ಮಂಗಳವಾರ, ಡಿಸೆಂಬರ್ 7, 2021
24 °C
230 ಕುಟುಂಬಗಳಿಂದ ಒಪ್ಪಿಗೆ

ಚಂಗಡಿ ಗ್ರಾಮದವರಿಗೆ ಡಿ.ಎಂ.ಸಮುದ್ರದ ಬಳಿ ಪುನರ್ವಸತಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿರುವ ಚಂಗಡಿಯ ಗ್ರಾಮಸ್ಥರಿಗೆ ಹನೂರು ತಾಲ್ಲೂಕಿನ ಡಿ.ಎಂ.ಸಮುದ್ರದ ಬಳಿ ವೈಶಂಪಾಳ್ಯ ಗ್ರಾಮದಲ್ಲಿ ಗುರುತಿಸಲಾಗಿರುವ ಜಾಗದಲ್ಲಿ ಪುನರ್ಸಸತಿ ಕಲ್ಪಿಸಲು ₹ 34.50 ಕೋಟಿ ವೆಚ್ಚವಾಗಲಿದೆ ಎಂದು ಅರಣ್ಯ ಇಲಾಖೆ ಹೇಳಿದೆ.

ಜಿಲ್ಲೆಯ ಮೊದಲ ಗ್ರಾಮ ಸ್ಥಳಾಂತರ ಯೋಜನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸಲ್ಲಿಸಿರುವ ಸಮಗ್ರ ಯೋಜನಾ ವರದಿಯಲ್ಲಿ ಪುನರ್ವಸತಿಗೆ ಸಂಬಂಧಿಸಿದ ಎಲ್ಲ ವಿವರಗಳೂ ಅಡಕವಾಗಿವೆ.

ಸದ್ಯ, ಚಂಗಡಿ ಗ್ರಾಮದ 230 ಕುಟುಂಬಗಳು ಸ್ಥಳಾಂತರಕ್ಕೆ ಒಪ್ಪಿ ಲಿಖಿತವಾಗಿ ಸಮ್ಮತಿ ಪತ್ರವನ್ನು ಅರಣ್ಯ ಇಲಾಖೆಗೆ ನೀಡಿವೆ. ಅದರ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದೆ. 

‘ಸದ್ಯ 230 ಫಲಾನುಭವಿ ಕುಟುಂಬಗಳನ್ನು ಪಟ್ಟಿ ಮಾಡಿದ್ದೇವೆ. ಯಾವುದೇ ಕುಟುಂಬದಲ್ಲಿ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿದ್ದರೆ, ಅವರನ್ನು ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಲಾಗಿದೆ. ಯೋಜನೆ ಪೂರ್ಣವಾಗಿ ಅನುಷ್ಠಾನಗೊಳ್ಳುವಾಗ ಇನ್ನೂ 15ರಿಂದ 20 ಕುಟುಂಬಗಳು ಸೇರ್ಪಡೆಯಾಗಬಹುದು. ಇದೆಲ್ಲವನ್ನೂ ಲೆಕ್ಕ ಹಾಕಿಯೇ ವರದಿಯನ್ನು ಸಿದ್ಧಪಡಿಸಲಾಗಿದೆ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು. 

ಮೂರು ರೀತಿಯ ಪ್ಯಾಕೇಜ್‌: ಚಂಗಡಿಯಿಂದ ಸ್ಥಳಾಂತರಗೊಳ್ಳಲು ಮುಂದೆ ಬಂದಿರುವ ಕುಟುಂಬಗಳಿಗೆ ಮೂರು ರೀತಿಯ ಪರಿಹಾರ ಪ್ಯಾಕೇಜ್‌ನ ಆಯ್ಕೆಯನ್ನು ನೀಡಲಾಗಿದೆ. 

ಮೊದಲ ಆಯ್ಕೆಯಲ್ಲಿ ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ₹ 15 ಲಕ್ಷ ನಗದು ಹಣವನ್ನು ಪರಿಹಾರ ರೂಪದಲ್ಲಿ ನೀಡಲಾಗುವುದು. ಈ ಪ್ಯಾಕೇಜ್‌ ಅನ್ನು ಆಯ್ಕೆ ಮಾಡಿಕೊಂವರಿಗೆ ಬೇರೆ ಯಾವುದೇ ಸೌಲಭ್ಯ ಇರುವುದಿಲ್ಲ. 230 ಕುಟುಂಬಗಳ ಪೈಕಿ 90 ಕುಟುಂಬಗಳು ನಗದು ಪರಿಹಾರ ಬಯಸಿವೆ.

ಎರಡನೇ ರೀತಿಯ ಪರಿಹಾರ ಪ್ಯಾಕೇಜ್‌ನಲ್ಲಿ ಫಲಾನುಭವಿ ಕುಟುಂಬಗಳಿಗೆ ₹ 75 ಸಾವಿರ ನಗದು, ಮೂರು ಎಕರೆ ಜಮೀನು ಹಾಗೂ ಮನೆ ನಿರ್ಮಿಸಿಕೊಡಲಾಗುತ್ತದೆ. ಪುನರ್ವಸತಿಗೆ ಗುರುತಿಸಲಾಗಿರುವ ಸ್ಥಳದಲ್ಲಿಈ ಸೌಲಭ್ಯಗಳನ್ನು ಅರಣ್ಯ ಇಲಾಖೆ ಕಲ್ಪಿಸಲಿದೆ. 116 ಕುಟುಂಬಗಳು ಈ ಪರಿಹಾರ ಪ್ಯಾಕೇಜ್‌ ಆಯ್ಕೆ ಮಾಡಿವೆ. 

ಮೂರನೇ ಮಾದರಿ ಪರಿಹಾರದಲ್ಲಿ ಫಲಾನುಭವಿಗಳಿಗೆ ₹ 5 ಲಕ್ಷ ನಗದು ಮತ್ತು ಮನೆ ನಿರ್ಮಿಸಿ ಕೊಡಲಾಗುತ್ತದೆ. 24 ಕುಟುಂಬಗಳು ಈ ಪ್ಯಾಕೇಜ್‌ ಅನ್ನು ಆಯ್ಕೆ ಮಾಡಿಕೊಂಡಿವೆ.

ಒಟ್ಟು ಯೋಜನಾ ವೆಚ್ಚದಲ್ಲಿ ₹ 15.93 ಕೋಟಿ ಹಣವು ಕುಟುಂಬಗಳಿಗೆ ಪರಿಹಾರ ನೀಡುವುದಕ್ಕೇ ಬೇಕು. ಉಳಿದ ಮೊತ್ತವನ್ನು ಇಲಾಖೆಯು ಪುನರ್ವಸತಿ ಸ್ಥಳದ ಅಭಿವೃದ್ಧಿಗೆ ವೆಚ್ಚ ಮಾಡಲಿದೆ. 

ಅರಣ್ಯ ಇಲಾಖೆ ಭೂಮಿ: ಪುನರ್ವಸತಿಗಾಗಿ ಗುರುತಿಸಿರುವ ಜಾಗ ಅರಣ್ಯ ಇಲಾಖೆಗೆ ಸೇರಿದ ಜಮೀನು. ಹನೂರು ವಲಯಕ್ಕೆ ಬರುವ ಮೀಸಲು ಅರಣ್ಯದ 178.91 ಹೆಕ್ಟೇರ್‌ ಪ್ರದೇಶದಲ್ಲಿ (448 ಎಕರೆ) ಹೊಸ ಜನವಸತಿ ನಿರ್ಮಾಣವಾಗಲಿದೆ. ಅರಣ್ಯ ಇಲಾಖೆಯು ಈ ಭೂಮಿಯನ್ನು ವಸತಿ ಉದ್ದೇಶಕ್ಕೆ ಬಳಸಿಕೊಳ್ಳಲು ಅರಣ್ಯ ಸಂರಕ್ಷಣೆ ಕಾಯ್ದೆ ಅಡಿ ಅರ್ಜಿ ಸಲ್ಲಿಸಿದೆ. ಆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಾಜ್ಯ ಹೆದ್ದಾರಿ 79 ಸಾಗುವ ಪ್ರದೇಶದಲ್ಲಿರುವ ಜಾಗ, ಹನೂರು ಪಟ್ಟಣದಿಂದ 3.5 ಕಿ.ಮೀ. ದೂರದಲ್ಲಿದೆ. ವೈಶಂಪಾಯನ ಗ್ರಾಮದ ರಸ್ತೆಯ ಮೂಲಕ ಇಲ್ಲಿಗೆ ಸಂಪರ್ಕ ಕಲ್ಪಿಸಬಹುದು. 178.91 ಹೆಕ್ಟೇರ್‌ ಪ್ರದೇಶದ ಪೈಕಿ 148.53 ಹೆಕ್ಟೇರ್‌ ಪ್ರದೇಶದಲ್ಲಿ ಕುರುಚಲು ಕಾಡು ಇದ್ದು, ಅದನ್ನು ತೆರವುಗೊಳಿಸಬೇಕಾಗಿದೆ. ಉಳಿದ ಜಾಗ ಖರಾಬು ಜಮೀನು.

‘ಅನುದಾನ ಸಮಸ್ಯೆಯಾಗದು’

‘ಇಡೀ ಗ್ರಾಮದ ಪುನರ್ವಸತಿಗೆ ಈಗಿನ ಲೆಕ್ಕಾಚಾರದಲ್ಲಿ ₹ 34.50 ಕೋಟಿ ಬೇಕಾಗುತ್ತದೆ. ಇದು ದೊಡ್ಡ ಮೊತ್ತವೇನೂ ಅಲ್ಲ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದಿಂದಲೂ ಅನುದಾನ ತರುವುದಕ್ಕೆ ಅವಕಾಶ ಇದೆ. ಚಂಗಡಿ ಗ್ರಾಮ ಸ್ಥಳಾಂತರಕ್ಕಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲೂ ಪ್ರತ್ಯೇಕ ಅನುದಾನ ಘೋಷಿಸಬಹುದು. ಅರಣ್ಯ ನಿರ್ಮಾಣ ಪರಿಹಾರ ನಿಧಿಯಿಂದಲೂ ಅನುದಾನ ಮಂಜೂರು ಮಾಡುವುದಕ್ಕೆ ಅವಕಾಶ ಇದೆ. ಹಾಗಾಗಿ ಯೋಜನೆಗೆ ಅನುದಾನದ ಕೊರತೆಯಾಗದು’ ಎಂದು ಡಿಸಿಎಫ್‌ ಏಡುಕುಂಡಲು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು