ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹3 ಸಾವಿರಕ್ಕೆ ನೀರಿನಲ್ಲಿ ಓಡುವ ಸೈಕಲ್‌!

ಗಡಿಯಂಚಿನ ತಮಿಳುನಾಡಿನ ಕಾವೇರಿಪುರಂ ಗ್ರಾಮದ ಇಬ್ಬರು ವಿದ್ಯಾರ್ಥಿಗಳ ಸಾಧನೆ
Last Updated 18 ಸೆಪ್ಟೆಂಬರ್ 2018, 18:31 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿಗೆ ಸಮೀಪದ ತಮಿಳುನಾಡು ಗಡಿಯಂಚಿನಲ್ಲಿರುವ ಕಾವೇರಿಪುರಂ ಗ್ರಾಮದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಸಂಚರಿಸುವ ಸೈಕಲ್‌ ಅಭಿವೃದ್ಧಿಪಡಿಸಿದ್ದಾರೆ.

ಪಾಲಾರ್‌ ಗ್ರಾಮಕ್ಕೆ ಹತ್ತಿರದಲ್ಲಿರುವ ಕಾವೇರಿಪುರಂ ಗ್ರಾಮ ತಮಿಳುನಾಡಿಗೆ ಸೇರಿದೆ. ಇಲ್ಲಿ ಪಾಲಿಟೆಕ್ನಿಕ್‌ ಓದುತ್ತಿರುವ ತಮಿಳ್‌ ಕುಮಾರನ್‌ ಮತ್ತು ಗುಣ ಎಂಬುವರು ಈ ವಿನೂತನ ಸೈಕಲ್‌ ರೂಪಿಸಿದ ರೂವಾರಿಗಳು.

ಇಂಧನ ರಹಿತವಾಗಿ ನದಿಯನ್ನು ದಾಟಲು ಬಳಸಬಹುದಾದ ಸೈಕಲ್‌ ಅನ್ನು ತಮ್ಮ ಗ್ರಾಮದ ಮಕ್ಕಳು ಅಭಿವೃದ್ಧಿ ಪಡಿಸಿರುವುದು ಗ್ರಾಮಸ್ಥರ ಸಂಭ್ರಮಕ್ಕೆ ಕಾರಣವಾಗಿದೆ.

₹3 ಸಾವಿರ ಖರ್ಚು: ಸರಳ ತಂತ್ರಜ್ಞಾನದ ಸೈಕಲ್‌ ಅನ್ನು ಕಡಿಮೆ ವೆಚ್ಚ ಮತ್ತು ಕಡಿಮೆ ಅವಧಿಯಲ್ಲಿ ತಯಾರಿಸಿದ್ದಾರೆ.

‘ಮೂರು ಗಂಟೆಗಳಲ್ಲಿ‌ ಸೈಕಲ್‌ ಸಿದ್ಧಪಡಿಸಬಹುದು. ಇದಕ್ಕೆ ₹3 ಸಾವಿರ ವೆಚ್ಚವಾಗುತ್ತದೆ. ಪಿವಿಸಿ ಪೈಪ್‌, ಕಬ್ಬಿಣದ ಸಲಾಖೆ, ಸೈಕಲ್‌ ಫೆಡಲ್‌, ಚೈನ್‌ ಇನ್ನಿತರ‌ಸಣ್ಣ ಪುಟ್ಟ ಸಲಕರಣೆಗಳಿದ್ದರೆ ಸಾಕು’ ಎಂದು ಸೈಕಲ್ ತಯಾರಕರಲ್ಲಿ ಒಬ್ಬರಾದ ತಮಿಳ್‌ ಕುಮಾರನ್‌ ಹೇಳುತ್ತಾರೆ.

‘ಕೆಲವು ಬಾರಿ ನದಿ ದಾಟಲು ತೆಪ್ಪಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇದಕ್ಕೆ ಪರಿಹಾರ ಕಂಡು ಹುಡುಕುವುದಕ್ಕಾಗಿ ಸೈಕಲ್‌ ಅಭಿವೃದ್ಧಿ ಪಡಿಸಿದ್ದೇವೆ. ತುರ್ತು ಸಂದರ್ಭಗಳಲ್ಲಿ ಇದನ್ನು ಬಳಸಬಹುದಾಗಿದೆ.ರಜಾದಿನಗಳಲ್ಲಿ ಜಲವಿಹಾರಕ್ಕೂ ಬಳಸಿಕೊಳ್ಳಬಹುದು’ ಎಂದರು.

‘ಇಬ್ಬರು ಮಕ್ಕಳು ಮಾಡಿರುವ ಸಾಧನೆಗೆ ಗ್ರಾಮಸ್ಥರು ಸಂಭ್ರಮ ಪಡುತ್ತಿದ್ದಾರೆ. ಸರ್ಕಾರ ಇವರ ಸಾಧನೆಯನ್ನು ಗುರುತಿಸಿ ಮತ್ತಷ್ಟು ಪ್ರೋತ್ಸಾಹ ನೀಡಬೇಕು’ ಎಂದು ಸ್ಥಳೀಯರಾದ ಗೋಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸೈಕಲ್‌ ಹೇಗಿದೆ?

ನೆಲದಲ್ಲಿ ಸಂಚರಿಸುವ ಸೈಕಲ್‌ ಅನ್ನೇ ಮಾದರಿಯಾಗಿಟ್ಟುಕೊಂಡು ನೀರಿನ ಮೇಲೆ ಚಲಿಸಬಲ್ಲ ಸೈಕಲ್‌ ರೂಪಿಸಲಾಗಿದೆ. ಇದರಲ್ಲಿ ಚಕ್ರಗಳ ಬದಲು ತಲಾ ಆರು ಅಡಿಗಳನಾಲ್ಕು ಪಿವಿಸಿ ಪೈಪ್‌ಗಳನ್ನು ಸೈಕಲ್‌ನಎಡ ಬದಿ ಮತ್ತು ಬಲ ಬದಿಗಳಲ್ಲಿ ಸಮಾನಾಂತರವಾಗಿ ಬಳಸಲಾಗಿದೆ.ಹಿಂಬದಿ ಚಕ್ರದ ಜಾಗದಲ್ಲಿ ಟರ್ಬೈನ್‌ ಮಾದರಿಯ ಚಕ್ರವನ್ನು ಅಳವಡಿಸಲಾಗಿದೆ.

ಪಿವಿಸಿ ಪೈಪ್‌ಗಳಿಗೆ ಮುಂಭಾಗ ಮತ್ತು ಹಿಂಬದಿಗೆ ಕಬ್ಬಿಣದ ರಾಡ್‌ಗಳನ್ನು ಅಳವಡಿಸಲಾಗಿದೆ. ಈ ಪೈಪ್‌ಗಳು ನೀರಿನಲ್ಲಿ ಸೈಕಲ್‌ ತೇಲುವಂತೆ ಮಾಡುತ್ತವೆ.

ಚೈನ್‌ ಅನ್ನು ಪೆಡಲಿನಿಂದ ಹಿಂಬದಿಯ ಟರ್ಬೈನ್‌ಗೆ ಸಂಪರ್ಕಿಸಲಾಗಿದೆ. ಪೆಡಲ್‌ ಒತ್ತುತ್ತಿದ್ದಂತೆಯೇ, ಹಿಂದಿನ ಟರ್ಬೈನ್‌ ತಿರುಗಿ ನೀರನ್ನು ಹಿಂದಕ್ಕೆ ತಳ್ಳುತ್ತದೆ. ಆಗ ಸೈಕಲ್‌ ಮುಂದಕ್ಕೆ ಸಾಗುತ್ತದೆ.ಸದ್ಯಕ್ಕೆ ಈ ಸೈಕಲ್‌ನಲ್ಲಿ ಒಬ್ಬರು ಮಾತ್ರ ಸಂಚರಿಸಬಹುದು. ನಿಂತ ನೀರಿನಲ್ಲಿ ಸೈಕಲ್‌ ಸುಲಭವಾಗಿ ಓಡಿಸಬಹುದು. ಪ್ರವಾಹ ಅಥವಾ ಸೆಳೆತ ಇರುವ ನೀರಿನಲ್ಲಿ ಓಡಿಸುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT