ಸೋಮವಾರ, ನವೆಂಬರ್ 23, 2020
22 °C
ದೀಪಾವಳಿ ಜಾತ್ರೆ: ಶುಕ್ರವಾರದಿಂದ ಸೋಮವಾರದವರೆಗೂ ಪ್ರವೇಶಕ್ಕೆ ಅವಕಾಶ ಇಲ್ಲ

ಭಕ್ತರಿಗೆ ನಿರ್ಬಂಧ: ಮಾದಪ್ಪನ ಸನ್ನಿಧಿ ಸ್ತಬ್ಧ

ಜಿ.ಪ್ರದೀಪ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ದೀಪಾವಳಿ ಜಾತ್ರೆ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ಸಿಕ್ಕಿದ್ದು, ಕೋವಿಡ್ ಕಾರಣದಿಂದ ಭಕ್ತರ ಪ್ರವೇಶ ನಿರ್ಬಂಧಿಸಿರುವುದರಿಂದ ದೇವಾಲಯ ಭಣಗುಡುತ್ತಿದೆ. 

ಶುಕ್ರವಾರದಿಂದ ಸೋಮವಾರದವರೆಗೂ (ನ.16) ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಸಾಂಪ್ರದಾಯಿಕವಾಗಿ ದೇವಾಲಯದ ಮಟ್ಟಿಗೆ ಮಾತ್ರ ದೀಪಾವಳಿ ಅಂಗವಾಗಿ ಪೂಜೆ ಪುನಸ್ಕಾರಗಳು ನಡೆಯಲಿವೆ.

ದೀಪಾವಳಿ ಜಾತ್ರೆ ಎಂದರೆ ಚಾಮರಾಜನಗರ ಜಿಲ್ಲೆಯೂ ಸೇರಿದಂತೆ ರಾಜ್ಯದ ನಾನಾ ಭಾಗದ ಮಾದೇಶ್ವರನ ಭಕ್ತರಿಗೆ ಎಲ್ಲಿಲ್ಲದ ಸಡಗರ. ಕೆಲವು ಭಕ್ತರು ಮಾದೇಶ್ವರನಿಗೆ ಹರಕೆಯನ್ನು ಹೊತ್ತು 15 ದಿನಗಳ ಮುಂಚಿತವಾಗಿಯೇ ಬಂದು ಕ್ಷೇತ್ರದಲ್ಲಿ ತಂಗಿ ವಿವಿಧ ಸೇವೆಗಳನ್ನು ಮಾಡಿಸುತ್ತಾರೆ. 

ಇನ್ನೂ ಕೆಲವರು ಜಾತ್ರೆಗೆ ಎರಡು ದಿನಗಳಿರುವಂತೆಯೇ ದೇವಸ್ಥಾನಕ್ಕೆ ಬಂದು ಠಿಕಾಣಿ ಹೂಡುತ್ತಾರೆ. ಜಾತ್ರೆಯ ಸಮಯದಲ್ಲಿ ನಡೆಯುವ ಎಣ್ಣೆಮಜ್ಜನ ಸೇವೆ, ಹಾಲರವಿ ಉತ್ಸವ, ಅಮಾವಾಸ್ಯೆ ಪೂಜೆ, ಹಾಗೂ ಮಹಾ ರಥೋತ್ಸವ, ಮತ್ತು ರಾತ್ರಿ ವೇಳೆ ನಡೆಯುವ ತೆಪ್ಪೋತ್ಸವವನ್ನು ಕಂಡು ಹರಕೆ ಮತ್ತು ಕಾಣಿಕೆ ಸಲ್ಲಿಸಿ ನೆಮ್ಮದಿಯಿಂದ ತೆರಳುತ್ತಿದ್ದರು.

ಪ್ರತೀ ವರ್ಷ ನಡೆಯುವ ದೀಪಾವಳಿ ಜಾತ್ರೆಗೆ ಲಕ್ಷಾಂತರ ಭಕ್ತರು ಬರುತ್ತಾರೆ. ಮೂರರಿಂದ ಐದು ಲಕ್ಷ ಮಂದಿ ಸೇರುತ್ತಾರೆ. ಕಾಲ್ನಡಿಗೆಯಲ್ಲಿಯೇ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಬರುತ್ತಾರೆ. 

ಮುಡಿಪಿನ ಸೇವೆಯಿಂದ ವಂಚಿತ: ದೀಪಾವಳಿ ಜಾತ್ರೆ ಸಮಯದಲ್ಲಿ ಜಿಲ್ಲೆಯ ಭಕ್ತರು ಮುಡಿಪಿನ ಸೇವೆ ಸಲ್ಲಿಸುತ್ತಾರೆ. ಈ ಸೇವೆ ಬಗ್ಗೆ ಭಕ್ತರಿಗೆ ಬಹಳ ನಂಬಿಕೆ. ಈ ವರ್ಷ ಕೋವಿಡ್‌ ಅದಕ್ಕೆ ತಡೆಯೊಡ್ಡಿದೆ. 

ಜಾತ್ರೆಗೆ ಬರುವ ಭಕ್ತರು ತಮ್ಮ ಊರುಗಳಲ್ಲಿ ಮನೆ ಮನೆಗೆ ತೆರಳಿ ಮಹದೇಶ್ವರ ಸ್ವಾಮಿಯ ಮುಡಿಪನ್ನು ವಸೂಲು ಮಾಡಿ ಅದರಿಂದ ಕಡಲೆ ಬೆಲ್ಲ, ಕೊಬ್ಬರಿ, ಕಲ್ಲು ಸಕ್ಕರೆ ಇನ್ನಿತರ ವಸ್ತುಗಳನ್ನು ಕ್ಷೇತ್ರದಲ್ಲಿಯೇ ಖರೀದಿ ಮಾಡಿ ಕಟ್ಟೆ ಬಸಪ್ಪ ಹಾಗೂ ಮಾದೇಶ್ವರ ಸ್ವಾಮಿಗೆ ಮೊದಲ ಮುಡಿಪನ್ನು ಇಟ್ಟು ನಂತರ ಆ ಪ್ರಸಾದವನ್ನು ತಮ್ಮ ಗ್ರಾಮದಲ್ಲಿರುವ ಗ್ರಾಮಸ್ಥರಿಗೆ ಹಂಚುತ್ತಾರೆ. ಈ ರೀತಿ ಮಾಡಿದರೆ ಗ್ರಾಮದಲ್ಲಿ ನಡೆದಿರುವಂತಹ ಕೇಡುಗಳು ದೂರವಾಗುತ್ತವೆ ಎಂಬುದು ಭಕ್ತರ ನಂಬಿಕೆ. 

ಆದಾಯ ನಷ್ಟ: ಜಾತ್ರೆ ಸಮಯದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಸ್ಥಳೀಯ ವ್ಯಾಪಾರಿಗಳು, ಕೆಎಸ್‌ಆರ್‌ಟಿಸಿಗೆ ಕೋಟ್ಯಂತರ ಆದಾಯ ಬರುತ್ತಿತ್ತು. ಭಕ್ತರ ಭೇಟಿಗೆ ನಿರ್ಬಂಧವಿರುವುದರಿಂದ ಅಷ್ಟೂ ಆದಾಯ ಇಲ್ಲದಂತಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು