ಮಂಗಳವಾರ, ಮೇ 17, 2022
27 °C

ಚಾಮರಾಜನಗರ: ಕಸಾಪ ಚುನಾವಣೆ, ಸಕಲ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ (ನ.21) ಚುನಾವಣೆ ನಡೆಯಲಿದೆ. 

ಸಿ.ಎಂ.‌ನರಸಿಂಹಮೂರ್ತಿ, ಶೈಲಕುಮಾರ್‌, ನಾಗೇಶ್‌ ಸೋಸ್ಲೆ ಹಾಗೂ ಸ್ನೇಹ ಅವರು ಕಣದಲ್ಲಿದ್ದಾರೆ. ಸ್ನೇಹ ಅವರು ತಟಸ್ಥರಾಗಿದ್ದು, ನಾಗೇಶ್‌ ಸೋಸ್ಲೆ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.  

ಜಿಲ್ಲಾ ಕಸಾಪದ ಸದಸ್ಯರ ಪೈಕಿ 4,830 ಮಂದಿಗೆ ಮತದಾನ ಮಾಡುವ ಹಕ್ಕಿದ್ದು, ಚಾಮರಾಜನಗರ ತಾಲ್ಲೂಕಿನಲ್ಲಿ 2,524, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 829, ಯಳಂದೂರಿನಲ್ಲಿ 623, ಕೊಳ್ಳೇಗಾಲದಲ್ಲಿ 545 ಹಾಗೂ ಹನೂರು ತಾಲ್ಲೂಕಿನಲ್ಲಿ 309 ಮತದಾರರಿದ್ದಾರೆ.

ನಿಷೇಧಾಜ್ಞೆ: ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಶನಿವಾರ ಮಧ್ಯರಾತ್ರಿ 12 ಗಂಟೆಯಿಂದ ಭಾನುವಾರ ಮಧ್ಯರಾತ್ರಿ 12 ಗಂಟೆಯವರೆಗೆ ಮತದಾನ ಕೇಂದ್ರಗಳ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಷರತ್ತುಗಳನ್ನು ವಿಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನಿಷೇದಾಜ್ಞೆ ಆದೇಶ ಹೊರಡಿಸಿದ್ದಾರೆ.

ನಿಷೇಧಾಜ್ಞೆ ಅವಧಿಯಲ್ಲಿ ಮೆರವಣಿಗೆ ಅಥವಾ ಐವರಿಗಿಂತ ಹೆಚ್ಚು ಜನ ಸೇರಬಾರದು. ಯಾವುದೇ ರೀತಿಯ ಮಾರಕಾಸ್ತ್ರ, ಶಸ್ತ್ರಾಸ್ತ್ರ, ಸ್ಪೋಟಕ ವಸ್ತುಗಳನ್ನು ಒಯ್ಯುವುದು, ಪ್ರತಿಕೃತಿ ಪ್ರದರ್ಶನ, ದಹನ ಹಾಗೂ ಬಹಿರಂಗ ಘೋಷಣೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.

ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ, ವ್ಯಕ್ತಿಗಳ ತೇಜೋವಧೆ, ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸಬಾರದು. ಸಾರ್ವಜನಿಕರ ಗಾಂಭೀರ್ಯ ಮತ್ತು ನೈತಿಕತೆಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗಬಾರದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಏಳು ಮತಗಟ್ಟೆಗಳ ಸ್ಥಾಪನೆ

ಚುನಾವಣೆಗಾಗಿ ಜಿಲ್ಲೆಯಾದ್ಯಂತ ಏಳು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚಾಮರಾಜನಗರ ತಾಲ್ಲೂಕು ಕಚೇರಿಯಲ್ಲಿ ಮೂರು (ಸಭಾಂಗಣ, ಆಡಳಿತ ಶಾಖೆ, ಚುನಾವಣಾ ಶಾಖೆ) , ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಯಳಂದೂರು ಮತಗಟ್ಟೆಗಳಲ್ಲಿ ತಲಾ ಒಂದು ಹಾಗೂ ಹನೂರು ಬಿಆರ್‌ಸಿ ಕೇಂದ್ರದಲ್ಲಿ ಒಂದು ಮತಗಟ್ಟೆ ಸ್ಥಾಪಿಸಲಾಗಿದೆ. ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು