ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ದೊಡ್ಡ ರಾಗಿಗೆ ‘ಜಿಐ ಟ್ಯಾಗ್‌’ ಕೂಗು

Published 29 ಫೆಬ್ರುವರಿ 2024, 6:14 IST
Last Updated 29 ಫೆಬ್ರುವರಿ 2024, 6:14 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮಗಳಲ್ಲಿ ಮಾತ್ರ ಬೆಳೆಯುವ ದೊಡ್ಡ ರಾಗಿ ತಳಿಗೆ ‘ಜಿಐ ರಿಜಿಸ್ಟ್ರಿ’ (ಭೌಗೋಳಿಕ ಸೂಚಕ ಸ್ಥಾನಮಾನ) ನೀಡಬೇಕು ಎಂಬ ಕೂಗು ಎದ್ದಿದೆ. 

ಮಹದೇಶ್ವರ ಬೆಟ್ಟದ ಕಾಡಂಚು ಮತ್ತು ಅರಣ್ಯದ ಒಳಗೆ ಇರುವ ಗ್ರಾಮಗಳ ಜನರು ಸಹಜ ಕೃಷಿ ಪದ್ಧತಿಯಲ್ಲಿ ಈ ರಾಗಿ ತಳಿ ಬೆಳೆಯುತ್ತಿದ್ದಾರೆ. ಗಾತ್ರದಲ್ಲಿ ಸಾಮಾನ್ಯ ರಾಗಿಗಿಂತ ದೊಡ್ಡದಾಗಿರುವ ಈ ತಳಿ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. 

ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಮುಖಂಡರು, ಸಹಜ ಕೃಷಿ ಪ್ರೋತ್ಸಾಹಿಸುವವರು ಈ ತಳಿಯನ್ನು ಉಳಿಸಲು ಪ್ರಯತ್ನ ಆರಂಭಿಸಿದ್ದು, ಅದರ ಪ್ರಯತ್ನವಾಗಿ ‘ಜಿಐ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದಾರೆ. ಸರ್ಕಾರ, ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದಾರೆ. 

500 ಎಕರೆಯಲ್ಲಿ ಬೆಳೆ: ಬೆಟ್ಟ ವ್ಯಾಪ್ತಿಯಲ್ಲಿರುವ ಹಳ್ಳಿಗಳಲ್ಲೂ ರಾಗಿ, ದೊಡ್ಡ ರಾಗಿ, ಸೇರಿದಂತೆ ಇತರೆ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ದೊಡ್ಡಾಣೆ, ತೋಕರೆ ಮತ್ತು ಕೋಕ್ಬರೆ ಗ್ರಾಮಗಳಲ್ಲಿ ಹೆಚ್ಚಿನ ಕುಟುಂಬಗಳು ದೊಡ್ಡ ರಾಗಿ ಬೆಳೆಯುತ್ತಿವೆ. 

‘ನಮ್ಮ ಊರಿನಲ್ಲಿ 100 ಕುಟುಂಬಗಳಿವೆ. 250 ಎಕರೆ ಪ್ರದೇಶದಲ್ಲಿ ದೊಡ್ಡ ರಾಗಿ ಬೆಳೆಯುತ್ತೇವೆ. ತೋಕರೆ, ಕೋಕ್ಬರೆಗಳಲ್ಲೂ ಇದನ್ನು ಹೆಚ್ಚು ಬೆಳೆಯುವವರಿದ್ದಾರೆ. ಉಳಿದಂತೆ ಇಂಡಿಗನತ್ತ, ಪಡಸಲನತ್ತ, ತೇಕಾಣೆ, ನಾಗಮಲೆಗಳಲ್ಲೂ ಬೆಳೆಯಲಾಗುತ್ತದೆ. ಒಟ್ಟಾರೆ 500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ದೊಡ್ಡ ರಾಗಿ ಬೆಳೆಯಲಾಗುತ್ತದೆ’ ಎಂದು ದೊಡ್ಡಾಣೆ ಗ್ರಾಮದ ಕೃಷಿಕ ಮಹದೇವ್‌ ‘ಪ್ರಜಾವಾಣಿ’ಗೆ ‌ತಿಳಿಸಿದರು. 

ಸಹಜ ವಿಧಾನ: ಬೆಟ್ಟ ವ್ಯಾಪ್ತಿಯಲ್ಲಿ ಈಗಲೂ ರೈತರು ಸಹಜ, ಸಾವಯವ ವಿಧಾನದಲ್ಲಿ ವ್ಯವಸಾಯ ಮಾಡುತ್ತಾರೆ. ದೊಡ್ಡರಾಗಿಯ ರೀತಿಯಲ್ಲೇ ಅವರೆ ಮತ್ತು ಸಾಸಿವೆ ಕೂಡ ಹೆಚ್ಚು ಬೆಳೆಯಲಾಗುತ್ತದೆ. ವಿಷಮುಕ್ತ ವಾತಾವರಣದಲ್ಲಿ ಬೆಳೆದಿರುವ ಈ ಬೆಳೆಗಳು ಹೆಚ್ಚು ಪೌಷ್ಟಿಕಾಂಶ ಹೊಂದಿವೆ. ಆರೋಗ್ಯಕ್ಕೂ ಒಳ್ಳೆಯದು. ಇಳುವರಿ ಕಡಿಮೆ ಬಂದರೂ ರೈತರು ತಮ್ಮ ಪಾರಂಪರಿಕ ವಿಧಾನ ಬಿಟ್ಟಿಲ್ಲ’ ಎಂದು ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್‌ ಹೇಳಿದರು. 

ಸಾಂಪ್ರದಾಯಿಕ ಒಕ್ಕಣೆ: ಕಟಾವಿನ ಬಳಿಕ ಗ್ರಾಮಸ್ಥರು ಸಾಂಪ್ರದಾಯಿಕ ವಿಧಾನದಲ್ಲಿ ಒಕ್ಕಣೆ ಮಾಡುತ್ತಾರೆ.  ತೆನೆಯನ್ನು ಕಣದಲ್ಲಿ ಬಿಸಿಲಿಗೆ ಹರಡಿ, ನಂತರ ಕೋಲಿನಿಂದ ಬಡಿಯುತ್ತಾರೆ. ಈ ಕಾರ್ಯಕ್ಕೆ ಪುರುಷರೊಂದಿಗೆ ಮಹಿಳೆಯರೂ ಜೊತೆಯಾಗುತ್ತಾರೆ. ಅಪರೂಪದ ದೊಡ್ಡ ರಾಗಿ ತಳಿಯನ್ನು ಉಳಿಸಬೇಕಾಗಿದೆ. ಭೌಗೋಳಿಕ ಮಾನ್ಯತೆ ಸಿಕ್ಕರೆ ಈ ಪ್ರಯತ್ನಕ್ಕೆ ಅನುಕೂಲವಾಗಲಿದೆ ಹೊನ್ನೂರು ಪ್ರಕಾಶ್‌ ರೈತ ಮುಖಂಡ

ದೊಡ್ಡ ರಾಗಿಯ ರಾಶಿ
ದೊಡ್ಡ ರಾಗಿಯ ರಾಶಿ
ಅಪರೂಪದ ದೊಡ್ಡ ರಾಗಿ ತಳಿಯನ್ನು ಉಳಿಸಬೇಕಾಗಿದೆ. ಭೌಗೋಳಿಕ ಮಾನ್ಯತೆ ಸಿಕ್ಕರೆ ಈ ಪ್ರಯತ್ನಕ್ಕೆ ಅನುಕೂಲವಾಗಲಿದೆ
ಹೊನ್ನೂರು ಪ್ರಕಾಶ್‌ ರೈತ ಮುಖಂಡ
ಗ್ರಾಹಕರಿಂದ ನೇರ ಖರೀದಿ
ರೈತರು ಬೆಳೆದಿರುವ ದೊಡ್ಡ ರಾಗಿಯಲ್ಲಿ 200 ಕ್ವಿಂಟಲ್‌ಗಳನ್ನು ತುಮಕೂರಿನ ಗಾಂಧೀಜಿ ಸಹಜ ಬೇಸಾಯ ಆಶ್ರಮದ ತಜ್ಞ ಎಚ್.ಮಂಜುನಾಥ ಅವರ ನೇತೃತ್ವದಲ್ಲಿ ಬೆಂಗಳೂರಿನ ಸಹಜ ಕೃಷಿ ಪ್ರೋತ್ಸಾಹಕರು ತಮ್ಮ ಬಳಕೆಗಾಗಿ ನೇರವಾಗಿ ಖರೀದಿ ಮಾಡಿದ್ದಾರೆ.   ‘ಕೃಷಿಕರು ರಾಸಾಯನಿಕ ಸಿಂಪಡಣೆ ಮಾಡಿ ಬೆಳೆಸಿದ ರಾಗಿಯ ಬೆಲೆಯಲ್ಲೇ ಇಲ್ಲಿವರೆಗೆ ಮಾರಾಟ ಮಾಡುತ್ತಿದ್ದರು. ದೊಡ್ಡ ಆದಾಯವೂ ಸಿಗುತ್ತಿರಲಿಲ್ಲ. ಈ ವರ್ಷ ರಾಗಿಯನ್ನು ಬೆಂಗಳೂರಿಗೆ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿದ್ದಾರೆ. ಅವರಿಗೆ ಉತ್ತಮ ಬೆಲೆಯೂ ಸಿಕ್ಕಿದೆ’ ಎಂದು ಹೊನ್ನೂರು ಪ್ರಕಾಶ್‌ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT