ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಗ್ರಾಮ ಪಂಚಾಯಿತಿ ಸದಸ್ಯರನ್ನು ಸೆಳೆಯಲು ಪಕ್ಷಗಳ ಕಸರತ್ತು

ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ನಿಗದಿ
Last Updated 15 ಜನವರಿ 2021, 14:54 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ 24 ಗ್ರಾಮಪಂಚಾಯಿತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಅಧಿಕಾರದ ಗದ್ದುಗೆಯೇರಲು ಮೂರು ಪಕ್ಷಗಳ ಬೆಂಬಲಿತ ಸದಸ್ಯರು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ.

ತಾಲ್ಲೂಕಿನಲ್ಲಿರುವ 25 ಗ್ರಾಮಪಂಚಾಯಿತಿಗಳ ಪೈಕಿ 24 ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ಈಗಾಗಲೇ ಕೆಲವು ಗ್ರಾಮಪಂಚಾಯಿತಿಯಲ್ಲಿ ಮೂರು ಪಕ್ಷಗಳ ಬೆಂಬಲಿತ ಸದಸ್ಯರು ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆಯೇರಲು ಸಿದ್ಧವಾಗಿದ್ದಾರೆ. ಉಳಿದ ಕೆಲವು ಗ್ರಾಮಪಂಚಾಯಿತಿಯಲ್ಲಿ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆಯೂ ಕೆಲವು ಗ್ರಾಮಗಳಲ್ಲಿ ಆಯಾ ಪಕ್ಷಗಳ ಮುಖಂಡರು ಸದಸ್ಯರ ಜೊತೆ ಚರ್ಚೆ ಆರಂಭಿಸಿದ್ದಾರೆ.

ಈ ಸಲವೂ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತ ಸದಸ್ಯರು ಕೂಡ ಹಲವು ಕಡೆಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಪ್ರಬಲ ಪೈಪೋಟಿ ನೀಡಿದ್ದಾರೆ.

ಜೆಡಿಎಸ್ ಕಾರ್ಯಕರ್ತರು ಹೆಚ್ಚು ಸ್ಥಾನಗಳಲ್ಲಿ ಜಯಗಳಿಸದೇ ಇದ್ದರೂ ಗಮನಾರ್ಹ ಸಾಧನೆ ಮಾಡಿ ಹಲವು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲು ನಿರ್ಣಾಯಕರಾಗಿದ್ದಾರೆ.

ಕೆಲವು ಗ್ರಾಮ ಪಂಚಾಯಿತಿಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗುತ್ತಿದ್ದಂತೆಯೇ, ಅಧಿಕಾರಕ್ಕೆ ಏರಲು ಬಯಸುತ್ತಿರುವವರು ಸದಸ್ಯರನ್ನು ಸೆಳೆಯಲು ನಾನಾ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.

ಪ್ರವಾಸಕ್ಕೆ ಕಳುಹಿಸಿದ ಮುಖಂಡರು: ಮೀಸಲಾತಿ ನಿಗದಿಯಾಗುವ ಮುನ್ನವೇ ಕೆಲವು ಗ್ರಾಮಪಂಚಾಯಿತಿಗಳಲ್ಲಿ ಸ್ಪಷ್ಟ ಬಹುಮತವಿಲ್ಲದೇ ಅತಂತ್ರವಾದುದ್ದನ್ನು ಗಮನಿಸಿದ್ದ ಪಕ್ಷಗಳ ಮುಖಂಡರು, ವಾರದ ಹಿಂದೆಯೇ ತಮ್ಮ ಪಕ್ಷದ ಬೆಂಬಲಿತ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿದ್ದಾರೆ.

ತಮ್ಮ ಪ‍ಕ್ಷದ ಬೆಂಬಲಿತ ಸದಸ್ಯರನ್ನು ಬೇರೆ ಪಕ್ಷದವರು ಸೆಳೆದರೆ ಗ್ರಾಮದಲ್ಲಿ ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ಯೋಚನೆಯಲ್ಲಿರುವ ಮುಖಂಡರು, ಅತಂತ್ರವಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷ ಬೆಂಬಲಿತ ಸದಸ್ಯರನ್ನು ಬೇರೆ ಬೇರೆ ಕಡೆಗೆ ಕಳುಹಿಸಿಕೊಟ್ಟಿದ್ದಾರೆ. ಈಗ ಮೀಸಲಾತಿ ಪ್ರಕಟಗೊಂಡಿರುವುದರಿಂದ ಮತ್ತೆ ಅವರನ್ನು ಗ್ರಾಮಕ್ಕೆ ಕರೆಸಿ ಅಧಿಕಾರ ಹಿಡಿಯುವ ಚಿಂತನೆಯಲ್ಲಿದ್ದಾರೆ.

ಜೆಡಿಎಸ್ ಅನಿವಾರ್ಯ: ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ಏರ್ಪಡುತ್ತಿದ್ದ ಸ್ಪರ್ಧೆ ಜೊತೆಗೆ ಈ ಬಾರಿ ಜೆಡಿಎಸ್ ಬೆಂಬಲಿತ ಸದಸ್ಯರು ಕೂಡ ತಮ್ಮ ಅದೃಷ್ಟವನ್ನು ಪಣಕಿಟ್ಟಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆಲ್ಲದೇ ಹೋದರೂ ಈಗ ಗೆದ್ದಿರುವ ಸದಸ್ಯರು ಕೆಲವು ಗ್ರಾಮಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್‌ ಬೆಂಬಲಿತರು ನೀಡಲಿರುವ ಬೆಂಬಲ ಅನಿವಾರ್ಯವಾಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಈ ನಿಟ್ಟಿನಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರ ಜೊತೆ ಕೆಲವು ಗ್ರಾಮಪಂಚಾಯಿತಿಗಳಲ್ಲಿ ಬಿಜೆಪಿ ಹಾಗೂ ಇನ್ನು ಕೆಲವು ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಮುಖಂಡರು ಏನು ಹೇಳುತ್ತಾರೆ?

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಶಾಸಕ ಆರ್‌.ನರೇಂದ್ರ ಅವರು, ‘ಇದು ಸ್ಥಳೀಯವಾಗಿ ಆಡಳಿತ ನಡೆಸಬೇಕಾಗಿರುವುದರಿಂದ ಮೈತ್ರಿ ಮಾಡಿಕೊಳ್ಳಬೇಕೋ, ಬೇಡವೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಸ್ಥಳೀಯ ಮುಖಂಡರಿಗೇ ನೀಡಲಾಗಿದೆ’ ಎಂದರು.

‘ಬೆಂಬಲಿತ ಸದಸ್ಯರು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳಬಾರದು ಎಂದು ಪಕ್ಷ ಸೂಚಿಸಿತ್ತು.ಆದರೆ, ಕೆಲವು ಕಡೆ ಮೈತ್ರಿ ಅನಿವಾರ್ಯವಾಗಿದೆ. ಆದ್ದರಿಂದ ಅವರಾಗಿಯೇ ಬಂದರೆ ಮೈತ್ರಿಗೆ ಮುಂದಾಗಿ, ಇಲ್ಲದಿದ್ದರೆ ವಿರೋಧ ಪಕ್ಷದಲ್ಲಿರಲು ಸೂಚಿಸಲಾಗಿದೆ’ ಎಂದು ಬಿಜೆಪಿ ನಾಯಕಿ ಪರಿಮಳಾ ನಾಗಪ್ಪ ಅವರು ಹೇಳಿದರು.

‘ಹಲವು ಗ್ರಾಮಪಂಚಾಯಿತಿಗಳಲ್ಲಿ ಈಗ ಅತಂತ್ರ ಸ್ಥಿತಿ ಎದುರಾಗಿದೆ. ಇಲ್ಲೆಲ್ಲ ಅಧಿಕಾರ ಹಿಡಿಯಲು ಜೆಡಿಎಸ್ ಬೆಂಬಲಿತ ಸದಸ್ಯರ ಬೆಂಬಲ ಅನಿವಾರ್ಯವಾಗಿದೆ’ ಎಂದು ಜೆಡಿಎಸ್‌ ಮುಖಂಡ ಎಂ.ಆರ್.ಮಂಜುನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ,ತಾಲ್ಲೂಕಿನ ಪೊನ್ನಾಚಿ ಹಾಗೂ ಶೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿವೆ.

ಪೊನ್ನಾಚಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಗ್ರಾಮದಲ್ಲಿ ಸದಸ್ಯರಾಗಿ ಆಯ್ಕೆಯಾಗಿರುವವರಲ್ಲಿ ನಲ್ಲಮ್ಮ ಎಂಬುವವರು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಹಾಗಾಗಿ, ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

2105ರಲ್ಲಿ ನೂತನ ಗ್ರಾಮ ಪಂಚಾಯತಿಯಾಗಿ ಅಸ್ತಿತ್ವಕ್ಕೆ ಬಂದ ಶೆಟ್ಟಳ್ಳಿ ಗ್ರಾಮಪಂಚಾಯಿತಿಗೆ ಇದು ಎರಡನೇ ಚುನಾವಣೆ. ಅಧ್ಯಕ್ಷ ಸ್ಥಾನ ಬಿಸಿಎಂ –ಎ ವರ್ಗಕ್ಕೆ ಮೀಸಲಾಗಿದೆ. ಗ್ರಾಮಪಂಚಾಯಿತಿಯಲ್ಲಿ ಗೆದ್ದಿದ್ದ ಸದಸ್ಯರಲ್ಲಿ ಶಾಂತಮ್ಮ ಒಬ್ಬರೇ ಬಿಸಿಎಂ– ಎ ಆಗಿದ್ದರಿಂದ ಅವರೇ ಅಂತಿಮವಾಗಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಇವರು ಚುನಾವಣೆಯಲ್ಲೂ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಗಮನಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT