ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು: 19,845 ಹೆಕ್ಟೇರ್‌ನಲ್ಲಿ ಬಿತ್ತನೆ

ಮಳೆಯಿಂದಾಗಿ ಕೆಲವು ಕಡೆ ಕೊಂಚ ಹಿನ್ನಡೆ, ಗುಂಡ್ಲುಪೇಟೆಯಲ್ಲಿ ಅತಿ ಹೆಚ್ಚು, ಚಾಮರಾಜನಗರದಲ್ಲಿ ಕಡಿಮೆ
Last Updated 12 ನವೆಂಬರ್ 2019, 19:46 IST
ಅಕ್ಷರ ಗಾತ್ರ

ಚಾಮರಾಜನಗರ: ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಇದುವರೆಗೆ 19,845 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕೃಷಿ ಇಲಾಖೆಯು 40,690 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿ ಹಾಕಿಕೊಂಡಿತ್ತು. ಶೇಕಡವಾರು ಲೆಕ್ಕಾಚಾರದಲ್ಲಿ ಶೇ 48.80ರಷ್ಟು ಬಿತ್ತನೆಯಾಗಿದೆ.

ಕಳೆದ ವರ್ಷ ಈ ಹೊತ್ತಿಗಾಗಲೇ ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದ ಬಿತ್ತನೆಯಾಗಿತ್ತು. ಈ ವರ್ಷ ಸೆಪ್ಟೆಂಬರ್‌ ಕೊನೆಗೆ ಹಾಗೂ ಅಕ್ಟೋಬರ್‌ ತಿಂಗಳಲ್ಲಿ 10–15 ದಿನ ಎಡೆಬಿಡದೆ ಮಳೆಯಾಗಿದ್ದರಿಂದ ಕೆಲವು ಕಡೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ ಎಂದು ಹೇಳುತ್ತಾರೆ ಕೃಷಿ ಅಧಿಕಾರಿಗಳು.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ, ಒಟ್ಟಾರೆ ಗುರಿಯ ಶೇ 78.5ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಚಾಮರಾಜನಗರದಲ್ಲಿ ಶೇ 19.7ರಷ್ಟು ಬಿತ್ತನೆಯಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 17,620 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಹೊಂದಲಾಗಿದ್ದು, 13,834 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ ಗುರಿ ಹೊಂದಲಾದ 8,850 ಹೆಕ್ಟೇರ್‌ ಪ್ರದೇಶದ ಪೈಕಿ 1,741 ಹೆಕ್ಟೇರ್‌ ಪ‍್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

ಹುರುಳಿಯ‌ದ್ದೇ ಸಿಂಹಪಾಲು: ಜಿಲ್ಲೆಯ ರೈತರು ಹಿಂಗಾರು ಅವಧಿಯಲ್ಲಿ ಭತ್ತ, ರಾಗಿ, ಮೆಕ್ಕೆಜೋಳ, ಮುಸುಕಿನ ಜೋಳ, ಕಡಲೆ, ಹುರುಳಿ, ಅಲಸಂದೆ, ಹೆಸರು, ಉದ್ದು, ಅವರೆ, ಕಬ್ಬನ್ನು ಹೆಚ್ಚು ಬೆಳೆಯುತ್ತಾರೆ.

ಇಷ್ಟು ಬೆಳೆಗಳ ಪೈಕಿ, ಹುರುಳಿ ಮತ್ತು ಕಡಲೆಯನ್ನೇ ರೈತರು ಹೆಚ್ಚು ಬಿತ್ತನೆ ಮಾಡಿದ್ದಾರೆ. ಇದರಲ್ಲೂ ಹುರುಳಿಯದ್ದೇ ಸಿಂಹಪಾಲು ಇದೆ. ಇದುವರೆಗೆ ಬಿತ್ತನೆಯಾದ ಒಟ್ಟು ಪ್ರದೇಶದಲ್ಲಿ 14,113 ಹೆಕ್ಟೇರ್‌ ಜಾಗದಲ್ಲಿ ಹುರುಳಿಯನ್ನು ರೈತರು ಬೆಳೆದಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕು ಒಂದರಲ್ಲೇ 10,978 ಹೆಕ್ಟೇರ್‌ನಲ್ಲಿ ಹುರುಳಿ ಬಿತ್ತಲಾಗಿದೆ. ಜಿಲ್ಲೆಯಾದ್ಯಂತ2,706 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದ್ದು, ಇದರಲ್ಲಿ ಗುಂಡ್ಲುಪೇಟೆ ಪಾಲು 1,875 ಹೆಕ್ಟೇರ್‌.

ಹಿಂಗಾರು ಅವಧಿಯಲ್ಲಿ 550 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, 435 ಹೆಕ್ಟೇರ್‌ನಲ್ಲಿ ರೈತರು ಈಗಾಗಲೇ ಬಿತ್ತನೆ ಮಾಡಿದ್ದಾರೆ. 167 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ, 897 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ.

ಉತ್ತಮ ಫಸಲು ನಿರೀಕ್ಷೆ

ಈ ಬಾರಿ ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗಿರುವುದರಿಂದ, ರೈತರು ಉತ್ತಮ ಫಸಲನ್ನು ನಿರೀಕ್ಷಿಸುತ್ತಿದ್ದಾರೆ.

‘ಸೆಪ್ಟೆಂಬರ್‌ ಹೊತ್ತಿಗೆ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಆರಂಭವಾಗುತ್ತದೆ. ರಾಗಿಯನ್ನು ಆಗಸ್ಟ್‌ ಕೊನೆಯಲ್ಲಿ ಬಿತ್ತುವುದಕ್ಕೆ ಆರಂಭಿಸುತ್ತಾರೆ. ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುತ್ತಿದ್ದಂತೆ ಕಾಳು ಕಟ್ಟಲು ಆರಂಭಿಸುತ್ತದೆ. ಇನ್ನು ಮಳೆಯ ಅಗತ್ಯವಿಲ್ಲ. ಈ ವರ್ಷ ಉತ್ತಮ ಫಸಲು ಬರಲಿದೆ’ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT