ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

Last Updated 5 ಫೆಬ್ರುವರಿ 2021, 16:03 IST
ಅಕ್ಷರ ಗಾತ್ರ

ಚಾಮರಾಜನಗರ: 2020–21ನೇ ಸಾಲಿನ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ನಗರದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶುಕ್ರವಾರ ಚಾಲನೆ ದೊರೆಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಎರಡು ದಿನಗಳ ಕ್ರೀಡಾಕೂಟದ ಧ್ವಜಾರೋಹಣವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ ಅವರು ನೆರವೇರಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕ್ರೀಡಾಜ್ಯೋತಿಯನ್ನು ಬೆಳಗಿಸಿ, ಕ್ರೀಡಾಜ್ಯೋತಿ ಹಾಗೂ ಕ್ರೀಡಾಪಟುಗಳೊಂದಿಗೆ ಕ್ರೀಡಾಂಗಣದಲ್ಲಿ ಓಡಿ ಗಮನ ಸೆಳೆದರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಾಸಕ ಸಿ.ಪುಟ್ಟಂಗಶೆಟ್ಟಿ ಅವರು ಮಾತನಾಡಿ, ‘ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಮುಖ್ಯವಾಗಿದೆ. ಪ್ರತಿದಿನ ಕಚೇರಿ ಕೆಲಸ ಒತ್ತಡದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಇಂತಹ ಕ್ರೀಡಾಕೂಟಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯವ‌ನ್ನು ಹೆಚ್ಚಿಸಲಿದೆ. ಎಲ್ಲರೂ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು’ ಎಂದರು.

ಶೀಘ್ರ ಪೂರ್ಣ:‘1997ರಲ್ಲಿ ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾದಾಗಿನಿಂದ ಈ ಕ್ರೀಡಾಂಗಣದ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ಇನ್ನೂ ಮುಗಿದಿಲ್ಲ. ಆರಂಭದಲ್ಲಿ ₹3.5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ₹5 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸಲಾಗಿದೆ. ಈಗ ₹10 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಮೂರ್ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದರು.

ಶಿಸ್ತು ಕಲಿಯಿರಿ: ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಬಂದು ಅರ್ಧ ಗಂಟೆಯಾದರೂ ಕಾರ್ಯಕ್ರಮ ಆರಂಭವಾಗಿರಲಿಲ್ಲ. ಇದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪುಟ್ಟರಂಗಶೆಟ್ಟಿ, ‘ನಾವು ಬಂದು ಅರ್ಧ ಗಂಟೆಯಾದರೂ ಕಾರ್ಯಕ್ರಮ ಆರಂಭವಾಗಲಿಲ್ಲ. ನೌಕರರು ಇನ್ನೂ ಬಂದಿರಲಿಲ್ಲ. ಶಿಕ್ಷಕರು ಹಾಗೂ ನೌಕರರಾದ ನೀವೇ ಹೀಗೆ ಮಾಡಿದರೆ ಹೇಗೆ? ವಿದ್ಯಾರ್ಥಿಗಳಿಗೆ ಹೇಗೆ ಕಲಿಸುತ್ತೀರಿ? ಶಿಸ್ತು ಕಲಿಯಿರಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಡಿ.ಲೇಖಾ,ಸದಸ್ಯರಾದ ಕೆರೆಹಳ್ಳಿ ನವೀನ್, ಬಿ.ಕೆ. ಬೊಮ್ಮಯ್ಯ, ಚೆನ್ನಪ್ಪ, ನಗರಸಭೆ ಅಧ್ಯಕ್ಷೆ ಆಶಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎಚ್.ಎನ್. ಶೋಭಾ, ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚಲುವಯ್ಯ, ಅಬಕಾರಿ ಉಪ ಆಯುಕ್ತ ಡಾ.ಕೆ.ಎಸ್.ಮುರಳಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT