ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯ ನವಿಲೂರಿನಲ್ಲಿರುವ ಕೆರೆಯೊಂದು ಇತ್ತೀಚೆಗೆ ಸುರಿದ ಮಳೆಗೆ ತುಂಬಿರುವುದು
ಬಿತ್ತನೆ ಬೀಜ ವಿತರಣೆ ನಡೆಯುತ್ತಿದೆ. ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ. ರಸಗೊಬ್ಬರವೂ ಸಾಕಷ್ಟಿದೆ
ಎಸ್.ಎಸ್.ಆಬೀದ್ ಜಂಟಿ ಕೃಷಿ ನಿರ್ದೇಶಕ
ಮಳೆಯ ನಿರೀಕ್ಷೆಯಲ್ಲಿ ಅನ್ನದಾತ
ಯಳಂದೂರು: ತಾಲ್ಲೂಕಿನ ಶೇ 85 ರಷ್ಟು ಭಾಗದ ರೈತರು ಮುಂಗಾರು ಹಂಗಾಮಿನ ನಿರೀಕ್ಷೆಯಲ್ಲಿ ಭೂಮಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಒಂದೆರಡು ಮಳೆ ಕಾಣಿಸಿಕೊಂಡಿದೆ. ಆದರೆ ಮಣ್ಣು ತಂಪಾಗಿಸುವಷ್ಟು ಸುರಿದಿಲ್ಲ. ಒಣ ಭೂಮಿಯ ಕಾವು ಆರಿಲ್ಲ. ಈ ನಡುವೆ ಉತ್ತುವ ಮತ್ತು ಬಿತ್ತುವ ಪ್ರಕ್ರಿಯಿಗೆ ಬೇಸಾಯಗಾರರು ಮುಂದಾಗಿದ್ದಾರೆ. ನೀರಿನ ಮೂಲ ಹೊಂದಿರುವ ಮಂದಿ 1585 ಹೆಕ್ಟೇರ್ ಪ್ರದೇಶದಲ್ಲಿ ಬೇಸಿಗೆ ಬೆಳೆಯಾಗಿ ಕಬ್ಬು ಭತ್ತ ರಾಗಿ ಉದ್ದು ಮುಸುಕಿನ ಜೋಳ ಮತ್ತು ಬಿಳಿಜೋಳ ನಾಟಿ ಮಾಡಿದ್ದಾರೆ. ಜಾನುವಾರು ಹೊಂದಿರುವ ಹಿಡುವಳಿದಾರರು ಮೇವಿಗಾಗಿ ಕೃಷಿ ಮಾಡಿದ್ದು ಹೆಚ್ಚುವರಿ ಫಸಲನ್ನು ಅವಧಿಗೂ ಮೊದಲೇ ಮಾರಾಟ ಮಾಡಿ ತುಸು ಆದಾಯ ಗಳಿಸುವತ್ತಲೂ ಕೃಷಿಯಲ್ಲಿ ತೊಡಗಿದ್ದಾರೆ. ‘ಬೇಸಿಗೆ ಅವಧಿಯಲ್ಲಿ ಭತ್ತ 290 ಹೆಕ್ಟೇರ್ ಬಿಳಿಜೋಳ 80 ರಾಗಿ 170 ಮೆಕ್ಕೆಜೋಳ 295 ಉದ್ದು 110 ಹಾಗೂ ಕಬ್ಬು 640 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ತೆಂಗು ಅಡಿಕೆ ತೋಟಗಳಿಗೆ ನೀರಿನ ಕೊರತೆ ಬಾಧಿಸಿದೆ. ಮಳೆ ಆರಂಭವಾದರೆ ಮೇ 15 ರೊಳಗೆ ಉದ್ದು ಹೆಸರು ಮತ್ತು ಅಲಸಂದೆ ಬಿತ್ತನೆಗೆ ಅವಕಾಶ ಇದೆ. ನಂತರ ಚಂಬೆ ಮತ್ತು ಸೆಣಬು ವಿತರಣೆಗೆ ಯೋಜನೆ ರೂಪಿಸಬೇಕಾಗುತ್ತದೆ’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ. ವೆಂಕಟರಂಗಶೆಟ್ಟಿ ಹೇಳಿದರು.