲಿ 120 ಹೆಕ್ಟೇರ್‌, ತೆರಕಣಾಂಬಿ ಹೋಬಳಿಯಲ್ಲಿ 60 ಮತ್ತು ಬೇಗೂರು ವ್ಯಾಪ್ತಿಯಲ್ಲಿ 40 ಹೆಕ್ಟೇರ್‌ ಬೆಳೆ ಹಾನಿಯಾಗಿದೆ’ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಚಾಮರಾಜನಗರ ತಾಲ್ಲೂಕಿನಲ್ಲಿ 95.55 ಹೆಕ್ಟೇರ್‌ ಪ್ರದೇಶದಲ್ಲಿ ಬಾಳೆ ನಷ್ಟವಾಗಿದೆ. ಹರವೆ ಹೋಬಳಿಯಲ್ಲಿ ಅತಿ ಹೆಚ್ಚು ಅಂದರೆ 72 ಹೆಕ್ಟೇರ್‌ನಷ್ಟು ಬಾಳೆ ಫಸಲು ನೆಲಕ್ಕಚ್ಚಿದೆ. ಹರದನಹಳ್ಳಿ ಹೋಬಳಿಯಲ್ಲಿ 12, ಕಸಬಾ ಹೋಬಳಿಯಲ್ಲಿ 7.80 ಹೆಕ್ಟೇರ್‌ ಬೆಳೆ ನಾಶವಾಗಿದೆ. 230 ಮಂದಿ ರೈತರು ನಷ್ಟ ಅನುಭವಿಸಿದ್ದಾರೆ. 

ಹನೂರು ತಾಲ್ಲೂಕಿನಲ್ಲಿ 48.80 ಹೆಕ್ಟೇರ್‌ ಬಾಳೆ ನಷ್ಟವಾಗಿದ್ದು, ಈ ಪೈಕಿ ರಾಮಾಪುರ ಹೋಬಳಿಯೊಂದರಲ್ಲೇ 30 ಹೆಕ್ಟೇರ್‌ ಬೆಳೆ ಹಾನಿಗೀಡಾಗಿದೆ. ಹನೂರು ಹೋಬಳಿಯಲ್ಲಿ 10.80, ಲೊಕ್ಕನಹಳ್ಳಿ ಹೋಬಳಿಯಲ್ಲಿ 6 ಹೆಕ್ಟೇರ್‌ ನಷ್ಟವಾಗಿದೆ. 51 ರೈತರಿಗೆ ನಷ್ಟವಾಗಿದೆ.  

‘ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ 2000 ಬಾಳೆ ಗಿಡಗಳು ಸಂಪೂರ್ಣವಾಗಿ ನಾಶವಾಗಿದೆ. ಸರ್ಕಾರ ನೆರವಿಗೆ ಬರಬೇಕು’ ಎಂದು ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ರೈತ ಕುಮಾರ್‌ ಒತ್ತಾಯಿಸಿದರು. 

₹85.54 ಲಕ್ಷ ಪರಿಹಾರ: ಬೆಳೆ ಹಾನಿಯಿಂದಾಗಿ 893 ರೈತರಿಗೆ ರೈತರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಆದರೆ, ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ, 503 ಹೆಕ್ಟೇರ್‌ ಪ್ರದೇಶದಲ್ಲಿ ಆಗಿರುವ ನಷ್ಟಕ್ಕೆ ಗರಿಷ್ಠ ₹85.54 ಲಕ್ಷ ಪರಿಹಾರ ನೀಡಬಹುದು ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಎ.ಬಿ.ಸಂಜಯ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ವಾರದಲ್ಲಿ 2.6 ಸೆಂ.ಮೀ ಮಳೆ

ಜಿಲ್ಲಾ ವ್ಯಾಪ್ತಿಯಲ್ಲಿ ಒಂದು ವಾರದ ಅವಧಿಯಲ್ಲಿ 2.6 ಸೆಂ.ಮೀ ಮಳೆಯಾಗಿದೆ. ಮೇ ತಿಂಗಳ ಮೊದಲ ಮೂರು ದಿನಗಳಲ್ಲಿ 1.6 ಸೆಂ.ಮೀ ಮಳೆಯಾಗಿದೆ.  ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ 0.69 ಸೆಂ.ಮೀ ಮಳೆಯಾಗಿದೆ. ಶನಿವಾರವೂ ಜಿಲ್ಲೆಯ ಹನೂರು ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ವರ್ಷಧಾರೆಯಾಗಿದೆ. 

ಬೆಳೆ ನಷ್ಟ: ಅಧಿಕಾರಿಗಳ ಭೇಟಿ

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಬಿರುಗಾಳಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ಅವರು ಗ್ರಾಮ ಲೆಕ್ಕಾಧಿಕಾರಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  

‘ತಾಲ್ಲೂಕಿನಲ್ಲಿ ಅಂದಾಜು 344 ಹೆಕ್ಟೇರ್ ಬಾಳೆ ಬೆಳೆ ಹಾನಿಯಾಗಿದ್ದು ಕಸಬಾ ಹಾಗೂ ಹಂಗಳ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಬೆಳೆ ನಾಶವಾಗಿದೆ. ಗೊನೆ ಕಟ್ಟುವ ಹಂತದಲ್ಲಿದ್ದ ಬಾಳೆ ಗಿಡಗಳು ನೆಲಕ್ಕುರುಳಿವೆ. ಬೆಳೆ ಹಾನಿ ಸಂಬಂಧ ರೈತರು ತಮ್ಮ ವ್ಯಾಪ್ತಿಯ ವಿಎ ಆರ್‌ಐಗಳಿಗೆ ಅರ್ಜಿ ನೀಡಿ ಪರಿಶೀಲನೆ ನಂತರ ಸೂಕ್ತ ದಾಖಲಾತಿ ನೀಡಬೇಕು. ನಂತರ ಅದನ್ನು ಪರಿಹಾರ ಪೋರ್ಟಲ್‌ನಲ್ಲಿ ನಮೂದಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿ ಪರಿಹಾರಕ್ಕೆ ಮನವಿ ಮಾಡಲಾಗುವುದು’ ಎಂದು ಹೇಳಿದರು.

ತಹಶೀಲ್ದಾರ್ ಪರಿಶೀಲನೆ: ಮಳೆಯಿಂದ ಹಾನಿಯಾದ ತೆರಕಣಾಂಬಿ ಚಿಕ್ಕತುಪ್ಪೂರು ಸೇರಿದಂತೆ ಇತರೆಡೆ ತಹಶೀಲ್ದಾರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಮರ್ಪಕವಾಗಿ ವರದಿ ನೀಡುವಂತೆ ಸೂಚಿಸಿದರು.

‘ತಾಲ್ಲೂಕಿನ ರೈತರು ಬರಗಾಲದಿಂದ ನರಳುತ್ತಿರುವ ಮಧ್ಯೆಯೇ ಮಳೆಯಿಂದ ಬೆಳೆ ಹಾನಿಯಾಗಿರುವುದು ಗಾಯ ಮೇಲೆ ಬರೆ ಎಳೆದಂತಾಗಿದೆ. ಹಾನಿಗೊಳಗಾದ ಬೆಳೆಗಳಿಗೆ ಪ್ರಕೃತಿ ವಿಕೋಪದಡಿ ನೀಡುವ ಪರಿಹಾರ ಸಾಲುವುದಿಲ್ಲ. ಇದಕ್ಕೆ ಸರ್ಕಾರ ವಿಶೇಷ ಅನುದಾನ ನೀಡಿ ಸಂಪೂರ್ಣ ನಷ್ಟ ಭರಿಸಬೇಕು ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ಒತ್ತಾಯಿಸಿದರು.

ಇದು ಪ್ರಾಥಮಿಕ ಅಂದಾಜು ಆಗಿದ್ದು ಸಮೀಕ್ಷೆ ಆರಂಭಿಸಲಾಗಿದೆ. ನಿಖರ ಮಾಹಿತಿ ಇನ್ನು ಎರಡು ಮೂರು ದಿನಗಳಲ್ಲಿ ಸಿಗಲಿದೆ.
-ಎ.ಬಿ.ಸಂಜಯ್‌, ತೋಟಗಾರಿಕಾ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT