ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರಿಗೆ ವರುಣನ ಸ್ವಾಗತ; ಜಮೀನಿಗಿಳಿದ ರೈತರು

ವಾರದಿಂದೀಚೆಗೆ ಜಿಲ್ಲೆಯಾದ್ಯಂತ ಉತ್ತಮ ಮಳೆ, ಭತ್ತದ ಬೆಳೆ ರಕ್ಷಣೆಯೇ ಸವಾಲು
Last Updated 12 ಅಕ್ಟೋಬರ್ 2021, 2:07 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಹಿಂಗಾರು ಮಳೆ ಉತ್ತಮ ಆರಂಭವನ್ನೇ ಪಡೆದಿದ್ದು, ಅಕ್ಟೋಬರ್‌ 1ರಿಂದೀಚೆಗೆ ಚೆನ್ನಾಗಿ ಮಳೆಯಾಗುತ್ತಿದೆ.

ಸೆಪ್ಟೆಂಬರ್‌ ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದೆ (ವಾಡಿಕೆ ಮಳೆ 15.5 ಸೆಂ.ಮೀ, ಮಳೆಯಾಗಿದ್ದು 6 ಸೆಂ.ಮೀ) ಆತಂಕಕ್ಕೆ ಗುರಿಯಾಗಿದ್ದ ರೈತರಲ್ಲಿ ವರ್ಷಧಾರೆಯು ಸಂತಸವನ್ನು ಮೂಡಿಸಿದೆ. ಹಿಂಗಾರು ಅವಧಿಯ ವ್ಯವಸಾಯ ಆರಂಭಿಸಲು ಪ್ರೇರೇಪಿಸಿದೆ

‘ಭತ್ತ ಬೆಳೆ ಒಂದನ್ನು ಬಿಟ್ಟು, ಉಳಿದೆಲ್ಲಾ ಬೆಳೆಗಳಿಗೆ ಈ ಮಳೆಯು ಅನುಕೂಲಕರವಾಗಿದೆ. ಜಿಲ್ಲೆಯಲ್ಲಿ ಭತ್ತ ನಾಟಿ ಕಾರ್ಯ ಎಲ್ಲ ಕಡೆಗಳಲ್ಲೂ ಪೂರ್ಣಗೊಂಡಿದೆ. ಮಳೆಯಾಗುತ್ತಿರುವುದರಿಂದ ಗದ್ದೆಗಳಲ್ಲಿ ನೀರು ಹೆಚ್ಚು ನಿಲ್ಲುತ್ತಿದ್ದು, ಇದರಿಂದ ಭತ್ತದ ಬೆಳೆಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಗದ್ದೆಯಲ್ಲಿ ಸಂಗ್ರಹವಾಗುವ ನೀರು, ಹೊರಗೆ ಹರಿದು ಹೋಗುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ರೈತರಿಗೆ ಸೂಚಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಕಡಿಮೆಯಾಗಿತ್ತು. ಮುಂಗಾರಿನ ಆರಂಭದ ಅವಧಿಯಲ್ಲಿ ಉತ್ತಮ ಮಳೆಯಾಗಿತ್ತು. ಆಗಸ್ಟ್‌ ಕೊನೆ ಹಾಗೂ ಸೆಪ್ಟೆಂಬರ್‌ನಲ್ಲಿ ನಿರೀಕ್ಷೆಯಷ್ಟು ಮಳೆಯಾಗಿರಲಿಲ್ಲ. ಸೆಪ್ಟೆಂಬರ್‌ ಮಧ್ಯಭಾಗದಲ್ಲಿ ಪ್ರಖರ ಬಿಸಿಲಿನ ವಾತಾವರಣ ಇತ್ತು. ಮೋಡ ಕವಿದ ವಾತಾವರಣ ಇದ್ದರೂ ಮಳೆಯಾಗುತ್ತಿರಲಿಲ್ಲ. ತಿಂಗಳ ಕೊನೆಗೆ ಗುಂಡ್ಲುಪೇಟೆಯ ಕೆಲವು ಭಾಗಗಳಲ್ಲಿ ಬೆಳೆ ನಿಧಾನವಾಗಿ ಒಣಗಲೂ ಆರಂಭಿಸಿತ್ತು. ರೈತರು ಬೆಳೆ ನಷ್ಟದ ಭೀತಿಯಲ್ಲಿ ಇರುವಾಗಲೇ ಮಳೆಯಾಗಿತ್ತು. ಹಾಗಾಗಿ, ಆತಂಕ ದೂರವಾಗಿತ್ತು.

ಮಳೆ ಕ್ಯಾಲೆಂಡರ್‌ ಪ್ರಕಾರ ಹಿಂಗಾರು ಮಳೆಯ ಅವಧಿ ಅಕ್ಟೋಬರ್‌ 1ರಿಂದ ಆರಂಭವಾಗುತ್ತದೆ. ಜಿಲ್ಲೆಯಲ್ಲಿ ಹಿಂಗಾರು ಅವಧಿಯ ಆರಂಭದಿಂದಲೇ ಉತ್ತಮ ಮಳೆಯಾಗುತ್ತಿದೆ. ಮೊದಲ 11 ದಿನಗಳ ಅವಧಿಯಲ್ಲಿ ವಾಡಿಕೆಯಾಗಿ 6.38 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ 9.7 ಸೆಂ.ಮೀನಷ್ಟು ಮಳೆ ಸುರಿದಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಬಿತ್ತನೆ ಆರಂಭ: ಮಳೆಯಾಗುತ್ತಿದ್ದಂತೆಯೇ ರೈತರು ಹಿಂಗಾರು ಅವಧಿಯ ಕೃಷಿ ಚುಟವಟಿಕೆ ಆರಂಭಿಸಿದ್ದಾರೆ.ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಹುರುಳಿ ಮತ್ತು ಕಡಲೆ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಉಳಿದಂತೆ ಜೋಳ, ರಾಗಿ, ಅಲಸಂದೆ, ಅವರೆ, ಕಬ್ಬುಗಳನ್ನು ಸ್ವಲ್ಪ ಪ್ರಮಾಣದಲ್ಲಿ ರೈತರು ಬೆಳೆಯುತ್ತಾರೆ.

ಈ ಬಾರಿ 36,260 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿಯನ್ನು ಕೃಷಿ ಇಲಾಖೆ ಹೊಂದಿದ್ದು, ಸದ್ಯ 1,102 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.20,355 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹುರುಳಿಯನ್ನೇ ಬಿತ್ತನೆ ಮಾಡಲಿದ್ದಾರೆ. ಈಗ 562 ಹೆಕ್ಟೇರ್‌ನಲ್ಲಿ ಪೂರ್ಣಗೊಂಡಿದೆ. ಮಳೆಯಾಗುತ್ತಿರುವುದರಿಂದ ಬಿತ್ತನೆ ಕಾರ್ಯ ಇನ್ನು ಚುರುಕುಗೊಳ್ಳಲಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಯಳಂದೂರು ತಾಲ್ಲೂಕಿನಲ್ಲಿ ಹೆಚ್ಚು ಮಳೆ

ಜಿಲ್ಲೆಯಾದ್ಯಂತ ಭಾನುವಾರ ಉತ್ತಮವಾಗಿ ಮಳೆ ಸುರಿದಿದೆ. ಸೋಮವಾರ ಬೆಳಿಗ್ಗೆ 8.30ರ ಅವಧಿಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 2.13 ಸೆಂ.ಮೀ ಮಳೆಯಾಗಿದೆ.

ಯಳಂದೂರು ತಾಲ್ಲೂಕಿನಲ್ಲಿ ಹೆಚ್ಚು ಮಳೆ ಬಿದ್ದಿದೆ. 4.57 ಸೆಂ.ಮೀ ಮಳೆಯಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 3.4 ಸೆಂ.ಮೀ, ಕೊಳ್ಳೇಗಾಲ 2.42 ಸೆಂ.ಮೀ, ಹನೂರಿನಲ್ಲಿ 2.09 ಸೆಂ.ಮೀ ಮಳೆಯಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅತಿ ಕಡಿಮೆ ಅಂದರೆ, 0.48 ಸೆಂ.ಮೀ ಮಳೆ ಸುರಿದಿದೆ.

ಸೋಮವಾರವೂ ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕುಗಳಲ್ಲಿ ವರ್ಷಧಾರೆ ಸುರಿದಿದೆ.

---

ರೈತಸಂಪರ್ಕ ಕೇಂದ್ರಗಳಲ್ಲಿ ಕಡಲೆ, ಹುರುಳಿ ಸೇರಿ ಎಲ್ಲ ಬಿತ್ತನೆ ಬೀಜ ಲಭ್ಯವಿದ್ದು ರೈತರು ಖರೀದಿಸುತ್ತಿದ್ದಾರೆ. ಹಲವು ರೈತರು ಹುರುಳಿ ಬಿತ್ತನೆ ಆರಂಭಿಸಿದ್ದಾರೆ.
- ಎಚ್‌.ಟಿ.ಚಂದ್ರಕಲಾ, ಜಂಟಿ ನಿರ್ದೇಶಕಿ ಕೃಷಿ ಇಲಾಖೆ

---

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT