ಶುಕ್ರವಾರ, ಆಗಸ್ಟ್ 12, 2022
21 °C
ಯುವ ಜನರಿಂದ ಉಮೇದುವಾರಿಕೆ ಹೆಚ್ಚು. ಕಾಂಗ್ರೆಸ್‌–ಬಿಜೆಪಿ ಮೈತ್ರಿಯ ವದಂತಿ

ಹನೂರು: ಹಳ್ಳಿಯಲ್ಲಿ ಪಕ್ಷ ರಾಜಕಾರಣ ಜೋರು

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ಅಧಿಕಾರ ವಿಕೇಂದ್ರೀಕರಣದ ಮೊದಲನೇ ಮೆಟ್ಟಿಲು ಎಂದೇ ಪರಿಗಣಿಸಲಾಗಿರುವ ಗ್ರಾಮಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ತಾಲ್ಲೂಕಿನಲ್ಲಿ ಈ ಬಾರಿ ಎಲ್ಲೆಡೆ ವಿದ್ಯಾವಂತ ಯುವಕರೇ ಉತ್ಸುಕರಾಗಿದ್ದು, ಗಡಿಭಾಗದಲ್ಲಿ ಚುನಾವಣೆ ಪ್ರಕ್ರಿಯೆ ಗರಿಗೆದರಿದೆ.

ಕಾಂಗ್ರೆಸ್ ಭದ್ರಕೋಟೆ ಎನಿಸಿರುವ ಹನೂರು ಕ್ಷೇತ್ರದಲ್ಲಿ ಜೆಡಿಎಸ್‌ ಕೂಡ ಸಕ್ರಿಯವಾಗಿದೆ. ಕ್ಷೇತ್ರದಲ್ಲಿ ಪ್ರಬಲವಾಗಿ ಬೇರೂರಲು ಯತ್ನಿಸುತ್ತಿರುವ ಬಿಜೆಪಿ ಕೂಡ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. 

ಜೆಡಿಎಸ್‌ ಶಕ್ತಿಯನ್ನು ಕುಂದಿಸಲು ಯತ್ನಿಸುತ್ತಿರುವ ಕಾಂಗ್ರೆಸ್‌ ಹಾಗೂ ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೊಂದಾಣಿಕೆಯನ್ನು ಮಾಡಿಕೊಂಡಿವೆ ಎಂಬ ಮಾತುಗಳು ತಾಲ್ಲೂಕಿನಾದ್ಯಂತ ಕೇಳಿ ಬರುತ್ತಿದೆ. ಇತ್ತೀಚೆಗೆ ಹನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಪಕ್ಷಗಳು ಕೈಜೋಡಿಸಿ ಅಧಿಕಾರ ಹಿಡಿದಿವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಹನೂರಿನ ಕಾಂಗ್ರೆಸ್‌ ಶಾಸಕ ಆರ್‌.ನರೇಂದ್ರ ಅವರು, ‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿಯ ಪ್ರಶ್ನೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.  

ಗ್ರಾಮೀಣ ಭಾಗಗಳಲ್ಲಿ ಜೆಡಿಎಸ್‌ ಬಗ್ಗೆ ಒಲವು ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದ್ದು, ಸಮರ್ಥ ಬೆಂಬಲಿತ ಅಭ್ಯರ್ಥಿಗಳಿಗಾಗಿ ಉಳಿದೆರಡು ಪಕ್ಷಗಳು ಹುಡುಕಾಟ ನಡೆಸುತ್ತಿವೆ ಎಂದು ಹೇಳುತ್ತಾರೆ ಹಳ್ಳಿ ರಾಜಕಾರಣ ಬಲ್ಲವರು.

ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಮುಂದಿನ ದಿನಗಳಲ್ಲಿ ನಡೆಯುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ ಎಂದೇ ಹೇಳಲಾಗುತ್ತಿದೆ.

ನೂತನ ತಾಲ್ಲೂಕು ರಚನೆಯಾಗಿರುವುದರಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿದರೆ ಮುಂದಿನ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಅನುಕೂಲವಾಗಲಿದೆ ಎಂಬುದು ಮೂರೂ ಪಕ್ಷಗಳ ಲೆಕ್ಕಾಚಾರ.

ಈಗಾಗಲೇ ಎರಡು ಮೂರು ಸುತ್ತು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿರುವ ಶಾಸಕ ಆರ್.ನರೇಂದ್ರ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಗಡಿಭಾಗ ಗೋಪಿನಾಥಂ ಸೇರಿದಂತೆ ಮಹದೇಶ್ವರ ಬೆಟ್ಟ ಮುಂತಾದ ಕಡೆ ಕಾಂಗ್ರೆಸ್ ವಕ್ತಾರ ಆರ್. ಧ್ರುವನಾರಾಯಣ ಜೊತೆಗೂಡಿ ಭರ್ಜರಿ ಪ್ರಚಾರವನ್ನೇ ಅವರು ನಡೆಸಿದ್ದಾರೆ.

ಇನ್ನೊಂದೆಡೆ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಧಿಕಾರ ಹಿಡಿಬೇಕು ಎಂಬ ಉದ್ದೇಶದಿಂದ ಇಡಿ ತಾಲ್ಲೂಕನ್ನು ಜೆಡಿಎಸ್ ಮುಖಂಡ ಮಂಜುನಾಥ್ ಅವರು ಸುತ್ತುತ್ತಿದ್ದಾರೆ.  ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಕಾರಣಕರ್ತರಾಗಿರುವ ಮಂಜುನಾಥ್ ಅವರು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ತಮ್ಮ ಪ್ರಾಬಲ್ಯ ಮೆರೆಯಲು ಪ್ರತಿ ಗ್ರಾಮಗಳಿಗೂ ತೆರಳಿ ಯುವಕರನ್ನು ಹುರಿದುಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.

‘ರಾಮಾಪುರ, ಲೊಕ್ಕನಹಳ್ಳಿ, ಪಿ.ಜಿ.ಪಾಳ್ಯ ಮುಂತಾದ ಗ್ರಾಮಗಳಲ್ಲಿ ಸೋಲಿನ ಭಯವುಂಟಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ. ಇದು ಜೆಡಿಎಸ್ ಹನೂರು ಕ್ಷೇತ್ರದಲ್ಲಿ ಎಷ್ಟು ಪ್ರಬಲವಾಗುತ್ತಿದೆ ಎಂಬುದನ್ನು ತೋರಿಸುತ್ತದೆ’ ಎಂದು ಜೆಡಿಎಸ್ ಮುಖಂಡ ಮಂಜುನಾಥ್ ಹೇಳಿದರು.

‘ಈ ಬಾರಿಯ ಚುನಾವಣೆಯಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸುಕತೆಯನ್ನು ತೋರುತ್ತಿದ್ದಾರೆ. ಪ್ರತಿ ಗ್ರಾಮಪಂಚಾಯಿತಿಯಲ್ಲೂ ಹೆಚ್ಚಾಗಿ ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ. ಇದುವರೆಗೂ ಹಿರಿಯರನ್ನು ಗೆಲ್ಲಿಸಿ ಸಾಕಾಗಿ ಹೋಗಿದೆ. ನಮ್ಮ ಸಮಸ್ಯೆಯನ್ನು ನಿವಾರಿಸುತ್ತಾರೆ ಎಂಬ ನಂಬಿಕೆಯಿಂದ ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಆದ್ದರಿಂದ ಈ ಬಾರಿ ನಮ್ಮ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಸ್ಪರ್ಧಿಸುತ್ತಿದ್ದೇವೆ ಎಂದು ಮಾರ್ಟಳ್ಳಿ ಗ್ರಾಮದ ಮರುದ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹನೂರು ತಾಲ್ಲೂಕಿನಲ್ಲಿ 25 ಗ್ರಾಮಪಂಚಾಯಿತಿಗಳಿವೆ. ಇವುಗಳ ಪೈಕಿ ಕುರಟ್ಟಿ ಹೊಸೂರು ಗ್ರಾಮಪಂಚಾಯಿತಿಗೆ ಇನ್ನು ಅವಧಿ ಮುಗಿಯೇ ಇರುವುದರಿಂದ ಉಳಿದ 24 ಗ್ರಾಮಪಂಚಾಯಿತಿಗಳ 159 ಕ್ಷೇತ್ರಗಳ 419 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಮುಖಂಡರು ಏನು ಹೇಳುತ್ತಾರೆ?  

ಗ್ರಾಮಪಂಚಾಯಿತಿ ಚುನಾವಣೆ ಪಕ್ಷಾತೀತವಾಗಿ ನಡೆಯುವುದರಿಂದ ಸ್ಥಳೀಯ ನಾಯಕರೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಣಕ್ಕಿಳಿಸಿ ಪ್ರಚಾರ ಮಾಡುತ್ತಿದ್ದಾರೆ.

– ಆರ್.ನರೇಂದ್ರ, ಕಾಂಗ್ರೆಸ್‌ ಶಾಸಕ

24 ಗ್ರಾಮ ಪಂಚಾಯಿತಿಗಳಲ್ಲೂ ನಮ್ಮ ಬೆಂಬಲಿತ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು ಹೆಚ್ಚಿನ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲಿದ್ದೇವೆ.

–ನಾಗೇಂದ್ರಬಾಬು, ಹನೂರು ಬಿಜೆಪಿ ಮಂಡಲ ಅಧ್ಯಕ್ಷ.

ಜೆಡಿಎಸ್ ವಿರುದ್ಧ ನೇರವಾಗಿ ಹೋರಾಡಲಾಗದೇ ಕಾಂಗ್ರೆಸ್ ಮತ್ತು ಬಿಜೆಪಿ ಹಲವು ಗ್ರಾಮಗಳಲ್ಲಿ ಮೈತ್ರಿ ಮಾಡಿಕೊಳ್ಳುವ ಮೂಲಕ ಎರಡು ಪಕ್ಷಗಳು ಪರೋಕ್ಷವಾಗಿ ಸೋಲೊಪ್ಪಿಕೊಂಡಿವೆ.

–ಮಂಜುನಾಥ್, ಜೆಡಿಎಸ್ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.