ಹನೂರು: ಕಲಿಕೆ ಕೇವಲ ಪಠ್ಯಪುಸ್ತಕಕ್ಕೆ ಸೀಮಿತಗೊಳ್ಳದೇ ವಿಸ್ತಾರವಾದಾಗ ಮಾತ್ರ ಮಕ್ಕಳ ಸರ್ವಾಂಗೀಣ ಪ್ರಗತಿ ಸಾಧ್ಯ ಎಂಬ ಮಾತು ರಾಜ್ಯದ ಗಡಿಭಾಗದಲ್ಲಿರುವ ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಗೋಡೆಸ್ಟ್ ನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯರೂಪಕ್ಕೆ ಬಂದಿದೆ.
ಪ್ರಕೃತಿ ಮಧ್ಯೆ ನಿರ್ಮಾಣವಾಗಿರುವ ಬಹುತೇಕ ಕೂಲಿ ಕಾರ್ಮಿಕರ ಮಕ್ಕಳೇ ಕಲಿಯುತ್ತಿರುವ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಠ್ಯದ ಕಲಿಕೆಯ ಜತೆಗೆ ಪ್ರಕೃತಿ ಪಾಠ ಹೇಳಿಕೊಡಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ತರಕಾರಿಗಳನ್ನು ವಿದ್ಯಾರ್ಥಿಗಳೇ ಬೆಳೆಯುವುದು ಇಲ್ಲಿನ ವಿಶೇಷ. ಈ ಮೂಲಕ ಪೌಷ್ಟಿಕ ಆಹಾರ ಸೇವನೆಯ ಮಹತ್ವವನ್ನು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕ ಜಾನ್ ಬ್ರಿಟೋ ಮಕ್ಕಳ ಜೊತೆ ಬೆರೆತು ಅವರಲ್ಲಿ ಸೃಜನಶೀಲ ಚಟುವಟಿಕೆಗಳನ್ನು ಮಾಡಿಸುವ ಮೂಲಕ ವಿದ್ಯಾರ್ಥಿಸ್ನೇಹಿ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ. ಮಕ್ಕಳ ಕಲಿಕೆಗೆ ಸಾಮಾಗ್ರಿಗಳ ಕೊರತೆಯುಂಟಾದಾಗ ದಾನಿಗಳ ಸಹಾಯದಿಂದ ಪುಸ್ತಕ, ಬ್ಯಾಗ್ ಹಾಗೂ ಸಮವಸ್ತ್ರಗಳನ್ನು ನೀಡುತ್ತಾರೆ.
ವಿಶಾಲವಾಗಿರುವ ಶಾಲಾ ಆವರಣವನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳಲ್ಲಿ ತರಕಾರಿ ಬೆಳೆಯುವ ಆಸಕ್ತಿ ಚಿಗುರಿಸಿದ್ದಾರೆ. ಜತೆಗೆ ಶಾಲಾ ಅಂಗಳದ ಸುತ್ತ ಗಿಡಗಳನ್ನು ನೆಟ್ಟು ಪೋಷಣೆ ಮಾಡಿಸುವ ಮೂಲಕ ಪರಿಸರ ಸಂರಕ್ಷಣೆಯ ಪಾಠವನ್ನು ಪ್ರಾಯೋಗಿಕವಾಗಿ ಕಲಿಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಕಲಿಕೆಯಿಂದಾಚೆಗೂ ತಿಳಿವಳಿಕೆ ವಿಸ್ತಾರಗೊಳ್ಳುತ್ತಿದೆ.
ಜಾನ್ ಬ್ರಿಟೋ ಸೇವೆಗೆ ಕಳೆದ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.
ಹನೂರು ತಾಲ್ಲೂಕು ಆರ್ಥಿಕವಾಗಿ ಹಿಂದುಳಿದಿದ್ದು ಮಾರ್ಟಳ್ಳಿ ಗ್ರಾಮದಲ್ಲಿ ಪೋಷಕರು ತಮಿಳುನಾಡು ಕಡೆಗೆ ಕೂಲಿ ಕೆಲಸಕ್ಕೆ ತೆರಳುತ್ತಾರೆ. ಮಕ್ಕಳನ್ನು ಶಾಲೆ ಬಿಡಿಸಿ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಮಕ್ಕಳು ಅರ್ಧಕ್ಕೆ ಶಾಲೆ ಬಿಡಬಾರದು ಎಂಬ ಉದ್ದೇಶದಿಂದ ಪೋಷಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಶಾಲೆಯಲ್ಲಿ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಲಾಗಿದ್ದು ಸರ್ಕಾರಿ ಶಾಲೆಗಳತ್ತ ಮಕ್ಕಳು ಆಕರ್ಷಿತರಾಗುತ್ತಿದ್ದಾರೆ. ಕಳೆದ 25 ವರ್ಷಗಳಲ್ಲಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ.