ಮಹದೇವ್ ಹೆಗ್ಗವಾಡಿಪುರ
ಸಂತೇಮರಹಳ್ಳಿ: ಗೌರಿ-ಗಣೇಶ ಹಬ್ಬ ಬಂದಿದೆ. ಹಬ್ಬ ಆಚರಿಸುವ ಮನೆಗಳಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ. ಗೌರಿ ಹಬ್ಬ ಎಂದಾಕ್ಷಣ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಈ ಹಬ್ಬದಲ್ಲಿ ಎಲ್ಲೆಡೆ ಗಣೇಶನನ್ನು ಕೂರಿಸಿ ಪೂಜಿಸಿ ವಿಸರ್ಜಿಸುವುದು ವಾಡಿಕೆ. ಆದರೆ ಈ ಗ್ರಾಮದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ವಿಸರ್ಜಿಸಲಾಗುತ್ತದೆ!
ಗೌರಮ್ಮ ಗಂಡನ ಮನೆಯಿಂದ ತವರು ಮನೆಗೆ ಬಂದು ಹಬ್ಬ ಮುಗಿದ ನಂತರ ಗಂಡನ ಮನೆಗೆ ವಾಪಾಸ್ ಆಗುವ ಸನ್ನಿವೇಶವನ್ನು ಹೋಬಳಿಯ ಕುದೇರು ಗ್ರಾಮದಲ್ಲಿ ಸ್ವರ್ಣಗೌರಿ ಹಬ್ಬದ ಮೂಲಕ ಆಚರಿಸಿಕೊಂಡು ಬರಲಾಗುತ್ತಿದೆ.
ಗ್ರಾಮದ ಸ್ವರ್ಣಗೌರಿಯು ಮಹಿಳೆಯರ ಇಷ್ಠಾರ್ಥಗಳನ್ನು ನೆರವೇರಿಸುತ್ತಾಳೆ ಎಂಬ ನಂಬಿಕೆ ಭಕ್ತರದ್ದು. ಹೀಗಾಗಿ ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆಗಳು, ನೆರೆಯ ರಾಜ್ಯಗಳಲ್ಲೂ ಕುದೇರಿನ ಸ್ವರ್ಣಗೌರಿ ಪ್ರಸಿದ್ಧಿಯಾಗಿದ್ದಾಳೆ.
ಗೌರಿ ಹಬ್ಬದಂದು ಗ್ರಾಮದ ಹೊರಗಿರುವ ದೊಡ್ಡಕೆರೆ ಯಮುನಾ ತಡಿಯಲ್ಲಿ ದೇವಸ್ಥಾನದ ಅರ್ಚಕರು ಮರಳಿನ ಗೌರಿ ಮೂರ್ತಿಯನ್ನು ತಯಾರಿಸುತ್ತಾರೆ. ಆ ಮೂರ್ತಿಯನ್ನು ಪೂಜಿಸಿ ಪಲ್ಲಕ್ಕಿಯಲ್ಲಿ ತಂದು ಕೂರಿಸುತ್ತಾರೆ. ಆ ಸಮಯದಲ್ಲಿ ಗ್ರಾಮದ ಹಾಗೂ ಸುತ್ತಲಿನ ಗ್ರಾಮದ ಮಹಿಳೆಯರು ಆಗಮಿಸಿ ಪರಸ್ಪರ ಬಾಗಿನ ಅರ್ಪಿಸುತ್ತಾರೆ. ಬಾಗಿನ ಅರ್ಪಿಸಿದರೆ ಸುಮಂಗಲಿಯರ ಇಷ್ಠಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಮಹಿಳೆಯರಲ್ಲಿದೆ.
ಆಚರಣೆ ಹೇಗೆ?: ಪಲ್ಲಕ್ಕಿಯಲ್ಲಿ ಗೌರಿ ಮೂರ್ತಿಯನ್ನು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಮುಂಭಾಗ ಇಟ್ಟು ವಾದ್ಯ ಮೇಳಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಗೌರಮ್ಮ ಗಂಡನ ಮನೆಯಿಂದ ತವರು ಮನೆಗೆ ಬರುವಂತೆ ಗೌರಮ್ಮನ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಕರೆ ತರಲಾಗುತ್ತದೆ. ಈ ಸಮಯದಲ್ಲಿ ಮನೆಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ.
ದೇವಸ್ಥಾನದಲ್ಲಿ ಮರಳಿನ ಗೌರಮ್ಮನನ್ನು ಪೂಜಿಸಿದ ಐದನೇ ದಿನಕ್ಕೆ ಸ್ವರ್ಣಲೇಪಿತ ಗೌರಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಗೌರಮ್ಮನನ್ನು ವಿಸರ್ಜಿಸುವವರೆಗೂ ವಿವಿಧ ಗ್ರಾಮಗಳಿಂದ ಆಗಮಿಸುವ ಭಕ್ತಾದಿಗಳು ಪ್ರತಿದಿನ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಮಹಿಳೆಯರಿಗೆ ಕಂಕಣ ಬಾಗ್ಯ, ಸಂತಾನ ಭಾಗ್ಯ ಸೇರಿದಂತೆ ಮಹಿಳೆಯರು ಇಷ್ಠಾರ್ಥ ಸಿದ್ಧಿಗಾಗಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.
ಗೌರಿಯ ತವರಿಗೆ ಬರುವ ಮಲ್ಲಿಕಾರ್ಜುನಸ್ವಾಮಿ: 12ನೇ ದಿನದಂದು ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಿಂದ ಅಡ್ಡಪಲ್ಲಕ್ಕಿಯಲ್ಲಿ ಮಲ್ಲಿಕಾರ್ಜುನಸ್ವಾಮಿ ಮೂರ್ತಿಯನ್ನು ಕೂರಿಸಿ ಗೌರಮ್ಮನ ಗುಡಿಗೆ ತರಲಾಗುತ್ತದೆ. ಗೌರಮ್ಮನನ್ನು ತವರು ಮನೆಯಿಂದ ಗಂಡನ ಮನೆಗೆ ಕರೆದುಕೊಂಡು ಹೋಗುವುದಕ್ಕಾಗಿ ಬರುವಂತೆ ಮೆರವಣಿಗೆ ಮೂಲಕ ಕರೆ ತರಲಾಗುತ್ತದೆ. ಗೌರಮ್ಮನನ್ನು ತಾವೇ ಕರೆ ತರುತ್ತೇವೆ ಎಂದು ತವರಿನ ಮನೆಯವರು ಹೇಳುವ ರೀತಿಯಲ್ಲಿ ಮಲ್ಲಿಕಾರ್ಜುನಸ್ವಾಮಿ ಉತ್ಸವ ಪಲ್ಲಕ್ಕಿಯನ್ನು ಹಿಂದಕ್ಕೆ ಕಳುಹಿಸಲಾಗುತ್ತದೆ.
ಮಲ್ಲಿಕಾರ್ಜುನಸ್ವಾಮಿಯ ಉತ್ಸವಮೂರ್ತಿ ದೇವಸ್ಥಾನ ಸೇರುತ್ತಿದ್ದಂತೆ ಇಲ್ಲಿ ಗೌರಮ್ಮನ ಮೆರವಣಿಗೆ ಆರಂಬಿಸಲಾಗುತ್ತದೆ. ವಿವಿಧ ಬಗೆಯ ಹೂಗಳಿಂದ ನಿರ್ಮಿಸಿದ ಪಲ್ಲಕ್ಕಿಯಲ್ಲಿ ಗೌರಮ್ಮನನ್ನು ಕೂರಿಸಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಗ್ರಾಮದ ಎಲ್ಲ ಬೀದಿಗಳಲ್ಲಿ ರಾತ್ರಿ ಪೂರ್ತಿ ಮೆರವಣಿಗೆ ನಡೆಸಲಾಗುತ್ತದೆ. ಮುಂಜಾನೆ ಕೆರೆಯಲ್ಲಿ ಗೌರಮ್ಮನನ್ನು ವಿಸರ್ಜಿಸಲಾಗುತ್ತದೆ.
ಶತಮಾನದ ಇತಿಹಾಸ... ‘ಗ್ರಾಮದಲ್ಲಿ 110 ವರ್ಷಗಳಿಂದ ಗೌರಮ್ಮನನ್ನು ಕೂರಿಸಿ ಪೂಜಿಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷವು ಗ್ರಾಮದ ಎಲ್ಲ ಸಮುದಾಯದ ಜನರ ಸಹಕಾರದಿಂದ ವಿಜೃಂಭಣೆಯಿಂದ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಮಹಿಳೆಯರ ಇಷ್ಠಾರ್ಥ ಸಿದ್ಧಿಗಳು ನೆರವೇರುವುದರಿಂದ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಅದರಲ್ಲೂ ಮಹಿಳೆಯರು ಹೆಚ್ಚಾಗಿ ಬಂದು ಹರಕೆ ತೀರಿಸುತ್ತಾರೆ’ ಎಂದು ದೇವಸ್ಥಾನದ ಅರ್ಚಕ ಉಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.