ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಕಾಲುವೆ ನೀರು: ಸಣ್ಣ ಮೀನು ಮಾರಾಟ ಜೋರು

Published 7 ನವೆಂಬರ್ 2023, 6:12 IST
Last Updated 7 ನವೆಂಬರ್ 2023, 6:12 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಜಲಾನಯನ ಪ್ರದೇಶಗಳಲ್ಲಿ ಕೆರೆ ಕಟ್ಟೆಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಹೊಳೆ, ಕಾಲುವೆಯಲ್ಲಿ ಅಲ್ಪ ಪ್ರಮಾಣದ ನೀರು ಹರಿಯುತ್ತಿದೆ. ಕಬಿನಿ ಮತ್ತು ಸುವರ್ಣಾವತಿ ನದಿಗೆ ಬಿಟ್ಟಿರುವ ಅಲ್ಪ ನೀರಿನಲ್ಲಿ ಸಣ್ಣ ಮೀನುಗಳು ಕಾಣಿಸಿಕೊಂಡಿದ್ಡು, ಗೆಂಡೆ ಹಾಗೂ ಹಾವುಮೀನು ಹಿಡಿಯಲು ಯುವಕರು ಮುಗಿಬಿದ್ದಿದ್ದಾರೆ.

ಪಟ್ಟಣ ಹಾಗೂ ಸುತ್ತಲಿನ ನದಿ ತೀರದ ಗ್ರಾಮಗಳಲ್ಲಿ ಮೀನುಗಾರಿಕೆ ಮತ್ತು ಖರೀದಿ ಭರ್ಜರಿಯಾಗಿ ನಡೆಯುತ್ತಿದೆ. 

ಪಟ್ಟಣದ ಹೆದ್ದಾರಿಗಳಲ್ಲಿ ದಿನಕ್ಕೆ ನೂರಾರು ಕೆಜಿ ಮೀನು ಬಿಕರಿಯಾಗುತ್ತಿದೆ. ಮುಂಜಾನೆ ಕೆರೆ ಮೀನು,  ಮಧ್ಯಾಹ್ನ ನದಿ ಮೀನಿಗೆ ಬೇಡಿಕೆ ಇದೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕಾವೇರಿ ನದಿ ಪಾತ್ರದ ಮೀನುಗಳು ಮಾರಾಟಕ್ಕೆ ಬಂದಿದೆ. ಈ ಮೀನುಗಳಿಗೆ ಬೆಲೆ ಕಡಿಮೆ ಹಾಗೂ ರುಚಿ ಹೆಚ್ಚು. ಹೀಗಾಗಿ ಮೀನು ಖಾದ್ಯ ಪ್ರಿಯರು ಮುಗಿಬಿದ್ದು‌ಕೊಳ್ಳುತ್ತಿದ್ದಾರೆ.    

‘ನದಿಯಲ್ಲಿ ಹೊಸ ನೀರು ಹರಿಯುತ್ತಿದೆ. ಕಬಿನಿ, ಹೊನ್ನು ಹೊಳೆಯಲ್ಲಿ ಸಣ್ಣಮೀನು ಸಿಗುತ್ತದೆ. ಸಣ್ಣಬಲೆ ಹಾಕಿದರೂ ಕೆಜಿಗಟ್ಟಲೆ ಸಿಗುತ್ತದೆ. ನೀರಿನ ವೇಗ ಕಡಿಮೆಯಾದಾಗ ಜನರು ಕಾಲುವೆಗೆ ಇಳಿದು ಉದ್ದದ ಬಲೆ ಬೀಸಿ ಮೀನು ಸಂಗ್ರಹಿಸುತ್ತಾರೆ’ ಎಂದು ವ್ಯಾಪಾರಿ ಮಹದೇವ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮಳೆ ಕೊರತೆಯಿಂದ ಒಳ ನಾಡಿನ ಮೀನು ಸಾಕಣೆಗೆ ಹಿನ್ನಡೆಯಾಗಿದೆ. ಸಮುದ್ರ ಮೀನುಗಳಿಗೆ ಬೆಲೆ ಏರಿದೆ. ಸಾಮಾನ್ಯ ಗೆಂಡೆ, ರೋಹು ಮೀನುಗಳಿಗೆ ಹೆಚ್ಚಿನ ಧಾರಣೆ ಇದೆ. ಹಾಗಾಗಿ, ಅಗ್ಗವಾಗಿ ಸಿಗುವ ಮೀನುಗಳನ್ನು ಹಿಡಿದು ಆದಾಯ ಗಳಿಸುವತ್ತ ಯುವಕರು ಮುಂದಡಿ ಇಟ್ಟಿದ್ದಾರೆ. ಸಣ್ಣಮೀನು 1 ಕೆಜಿಗೆ ₹100 ರಿಂದ ₹120 ದರ ಇದೆ. ಈ ಮೀನುಗಳನ್ನು ಸ್ವಚ್ಛಗೊಳಿಸುವುದು ಸುಲಭ. ಸಹಜವಾಗಿ ಸಣ್ಣ ಪುಟ್ಟ ಮೀನಿನ ರುಚಿ ಬೆನ್ನುಹತ್ತಿರುವ ಗ್ರಾಹಕರು ಹೆಚ್ಚು ಕೊಳ್ಳುತ್ತಾರೆ’ ಎಂದು ನರಸೀಪುರದ ಮೀನು ವ್ಯಾಪಾರಿ ನವೀನ್ ಹೇಳಿದರು.  

ಸಾಕಣೆದಾರರಿಗೆ ನಷ್ಟ
ಈ ಬಾರಿ ಮಳೆ ಕೊರತೆಯಾಗಿದೆ. ಕೆರೆಗಳಲ್ಲಿ ಪೊದೆ ಗಿಡ ಆವರಿಸಿದೆ. ಮೀನು ಸಾಕಣೆದಾರರ ಸಂಖ್ಯೆಯೂ ಕುಸಿದಿದೆ. ಅಣೆಕಟ್ಟೆಗಳಲ್ಲಿ ಮತ್ಸೋದ್ಯಮವನ್ನು ನಿಷೇಧಿಸಲಾಗಿದೆ. ಹಾಗಾಗಿ ದೊಡ್ಡ ಗಾತ್ರದ ಕಾಟ್ಲಾ ಹುಲ್ಲುಗೆಂಡೆ ಜಿಲೇಬಿ ಮೀನುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ. ಹಾಗಾಗಿ ಈ ಸಲ ಊರ ಕೆರೆ ನದಿಗಳಲ್ಲಿ ಸಿಗುವ ಕನ್ನಡಿ ಮೀನು ಮಡ್ಡ ಜಿಂಗೆ ಹಾವು ಮೀನು ಸೇರಿದಂತೆ ಹಲವು ಬಗೆಯ ಸಾಂಪ್ರದಾಯಿಕ ಮೀನಿನೂಟ ಸವಿಯುವ ಅವಕಾಶ ಮೀನು ಪ್ರಿಯರಿಗೆ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT