ಸೋಮವಾರ, ನವೆಂಬರ್ 29, 2021
20 °C
ಒಂದೂವರೆ ವರ್ಷ ಯೋಜನೆ ನನೆಗುದಿಗೆ, ಸ್ಥಳದ ಸಮಸ್ಯೆ, ಕೋವಿಡ್‌ನಿಂದ ಮತ್ತಷ್ಟು ವಿಳಂಬ

ಪುನರ್ವಸತಿ: ಒಂದೂವರೆ ವರ್ಷ ಯೋಜನೆ ನನೆಗುದಿಗೆ

ಬಿ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ಚಂಗಡಿ ಗ್ರಾಮಸ್ಥರು ಹುಣಸೂರು ತಾಲ್ಲೂಕಿನ ಶೆಟ್ಟಹಳ್ಳಿಯ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಬಂದ ನಂತರ ಒಂದೂವರೆ ವರ್ಷಗಳ ಕಾಲ ಯೋಜನೆ ನನೆಗುದಿಗೆ ಬಿದ್ದಿತ್ತು.

ಅಷ್ಟೊತ್ತಿಗೆ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬದಲಾದರು. ಹೊಸ ಡಿಸಿಎಫ್‌ ವಿ.ಏಡುಕುಂಡಲು ಅವರು 2018ರ ಅಂತ್ಯದಲ್ಲಿ ಈ ಯೋಜನೆಯನ್ನು ಮತ್ತೆ ಕೈಗೆತ್ತಿಕೊಂಡರು. 

ಗ್ರಾಮ ಸ್ಥಳಾಂತರ ಸಂಬಂಧ 2018ರ ಅ.5 ರಂದು ಅಂದಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ ನಡೆದಿತ್ತು. ತಮ್ಮ ಸ್ಥಳಾಂತರವನ್ನು ಶೀಘ್ರವಾಗಿ ಮುಗಿಸುವಂತೆ ಚಂಗಡಿ ಗ್ರಾಮಸ್ಥರು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದರು. ನ.15ರಂದು ಗ್ರಾಮಕ್ಕೆ ಬಿ.ಬಿ.ಕಾವೇರಿ ಅವರು ಭೇಟಿ ನೀಡಿ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.

ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಲು ಚಿಕ್ಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಿಯಪುರ ಬಳಿ ಸ್ಥಳವನ್ನು ಗುರುತಿಸಿ ಸರ್ವೆ ಕಾರ್ಯವನ್ನು ಮಾಡಲಾಗಿತ್ತು. 

ಮಲೆಮಹದೇಶ್ವರ ವನ್ಯಧಾಮದ ಅಧಿಕಾರಿಗಳು ಗ್ರಾಮ ಸ್ಥಳಾಂತರಕ್ಕೆ ಸಂಬಂಧಿಸಿದಂತೆ 2019ರ ಅಕ್ಟೋಬರ್‌ನಲ್ಲಿ ಅರಣ್ಯ ಇಲಾಖೆಗೆ ವರದಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಲು ₹29.25 ಕೋಟಿ ಬೇಕು ಎಂದು ಹೇಳಲಾಗಿತ್ತು. 

ಏಳು ತಿಂಗಳ ಬಳಿಕ ಅಂದರೆ 2020ರ ಮೇ 6ನಲ್ಲಿ ಪ್ರಸ್ತಾವಕ್ಕೆ ಸಮ್ಮತಿ ನೀಡಿದ್ದ ರಾಜ್ಯ ಸರ್ಕಾರ, ಗ್ರಾಮ ಸ್ಥಳಾಂತರದ ಸಮಗ್ರ ಯೋಜನೆ ಸಿದ್ಧಪಡಿಸುವುದಕ್ಕಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ 13 ಸದಸ್ಯರನ್ನು ಒಳಗೊಂಡ ಜಿಲ್ಲಾ ಮಟ್ಟದ ಪುನರ್ವಸತಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿತ್ತು. 

ಜಿಲ್ಲಾ ಮಟ್ಟದ ಸಮಿತಿಯು ಕೆಲಸ ಆರಂಭಿಸಿದ ನಂತರ 60 ದಿನಗಳ ಒಳಗಾಗಿ ಸಮಗ್ರ ವರದಿಯನ್ನು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿತ್ತು. ಆದರೆ, ಕೋವಿಡ್‌ ಹಾಗೂ ಪುನರ್ವಸತಿಗೆ ಸ್ಥಳ ಅಂತಿಮವಾಗದೇ ಇದ್ದುದು ಸೇರಿದಂತೆ ವಿವಿಧ ಕಾರಣಗಳಿಂದ ಅಂತಿಮ ವರದಿ ಸಲ್ಲಿಕೆ ವಿಳಂಬವಾಗಿತ್ತು. ಈಗ್ಗೆ ಮೂರು ವಾರಗಳ ಹಿಂದೆ ಡಿಸಿಎಫ್‌ ಏಡುಕುಂಡಲು ಅವರು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪುನರ್ವಸತಿಯ ಸಮಗ್ರ ಯೋಜನಾ ವರದಿಯನ್ನು ಸಲ್ಲಿಸಿದ್ದಾರೆ.  

ಡಿ.ಸಿ. ನೇತೃತ್ವದಲ್ಲಿ ಸಭೆ: ಸರ್ಕಾರ ರಚಿಸಿದ್ದ ಪುನರ್ವಸತಿ ಸಮಿತಿಯ ಅಧ್ಯಕ್ಷರಾಗಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಚಂಗಡಿ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಏಳು ಸಭೆಗಳನ್ನು ನಡೆಸಿದ್ದಾರೆ. ಕಳೆದ ವರ್ಷದ ಮೇ 20ರಂದು ಸಮಿತಿಯ ಮೊದಲ ಸಭೆ ನಡೆದಿತ್ತು. ಅದಾದ ಎರಡೇ ದಿನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳ ತಂಡ ಚಂಗಡಿಗೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸಿತು. 

ಸ್ಥಳ ಬದಲು: ಸಂವಾದದ ಬಳಿಕ ಅರಣ್ಯ, ಭೂಮಾಪನ ಹಾಗೂ ಕಂದಾಯ ಇಲಾಖೆಗಳು ಚಂಗಡಿ ಗ್ರಾಮದಲ್ಲಿ ಜಂಟಿ ಸರ್ವೆ ಆರಂಭಿಸಿ ಮನೆ, ಜಮೀನು ಮುಂದಾವುಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸತೊಡಗಿದವು. ಬೆನ್ನಲ್ಲೇ ಗ್ರಾಮ ಸ್ಥಳಾಂತರಕ್ಕೆ ಗುರುತಿಸಲಾಗಿದ್ದ ಮರಿಯಪುರ ಬಳಿ ಸರ್ವೆ ಕಾರ್ಯವನ್ನು ಆರಂಭಿಸಲಾಯಿತು.

ಗ್ರಾಮದ 233 ಕುಟುಂಬಗಳ ಪುನರ್ವಸತಿಗೆ ಬೇಕಾಗಿದ್ದ ಜಮೀನು ಅಲ್ಲಿಲ್ಲ ಎಂಬ ಪ್ರದೇಶಕ್ಕೆ ಆ ಸ್ಥಳವನ್ನು ಕೈಬಿಡಬೇಕಾಗಿತ್ತು. ಹೊಸ ಸ್ಥಳವನ್ನು ಹುಡುಕಬೇಕಾದ ಅನಿವಾರ್ಯತೆ ಮತ್ತೆ ಸೃಷ್ಟಿಯಾಯಿತು.

ಈ ವರ್ಷದ ಮಾರ್ಚ್‌ ವೇಳೆಗೆ ಹನೂರು ತಾಲ್ಲೂಕಿನ ಡಿ.ಎಂ.ಸಮುದ್ರದ ಅರಣ್ಯ ಇಲಾಖೆಗೆ ಸೇರಿದ ಸ್ಥಳವನ್ನು ಗುರುತಿಸಲಾಯಿತು. ಚಂಗಡಿ ಗ್ರಾಮಸ್ಥರೂ ಇದಕ್ಕೆ ಒಪ್ಪಿಕೊಂಡರು. ಜಿಲ್ಲಾಧಿಕಾರಿ ನೇತೃತ್ವದ ಪುನರ್ವಸತಿ ಸಮಿತಿ ಕೂಡ ಇದೇ ಸ್ಥಳವನ್ನು ಅಂತಿಮಗೊಳಿಸಿತು. 

 

2021ರ ಅಂತ್ಯದೊಳಗೆ ಸ್ಥಳಾಂತರದ ಆಶಯ

2020ರ ಮೇ21ರಂದು ಚಂಗಡಿ ಗ್ರಾಮಕ್ಕೆ ಭೇಟಿ ನೀಡಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು 2021ರ ಅಂತ್ಯದೊಳಗಾಗಿ ಗ್ರಾಮವನ್ನು ಸ್ಥಳಾಂತರಿಸುವ ಆಶಯವನ್ನು ವ್ಯಕ್ತಪಡಿಸಿದ್ದರು. 

ಅಂದು ನಡೆದಿದ್ದ ಸಂವಾದದಲ್ಲಿ ಕೆಲವು ಗ್ರಾಮಸ್ಥರು ಈ ಹಿಂದೆ ಗುರುತಿಸಿದ್ದ ಮರಿಯಪುರದ ಪ್ರದೇಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ವಡಕೆಹಳ್ಳದ ಬಳಿ ಪುನರ್ವಸತಿ ಕಲ್ಪಿಸುವಂತೆ ‌ಒತ್ತಾಯಿಸಿದ್ದರು. 

ಸಭೆಯಲ್ಲಿ ಮಾತನಾಡಿದ್ದ ಸುರೇಶ್‌ಕುಮಾರ್‌ ಅವರು, ‘ಬಲವಂತವಾಗಿ ನಿಮ್ಮನ್ನು ಒಕ್ಕಲೆಬ್ಬಿಸುವ ಇರಾದೆ ಸರ್ಕಾರಕ್ಕೆ ಇಲ್ಲ. ಹೆಣ್ಣುಮಕ್ಕಳ ಶಿಕ್ಷಣ, ಗ್ರಾಮದವರ ಅನುಕೂಲಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. ಎಲ್ಲರನ್ನೂ ಮನವೊಲಿಸಿಯೇ ಒಪ್ಪಿಗೆ ಪಡೆಯುತ್ತೇವೆ’ ಎಂದು ಹೇಳಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು