ಭಾನುವಾರ, ಜನವರಿ 24, 2021
19 °C
ಭತ್ತ ಖರೀದಿ ವಿಳಂಬ, ಅಧಿಕಾರಿಗಳ ವಿರುದ್ಧ ಆಕ್ರೋಶ, ಪೊಲೀಸರಿಗೆ ದೂರು

ವಿಷ ಸೇವಿಸಿ ರೈತ ಆತ್ಮಹತ್ಯೆ, ಆಸ್ಪತ್ರೆ ಮುಂದೆ ರೈತ ಸಂಘದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸಾಲ ಬಾಧೆಯಿಂದ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಲ್ಲೂಕಿನ ಜ್ಯೋತಿಗೌಡನಪುರದ ರೈತ ಪುಟ್ಟಣ್ಣ ಅವರ ಕುಟುಂಬಕ್ಕೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು ಹಾಗೂ ಭತ್ತ ಖರೀದಿ ಕೇಂದ್ರ ಆರಂಭಿಸಲು ವಿಳಂಬ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಭಾನುವಾರ ನಗರದ ಜಿಲ್ಲಾಸ್ಪತ್ರೆಯ ಎದುರು ದಿಢೀರ್‌ ಪ್ರತಿಭಟನೆ ನಡೆಸಿದರು. 

40 ವರ್ಷದ ಪುಟ್ಟಣ್ಣ ಅವರು ಶನಿವಾರ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕು ಹಾಗೂ ಖಾಸಗಿಯವರಿಂದ ಐದಾರು ಲಕ್ಷ ಸಾಲ ಮಾಡಿದ್ದರು. ಭತ್ತದ ಇಳುವರಿ ಉತ್ತಮವಾಗಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಿರುವುದರಿಂದ ನೊಂದಿದ್ದರು. ಸಾಲ ತೀರಿಸಲು ಆಗುವುದಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಚಾಮರಾಜನಗರದ ಪೂರ್ವ ಪೊಲೀಸ್‌ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಶನಿವಾರ ರಾತ್ರಿಯೇ ಶವವನ್ನು ತರಲಾಗಿತ್ತು.

ಭಾನುವಾರ ಆಸ್ಪತ್ರೆಯ ಎದುರು ಜಮಾಯಿಸಿದ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಹಾಗೂ ಕಾರ್ಯಕರ್ತರು, ‘ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಹಾಗೂ ರೈತ ಆತ್ಮಹತ್ಯೆ ಮಾಡಿದರೂ ಜಿಲ್ಲೆಯ ಅಧಿಕಾರಿಗಳು ಸ್ಪಂದಿಸಿಲ್ಲ, ಸರಿಯಾದ ಸಮಯಕ್ಕೆ ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರ ತೆರೆಯದೆ ರೈತರಿಗೆ ತೊಂದರೆ ಕೊಡಲಾಗುತ್ತಿದೆ’ ಎಂದು ಆರೋಪಿಸಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ಆರಂಭಿಸಿದರು. ಮಧ್ಯಾಹ್ನ 2.30ರವರೆಗೂ ಪ್ರತಿಭಟನೆ ನಡೆಸಿದರು. 

‘ಶನಿವಾರ ಸಂಜೆಯೇ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರೂ, ಪೊಲೀಸರು ಬಿಟ್ಟರೆ ಯಾವ ಅಧಿಕಾರಿಗಳೂ ಬಂದಿಲ್ಲ. ಬೆಂಬಲ ಬೆಲೆಯ ಅಡಿಯಲ್ಲಿ ಭತ್ತದ ಖರೀದಿ ಕೇಂದ್ರ ನಿಗದಿಯಂತೆ ಆರಂಭವಾಗಿದ್ದರೆ, ಪುಟ್ಟಣ್ಣ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ. ಸರ್ಕಾರ ವಿಳಂಬವಾಗಿ ಖರೀದಿ ಕೇಂದ್ರ ತೆರೆಯುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಜಿಲ್ಲೆಯಲ್ಲಿ ಇನ್ನೂ ಖರೀದಿ ಶುರುವಾಗಿಲ್ಲ. ರೈತರು ಕಟಾವು ಮಾಡಿದ ಭತ್ತವನ್ನು ಎಲ್ಲಿ ಇಟ್ಟುಕೊಳ್ಳಬೇಕು? ಮಾರುಕಟ್ಟೆಯಲ್ಲಿ ಬೆಲೆಯೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ತಹಶೀಲ್ದಾರ್‌ ಅವರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಪ್ರಭಾರ ತಹಶೀಲ್ದಾರ್‌ ಕೆ.ಕುನಾಲ್‌ ಅವರು ಸ್ಥಳಕ್ಕೆ ಬಂದು ರೈತರ ಅಹವಾಲು ಆಲಿಸಿದರು.

‘ಮೃತಪಟ್ಟಿರುವ ರೈತರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಾರದಲ್ಲಿ ಸಂಗ್ರಹಿಸಿ ಉಪ ವಿಭಾಗಾಧಿಕಾರಿ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಅವರನ್ನೊಳಗೊಂಡ ಸಮಿತಿಯ ಮುಂದೆ ಹಾಜರು ಪಡಿಸಿ, ಸರ್ಕಾರದಿಂದ ಬರುವ ಪರಿಹಾರವನ್ನು ನೀಡಲಾಗುವುದು’ ಎಂದು ಭರವಸೆ ನೀಡಿದರು. 

ಅಸಮಾಧಾನ: ರೈತ ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತಾದರೂ ಕಂದಾಯ ಇಲಾಖೆಯ ಅಧಿಕಾರಿಗಳು ಯಾರೊಬ್ಬರೂ ಬಂದು ಸ್ಪಂದಿಸಿಲ್ಲ. ಭತ್ತ ಖರೀದಿ ಕೇಂದ್ರ ಸಮಯದಕ್ಕೆ ಸರಿಯಾಗಿ ತೆರೆಯದೇ ಇರುವುದರಿಂದ ಸಮಸ್ಯೆಯಾಗುತ್ತಿದೆ. ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್‌ ವಿರುದ್ಧ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಉಪವಿಭಾಗಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದರು. 

ಡಿವೈಎಸ್‌‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರು ಬಂದು ರೈತರ ಮನವೊಲಿಸಲು ಯತ್ನಿಸಿದರು. ಇದಕ್ಕೂ ಅವರು ಬಗ್ಗಲಿಲ್ಲ. 

‘ಹಂದಿಗಳು ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ಫಸಲು ನಾಶವಾಗುತ್ತಿದೆ. ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಸಮಸ್ಯೆಗಳನ್ನು ಆಲಿಸಲು ಬಿಆರ್‌ಟಿ ಡಿಸಿಎಫ್‌ ಸ್ಥಳಕ್ಕೆ ಬರಬೇಕು’ ಎಂದು ಆಗ್ರಹಿಸಿದರು. ಕೆ.ಗುಡಿ ವಲಯದ ಆರ್‌ಎಫ್‌ಒ ಶಾಂತಪ್ಪ ಪೂಜಾರ್‌ ಅವರು ಬಂದು ರೈತರೊಂದಿಗೆ ಮಾತುಕತೆ ನಡೆಸಿದರು. 

ಶಾಸಕ ಭೇಟಿ, ಸಾಂತ್ವನ: ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಬೇಡಿಕೆಗಳನ್ನು ಆಲಿಸಿದರು. ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು ವೈಯಕ್ತಿಕವಾಗಿ ಧನ ಸಹಾಯವನ್ನೂ ಮಾಡಿದರು.

ದೂರು: ‘ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲು ವಿಳಂಬ ಮಾಡಿದ್ದರಿಂದ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಇತರ ರೈತರಿಗೆ ತೊಂದರೆಯಾಗಿದೆ. ಹಾಗಾಗಿ, ಸಂಬಂಧಿಸಿದ ಎಲ್ಲ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು  ರೈತ ಮುಖಂಡರು ಡಿವೈಎಸ್‌ಪಿ ಅವರಿಗೆ ದೂರು ನೀಡಿದರು. 

ನಂತರ ಪ್ರತಿಭಟನೆ ವಾಪಸ್‌ ಪಡೆದ ರೈತರು, ಪುಟ್ಟಣ್ಣ ಅವರ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕಾಗಿ ಊರಿಗೆ ತೆಗೆದುಕೊಂಡು ಹೋದರು. 

ರೈತ ಸಂಘದ ಮೈಸೂರು ವಿಭಾಗದ ಕಾರ್ಯದರ್ಶಿ ಮಹೇಶ್‌ ಪ್ರಭು, ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜು ಇತರರು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು