ನಾ.ಮಂಜುನಾಥಸ್ವಾಮಿ
ಯಳಂದೂರು: ಪ್ರಸಕ್ತ ಸಾಲಿನಲ್ಲಿ ಬೆಳೆಗಾರರು ಎಳ್ಳು ಬೆಳೆಯಿಂದ ವಿಮುಖರಾಗಿದ್ದಾರೆ.
ಮುಂಗಾರಿನ ಕಣ್ಣು ಮುಚ್ಚಾಲೆ ನಡುವೆ ಬಿತ್ತನೆ ಮಾಡಿದ ರೈತರು ಇಳುವರಿ ಕುಸಿತದಿಂದ ಕಂಗೆಟ್ಟಿದ್ದಾರೆ. ಇದರಿಂದ ಪ್ರತಿ ವರ್ಷ ಎಳ್ಳಿನ ಬೆಳೆ ವಿಸ್ತೀರ್ಣ ಕುಗ್ಗುತ್ತ ಸಾಗಿದೆ. ಸೋನೆ ಮಳೆ, ಕೀಟಬಾಧೆ, ನೀರಿನ ಕೊರತೆ ಇಳುವರಿ ಕುಸಿತಕ್ಕೆ ಕಾರಣವಾಗಿದೆ.
ತಾಲ್ಲೂಕಿನಲ್ಲಿ ಕಳೆದ ದಶಕದಿಂದ ಈಚೆಗೆ ಎಳ್ಳು ಬಿತ್ತನೆ ಪ್ರದೇಶ 100 ಹೆಕ್ಟೇರ್‌ಗಳಿಂದ 25 ಹೆಕ್ಟೇರ್‌ಗೆ ಕುಸಿದಿದೆ. ಮೂರು ತಿಂಗಳ ವಾಣಿಜ್ಯ ಬೆಳೆಯಾದ ಎಳ್ಳನ್ನು ಅಗರ, ಮದ್ದೂರು ಮತ್ತು ಕಸಬಾ ಹೋಬಳಿಯ ಕೆಲವೇ ಪ್ರದೇಶಕ್ಕೆ ಮಿತಿಗೊಳಿಸಲಾಗಿದೆ. ಮುಂಗಾರು ಪೂರ್ವ ಮಳೆ ಕೊರತೆಯಿಂದ ಬೆಳೆ ಕ್ಷೀಣಿಸಿದ್ದು. ಗುಣಮಟ್ಟ ಕಳೆದುಕೊಂಡಿದೆ.
‘ಎಳ್ಳು ಬಿತ್ತನೆಗೆ ಮುಂಗಾರು ಸೂಕ್ತ. ಸಕಾಲಕ್ಕೆ ಮಳೆ ಹಾಗೂ ಸಮತೋಲನದ ವಾತಾವರಣ ಎಳ್ಳು ಬೆಳೆಗೆ ಉತ್ತಮ. ಮಳೆ ಹದ ನೋಡಿಕೊಂಡು ಹೊಲಕ್ಕೆ ಎಳ್ಳು ಬಿತ್ತನೆ ಮಾಡಬೇಕು. ವಾರ ತುಂಬುವ ಮೊದಲೇ ಬೀಜಗಳು ಹುಟ್ಟುತ್ತವೆ. ಕುಂಟೆ ಹೊಡೆಯುವ, ಕಳೆ ಕೀಳುವ ಬಾಬ್ತು ಇರುವುದಿಲ್ಲ. ಮೊಳಕೆ ನಂತರ ಮೂರ್ನಾಲ್ಕು ಮಳೆ ಸುರಿದರೆ ಉತ್ತಮ ಇಳುವರಿ ಸಿಗುತ್ತದೆ. ಈ ಬಾರಿ ಸಣ್ಣ ಮಳೆಯೂ ಸುಳಿಯದ ಕಾರಣ ಬೆಳೆಗಾರರು ಬಿತ್ತನೆಗೆ ಹಿಂದೇಟು ಹಾಕಿದ್ದಾರೆ’ ಎಂದು ಕೃಷಿಕ ಕಂದಹಳ್ಳಿ ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ತುಂತುರು ಮಳೆಯಿಂದ ನಷ್ಟ: ‘ಅಲ್ಪಸ್ವಲ್ಪ ಎಳ್ಳು ಬೆಳೆ ಕಟಾವಿಗೆ ಬಂದಿದೆ. ಈ ಸಮಯದಲ್ಲಿ ತುಂತುರು ಮಳೆಯಿಂದ ತೊಂದರೆಯಾಗಿದೆ. ಇದರಿಂದ ಮತ್ತಷ್ಟು ನಷ್ಟ ಅನುಭವಿಸಬೇಕಿದೆ. ಸಾಗಣೆ, ಒಣಗಿಸುವುದು ಹಾಗೂ ಕಾಳು ಸಂಗ್ರಹ ಮಾಡುವ ಖರ್ಚು ಏರುತ್ತದೆ.
‘1 ಎಕೆರೆಗೆ ₹16 ಸಾವಿರ ಖರ್ಚಾಗಿದೆ. 3 ರಿಂದ 4 ಕ್ವಿಂಟಲ್ ಇಳುವರಿ ಬಂದರೆ ಸಾಕು. ಮಾರುಕಟ್ಟೆಯಲ್ಲಿ 1 ಕ್ವಿಂಟಲ್ ಎಳ್ಳಿನ ಧಾರಣೆ ₹7500 ರಿಂದ ₹9,000 ಇದೆ. ಎಳ್ಳು ಒಕ್ಕಣೆಯ ಸಮಯದಲ್ಲಿ ಮಳೆಗೆ ಸಿಲುಕಿದರೆ, ಗುಣಮಟ್ಟ ಕಳೆದುಕೊಂಡು ಬೆಲೆ ಕುಸಿಯುತ್ತದೆ’ ಎನ್ನುತ್ತಾರೆ ಸಾಗುವಳಿದಾರರು.
‘ಸಕಾಲಕ್ಕೆ ಮುಂಗಾರು ಪೂರ್ವ ಮಳೆ ಬಂದರೆ ಎಳ್ಳು ಬೆಳೆಗಾರರು ಉತ್ಸಾಹದಿಂದ ಬಿತ್ತನೆ ಮಾಡುತ್ತಾರೆ. ಇಳುವರಿ ಚೆನ್ನಾಗಿರುತ್ತದೆ. ಮಳೆ ವ್ಯತ್ಯಯದಿಂದ ಈ ಸಲ ಬೆಳೆ ವಿಸ್ತೀರ್ಣ ಕುಸಿದಿದೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಎಳ್ಳು:ಮೂರು ತಿಂಗಳ ಬೆಳೆ 100 ಹೆಕ್ಟೇರ್‌ನಿಂದ 25 ಹೆಕ್ಟೇರ್‌ಗೆ ತುಂತುರು ಮಳೆಯಾದರೆ ನಷ್ಟ
ಬಿಳಿ ಎಳ್ಳಿಗೆ ಬೇಡಿಕೆ ‘ಮಾರುಕಟ್ಟೆಯಲ್ಲಿ ಬಿಳಿ ಎಳ್ಳಿಗೆ ಬೇಡಿಕೆ ಹೆಚ್ಚು. ಈ ಭಾಗದಲ್ಲಿ ಬೆಳೆಯುವ ಕರಿ ಎಳ್ಳಿಗೆ ಹೆಚ್ಚು ಬೆಲೆ ಸಿಗುವುದಿಲ್ಲ. ಎಣ್ಣೆ ಕಾಳಿನ ಪಟ್ಟಿಯಲ್ಲಿ ಎಳ್ಳು ಇದ್ದರೂ ಪ್ರಯೋಜನ ಇಲ್ಲ. ಮಳೆಯ ಏರುಪೇರಿನಿಂದ ಎಳ್ಳು ಬೆಳೆ ಸರಿಯಾಗಿ ಕೈಸೇರುತ್ತಿಲ್ಲ. ಬೆಳೆ ನಿರ್ವಹಣೆ ಕಷ್ಟ. ಇದರಿಂದ ಪಾರಂಪರಿಕ ಬೆಳೆಗಾರರರು ಎಳ್ಳು ಬೆಳೆಯಿಂದ ಹಿಂದೆ ಸರಿದಿದ್ದಾರೆ. ಸರ್ಕಾರ ಪ್ರೋತ್ಸಾಹಧನ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.