ಗುರುವಾರ , ಮಾರ್ಚ್ 30, 2023
24 °C
ಮಳೆಗಾಲ ಆರಂಭದಲ್ಲೇ ಹರಿಸಲು ಮೀನ–ಮೇಷ, ನೀರು ಬಿಡುವಂತೆ ಕೃಷಿಕರ ಆಗ್ರಹ

ಕೆರೆಗಳಿಗೆ ಹರಿಯದ ನೀರು, ರೈತರ ಮುಗಿಯದ ಗೋಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕುಡಿಯುವ ನೀರಿಗಾಗಿ ಕೆರೆ ತುಂಬಿಸುವ ಯೋಜನೆಯ ವ್ಯಾಪ್ತಿಗೆ ಬರುವ ಜಿಲ್ಲೆಯ ಕೆರೆಗಳಿಗೆ, ಈ ಸಾಲಿನಲ್ಲಿ ನೀರು ಹರಿಸಲು ಕಾವೇರಿ ನೀರಾವರಿ ನಿಗಮ ಇನ್ನೂ ಕ್ರಮ ಕೈಗೊಳ್ಳದೆ ಇರುವುದು ಜಿಲ್ಲೆಯ ರೈತರ ಅಸಮಾಧಾನಕ್ಕೆ ಕಾರಣವಾಗಿದೆ. 

ಕೆರೆಗಳಿಗೆ ಹಾಗೂ ನಾಲೆಗಳಿಗೆ ನೀರು ಹರಿಸುವಂತೆ ಕೊಳ್ಳೇಗಾಲದಲ್ಲಿ ರೈತರು ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದಾರೆ. 

ಜಿಲ್ಲೆಯಲ್ಲಿ 55ಕ್ಕೂ ಹೆಚ್ಚು ಕೆರೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಈ ಪೈಕಿ, ನಂಜನಗೂಡು ತಾಲ್ಲೂಕಿನ ಆಲಂಬೂರಿನಿಂದ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳ 18ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿದಿದೆ. ಸುತ್ತೂರು ಬಳಿ ಕಪಿಲಾ ನದಿಯಿಂದ ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕುಗಳ 22 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. 

ಇದಲ್ಲದೇ, ಗಾಂಧಿ ಗ್ರಾಮ ಏತ ನೀರಾವರಿ ಯೋಜನೆ ಅಡಿಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಒಂಬತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೂ ಕಳೆದ ವರ್ಷ ಪೂರ್ಣವಾಗಿದೆ.

ಅನುಕೂಲಕರ ಯೋಜನೆ: ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಕೆರೆ ತುಂಬಿಸುವ ಯೋಜನೆಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಕೆರೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಸುಡು ಬೇಸಿಗೆ ಸಂದರ್ಭದಲ್ಲೂ ನೀರಿನ ಕೊರತೆ ಹೆಚ್ಚಾಗಿ ಬಾಧಿಸುತ್ತಿಲ್ಲ. ನೀರಿಲ್ಲ ಎಂಬ ಕಾರಣಕ್ಕೆ ಮೈಸೂರು, ಬೆಂಗಳೂರಿನಂತಹ ನಗರಗಳಿಗೆ ಕೆಲಸಕ್ಕಾಗಿ ಹೋಗಿದ್ದವರು, ವಾಪಸ್‌ ಬಂದು ಕೃಷಿಯಲ್ಲಿ ತೊಡಗಿಕೊಂಡ ಉದಾಹರಣೆಗಳೂ ಇವೆ.

ಆದರೆ, ಪ್ರತಿ ವರ್ಷವೂ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ನದಿಮೂಲದಿಂದ (ಕಬಿನಿ) ನೀರು ಹರಿಸುವುದಿಲ್ಲ ಎಂಬುದು ರೈತರ ಆರೋಪ. 

‘ವಿಳಂಬವಾಗುತ್ತಿರುವ ಕಾಮಗಾರಿಗಳನ್ನು ತ್ವರಿತಗೊಳಿಸಲು ಹಾಗೂ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕೆರೆಗಳಿಗೆ ನೀರು ಹರಿಸುವಂತೆ ಮಾಡಲು ಜಿಲ್ಲೆಯ ಜನಪ್ರತಿನಿಧಿಗಳು ವಿಫಲವಾಗುತ್ತಿದ್ದಾರೆ’ ಎಂದು ‌ಆಪಾದಿಸುತ್ತಾರೆ ರೈತ ಮುಖಂಡರು.

ಜನಪ್ರತಿನಿಧಿಗಳ ವಾಕ್ಸಮರ: ಕಳೆದ ವರ್ಷ ಕೆರೆಗಳಿಗೆ ನೀರು ಬಿಡುವ ವಿಚಾರದಲ್ಲಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳ ಜನಪ್ರತಿನಿಧಿಗಳ ನಡುವೆ ವಾಕ್ಸಮರವೂ ನಡೆದಿತ್ತು. ಕೆಲವರು ಪ್ರಭಾವ ಬಳಸಿ ಗುಂಡ್ಲುಪೇಟೆ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಸುತ್ತಿದ್ದಾರೆ ಎಂಬ ಆರೋಪವನ್ನು ಚಾಮರಾಜನಗರ ತಾಲ್ಲೂಕಿನ ಕಾಂಗ್ರೆಸ್‌ ಮುಖಂಡರು ಮಾಡಿದ್ದರು.  

ಕಾಮಗಾರಿ ವಿಳಂಬ: ನಂಜನಗೂಡಿನ ಎರಡು, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕುಗಳ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವರ್ಷದಿಂದ ವರ್ಷಕ್ಕೆ ವಿಳಂಬವಾಗುತ್ತಿದೆ. 2017ರ ಜುಲೈನಲ್ಲಿ ₹223 ಕೋಟಿ ವೆಚ್ಚದ ಈ ಯೋಜನೆಗೆ ಚಾಲನೆ ಸಿಕ್ಕಿತ್ತು. 18 ತಿಂಗಳಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಇನ್ನೂ ಮುಕ್ತಾಯವಾಗಿಲ್ಲ. ಉಮ್ಮತ್ತೂರು ದೊಡ್ಡ ಕೆರೆಗೆ ಜುಲೈ 30‌ರ ಒಳಗಾಗಿ ನೀರು ಹರಿಯದಿದ್ದರೆ, ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.

ಕೊಳ್ಳೇಗಾಲ ತಾಲ್ಲೂಕು ಸರಗೂರು ಬಳಿ ಕಾವೇರಿ ನದಿಯಿಂದ ಹನೂರು ತಾಲ್ಲೂಕಿನ ಹುಬ್ಬೆಹುಣಸೆ, ರಾಮನಗುಡ್ಡೆ ಹಾಗೂ ಗುಂಡಾಲ್‌ ಜಲಾಶಯಗಳಿಗೆ ನೀರು ತುಂಬಿಸುವ ₹132 ಕೋಟಿ ವೆಚ್ಚದ ಯೋಜನೆ ಪ್ರಗತಿಯಲ್ಲಿದೆ. ಆದರೆ, ಕಾಮಗಾರಿ ನಿಧಾನವಾಗುತ್ತಿದ್ದು, ಶೀಘ್ರದಲ್ಲಿ ಮುಕ್ತಾಯ ಕಾಣುವ ಸಾಧ್ಯತೆ ಕಾಣುತ್ತಿಲ್ಲ.

ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ

‘ಭಾರಿ ಪ್ರಯಾಸ ಪಟ್ಟು ಮಾಡಿ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಂಜೂರು ಮಾಡಿಸಲಾಗಿತ್ತು. ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳ 20 ಕೆರೆಗಳನ್ನು ನಾಲ್ಕು ಹಂತಗಳಲ್ಲಿ ತುಂಬಿಸುವ ಯೋಜನೆ ಈಗ ಕೊನೆಯ ಹಂತದಲ್ಲಿದೆ. ಯೋಜನೆಯ ಬಹುತೇಕ ಕೆರೆಗಳಿಗೆ ಈಗಾಗಲೇ ನೀರು ಬಂದಿದೆ. ಸುತ್ತೂರು ಏತ ಯೋಜನೆಯ ಮೊದಲ ಹಂತ ಇನ್ನೂ ಪೂರ್ಣಗೊಂಡಿಲ್ಲ. ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ’ ಎಂದು ಹೇಳುತ್ತಾರೆ ಕುಡಿಯುವ ನೀರಿಗಾಗಿ ಕೆರೆ ತುಂಬಿಸುವ ಯೋಜನೆಯ ಹೋರಾಟ ಸಮಿತಿ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ.

‘ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ಮಳೆಗಾಲ ಆರಂಭವಾದ ತಕ್ಷಣ ಕೆರೆಗಳಿಗೆ ನೀರು ಹರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಆದರೆ, ಆ ರೀತಿ ಆಗುತ್ತಿಲ್ಲ. ರೈತರು ಗ್ರಾಮಸ್ಥರು ಪ್ರತಿಭಟನೆ ಮಾಡಿದ ನಂತರವೇ ನೀರು ಹರಿಸಲಾಗುತ್ತಿದೆ. ಇದು ತಪ್ಪಬೇಕು. ಜೂನ್‌ನಲ್ಲೇ ಹರಿಸಿದರೆ ಸೆಪ್ಟೆಂಬರ್‌, ಅಕ್ಟೋಬರ್‌ ವೇಳೆಗೆ ಎಲ್ಲ ಕೆರೆಗಳು ತುಂಬುತ್ತವೆ. ಆಗ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಹೇಳುತ್ತಾರೆ. 

ರೈತರು ಏನಂತಾರೆ?

ಕೆರೆಗಳ ನಿರ್ವಹಣೆಯದ್ದೇ ಸಮಸ್ಯೆ

ಹೊಸದಾಗಿ ಕಾಲುವೆ ನೀರಾವರಿ ಪದ್ಧತಿ ಬಂದ ನಂತರ ಮೂಲ ಜಲಮೂಲಗಳನ್ನು ನಿರ್ಲಕ್ಷಿಸಲಾಯಿತು. ಎತ್ತರದ ಪ್ರದೇಶಗಳಿಂದ ಬರುತ್ತಿದ್ದ ನೀರಿನ ಒರತೆಗಳು ಕಾಲುವೆಗೆ ಸೇರಿ ಹೋದವು. ಕಾಲಕಾಲಕ್ಕೆ ದುರಸ್ತಿ ಮಾಡುತ್ತಿದ್ದ ಕೆಲಸಗಳು ಸ್ಥಗಿತಗೊಂಡವು. ಹೀಗಾಗಿ ಬಹುತೇಕ ಕೆರೆಗಳಲ್ಲಿ ನೀರು ಸಂಗ್ರಹಕ್ಕೆ ಹಿನ್ನಡೆಯಾಯಿತು. ರೈತರು ಅರೆ ನೀರಾವರಿ ಇಲ್ಲವೆ ಮಳೆ ನೀರಿಗಾಗಿ ಕಾಯುವ ಪರಿಸ್ಥಿತಿ ಇದೆ. ಹೀಗಾಗಿ, ಕೆರೆಗಳನ್ನು ಮತ್ತು ಅವುಗಳ ಮೂಲಗಳನ್ನು ಸಂರಕ್ಷಿಸಬೇಕಾಗಿದೆ

–ಲಿಂಗಯ್ಯ, ಮೆಲ್ಲಹಳ್ಳಿ ದುಗ್ಗಹಟ್ಟಿ ಯಳಂದೂರು ತಾಲ್ಲೂಕು

ಕೆರೆಗಳ ಸಮಗ್ರ ಅಭಿವೃದ್ಧಿ ಅಗತ್ಯ

ಬಹುತೇಕ ಕೆರೆಗಳಲ್ಲಿ ಹೂಳು ಹಾಗೂ ಕಳೆ ಗಿಡಗಳ ಸಮಸ್ಯೆ ಇದೆ. ಇವುಗಳನ್ನು ತೆರವುಗೊಳಿಸಿ ಕೆರೆಗಳ ವಿಸ್ತಾರ ಹೆಚ್ಚಿಸಬೇಕಿದೆ. ಇದರಿಂದ ಅಂತರ್ಜಲ ಹೆಚ್ಚುವುದರ ಜತೆಗೆ ರೈತರ ಕೊಳವೆ ಬಾವಿಗಳಲ್ಲೂ ಜಲಮರುಪೂರಣಗೊಂಡು ಕೃಷಿಕರಿಗೆ ನೆರವಾಗಲಿದೆ . ಬೇಸಿಗೆಯಲ್ಲಿ ಕಾಲುವೆಗಳಿಂದ ನೀರು ತುಂಬಿಸುವ ಪ್ರಕ್ರಿಯೆಗೆ ಶೀಘ್ರದಲ್ಲಿಯೇ ಚಾಲನೆ ನೀಡಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕಿದೆ

– ಉಮೇಶ್, ವೈ.ಕೆ.ಮೋಳೆ, ಯಳಂದೂರು ತಾಲ್ಲೂಕು

ಇಚ್ಛಾಶಕ್ತಿಯ ಕೊರತೆ

ಕೆರೆಗಳಿಗೆ ನೀರು ತುಂಬಿಸಲೇಬೇಕು ಎಂಬ ಇಚ್ಛಾಶಕ್ತಿ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಇರಬೇಕು. ಇಬ್ಬರಿಗೂ ಇಚ್ಛಾಶಕ್ತಿ ಇಲ್ಲ. ಹೀಗಾಗಿ, ಸಮಯಕ್ಕೆ ಸರಿಯಾಗಿ ನೀರು ಕೆರೆಗಳಿಗೆ ಬರುವುದಿಲ್ಲ

–ಕಡಬೂರು ಮಂಜುನಾಥ್, ಗುಂಡ್ಲುಪೇಟೆ

ಒಣಗಿದ ಬೆಳೆಗಳು 

ಕೆರೆಕಟ್ಟೆಗಳಿಗೆ ನೀರಿಲ್ಲದೆ ಅನೇಕ ಬೆಳೆಗಳು ಒಣಗಿನಿಂತಿದೆ. ನಾವು ಈ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ನೀರಿಲ್ಲದೆ ಕಬ್ಬು, ಜೋಳದ ಬೆಳೆ ನಾಶವಾಗುತ್ತಿದೆ. ಒಂದು ವೇಳೆ ನಮ್ಮ ಬೆಳೆ ನಾಶವಾದರೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು.

– ಪುನೀತ್, ಕೊಳ್ಳೇಗಾಲ

ರೈತರಿಗೆ ಸಂಕಷ್ಟ

ಹುಬ್ಬೆಹುಣಸೆ, ಜಲಾಶಯವನ್ನೇ ನಂಬಿ ನೂರಾರು ರೈತರು ಸಾವಿರಾರು ಎಕರೆಯಲ್ಲಿ ಕಬ್ಬು, ಜೋಳ, ರಾಗಿ ಅರಿಶಿಣ ಮುಂತಾದ ಫಸಲು ಬೆಳೆದಿದ್ದಾರೆ. ಕಳೆದ ವರ್ಷವೂ ಮಳೆಯಿಲ್ಲದೇ ಜಲಾಶಯ ಬರಿದಾಗಿತ್ತು. ಈ ಬಾರಿ ಸೂಕ್ತ ಸಮಯಕ್ಕೆ ಕೆರೆಗೆ ನೀರು ತುಂಬಿಸದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ.

 –ಮಹದೇವಸ್ವಾಮಿ, ಉದ್ದನೂರು, ಹನೂರು ತಾಲ್ಲೂಕು

ಯೋಜನೆ ಶೀಘ್ರ ಪೂರ್ಣಗೊಳ್ಳಲಿ

ಜಮೀನಿನಲ್ಲಿ ಅಲ್ಪಸ್ವಲ್ಪ ನೀರು ಬರುತ್ತಿತ್ತು. ಅದನ್ನೇ ನಂಬಿ ಈ ಬಾರಿ ಕೃಷಿ ಮಾಡಿದ್ದೇನೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಮಳೆಯೂ ಬೀಳಲಿಲ್ಲ. ಆದಷ್ಟು ಬೇಗ ಕೆರೆಗಳಿಗೆ ನೀರು ತುಂಬಿಸಿದರೆ ನಮಗೆ ಅನುಕೂಲವಾಗುತ್ತದೆ.

–ಶಿವಣ್ಣ, ಹನೂರು

–––

ಜುಲೈನಲ್ಲಿ ಕೆರೆಗಳಿಗೆ ನೀರು ತುಂಬಿಸುವ ನಿರೀಕ್ಷೆಯಿತ್ತು. ಲಾಕ್‌ಡೌನ್‌ನಿಂದಾಗಿ 2 ತಿಂಗಳು ಕಾಮಗಾರಿ ಸ್ಥಗಿತಗೊಂಡಿತ್ತು. ಆಗಸ್ಟ್ –ಸೆಪ್ಟೆಂಬರ್‌ನಲ್ಲಿ ಕೆರೆಗಳಿಗೆ ನೀರು ಹರಿಯಲಿದೆ
ಆರ್.ನರೇಂದ್ರ, ಹನೂರು ಶಾಸಕ

––

ತಮಿಳುನಾಡಿಗೆ ನೀರು ಹರಿಸುವ ಅಧಿಕಾರಿಗಳು, ಕೆರೆಗಳಿಗೆ ನೀರು ತುಂಬಿಸಲು ಹಿಂದೇಟು ಹಾಕುತ್ತಿದ್ದಾರೆ. ಮಳೆಗಾಲ ಆರಂಭದಲ್ಲೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕು
ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌, ಕಬ್ಬು‌ ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ

––

ಪ್ರತಿ ವರ್ಷ ಹೋರಾಟ ಮಾಡಿ ನೀರು ಬಿಡಿಸುವ ಪರಿಸ್ಥಿತಿ ಇದೆ. ಪ್ರತಿ ಬಾರಿ ತಡವಾಗಿಯೇ ಬಿಡುತ್ತಿದ್ದಾರೆ. ಇದರಿಂದಾಗಿ ನೀರಿಲ್ಲದೆ ಜನ ಜಾನುವಾರುಗಳಿಗೆ ತೊಂದರೆಯಾಗಿದೆ.
ಹೊನ್ನೂರು ಪ್ರಕಾಶ್‌, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

–––––––

ಪ್ರಜಾವಾಣಿ ತಂಡ: ಸೂರ್ಯನಾರಾಯಣ ವಿ., ನಾ.ಮಂಜುನಾಥ ಸ್ವಾಮಿ, ಅವಿನ್ ಪ್ರಕಾಶ್ ವಿ., ಬಿ.ಬಸವರಾಜು ಮತ್ತು ಮಲ್ಲೇಶ ಎಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು