ಗುಂಡ್ಲುಪೇಟೆ: ಪಟ್ಟಣ ತಾಲ್ಲೂಕು ಕಚೇರಿ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆ ವತಿಯಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಬುಧವಾರ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.
ತಾಲ್ಲೂಕು ಕೆರೆಗಳಿಗೆ ನೀರು ತುಂಬಿಸುವ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೆ.15ರಂದು ಎರಡನೇ ಮೋಟಾರ್ ಚಾಲನೆ ಮಾಡುವ ಮೂಲಕ ಹುತ್ತೂರು ಕೆರೆ ಮತ್ತು ನಂತರದಲ್ಲಿ ಅದರ ಮುಂದಿನ ಕೆರೆಗಳಿಗೆ ನೀರು ಹರಿಸುವ ಭರವಸೆ ನೀಡಿದ್ದರು. ಆದರೆ ತಾಂತ್ರಿಕ ಕಾರಣದಿಂದ ನ.1 ರಿಂದ ನೀರು ಹರಿಸುವ ಭರವಸೆ ಸಿಕ್ಕಿದೆ ಎಂದು ತಿಳಿಸಿದರು.
ಬೆಳೆ ವಿಮೆ ಕಂಪನಿ ಮತ್ತು ರೈತರ ನಡುವಿನ ಒಪ್ಪಂದ ಆಗಿರುತ್ತದೆ. ಬೆಳೆ ನಷ್ಟದ ಸಂದರ್ಭದಲ್ಲಿ ಪರಿಹಾರ ನೀಡಲು ಕಂಪನಿಯವರು ಅನುಸರಿಸುವ ಮಾನದಂಡ ಸರಿಯಿಲ್ಲ ಎಂದು ತಿಳಿಸಿದ್ದೀರಿ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು. ಅಲ್ಲದೇ ಬೆಳೆವಿಮೆ ಕಟ್ಟುವ ಸಂದರ್ಭದಲ್ಲಿ ಸೂಕ್ತ ಕಂಪನಿ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಬೇಡಿಕೆಗಳ ಈಡೇರಿಕೆಗೆ ಬದ್ಧವಾಗಿರುವ ಕಾರಣ ಧರಣಿ ಕೈಬಿಡುವಂತೆ ಮನವಿ ಮಾಡಿದರು.
ಬೆಳೆವಿಮೆ ಕಟ್ಟಿಸಿಕೊಂಡ ಕಂಪನಿಯಗಳು ಹಲವು ವರ್ಷಗಳಿಂದ ರೈತರನ್ನು ವಂಚಿಸುತ್ತಿವೆ. ಈ ಹಿನ್ನೆಲೆಯಲ್ಲಿ ಬೆಳೆವಿಮೆ ಪರಿಹಾರ ಜೊತೆಗೆ ಬಾಳೆ ಬೆಳೆ ಪರಿಹಾರ ರೈತರ ಖಾತೆಗೆ ಜಮೆ ಆಗುವ ತನಕ ಧರಣಿ ಕೈಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಧರಣಿ ಮುಂದುವರೆಸಿದ್ದಾರೆ.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಿವಪುರ ಮಹದೇವಪ್ಪ, ಉಪಾಧ್ಯಕ್ಷ ಹಂಗಳ ಮಾಧು, ತಾಲ್ಲೂಕು ಅಧ್ಯಕ್ಷ ದಿಲೀಪ್, ಮುಖಂಡರಾದ ಶಿವಣ್ಣ, ನಾಗರಾಜು, ಮಹದೇವಶೆಟ್ಟಿ, ಮಹೇಂದ್ರ, ರಾಜಶೇಖರಪ್ಪ, ರೂಪೇಶ್, ಲೋಕೇಶ್, ರಘು, ನಾಗರಾಜಪ್ಪ, ರೇವಣ್ಣ ಹಾಜರಿದ್ದರು.